ಹಾಯ್ ಬೆಂಗಳೂರ್

ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಭಾರತಕ್ಕೆ ಭರ್ಜರಿ ಜಯ

ಚೆನ್ನೈನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಎರಡನೇ ಇನ್ನಿಂಗ್ಸ್ ನಲ್ಲಿ 482ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ನೆನ್ನೆ ದಿನದಾಂತ್ಯಕ್ಕೆ ಒಂದು ವಿಕೆಟ್ಟನ್ನು ಕಳೆದುಕೊಂಡಿತ್ತು. ಇಂದು ಅಕ್ಷರ್ ಪಟೇಲ್ (5 ವಿಕೆಟ್), ಕುಲದೀಪ್ ಯಾದವ್ (2 ವಿಕೆಟ್) ಹಾಗೂ ರವಿಚಂದ್ರನ್ ಅಶ್ವಿನ್ (3 ವಿಕೆಟ್) ಅವರ ನಿಖರ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ತರೆಗೆಲೆಗಳಂತೆ ಉದುರಿ ಹೋಗಿಬಿಟ್ಟರು.

ಶನಿವಾರ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತವು ರೋಹಿತ್ ಶರ್ಮಾ (161), ಅಜಿಂಕ್ಯಾ ರಹಾನೆ (67) ಹಾಗೂ ರಿಷಬ್ ಪಂತ್ (58) ರ ಅದ್ಭುತ ಬ್ಯಾಟಿಂಗ್ ನೆರವಿನಿಂದ 329ರನ್ ಗಳಿಸಿತು. ಅದೇ ರೀತಿ ರವಿಚಂದ್ರನ್ ಅಶ್ವಿನ್ (5 ವಿಕೆಟ್) ಖಡಕ್ ದಾಳಿಯಿಂದ ಇಂಗ್ಲೆಂಡನ್ನು 134 ರನ್ ಗಳಿಗೆ ಸೀಮಿತಗೊಳಿಸಿ 195ರನ್ ಗಳ ಭಾರಿ ಮುನ್ನಡೆ ಪಡೆಯಿತು.

ಎರಡನೇ ಇನ್ನಿಂಗ್ಸ್ ನಲ್ಲಿ ರವಿಚಂದ್ರನ್ ಅಶ್ವಿನ್ 106 ರನ್ ಗಳಿಸಿ ಅಪರೂಪದ ಆಟ ಆಡಿದ್ದರಿಂದ ಭಾರತ 286ರನ್ ಪೇರಿಸಿ 482ರನ್ ಗಳ ಬೃಹತ್ ಟಾರ್ಗೆಟ್ಟನ್ನು ಆಂಗ್ಲರಿಗೆ ನೀಡಿತು.  ಅಸಲಿಗೆ ಆಂಗ್ಲರ ಮುಂದೆ ಇನ್ನೂ ಎರಡು ದಿನಗಳು ಬಾಕಿ ಇದ್ದವು. ನಿಧಾನಕ್ಕೆ ಆಡಿದ್ದಿದ್ದರೆ ಗೆಲ್ಲಬಹುದಾಗಿತ್ತು. ಆದರೆ ಭಾರತದ ಬೌಲಿಂಗ್ ಮತ್ತು ಫೀಲ್ಡಿಂಗ್ ಅದಕ್ಕೆ ಅವಕಾಶ ಕೊಡಲಿಲ್ಲ.

ಒಟ್ಟಿನಲ್ಲಿ ವಿರಾಟ್ ಕೊಹ್ಲಿಯ ಪಡೆ ಮೊದಲನೇ ಟೆಸ್ಟ್ ಸೋತರೂ ಸಹ ಎರಡನೇ ಟೆಸ್ಟ್ ಗೆಲ್ಲುವ ಮೂಲಕ ಸರಣಿಯನ್ನು ಸಮಬಲವಾಗಿಸಿಕೊಂಡಿದೆ. ಇನ್ನೂ ಎರಡು ಟೆಸ್ಟ್ ಮ್ಯಾಚ್ ಗಳು ಅಹಮದಾಬಾದ್ ನಲ್ಲಿ ನಡೆಯಲಿದ್ದು ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಇಮ್ಮಡಿಯಾಗಿದೆ.

Leave a Reply

Your email address will not be published. Required fields are marked *