ಹಾಯ್ ಬೆಂಗಳೂರ್

ಹೋರಾಟ ಹತ್ತಿಕ್ಕಲು ಶಿಕ್ಷಣ ಕಡ್ಡಾಯಗೊಳಿಸಲಾಗಿತ್ತು

ಹೋರಾಟ ಹತ್ತಿಕ್ಕಲು ಶಿಕ್ಷಣ ಕಡ್ಡಾಯಗೊಳಿಸಲಾಗಿತ್ತು

ಪ್ರತಿಯೊಬ್ಬರೂ ಕನಿಷ್ಠ ವಿದ್ಯಾರ್ಹತೆ ಹೊಂದಬೇಕೆಂದು ಈಗಿನ ಸರ್ಕಾರಗಳು `ಸರ್ವ ಶಿಕ್ಷಣ ಅಭಿಯಾನ’ದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಶಿಕ್ಷಣ ಕಡ್ಡಾಯಗೊಳಿಸಲು ಹೆಣಗಾಡುತ್ತಿವೆ. ಆದರೆ ಇಂಥಹದೇ ಒಂದು ಪ್ರಯತ್ನ ೧೯೪೨ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ನಡೆದಿತ್ತು.

ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವ ಸದುದ್ದೇಶದಿಂದಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬುತ್ತಿದ್ದ ವಿದ್ಯಾರ್ಥಿಗಳನ್ನು ಚಳವಳಿಯಿಂದ ದೂರ ಉಳಿಯುವಂತೆ ಮಾಡಿ ಅದನ್ನು ದುರ್ಬಲಗೊಳಿಸುವುದಕ್ಕೋಸ್ಕರ!

ತಿಪಟೂರಿನಲ್ಲಿ ಆ ಕಾಲಕ್ಕೆ ವಿದ್ಯಾರ್ಥಿ ಸಂಘಟನೆ ಎಷ್ಟು ಶಕ್ತಿಯುತವಾಗಿತ್ತೆಂದರೆ, ಸ್ವಾತಂತ್ರ್ಯಕ್ಕಾಗಿ ಪ್ರತಿಭಟಿಸುತ್ತಿದ್ದ ಅಲ್ಲಿನ ವಿದ್ಯಾರ್ಥಿಗಳು ರೇಲ್ ರೋಖೋ ಚಳವಳಿಗೆ ಮುಂದಾದಾಗ, ರೇಲೊಂದು ನಿಲ್ಲದೆ ಮುಂದೆ ಸಾಗಿತ್ತುಘಿ. ಅದರೊಳಗಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ ಹಾರಿಸಿದ ಗುಂಡಿಗೆ ಮಾರನಗೇರಿಯ ಸಿದ್ದಪ್ಪ ಎಂಬುವರು ಅಸು ನೀಗಿದರು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ರೇಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಿದರಲ್ಲದೆ, ಗೂಡ್ಸ್ ಗಾಡಿಗಳಲ್ಲಿ ಬರುತ್ತಿದ್ದ ದವಸ-ಧಾನ್ಯಗಳನ್ನು ಲೂಟಿ ಮಾಡಿ ಬಡವರಿಗೆ ಹಂಚಿದರು. ಏನೇ ಕ್ರಮ ಕೈಗೊಂಡರೂ ಚಳವಳಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ತಲೆ ಕೆಡಿಸಿಕೊಂಡ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ `ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದರಿಂದ ಚಳವಳಿ ಜಿಲ್ಲೆಯಲ್ಲಿ ಬಲವಾಗಿದೆ’ ಎಂದು ಸರ್ಕಾರಕ್ಕೆ ಪತ್ರ ಬರೆದರು.

ಇದೇ ಕಾರಣಕ್ಕೆ ಆಗಿನ ಸರ್ಕಾರ `ಸರ್ಕಾರಿ ನೌಕರರ ಮಕ್ಕಳು ತಪ್ಪದೇ ಶಾಲಾ-ಕಾಲೇಜುಗಳಿಗೆ ಹೋಗಬೇಕು’ ಎಂದು ರ್ಮಾನು ಹೊರಡಿಸಿ ಚಳವಳಿ ದುರ್ಬಲಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಎಲ್ಲವೂ ತಹಬಂದಿಗೆ ಬಂದಾಗ ಬಂಧಿತ ವಿದ್ಯಾರ್ಥಿ ಮುಖಂಡರನ್ನು ಜೈಲಿನಿಂದ ಬಿಡುಗಡೆಗೊಳಿಸಿತು. ಗೆದ್ದೆವೆಂದು ಬೀಗುತ್ತಿದ್ದ ಆಗಿನ ಜಿಲ್ಲಾಡಳಿತಕ್ಕೆ ವಿದ್ಯಾರ್ಥಿಗಳು ಕೋಟೆ ಬಾಲಕರ ಶಾಲೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ನಾಡಬಾಂಬ್ ಸ್ಫೋಟಿಸಿ ಸೆಡ್ಡು ಹೊಡೆದು ನಿಂತರು. ಈ ವಿವರಗಳನ್ನು ಇತಿಹಾಸ ತಜ್ಞ ಡಾ.ಸೂರ್ಯನಾಥ ಕಾಮತ್ ತಮ್ಮ ಲೇಖನವೊಂದರಲ್ಲಿ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *