ಏನಲ್ಲದಿದ್ದರೂ ಮೋಜಿಗಾಗಿ ಅವನನ್ನು ನೆನಪಿಸಿಕೊಳ್ಳಬೇಕು!

in ಪ್ರಥಮ ಪಾಂಡವ

ಪ್ರಥಮ ಪಾಂಡವ :  ಭಾಗ-3

ಒಂದು ಕಥೆಯ ಅಂತರಾರ್ಥ ಬಾಹ್ಯನೋಟಕ್ಕೆ ಗೋಚರಿಸಿಬಿಡಬಾರದು ಎಂದು ಹೆಮಿಂಗ್ವೆ ನಂಬಿದ್ದ. ಬದಲಿಗೆ ಅದು ನೇರವಲ್ಲದ ರೀತಿಯಲ್ಲಿ, ಸೂಚ್ಯವಾಗಿ ಹಾಗೂ ಸಮಗ್ರವಾಗಿ ಪ್ರಕಾಶಿಸಬೇಕು ಎನ್ನುವ ಅಭಿಪ್ರಾಯ ಮಂಡಿಸಿದ್ದ. ಜಾಕ್ಸನ್ ಬೆನ್ಸನ್ ತರಹದ ಪ್ರಸಿದ್ಧ ವಿಮರ್ಶಕರು ನುಡಿದಂತೆ ಹೆಮಿಂಗ್ವೆಯ ಆ ವಿಶಿಷ್ಟ ಅಭಿವ್ಯಕ್ತಿ ಕ್ರಮ ಅವನೇ ಸೃಷ್ಟಿಸಿದ ಪಾತ್ರಗಳಿಂದ ಅವನು ಅಂತರ ಕಾಯ್ದುಕೊಳ್ಳಲು ಕಾರಣವಾಯ್ತು.

ಹೆಮಿಂಗ್ವೆಯ ಜೀವನ ವೃತ್ತಾಂತ ಬರೆದ ಜೆಫ್ರಿ ಮೇಯರ್ಸ್ ಪ್ರಕಾರ ಮುಂಚೆ ಹೆಮಿಂಗ್ವೆ ತುರ್ತು ಪ್ರಸಂಗಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುತ್ತಿದ್ದುದರ ಉದ್ದೇಶವೆಂದರೆ ವರದಿಯ ಅಂತಃಸತ್ವದ ತೀಕ್ಷ್ಣತೆ ಹೆಚ್ಚಿಸಿ, ತೇಜಕೇಂದ್ರದ ಉತ್ಕಟತೆ ಸಾಧಿಸಿ ಓದುಗರನ್ನು ಘಟನೆಯ ನಾಭಿಯೆಡೆಗೆ ಏಕಾಗ್ರಗೊಳಿಸುವುದಕ್ಕಾಗಿ! ಇಡೀ ರಂಗಮಂಟಪಕ್ಕಿಂತ ಒಂದು spotlight ಇದ್ದ ಹಾಗೆ. ಗ್ರೆಕೋ-ಟರ್ಕಿ ಯುದ್ಧಾನಂತರ ಹೆಮಿಂಗ್ವೆ ಮೌಲ್ಯಯುತ ಬರವಣಿಗೆಯ ಅನುಭವಗಳನ್ನು ಸಂಪಾದಿಸಿ ಸೃಜನಶೀಲ ಲೇಖಕನಾಗಿ ಪ ರಿವರ್ತನೆಗೊಂಡ. ಕಥೆ ಕಾದಂಬರಿಗಳು ವಾಸ್ತವತೆ ಅವಲಂಬಿಸಿರುತ್ತವೆ ಎಂಬುದು ಹೆಮಿಂಗ್ವೆಯ ನೆಚ್ಚಿಗೆ. ಆ ನಾನಾ ಅನುಭವಗಳ ಪಡಿ ಪದಾರ್ಥದಿಂದ ಅವಶ್ಯವಾದ ರಸವನ್ನು ಮಾತ್ರ ಭಟ್ಟಿ ಇಳಿಸಿಕೊಂಡಾಗ ಅವನು ವ್ಯಾಖ್ಯಾನಿಸಿದ ರೀತಿ ತಾನು ನೆನಪಿಟ್ಟುಕೊಂಡದ್ದಕ್ಕಿಂತ ತಾನು ಸೃಷ್ಟಿಸಿದ್ದು ಹೆಚ್ಚು ಸತ್ಯವಾಗುತ್ತದೆ.

ಓರ್ವ ಗದ್ಯ ಬರಹಗಾರನಿಗೆ ತಾನೇನು ಬರೆಯುತ್ತಿದ್ದೇನೆ ಎಂಬುದರ ಬಗ್ಗೆ ನಿಚ್ಚಳವಾದ ಅರಿವಿದೆ ಎಂದ ಪಕ್ಷದಲ್ಲಿ ಆತ ಕೇವಲ ತನ್ನ ಸ್ಮೃತಿಕೋಶದೊಳಗೆ ಶೇಕರಣೆಯಾದ ಸರಕನ್ನಷ್ಟೇ ಯಾಂತ್ರಿಕವಾಗಿ ಹೊರ ಹಾಕುತ್ತಿದ್ದಾನೆ ಹೊರತು ಓದುಗರಿಗೆ ಗೊತ್ತಿಲ್ಲದ್ದನ್ನೇನೂ ಹೊಸದಾಗಿ ತಿಳಿಸಿಕೊಡುತ್ತಿಲ್ಲ ಎಂದರ್ಥ. ಆದರೆ ಒಬ್ಬ ಬರಹಗಾರ ಸತ್ಯಸತ್ಯವಾಗಿಯೂ ಬರೆಯುತ್ತಿದ್ದಾನೆಂದರೆ ತಾನು ಬರೆಯುತ್ತಿರುವ ಸಂಗತಿಗಳು ತನ್ನಿಂದಲೇ ಉತ್ಪತ್ತಿಯಾದವು ಎಂಬ ಸಂವೇದನೆ ಅವನಲ್ಲಿ ದ್ರವಿಸುತ್ತದೆ. ಹಾಗೆಯೇ ಇವು ಲೇಖಕನ ಎದೆಯಿಂದ ಹೊಮ್ಮಿವೆಯೆಂಬ ಫೀಲು ಓದುಗನಿಗೆ ತಾಕುತ್ತದೆ.

1924ರಲ್ಲಿ ಹೆಮಿಂಗ್ವೆ ತನ್ನ ‘Out of season’ ಎಂಬ ಕಥೆ ಬರೆದು ಮುಗಿಸಿದ ಬಳಿಕ ಬರವಣಿಗೆಯ ಹೊಸ ಗ್ರಹಿಕೆಯೊಂದು ಅವನ ಗರ್ಭದಲ್ಲಿ ಟಿಸಿಲೊಡೆದು ನಿಂತಿತು. ಗ್ರಂಥಕರ್ತನ ಮರಣಾನಂತರ ಪ್ರಕಟವಾಗುವ ಸ್ವಾನುಭವದ ಇತಿಹಾಸಕ್ಕೆ ಪಾಶ್ಚಾತ್ಯ ಸಾಹಿತ್ಯಿಕ ಪರಿಭಾಷೆಯಲ್ಲಿ Posthumous ಎಂದು ಕರೆಯುತ್ತಾರೆ. ಹೀಗೆ  ಹೆಮಿಂಗ್ವೆ ತೀರಿದ ಮೇಲೆ ಯುವ ಲೇಖಕನಾಗಿ ಅವನು ಪ್ಯಾರಿಸ್‌ನಲ್ಲಿ ಕಳೆದಂತಹ ದಿನಗಳ ಕುರಿತು ಪ್ರಕಟವಾದ ಅವನ ಪೋಸ್ಟ್‌ಹ್ಯೂಮಸ್ ಅಥವಾ ಸಣ್ಣ ಆತ್ಮಕತೆ ‘In A Moveable Feast’ ಕೃತಿಯಲ್ಲಿ ಹೆಮಿಂಗ್ವೆ ವಿವರಿಸುತ್ತಾನೆ: “Out of season ಕಥೆಯಲ್ಲಿ ಮುದುಕ ಉರುಳು ಬಿಗಿದುಕೊಂಡು ಸಾಯಲಿಕ್ಕಿರುತ್ತದೆ. ಅದನ್ನು ಕೈಬಿಡುವ ಮೂಲಕ ನಾನು ಕಥೆಗೆ ನ್ಯಾಯಯುತವಾದ ಅಂತ್ಯವನ್ನು ದೊರಕಿಸಿಕೊಟ್ಟೆ. ಈ ಕೈಬಿಡುವಿಕೆ ಅಥವಾ ತೊರೆಯುವಿಕೆ ಅಥವಾ ವಿಸರ್ಜನೆ ನನ್ನಿಂದ ಆಗಿದ್ದು ‘ನೀವು ಏನನ್ನು ಬೇಕಾದರೂ ವಿಸರ್ಜಿಸಬಹುದು’ ಎಂದು ನಾನು ಕಂಡುಕೊಂಡಿದ್ದ ಹೊಸ ತತ್ವದ ಆಧಾರದನ್ವಯ. ಹಾಗೆಯೇ ಈ ವಿಸರ್ಜಿತ ಭಾಗ ಕಥೆಯನ್ನು ಸಾಕಷ್ಟು ಗಟ್ಟಿಗೊಳಿಸುತ್ತದೆ.”

ಹಾಗೆ ಒಬ್ಬ ಕಥೆಗಾರನಾಗಿ ಹೆಮಿಂಗ್ವೆ ಕನಿಷ್ಠದಿಂದ ಗರಿಷ್ಠವಾದ್ದನ್ನು ಪಡೆಯುವುದು ಹೇಗೆಂದು ಕಲಿತಿದ್ದ. ಹಾಳುಮೂಳು ಚರಟ ರದ್ದಿಯಂತದನ್ನು ಕಿತ್ತಾಕಿ ಫಲವತ್ತಾದ ಭಾಷೆಯನ್ನಷ್ಟೇ ಉಳಿಸಿಕೊಳ್ಳುತ್ತಿದ್ದ. ರುದ್ಯಾರ್ಡ್ ಕಿಪ್ಲಿಂಗ್‍ನನ್ನು ಅಪಾರವಾಗಿ ಓದಿ ಆ ವಿದ್ಯೆಯನ್ನು ಕರಗತಗೊಳಿಸಿಕೊಂಡಿದ್ದ. ಬರಹದಲ್ಲಿ ನಿರಂತರವಾಗಿ ತೀವ್ರತೆಯನ್ನು ಹೇಗೆ ದ್ವಿಗುಣಗೊಳಿಸುತ್ತಾ ಸಾಗಬೇಕು, ಬೇರೆ ಏನನ್ನೂ ಅಲ್ಲದೆ ಸತ್ಯವನ್ನು ಮಾತ್ರ ಸತ್ಯಕ್ಕಿಂತ ಪ್ರಖರವಾಗಿ ಹೇಗೆಲ್ಲಾ ಹೇಳಲು ಸಾಧ್ಯ ಎಂಬುದು ಹೆಮಿಂಗ್ವೆಗೆ ಗೊತ್ತಿತ್ತು. ಇದರಿಂದಾಗಿ ಓದುಗರಿಗೆ ತಾವು ಅರ್ಥೈಸಿಕೊಂಡದ್ದನ್ನು ಮೀರಿದ ಯಾವುದೋ ಕಂಪನ ಉಂಟಾಗುತ್ತಿತ್ತು. ಭಾಷೆ ಹೆಮಿಂಗ್ವೆಗೆ ತುಂಬ ಸಲೀಸಾಗಿ ಪಳಗುತ್ತಿತ್ತು ಮತ್ತು ದುಡಿಯುತ್ತಿತ್ತು. ಐಸ್ಬರ್ಗ್ ಥಿಯರಿಯಂತೆ ಹೆಮಿಂಗ್ವೆಯ ಬರಹಗಳಲ್ಲಿ ನಗ್ನ ವಾಸ್ತವಾಂಶಗಳು ನೀರಿನ ಮೇಲೆ ತೇಲುತ್ತಿದ್ದವು. ಮಿಕ್ಕಿದ ಹಾಗೆ ಬರೀ ಒಗಟಿನಂತಿರುತ್ತಿದ್ದ ಅದರ ಒಟ್ಟಾರೆ ಮೂಲಭೂತ ವಿನ್ಯಾಸ ಕಣ್ಮರೆಯಾಗಿರುತ್ತಿತ್ತು.

ಹೆಮಿಂಗ್ವೆಯ ಶೈಲಿಯೇ ಒಂದು ಸೌಂದರ್ಯ ಶಾಸ್ತ್ರವಾಗಬಲ್ಲದು. ಆತ ಪ್ರತ್ಯಕ್ಷ ಜಗತ್ತನ್ನು ವರ್ಣಿಸಲಿಕ್ಕೆ ಪರೋಕ್ಷ ಭಾಷೆ ಉಪಯೋಗಿಸಲಿಲ್ಲ. ಸ್ವಚ್ಛವಾದ, ಲಲಿತವಾದ, ಸಮತಳವಾದ ವಾಕ್ಯಗಳಲ್ಲೇ ನಿರೂಪಿಸುತ್ತಿದ್ದ. ಆದ್ದರಿಂದ ಹೆಮಿಂಗ್ವೆ ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವಿ ‘ಪ್ರೋಸ್ ಸ್ಟೈಲಿಸ್ಟ್’ ಎನ್ನಿಸಿಕೊಂಡ. ಗದ್ಯ ಬರವಣಿಗೆಯಲ್ಲಿ ಹೆಮಿಂಗ್ವೆ ಪುನರುಕ್ತಿಗಳ ಬಳಕೆ ಮಾಡುತ್ತಿದ್ದುದು ಚಿಟಿಕೆ ಚಿತ್ರಗಳ ಕೊಲಾಜ್ ನಿರ್ಮಿಸಿ ಕೊನೆಗೆ ಒಂದು ಅಖಂಡ ಶಿಲ್ಪವನ್ನು ರೂಪಿಸುವ ಸಲುವಾಗಿ! ಕನ್ನಡದಲ್ಲಿ ತೇಜಸ್ವಿ ಇದನ್ನು ಅನುಕರಿಸುವ ಯತ್ನ ನಡೆಸಿ ಕೊಂಚ ಯಶಸ್ವಿಯೂ ಆದರು.

 

ಹೆಮಿಂಗ್ವೆಯ ಐಸ್ಬರ್ಗ್ ಥಿಯರಿಯ ಬಗ್ಗೆ ಅನಾಮತ್ತಾಗಿ ಹೇಳುವುದಾದರೆ ಅದು ಅವನ ಬಹುಕೇಂದ್ರಿತ ಅಂದದರಿಮೆಯೊಂದಿಗೆ ಸುರಿಯಲ್ಪಟ್ಟ ಹಿಮಪ್ರವಾಹವೂ ಹೌದು. ಕಥೆಯನ್ನು ಅವಿಚ್ಛಿನ್ನವಾಗಿ ಅನುಭವಿಸುವಂತೆ ಈ ಐಸ್ಬರ್ಗ್ ಥಿಯರಿ ಓದುಗನಿಗೆ ಬೇಡಿಕೆಯಿರಿಸುತ್ತದೆ. ಲೇಖಕನಿಂದ ಕೈಬಿಡಲ್ಪಟ್ಟ ಕಂಡಿಗಳನ್ನು ಓದುಗ ತನ್ನ ಭಾವನೆಗಳಿಂದ ಮುಚ್ಚಬೇಕು. ಇದು ಕಲೆಯ ಧ್ವನಿತಾರ್ಥಗಳನ್ನು ಎತ್ತಿ ಹಿಡಿಯುತ್ತದೆ. ಮನುಷ್ಯನ ಅಸ್ತಿತ್ವದ ಸ್ವಭಾವವನ್ನು ನಿರ್ವಚಿಸಲು ಹೆಮಿಂಗ್ವೆ ಭೌತಿಕ ಕ್ರಿಯೆಗಳ ಪ್ರಯೋಜನ ತೆಗೆದುಕೊಂಡ. ಕಲ್ಪಿತ ಕಥೆಗಳಲ್ಲಿ ಮಾನವನ ಬದುಕನ್ನು ಚಿತ್ರಿಸುವಾಗ ಹೆಮಿಂಗ್ವೆ ಸದಾ ಮನುಷ್ಯನನ್ನು ಆತ ಜೀವಿಸುತ್ತಿರುವ ಬ್ರಹ್ಮಾಂಡದ ಹಿನ್ನೆಲೆಯೊಂದಿಗೆ ಮುಖಾಮುಖಿಯಾಗಿಸಿ ವಿವಿಧ ದೃಷ್ಟಿಕೋನಗಳಲ್ಲಿ ಮನುಷ್ಯನ ಪರಿಸ್ಥಿತಿಗಳನ್ನು ಶೋಧಿಸಿದ.

ನಿರಂತರ ಸಾಹಸೀ ಪ್ರವೃತ್ತಿಗಳ ನಡುವೆ ಹೆಮಿಂಗ್ವೆ ಸಾವಿನಿಂದ ಅನೇಕ ಬಾರಿ ಪಾರಾಗಿದ್ದ. ಮೊದಲ ವಿಶ್ವ ಮಹಾ ಸಮರದಲ್ಲಿ ಗಾಯಗೊಂಡಿದ್ದಲ್ಲದೆ ಶಾರ್ಕ್ ಮೀನು ಹಿಡಿಯುವಾಗ ಆಯತಪ್ಪಿ ತನಗೆ ತಾನೇ ಗುಂಡು ಹೊಡೆದುಕೊಂಡಿದ್ದ. ಮುಂಚೆ ಹೇಳಿದಂತೆ, ಬದುಕಿನ ಉತ್ತರಾರ್ಧದಲ್ಲಿ ಆತನಿಗೆ ಅಸಂಖ್ಯಾತ ರೋಗ ರುಜಿನಗಳು ಬಾಧಿಸಿದವು.

1953-1954ರ ಹೊತ್ತಿಗೆ ಹೆಮಿಂಗ್ವೆ ಮತ್ತೊಮ್ಮೆ ಆಫ್ರಿಕಾಗೆ ಹೊರಟು ನಿಂತ. ಆಗ ಆತನಿಗೆ ಕೊಂಚ ವಯಸ್ಸಾಗಿತ್ತು. ಕುಡಿತ ಮಿತಿಮೀರಿ ಹೋಗಿತ್ತು. ತನ್ನ ಕೊನೆಯ ಹಾಗೂ ನಾಲ್ಕನೇ ಹೆಂಡತಿ ಮೇರಿ ಈ ಸಂದರ್ಭದಲ್ಲಿ ಹೆಮಿಂಗ್ವೆಯ ಜೊತೆಗಿದ್ದಳು. ತಂಗನ್ಯಿಕ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದ ತನ್ನ ಮಗನನ್ನು ಭೇಟಿ ಮಾಡಲು ಹೆಮಿಂಗ್ವೆ ಬಯಸಿದ್ದ. ಈ ಭೇಟಿಯ ಸ್ಥಳ ಆಗ ಪ್ರಕ್ಷುಬ್ಧವಾಗಿತ್ತು. ಯಾಕೆಂದರೆ ಕೀನ್ಯಾ ಅಧ್ಯಕ್ಷ ಜೋಮೋ ಕೀನ್ಯಟ್ಟ ಬ್ರಿಟಿಷ್ ವಸಾಹತುಗಳ ವಿರುದ್ಧ ಬಂಡಾಯ ಸಾರಿದ್ದ‌. ಈ ಬಂಡಾಯ ಅತಿ ಭಯಾನಕವಾಗಿತ್ತು. ಹೆಮಿಂಗ್ವೆ ಇದರೊಳಗೆ ಸಿಲುಕಿ ಬಹುತೇಕ ಪ್ರಾಣ ಕಳೆದುಕೊಂಡಿದ್ದ.

ಯಾವಾಗ ಹೆಮಿಂಗ್ವೆ ಅರವತ್ತನೆಯ ವಯಸ್ಸಿಗೆ ಕಾಲಿಟ್ಟನೋ ಆಗ ತನಗಿನ್ನು ಬರೆಯಲು ಸಾಧ್ಯವಿಲ್ಲ ಎಂಬುದನ್ನು ಕಂಡುಕೊಂಡ. 1961ರಲ್ಲಿ ಜಾನ್ ಎಫ್. ಕೆನಡಿಯ ಉದ್ಘಾಟನೆಗೆ ಸಂಕ್ಷಿಪ್ತವಾದ ಟಿಪ್ಪಣಿ ಬರೆದುಕೊಡುವಂತೆ ಹೆಮಿಂಗ್ವೆಯನ್ನು ಕೇಳಲಾಗಿತ್ತು. ಆಗ ತನ್ನ ಆಪ್ತ ಮಿತ್ರನೊಬ್ಬನ ಬಳಿ ಹೆಮಿಂಗ್ವೆ ಅಳುತ್ತಾ ಒಂದೇ ಒಂದು ವಾಕ್ಯ ಹೇಳಿದ್ದ- It won’t come anymore!

ಬದುಕಿನ ಅಂತ್ಯದಲ್ಲಿ ಹೆಮಿಂಗ್ವೆ ಸಂಪೂರ್ಣ ಭ್ರಮಾಧೀನನಾಗಿದ್ದ. ಆತನಿಗೆ Paranoid Delusion ರೋಗ ಆಕ್ರಮಿಸಿಕೊಂಡಿತ್ತು. ತನ್ನ ಗೆಳೆಯರು ತನ್ನನ್ನು ಕೊಲ್ಲಲಿದ್ದಾರೆ ಎಂದು ಹೆದರಿದ್ದ. ಬ್ಯಾಂಕ್‌ನಲ್ಲಿ ಹೆಚ್ಚುವರಿ ಸಮಯ ಕೆಲಸ ಮಾಡುವ ಇಬ್ಬರು ವ್ಯಕ್ತಿಗಳು ತನ್ನ ಖಾತೆಗಳ ಲೆಕ್ಕ ಪರಿಶೋಧನೆ ಮಾಡುತ್ತಿದ್ದಾರೆ ಎಂದು ಕನವರಿಸುತ್ತಿದ್ದ. ಮನೋವೈದ್ಯರ ಪ್ರಕಾರ ಹೆಮಿಂಗ್ವೆ ಬೈಪೋಲಾರ್, ಮದ್ಯ ವ್ಯಸನ, ಹಾನೀಗೀಡಾದ ಮಿದುಳು ಹಾಗೂ ನಾರ್ಸಿಸಿಸ್ಟಿಕ್ ವ್ಯಕ್ತಿತ್ವಕ್ಕೆ ಬಲಿಯಾಗಿದ್ದನೆಂದು ದೃಢಪಡಿಸಿದ್ದರು. ಆತನೊಳಗೆ ಇದ್ದ ಕಾಯಿಲೆಗಳ ಲಕ್ಷಣಗಳನ್ನು ಹೆಮಿಂಗ್ವೆ ತನ್ನ ಜೀವನದ ಕಡೆಯ ಘಟ್ಟದಲ್ಲಿ ಹೊರ ಹಾಕತೊಡಗಿದ್ದ. ಇದಕ್ಕಾಗಿ ಹೆಮಿಂಗ್ವೆ ವಿವಿಧ ಡಿಫೆನ್ಸ್ ಮೆಕ್ಯಾನಿಸಮ್ ಅಳವಡಿಸಿಕೊಂಡಿದ್ದ. ಮದ್ಯಪಾನದ ಜೊತೆಗೆ ಸ್ವಯಂ ಚಿಕಿತ್ಸೆ, ಬಹು ಅಪಾಯಕಾರಿಯಾದ ಕ್ರೀಡೆಗಳ ಗೀಳಿಗೆ ಬಿದ್ದ‌.

ಹೆಮಿಂಗ್ವೆಯ ಕೊನೆಯ ದಿನಗಳು ಹೃದಯ ವಿದ್ರಾವಕವಾಗಿದ್ದವು. ಆತನನ್ನು ಮೆಂಟಲ್ ಆಸ್ಪತ್ರೆಗೆ ದಾಖಲಿಸಿ ತೀವ್ರವಾದ ಎಲೆಕ್ಟ್ರಿಕ್ ಶಾಕ್ ಚಿಕಿತ್ಸೆಗೆ ಗುರಿಪಡಿಸಲಾಗಿತ್ತು. 1961 ಜುಲೈ ಎರಡರಂದು ಹೆಮಿಂಗ್ವೆ ಆಸ್ಪತ್ರೆಯಲ್ಲೇ ತನ್ನ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೀಡಾದ. ಇದಕ್ಕೂ ಮುನ್ನ ವೈದ್ಯರ ಬಳಿ ತನ್ನನ್ನು ಮನೆಗೆ ಕಳುಹಿಸಬೇಕೆಂದು ಬೇಡಿಕೊಂಡಿದ್ದ. ಅಚ್ಚರಿಯೆಂಬಂತೆ ಹೆಮಿಂಗ್ವೆಯ ಕುಟುಂಬದಲ್ಲಿ ಆತ್ಮಹತ್ಯೆ ಸಹಜವಾಗಿತ್ತು. ಹೆಮಿಂಗ್ವೆಯ ಅಪ್ಪ ತನ್ನ ಐವತ್ತೇಳನೆಯ ವಯಸ್ಸಿನಲ್ಲಿ ಸಿವಿಲ್ ವಾರ್ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಸತ್ತಿದ್ದ. ಅಲ್ಲದೆ ಹೆಮಿಂಗ್ವೆಯ ಸಹೋದರ, ಸಹೋದರಿ ಮತ್ತು ಮೊಮ್ಮಗಳೂ ಸಹಿತ ಆತ್ಮಹತ್ಯೆಗೆ ಶರಣಾಗಿದ್ದರು. ‘Blood-soaked as any from Greek tragedy’ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹೆಮಿಂಗ್ವೆಯ ವಂಶವೃಕ್ಷವನ್ನು ವರ್ಣಿಸಿತ್ತು. ಮಾನಸಿಕ ಅಸ್ವಸ್ಥತೆ, ವ್ಯಸನ ಮತ್ತು ಆತ್ಮಹತ್ಯೆ ಆನುವಂಶಿಕವಾಗಿ ಅನೇಕ ಪೀಳಿಗೆಗಳ ತನಕ ಬಾಧಿಸಬಹುದು ಎಂಬ ವೈದ್ಯಕೀಯ ಸಿದ್ಧಾಂತಕ್ಕೆ Hemingway Curse ಎಂಬ ಶಬ್ದ ಪರ್ಯಾಯವಾಗಿ ಬಳಕೆಯಾಯಿತು.

ಇಪ್ಪತ್ತೇಳು ಅತ್ಯದ್ಭುತ ಪುಸ್ತಕಗಳ ಲೇಖಕ, ಐವತ್ತಕ್ಕೂ ಅಧಿಕ ಸಣ್ಣ ಕಥೆಗಳ ಸೃಷ್ಟಿಕರ್ತ, ಪುಲಿಟ್ಜರ್ ಹಾಗೂ ನೊಬೆಲೆ ಎಂಬ ಎರಡು ಪ್ರತಿಷ್ಠಿತ ಪ್ರಶಸ್ತಿಗಳ ಪುರಸ್ಕೃತ, ಬ್ರಾಂಜ್ ಸ್ಟಾರ್ ಪುರಸ್ಕೃತ, ವಿಶ್ವದರ್ಜೆಯ ಸ್ಪೋರ್ಟ್ಸ್ ಫಿಶರ್‌ಮ್ಯಾನ್, ಮಹಾನ್ ಬೇಟೆಗಾರ, ಬಾಕ್ಸರ್, ಗೂಳಿ ಕಾಳಗದ ತಜ್ಞ, ಯುದ್ಧ ವರದಿಗಾರ ಹೀಗೆ ಹೆಮಿಂಗ್ವೆ ಏನೆಲ್ಲಾ ಆಗಿದ್ದ. ಹೆಮಿಂಗ್ವೆಗೆ ನಕಾರಾತ್ಮಕ ಆಯಾಮ ಇರಲಿಲ್ಲವೆಂದಲ್ಲ. ಬಹಳ ಇತ್ತು. ಯಾರು ಬೇಕಾದರೂ ಹೆಮಿಂಗ್ವೆಯನ್ನು ಟೀಕಿಸಬಹುದು. ಆದರೆ ಆತನ ಬಗ್ಗೆ ನಿರಾಸಕ್ತಿ ತಳೆದ ಒಬ್ಬನೂ‌ ನಿಮಗೆ ಸಿಗುವುದಿಲ್ಲ. ಹೆಮಿಂಗ್ವೆ ತನ್ನ ಇಚ್ಛೆಯಂತೆ ಬದುಕಿದ. ಏನಲ್ಲದಿದ್ದರೂ ಮೋಜಿಗಾಗಿ ಅವನನ್ನು ನಾವು ನೆನಪಿಸಿಕೊಳ್ಳಬೇಕು.

(ಮುಕ್ತಾಯ)

Leave a Reply

Your email address will not be published.

*