ಹಾಯ್ ಬೆಂಗಳೂರ್

ಹೇಗಿದ್ದೆ? ಹೇಗಾಗಿದ್ದೆ?? ಹೇಗಾದೆ??? ಗೊತ್ತೇ! ಅರ್ಥಾತ್ ನನ್ನ ತೂಕಾಯಣ-೨

  • ನೂರು ಮುಖ ಸಾವಿರ ದನಿ: 

ನನ್ನ ತೂಕ ಒಂದು ನೂರಾ ಅರವತ್ತು ಮುಟ್ಟುವ ಮುನ್ನ ಅದನ್ನು ಇಳಿಸುವ ಬಗ್ಗೆ ನಾನು ಪ್ರಯತ್ನ ಮಾಡಿಲ್ಲ ಅಂತೇನೂ ಅಲ್ಲ. ನನ್ನ ತೂಕ ತೊಂಭತ್ತು ಕೆ.ಜಿ. ದಾಟಿದ ಕೂಡಲೇ ಅದನ್ನು ಇಳಿಸಲು ನನ್ನ ಕಸರತ್ತು, ಆಟ-ಓಟಗಳನ್ನು ಒಂದೊಂದಾಗಿ ಮಾಡಿದೆ ಅನ್ನಿ. ಪೊಲೀಸ್ ಅಧಿಕಾರಿಯಾಗಿರುವ ಅಥವಾ ಪ್ರಸ್ತುತ ನಿವೃತ್ತಿ ಆಗಿರುವ ದಾವಣಗೆರೆಯ ಐ.ಜಿ.ಮಂಜುನಾಥ ನನ್ನ ಕಕ್ಷಿಗಾರ ಗಂಗಾನಾಯ್ಕ ಅವರ ಪುತ್ರರಲ್ಲೊಬ್ಬ. ಈತನ ಪೊಲೀಸ್ ನೌಕರಿಗೆ  ಕೇಸಿನ ಬದಲು ನಾನು ನೀಡಿದ ಪರ್ಯಾಯ ಸಲಹೆ ಮೇರೆಗೆ ಆತನಿಗೆ ಪೊಲೀಸ್ ಅಧಿಕಾರಿಯ ನೌಕರಿ ಸಿಕ್ಕಿತು ಅನ್ನಿ. ಅದಿರಲಿ, ಆದರೆ ಈತ ಪೊಲೀಸ್ ನೌಕರಿಗೆ ಹೋಗುವ ಮೊದಲು ನನಗೆ ಕರಾಟೆ ಕಲಿಸಿದರು. ನಂತರ ದಾವಣಗೆರೆ ಬಳಿಯ ನಿಟುವಳ್ಳಿಯ ಮಹೇಶ್ವರಾಚಾರ್ ಮೂಲಕ ಯೋಗಾಸನ ಕಲಿತೆ. ದಾವಣಗೆರೆಯ ಕ್ರೀಡಾಂಗಣದ ಕಟ್ಟಡದಲ್ಲಿರುವ ವ್ಯಾಯಾಮ ಶಾಲೆಯಲ್ಲಿ ಹೆವಿ ವೈಟ್ ಲಿಫ್ಟಿಂಗ್ ಸಹ ಮಾಡಿದೆ. ಆ ಕ್ರೀಡಾಂಗಣ ಒಳಾಂಗಣದಲ್ಲಿ ಹತ್ತು ಸುತ್ತುಗಳ ಓಟವನ್ನು ಸಹ ಮಾಡಿದ್ದಾಯಿತು.

ನಂತರ ದಾವಣಗೆರೆಯ ಹಳೆಯ ಕೋರ್ಟ್ ಎದುರಿನ ಮೈದಾನದಲ್ಲಿ ಬಾಲ್‌ ಬ್ಯಾಡ್ ಮಿಂಟನ್ ಸಹ ಆಡಿದೆ. ಬಾಲ್‌ ಬ್ಯಾಡ್‌ಮಿಂಟನ್ ಆಟದ ಪರಿಣತ ಉಮೇಶ್ ಜೊತೆ ಸಹ ಆಡಿದ್ದೇನೆ. ದಾವಣಗೆರೆ ಕ್ಲಬ್ಬಿನ ಒಳಾಂಗಣದಲ್ಲಿ ಷಟಲ್ ಹಾಗೂ ದಾವಣಗೆರೆಯ ಹಳೆಯ ಕೋರ್ಟಿನ ಹಿಂದುಗಡೆ (ಆಗ ಖಾಲಿ ಇದ್ದ ಜಾಗದಲ್ಲಿ) ಹೊರಾಂಗಣ ಷಟಲ್ ಬ್ಯಾಡ್ಮಿಂಟನ್ ಸಹ ಆಡಿದೆ. ಭದ್ರಾವತಿಯಲ್ಲಿ ನಾನು ಗರಡಿ ವ್ಯಾಯಾಮದಲ್ಲಿ ಪಳಗಿದ್ದ  ಕಾರಣ ನೂರಾರು `ಉಠ್-ಬೈಸ್’ ಹಾಗೂ ಇಪ್ಪತ್ತೈದು `ದಂಡೆ’ಗಳನ್ನು ಹೊಡೆದದ್ದೂ ಆಯಿತು. ನೀರು, ನಿಂಬೆ ಹಣ್ಣು, ಜೇನುತುಪ್ಪ ಮಿಶ್ರಿತ ದ್ರವ ಮೂರು ತಾಸಿಗೊಂದು ಗ್ಲಾಸು ಕುಡಿದು ಹತ್ತು ದಿನಗಳಲ್ಲಿ ಹದಿನೈದು ಕೆ.ಜಿ. ತೂಕ ಇಳಿಸಿದ್ದೆ. ಕಾಫಿ, ತಿಂಡಿ ಊಟ ತೀರ್ಥ-ಪ್ರಸಾದ ಏನೆಂದರೆ ಏನೂ ಇಲ್ಲದೆ ಕೇವಲ ಆ ದ್ರವ ಸೇವನೆಯೊಂದರಲ್ಲೇ ಇರುತ್ತಿದ್ದೆ. ಆಗ ಸಹ ನನ್ನ ವಕಾಲತ್ತು, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ಯಥಾ ಪ್ರಕಾರದ ದಿನಕ್ಕೆ ಇಪ್ಪತ್ತು ತಾಸುಗಳ ನನ್ನ ಕಾಯಕ ನಡೆದೇ ಇತ್ತು.

ಇವೆಲ್ಲವುಗಳನ್ನೂ (ಕೆಲವು ಹೊರತು ಪಡಿಸಿ) ಏಕಕಾಲದಲ್ಲಿ ಮಾಡಲಿಲ್ಲ. ಒಂದಾದ ಮೇಲೊಂದರಂತೆ ಪ್ರಯೋಗ ಮಾಡಿದೆ ಅನ್ನಿ. ಪ್ರತಿ ಸಲ ಪ್ರತಿ ವಿಧದ ಶ್ರಮದಲ್ಲಿ ಐದು, ಹತ್ತು, ಹದಿನೈದು ಕೆ.ಜಿ.ತೂಕ ಇಳಿಯುತ್ತಿದ್ದದ್ದು ನಿಜ. ನಂತರ ವಕೀಲ ವೃತ್ತಿಯ ಅಗಾಧ ಕಾರ್ಯ ಬಾಹುಳ್ಯದ ಕಾರಣ ಯಾವುದನ್ನೂ ನಿರಂತರವಾಗಿ ನಿಯಮಿತವಾಗಿ ಮುಂದುವರೆಸಲಿಲ್ಲ. ಜೊತೆಗೆ  ಆಗಾಗ ಸಲ್ಲಿಸುತ್ತಿದ್ದ ತೀರ್ಥ-ಪ್ರಸಾದಗಳ ಪುನರಾವರ್ತನೆ ಬೇರೆ. ಹೀಗಾಗಿ, ತೂಕ ಇಳಿಕೆ ಮತ್ತು ಏರಿಕೆಗಳ ಕಣ್ಣಾಮುಚ್ಚಾಲೆ ನಡೆದೇ ಇತ್ತು. ಆದರೆ ಒಟ್ಟು ಪರಿಣಾಮದಲ್ಲಿ ಕ್ರಮೇಣ ತೂಕದ ಏರಿಕೆಯೇ ಗೆದ್ದಿತು. ಅದು ಏರುತ್ತಲೇ ಹೋಯಿತು. ಆಗ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ ಐದು ಘಂಟೆಗೆ ನನ್ನ ಶಿಷ್ಯ ದಯಾನಂದನ ಜೊತೆ ಐದು ಹತ್ತು ರೌಂಡ್ ವಾಕ್  ಮಾಡಲಾರಂಭಿಸಿದೆ. ಏಕೆ ಗೊತ್ತೆ? ಆಗ ಯಾವುದೇ ಆಟ ಆಡಲು , ಓಡಲು,  ಯೋಗಾಸನ ಇತ್ಯಾದಿ ಮಾಡಲು ಆಗುತ್ತಿರಲಿಲ್ಲ, ಅದಕ್ಕೇ.

೧೯೬೮ ರಿಂದ ೧೯೭೮ರವರೆಗೆ ಕೋರ್ಟಿನ ನೌಕರಿಯಲ್ಲಿದ್ದ ನಾನು ಒಟ್ಟು ಹನ್ನೊಂದು ವರ್ಷಗಳ ನ್ಯಾಯಾಂಗ ನೌಕರಿಗೆ ರಾಜೀನಾಮೆ ನೀಡಿದೆ. ಈ ಅವಧಿಯಲ್ಲಿ ಪಿ.ಯು.ಸಿ (ಮಾತ್ರ ಡಬಲ್ ಆಕ್ಟಿಂಗ್ ಡೇ ಕಾಲೇಜು) ಬಿ.ಎ. ಮತ್ತು ಎಲ್‌ಎಲ್‌ಬಿಗಳನ್ನು ಸಂಜೆ ಕಾಲೇಜುಗಳ ಮೂಲಕ ಮಾಡಿಕೊಂಡಿದ್ದೆ. ೧೯೭೯ರ ಫೆಬ್ರುವರಿ ಎರಡರಂದು ದಾವಣಗೆರೆಯಲ್ಲಿ ವಕಾಲತ್ತು ಆರಂಭಿಸಿದ್ದ ನಾನು ೧೯೯೯ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಸಹ ನನ್ನ ವಕೀಲ ವೃತ್ತಿಯ ಸಮಾನಂತರ ಕಚೇರಿ ಆರಂಭಿಸಿದೆ. ಹತ್ತು ವರ್ಷಗಳ ಕಾಲ ಎರಡೂ ಕಡೆ ವಕಾಲತ್ತು ಮಾಡಿದ ನಾನು ೨೦೧೧ರ ಜನವರಿ ಒಂದರಿಂದ ವಕೀಲ ವೃತ್ತಿಯನ್ನು  ಪೂರ್ಣವಾಗಿ ಸಂಸಾರ ಸಹಿತ ಬೆಂಗಳೂರಿನಲ್ಲಿ ಮಾತ್ರ ಮುಂದುವರೆಸಿದೆ.  ದಾವಣಗೆರೆಯ ನನ್ನ ಆಫೀಸನ್ನು ನನ್ನ ಸಹ ವಕೀಲರು ನೋಡಿಕೊಳ್ಳುತ್ತಾರೆ. ಅದು ಇಂದಿಗೂ ಇದೆ. ಇದನ್ನು ಯಾಕೆ ಹೇಳಿದೆ ಅಂದರೆ ನನ್ನ ತೂಕ ಇಳಿಕೆಯ ಭಗೀರಥ ಪ್ರಯತ್ನಗಳನ್ನು ಇಲ್ಲಿಯೂ (ಬೆಂಗಳೂರಿನಲ್ಲಿ) ಸಹ ಮುಂದುವರೆಸಿದ ಬಗ್ಗೆ ಹೇಳಲೇ ಬೇಕಲ್ಲವೇ, ಅದಕ್ಕೆ.

೧೯೯೯ರಿಂದ ಬೆಂಗಳೂರಿನಲ್ಲಿದ್ದಾಗಲೆಲ್ಲಾ ಸದಾಶಿವನಗರದ ಈಜುಕೊಳಕ್ಕೆ ಹೋಗಿ ನೀರಾನೆಯಂತೆ ಈಜುತ್ತಿದ್ದೆ. ಆದರೆ ಅದನ್ನು ಸಹ ಕ್ಲುಪ್ತವಾಗಿಯೂ ನಿರಂತರವಾಗಿಯೂ ನಾನು ಮಾಡಲೇ ಇಲ್ಲ. ನಂತರ ರಾಜಾಜಿನಗರದಲ್ಲಿರುವ ಡೈಟ್ರೀಷಿಯನ್ ಒಬ್ಬರು ನನಗೆ ಪರಿಚಯವಾದರು!.  ತೂಕ ಇಳಿಕೆ ಬಗ್ಗೆ ಅವರ ಹತ್ತಿರವೂ ನಾನು ಹೋದೆ. ಅವರು ಡಾ|| ರಾಜ್‌ಕುಮಾರ್ ರಸ್ತೆಯಲ್ಲಿರುವ `ಸುಗುಣ’ ಆಸ್ಪತ್ರೆಯಲ್ಲಿ (ಬಾಡಿ ಮತ್ತು ಇತ್ಯಾದಿಗಳ ಬಗ್ಗೆ) ಒಂದು ವಿಶೇಷ ವರದಿ ತರಿಸಿಕೊಂಡರು. ಅಲ್ಲಿನ ಒಂದು ವಿಶಿಷ್ಠ ಯಂತ್ರದ ಪ್ಲಾಟ್ ಫಾರಂ ಮೇಲೆ ನಿಂತರೆ ಎತ್ತರದಲ್ಲಿದ್ದ ಮೀಟರ್ ದೇಹದ ಫ್ಯಾಟ್ಸ್, ಬಾಡಿ ಮಾಸ್ ಮತ್ತಿತ್ತರ ಅಂಶಗಳನ್ನು ಶೇಕಡಾವಾರು ಜೊತೆಗೆ ನಮ್ಮ ತೂಕ ಸಹ ತೋರಿಸುತ್ತಿತ್ತು. ನನ್ನ ಆಗಿನ ತೂಕ ಒಂದೂನೂರಾ ಐವತ್ತೊಂಭತ್ತು ಪಾಯಿಂಟ್ ಆರು (೧೫೯.೬) ಕೆ.ಜಿ. ಆಗಿತ್ತು. ಅದನ್ನು ರೌಂಡ್ ಆಪ್ ಮಾಡಿ ಒಂದುನೂರಾ ಅರವತ್ತು ಅಂತ ಹೇಳಿದ್ದೇನೆ ಅನ್ನಿ.

ಆ ಡೈಟ್ರೀಷಿಯನ್ ಡಾಕ್ಟರು ಪ್ರತಿ ತಿಂಗಳು ಇಂತಹ ವರದಿ ತರಿಸಿಕೊಳ್ಳುತ್ತಿದ್ದರು. ಒಂದು ತಿಂಗಳಿಗಾಗುವಷ್ಟು ವಿವಿಧ ಮಾತ್ರೆಗಳನ್ನು ಅವರೇ ಕೊಡುತ್ತಿದ್ದರು. ಅವುಗಳು ಇಟಲಿ ದೇಶದ ಮಾತ್ರೆಗಳು. ಜೊತೆಗೆ ಊಟದಲ್ಲಿ `ಡಯಟ್ ಪ್ಲಾನಿಂಗ್’ ಕೊಟ್ಟಿದ್ದರು. ಆ ಪ್ರಕಾರ ಬೆಳಿಗ್ಗೆ ೮ ಘಂಟೆಗೆ ಒಂದು ಚಪಾತಿ, ಹನ್ನೊಂದು ಘಂಟೆಗೆ ಒಂದಿಷ್ಟು ಹಣ್ಣು , ಮಧ್ಯಾಹ್ನ ಒಂದು ಘಂಟೆಗೆ ಒಂದು ಕಪ್ಪು ಅನ್ನಸಾರು, ನಾಲ್ಕು ಗಂಟೆಗೆ ಒಂದು ಹಣ್ಣು ಅಥವಾ ಸೂಪ್ ಮತ್ತು ರಾತ್ರಿ ಎಂಟಕ್ಕೆ ಒಂದು ಚಪಾತಿ. ಇವರ ವಿಧಾನದ ಚಿಕಿತ್ಸೆಯನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಪಡೆದೆ. ಆಗ ಇಳಿದ ಒಟ್ಟು ತೂಕ ಮೂವ್ವತ್ತೈದು ಕೆ.ಜಿ.ಗಳು. ಅಂದರೆ ಒಂದೂ ನೂರಾ ಅರವತ್ತರಿಂದ ಒಂದು ನೂರಾ ಇಪ್ಪತ್ತೈದು ಕೆ.ಜಿ.ಗೆ. ನನ್ನ ತೂಕ ಇಳಿದಿತ್ತು. ಆದರೆ ಇಟಲಿಯ ತೂಕ ಇಳಿಕೆ ಮಾತ್ರೆಯ ವಿವರದ ಚೀಟಿಯಲ್ಲಿನ ವಿವರಗಳ ಪ್ರಕಾರ ಅದರ ನಿರಂತರ ಉಪಯೋಗದಿಂದ ಕಣ್ಣಿನ ನರಗಳು (ಆಪ್ಟಿಕ್ ನರ್ವ್) ಹಾಳಾಗುತ್ತದೆ ಅಂತ ಎಚ್ಚರಿಕೆಯ ಟಿಪ್ಪಣಿ ಇದ್ದಿತು.

ಅಷ್ಟೇ ಅಲ್ಲ ಬಹಳ ಜನಕ್ಕೆ ತಿಳಿದಿಲ್ಲದ ಮತ್ತೊಂದು ಅತಿಮುಖ್ಯ ಸಂಗತಿ ಇದೆ. ಅದೇನೆಂದರೆ ಅಲೋಪತಿಯ ಯಾವುದೇ ಮಾತ್ರೆಗಳ ಸೇವನೆ ನಮ್ಮ `ಲಿವರ್’ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂದರೆ ಹಂತ ಹಂತವಾಗಿ ಲಿವರ್‌ಗೆ ಹಾನಿಯಾಗ್ತುತಾ ಹೋಗುತ್ತದೆ. ಅದಕ್ಕಾಗಿಯೂ ಅಲೋಪತಿ ಚಿಕಿತ್ಸೆಯ ಅನೇಕ ಮಾತ್ರೆಗಳ ಸೇವನೆ ಜೊತೆಗೆ ಲಿವರ್ ರಕ್ಷಣೆಗಾಗಿ ಲಿವೋಜೆನ್‌ನಂತಹ ಬೇರೆ ಮಾತ್ರೆ ಸಹ ಕೊಡುತ್ತಾರೆ. ಆದ್ದರಿಂದ ಲಿವರ್ ಹಾಗೂ  ಕಣ್ಣಿನ ನರಗಳು ಹಾಳಾಗುವ ಅಪಾಯದ ಸೂಚನೆ ಅರಿತ ನಾನು ಆ ಚಿಕಿತ್ಸೆಯನ್ನು ನಿಲ್ಲಿಸಿದೆ. ಪರಿಣಾಮ ಹಂತ ಹಂತವಾಗಿ ಮತ್ತೆ ಯಥಾಸ್ಥಿತಿ ಅಂದರೆ ಒಂದು ನೂರಾ ಅರವತ್ತು ಕೆ.ಜಿ.ಯ ಹಳೇ ತೂಕಕ್ಕೆ ಯಶಸ್ವಿಯಾಗಿ ಮರಳಿದೆ.

ಈ ಹಂತದಲ್ಲಿ ಬೆಂಗಳೂರಿನ ಬನಶಂಕರಿ ಬಿ.ಡಿ.ಎ ಕಾಂಪ್ಲೆಕ್ಸ್ ಸಮೀಪದ ಆಯುರ್ವೇದಿಕ್ ವೈದ್ಯೆಯೊಬ್ಬರ ಪರಿಚಯವಾಯಿತು. ಅದನ್ನು ಮಾಡಿಸಿದ್ದು ನನ್ನ ಆತ್ಮೀಯ ಸ್ನೇಹಿತ ದೊಡ್ಡಣ್ಣ. ಅರವತ್ತು ದಾಟಿದ್ದ ವೈದ್ಯೆ ಮೈಸೂರಿನ ಅರಸರ ರಾಜವೈದ್ಯರ ವಂಶದವರಂತೆ. ಆಕೆ ಈ ವಂಶದಲ್ಲಿನ ಹದಿಮೂರು ಅಥವಾ ಹದಿನಾಲ್ಕನೇ ತಲೆಮಾರಿನವರು ಅಂತ ಆಕೆಯೇ ಹೇಳಿದ್ದರು. ಮಕ್ಕಳಾಗುವುದರಿಂದ ಹಿಡಿದು ಅನೇಕ ಖಾಯಿಲೆಗಳಿಗೆ ಯಶಸ್ವೀ ಆಯುರ್ವೇದ ಚಿಕಿತ್ಸೆ ನೀಡುತ್ತಾರೆ ಅಂತ ಗೆಳೆಯ ದೊಡ್ಡಣ್ಣ ಹೇಳಿದ್ದ. ಆತನೂ ಸಹ ಅವರ ಬಳಿ ಚಿಕಿತ್ಸೆ ಪಡೆದಿದ್ದ. ನನಗೂ ಸಹ ಆತನೇ ಅವರ ಬಳಿ ಕರೆದುಕೊಂಡು ಹೋದ. ನಾನು ಸಹ ಆ ವೈದ್ಯೆಯ ಬಳಿ ತೂಕ ಇಳಿಕೆಯ ಆರ್ಯುವೇದ ಚಿಕಿತ್ಸೆ ಆರಂಭಿಸಿದೆ.

ಈ ನಡುವೆ ಒಂದು ಅತಿಮುಖ್ಯವಾದ ಸಂಗತಿಯನ್ನು ನಾನು ಹೇಳಲೇಬೇಕು. ಅದೇನೆಂದರೆ ದೊಡ್ಡಣ್ಣ ಮತ್ತು ನಾನು ಐದು ದಶಕಗಳಿಗೂ ಹಿಂದಿನ ಗೆಳೆಯರು. ಚಿತ್ರದುರ್ಗ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ನಮ್ಮ ಕುಟುಂಬ ವಲಸೆ ಹೋದದ್ದು ೧೯೫೫ರಲ್ಲಿ. ೧೯೬೯ರಲ್ಲಿ ನನ್ನ ಅಣ್ಣನ (ಬಿ.ವಿ. ನಂಜುಂಡಯ್ಯ) ಕುಟುಂಬ ಭದ್ರಾವತಿಯ ಭೂತನಗುಡಿಯಲ್ಲಿ ವಸತಿ ಮಾಡಿತ್ತು. ಹಾಸನದ ಅರಸೀಕೆರೆ ಮೂಲದ ದೊಡ್ಡಣ್ಣ ಹಾಸನದಲ್ಲಿ ಐಟಿಐ ಮಾಡಿಕೊಂಡು ಭದ್ರಾವತಿಯ ಕಬ್ಬಿಣ ಕಾರ್ಖಾನೆಗೆ ಕೆಲಸಕ್ಕೆ ಸೇರಿದ. ಆಗ ನನ್ನ ಅಣ್ಣನ ಮನೆಯ ಹಿಂದಿನ ರಸ್ತೆಯ ಮನೆಯೊಂದಲ್ಲಿ ಒಂದು ರೂಮು ಮಾಡಿಕೊಂಡಿದ್ದ. ಆಗ ನಾನು ಸಾಗರದಿಂದ ಅಣ್ಣನ ಮನೆಗೆ ಬಂದಾಗೆಲ್ಲ ದೊಡ್ಡಣ್ಣ ಸಿಗುತ್ತಿದ್ದ. ನಂತರ ೧೯೭೧ರಲ್ಲಿ ನಾನು ಸಾಗರದಿಂದ ಭದ್ರಾವತಿ ಕೋರ್ಟಿಗೆ ವರ್ಗವಾಗಿ ಬಂದೆನು. ನೌಕರಿಯ ಜೊತೆಗೆ ಸಂಜೆ ಕಾಲೇಜಿನಲ್ಲಿ (ಪ್ರಥಮ ಬಿ.ಎ) ಓದುತ್ತಿದ್ದ ನಾನು ಅಣ್ಣನ ಮನೆಯಲ್ಲಿದ್ದರೂ ಸಹ ಓದಲಿಕ್ಕಾಗಿ ಒಂದು ರೂಮ್ ಮಾಡಿದ್ದೆ. ಆ ರೂಮು ದೊಡ್ಡಣ್ಣನ ರೂಮಿನ ಮಹಡಿಯ ಮೇಲೆ ಇತ್ತು.

ಹೀಗಾಗಿ ಆತ ಮತ್ತು ನಾನು ಇನ್ನು ಹೆಚ್ಚು ಆತ್ಮೀಯರಾದೆವು. ಆದರೆ ಇದಿಷ್ಟು ಹೇಳಲು ಮುಖ್ಯ ಮತ್ತು ಮೂಲ ಕಾರಣ ನಮ್ಮ ತೂಕ. ಆಗ ನಮ್ಮಿಬ್ಬರ ತೂಕ ಅರವತ್ತು ಕೆಜಿ ಚಿಲ್ಲರೆ ಇತ್ತು ಅನ್ನಿ. ಆಗ ಇಬ್ಬರು ಅವಿವಾಹಿತರು.  ಆನಂತರ ನಮ್ಮಿಬ್ಬರ ತೂಕ ಹೆಚ್ಚುತ್ತಲೇ ಹೋಯಿತು. ನಮ್ಮ ಸ್ನೇಹ ಮತ್ತು ಆತ್ಮೀಯತೆಗಳನ್ನು ನಮ್ಮ ತೂಕ ಹೆಚ್ಚುವಿಕೆಯಲ್ಲೂ ಸಹ ( ಎಲ್ಲೇ ಇದ್ದರೂ) ಒಗ್ಗಟ್ಟಾಗಿ ನಿಭಾಯಿಸಿದೆವು ಅನ್ನಿ. ಈಗ ತೂಕ ಇಳಿಕೆಯ ವಿಷಯಕ್ಕೆ ಬರೋಣ. ಬನಶಂಕರಿ ಬಡಾವಣೆಯ ಆ ವೈದ್ಯೆಯ ಚಿಕಿತ್ಸೆಯಿಂದ ನಮ್ಮಿಬ್ಬರ ತೂಕದಲ್ಲಿ ಗಣನೀಯ ಇಳಿಕೆ ಆಗಲಿಲ್ಲ. ಇದಕ್ಕೆ ಅವರ ಔಷಧದ ವೈಫಲ್ಯ ಕಾರಣ ಅನ್ನುವುದಕ್ಕಿಂತ ಆಕೆ ಹೇಳಿದ್ದ ಪ್ರಕಾರ ತೀರ್ಥ ಮತ್ತು ಪ್ರಸಾದಗಳನ್ನು  ನಾವು ಸಂಪೂರ್ಣ ಬಿಡಲಿಲ್ಲ. ಭೀಮ, ಘಟೋತ್ಕಚರಂತೆ ಬಂಡೆ-ಹೆಬ್ಬಂಡೆಗಳಾಗಿದ್ದ ನಾವು ತೀರ್ಥ-ಪ್ರಸಾದ ಸೇವನೆಯಲ್ಲಿ ಬಕಾಸುರರೂ ಆಗಿದ್ದೆವು. ಅವುಗಳನ್ನು ಭಾಗಶಃ  ವಜ್ಜನ ಮಾಡಿದೇವು. ಆ ವೈದ್ಯೆಯ ಚಿಕಿತ್ಸೆಯಲ್ಲಿ ನಮ್ಮಿಬ್ಬರ ತೂಕ ಗಣನೀಯವಾಗಿ ಇಳಿಯದಿರಲು ಇದೇ ಮುಖ್ಯ ಕಾರಣ ಇರಬೇಕು. ಒಟ್ಟಿನಲ್ಲಿ ಆ ಅನುಭವೀ ರಾಜ ವೈದ್ಯಾವಂಶಸ್ಥೆ ವೈದ್ಯೆಯ ಚಿಕಿತ್ಸೆಗೂ ಬಗ್ಗಲಿಲ್ಲ ಒಂದೂವರೆ ಟನ್ ದಾಟಿದ್ದ ನಮ್ಮಿಬ್ಬರ ತೂಕ. ಆ ಚಿಕಿತ್ಸೆಯನ್ನು ಇಬ್ಬರೂ ಕೈ ಬಿಟ್ಟೆವು.

ಈ ಹಂತದಲ್ಲಿ ನನ್ನ ಕಕ್ಷಿಗಾರ (ಕಲಾಕಾರ) ಮಹಾಶಯನೊಬ್ಬ ತೂಕ ಇಳಿಕೆಗೆ ತಂಜಾವೂರಿನ ದಾರಿ ತೋರಿಸಿದ. ಆತನೂ ತೂಕಸ್ಥ ಗಿರಾಕಿಯೇ. ಆತ ಸಹ ತೂಕ ಇಳಿಸಬೇಕಾಗಿತ್ತು. ಆತನಿಗೆ ದೊರೆತ ಮಾಹಿತಿ ಪ್ರಕಾರ ಯಾವುದೇ ಔಷಧೋಪಚಾರ ಚಿಕಿತ್ಸೆ ಇಲ್ಲದೇ ಕೇವಲ ಪ್ರಕೃತಿ ಚಿಕಿತ್ಸೆ ಹಾಗೂ ಆಹಾರ ಪದ್ಧತಿಗಳ ಮೂಲಕ ಅತ್ಯಲ್ಪ ಕಾಲದಲ್ಲಿ `ಭಾರೀ ತೂಕ”ವನ್ನು ಇಳಿಸಲಾಗುತ್ತೆ. ಅದಕ್ಕಾಗಿ ಒಂದೆರಡು ತಿಂಗಳು ಅಲ್ಲಿಯೇ ಇರಬೇಕಾಗುತ್ತೆ ಅಂದರು. ಈ ದಾರಿ ಹೇಳಿದ್ದು ಆತನ ಸ್ನೇಹಿತನ ಮಗ ಮತ್ತು ಸೊಸೆ.

ನಾನು ಮತ್ತು ಆ ತೂಕಸ್ಥ ಗಿರಾಕಿ ಇಬ್ಬರೂ ಒಂದು ತಿಂಗಳು ಅಲ್ಲಿರಲು ನಿರ್ಧರಿಸಿ ಅಲ್ಲಿ ನಮಗೆ ತಲಾ ಒಂದೊಂದು ಕೊಠಡಿ ಬುಕ್ ಮಾಡಿದೆವು. ಕೊನೇ ಘಳಿಗೆಯಲ್ಲಿ ಆತ ಕೈಕೊಟ್ಟ. ನಾನು ನನ್ನು ಡ್ರೈವರ್ ಹಾಗೂ ಆ ದಂಪತಿಗಳ ಸಮೇತ ನಾಲ್ಕುನೂರು ಕಿ.ಮಿ. ಪ್ರಯಾಣ ಮಾಡಿದೆವು. ನಾವು ತಂಜಾವೂರು ಹೊರ ವಲಯದ ಊರೊಳಗಿದ್ದ ಆ ಧನ್ವಂತರಿ ಆಲಯ(?) ಮುಟ್ಟಿದ್ದಾಗ ರಾತ್ರಿ ಹನಂದು ಘಂಟೆ. ಶೆಟ್ಟಿ ಇದ್ದಲ್ಲಿ ಪಟ್ಟಣ ಅನ್ನುವ ಹಾಗೆ ನಾನು ಎಲ್ಲಿಗೆ ಹೋದರೂ ಸಹ ನನ್ನ ಹೋಂ ವರ್ಕ್ -ರೂಂ ವರ್ಕ್ ಅನ್ನು ಜೊತೆಗೆ ಒಯ್ಯುತ್ತೇನೆ. ಅಂದರೆ ನನ್ನ ವಕೀಲ ವೃತ್ತಿಯ ಕೇಸು, ಫೈಲುಗಳು, ನನ್ನ  ಪತ್ರಿಕೆ ಹಾಗೂ ಸಾಹಿತ್ಯಕ ಬರವಣಿಗೆ ಫೈಲುಗಳು, ಓದಲು ಕೆಲವು ಪುಸ್ತಕಗಳ ಸಹಿತ  ಚಿತ್ರರಂಗದ`ಕಾರವಾನ್’ನಂತೆ ಎಲ್ಲ ವ್ಯವಸ್ಥೆಗಳ ಜೊತೆಗೆ ಹೋಗಿದ್ದೆ.

ನಾನು ಹೋಗಿದ್ದ ತೂಕ ಇಳಿಕೆಯ ಚಿಕತ್ಸಾ ಕೇಂದ್ರ ಇದ್ದದ್ದು ತಂಜಾವೂರು ನಗರದಿಂದ ಅನೇಕ ಕಿ.ಮೀ. ದೂರದಲ್ಲಿದ್ದ ಒಂದು ಕಿರುಹಳ್ಳಿಯಲ್ಲಿ   ಅದೂ ಕೂಡ ಆ ಹಳ್ಳಿಯ ಹೊರಗೆ ಮತ್ತೊಂದಷ್ಟು ಕಿ.ಮೀ ದೂರದ ಹೊಲದ ಕಣದಲ್ಲಿ. ಅದು ದನದ ಕೊಟ್ಟಿಗೆ ಇದ್ದಂತ್ತಿತ್ತು. ದನದ ಕೊಟ್ಟಿಗೆಯನ್ನೇ ವಿಭಾಗಿಸಿ ತಂಗುವ ಕೊಠಡಿಗಳನ್ನಾಗಿಸಿದ್ದರು. ಬಾತ್ -ಕಂ -ಶೌಚಾಲಯ ಅನ್ನುವುದು ಜೈಲಿನ ಕೈದಿಗಳ ಕೊಠಡಿಯಲ್ಲಿ  ಇರುವಂತೆ ಇತ್ತು. ಶೌಚಕ್ಕೆ ಕೂರಲೂ ಬರುವಂತಿರಲಿಲ್ಲ. ಇಡೀ ರೂಂ ಕೊಳಕಿನ ತೌರು. ಮಂಚ ಅಂತ ಹೇಳಬಹುದಾದ ಒಂದು ಕಿರುಗುಟ್ಟುವ ಕಬ್ಬಿಣದ ಫ್ರೇಮು ಅದರ ಮೇಲೊಂದು ಕಲ್ಲಿನಂಥಾ ಕೊಳಕು ಹಾಸಿಗೆ. ನನಗೆ ಭ್ರಮನಿರಸವಾಯಿತು. ನನಗೆ ಬರೆಯಲು ಟೇಬಲ್ ಸಹ ಇರಲಿಲ್ಲ. ಒಟ್ಟಿನಲ್ಲಿ ಏಕಾಂತ ಕಾರಾಗೃಹದ (ಬಂದಿ) ಖೈದಿಯಂತಾಗಿದ್ದೆ. ಆದರೆ ತೂಕ ಇಳಿಕೆಯ ಘೋರ ತಪಸ್ಸಿಗಾಗಿ ಕಲ್ಲಿನಂಥಾ ಹಾಸಿಗೆಯ ಮೇಲೆ ಮಲಗಿ ನಿದ್ರಿಸಲು ಪ್ರಯತ್ನಿಸಿದೆ. ಮತ್ತೊಂದು ರೂಂನಲ್ಲಿ ನನ್ನ ಡ್ರೈವರ್ ಮಲಗಿದ್ದ, ಇನ್ನೊಂದರಲ್ಲಿ ನಮ್ಮನ್ನು ಕರೆದುಕೊಂಡು ಹೋಗಿದ್ದ  ಆ ನವ ದಂಪತಿಗಳು ಆ ನರಕದಲ್ಲೇ ಸ್ವರ್ಗ ಕಾಣಲಾರಂಭಿಸಿದ್ದರು.

                – (ಮುಂದುವರೆಯುವುದು..)

Leave a Reply

Your email address will not be published. Required fields are marked *