ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಗರಂ ಆಗಿರೋದು ನೋಡಿದರೆ ಇಬ್ಬರ ನಡುವೆ ಮತ್ತೊಂದು ಸುತ್ತಿನ ಮಾತಿನ ಜಟಾಪಟಿ ಗ್ಯಾರಂಟಿ ಎಂಬುದು ಸ್ಪಷ್ಟವಾಗುತ್ತಿದೆ. ಮೋದಿ ಮತ್ತು ಕೇಂದ್ರ ಸರ್ಕಾರವು ಭಾರತ-ಚೀನಾದ ಗಡಿಯ ಕೆಲ ಪ್ರದೇಶಗಳನ್ನು ಚೀನಾಗೆ ಬಿಟ್ಟುಕೊಟ್ಟು ಕೈತೊಳೆದುಕೊಂಡಿದೆ ಅಂತ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಷ್ಟಕ್ಕೇ ಅವರು ಸುಮ್ಮನಾಗಿಲ್ಲ. ಲಡಾಕ್ ನಲ್ಲಿ ಪರಿಸ್ಥಿತಿ ಹೇಗಿದೆ ಅಂತ ನೆನ್ನೆ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ವಿವರಿಸಿದರು. ಅದಕ್ಕೆ ಕೂಡ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ವಿಪಕ್ಷಗಳು ಇದರ ಬಗ್ಗೆ ದನಿ ಎತ್ತದಂತೆ ಮೋದಿ ಮಾಡಿಬಿಟ್ಟಿದ್ದಾರೆ ಅಂತ ಆಪಾದನೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗಡಿಯಲ್ಲಿ ಭಾರತವು ತನ್ನ ಜಾಗವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಅಂತ ಹೇಳಿದ್ದರು. ಇದೇ ವಿಚಾರಕ್ಕೆ ಸರ್ಕಾರವು ಚೀನಾದ ಜೊತೆಗೆ ಮಾತುಕತೆ ನಡೆಸುತ್ತಿದೆ. ಈಗ ನಯವಾಗಿ ರಾಜನಾಥ್ ಸಿಂಗ್ ಬೇರೆಯದೇ ಕಥೆ ಹೇಳುತ್ತಿದ್ದಾರೆ. ಈಗ ಇರೋ ಜಾಗಕ್ಕಿಂತ ಸ್ವಲ್ಪ ಮುಂದೆ ಹೋಗುತ್ತೇವೆ ಎನ್ನುತ್ತಿದ್ದಾರೆ. ಆದರೆ ಅದು ಶುದ್ಧ ಸುಳ್ಳು. ನಮ್ಮ ಸೈನಿಕರು ಈಗ ಎಲ್ಲಿದ್ದಾರೋ ಅಲ್ಲೇ ಇರಬೇಕು ಅಂತ ರಾಹುಲ್ ಗರಂ ಆಗಿದ್ದಾರೆ.
ಇಷ್ಟು ಹೇಳಿ ರಾಹುಲ್ ಗಾಂಧಿ ಸುಮ್ಮನಾಗುತ್ತಾರೇನೋ ಅಂತ ನೋಡಿದರೆ ಉಹೂಂ. ಅವರು ಮೋದಿ ವಿರುದ್ಧವೂ ಗರಂ ಆಗಿದ್ದಾರೆ. ನಮ್ಮ ಸೈನಿಕರನ್ನು ಯಾಕೆ ಚೀನಾದ ಸೈನಿಕರು ಹಿಂದಕ್ಕೆ ಹೋಗಿ ಅಂತ ಜೋರು ಮಾಡುತ್ತಿದ್ದಾರೆ ಅಂದರೆ ನರೇಂದ್ರ ಮೋದಿಯವರು ಆ ಜಾಗವನ್ನು ಚೀನಾಗೆ ಬಿಟ್ಟುಕೊಟ್ಟುಬಿಟ್ಟಿದ್ದಾರೆ. ಇಲ್ಲದಿದ್ದರೆ ಯಾಕೆ ಚೀನಾದವರು ನಮ್ಮವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಅಂತ ರಾಹುಲ್ ಪ್ರಶ್ನಿಸಿದ್ದಾರೆ.
ಈಗಲಾದರೂ ರಾಹುಲ್ ಗಾಂಧಿ ಶಾಂತರಾಗುತ್ತಾರೇನೋ ಅಂತ ಕಾದರೆ ಇಲ್ಲವೇ ಇಲ್ಲ. ಅವರು ಉಗ್ರ ನರಸಿಂಹನ ಅವತಾರ ತಾಳಿದ್ದಾರೆ. ಮೋದಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಚೀನಾದ ವಿರುದ್ಧ ನಿಂತುಕೊಳ್ಳುವ ತಾಕತ್ತು ಮೋದಿಗೆ ಇಲ್ಲವೇ ಇಲ್ಲ, ಅವರೊಬ್ಬ ಹೇಡಿ, ನಮ್ಮ ಸೈನಿಕರಿಗೆ ಅವರು ದ್ರೋಹ ಮಾಡಿದ್ದಾರೆ ಅಂತೆಲ್ಲಾ ಮೋದಿಯನ್ನು ಹೀಗಳೆದಿದ್ದಾರೆ.
ಇಷ್ಟೆಲ್ಲಾ ಮಾತು ಕೇಳಿಸಿಕೊಂಡ ಮೇಲೆ ಬಿಜೆಪಿ ನಾಯಕರು ಅಥವಾ ಪ್ರಧಾನಿ ನರೇಂದ್ರ ಮೋದಿ ಏನು ಉತ್ತರ ನೀಡಲಿದ್ದಾರೋ ಕಾದು ನೋಡಬೇಕು.