ಹಾಯ್ ಬೆಂಗಳೂರ್

ಅಣ್ಣಾವ್ರ ಪ್ರತಿಮೆ ಬಗ್ಗೆ ಏನೋ ಹೇಳೋಕೆ ಹೋಗಿ ಕಡೆಗೆ ಕ್ಷಮೆ ಯಾಚಿಸಿದ ಹ್ಯಾರಿಸ್

ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಸುಮ್ಮನಿರಲಾರದೆ ಒಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಅವರ ವಿಧಾನಸಭಾ ಕ್ಷೇತ್ರದಲ್ಲಿರುವ ರಾಜಕುಮಾರ್ ಪ್ರತಿಮೆ ಬಗ್ಗೆ ಏನೇನೋ ಮಾತನಾಡಿಬಿಟ್ಟಿದ್ದಾರೆ. ತಮ್ಮ ಬೆಂಬಲಿಗರು ಹಾಗೂ ಯಾರೋ ಅಧಿಕಾರಿಯೊಂದಿಗೆ ಸ್ಟೈಲಾಗಿ ರೌಂಡ್ಸ್ ಹೊರಟ ಶಾಸಕ ಮಹಾಶಯ ಅಲ್ಲಿ ಅಣ್ಣಾವ್ರ ಪ್ರತಿಮೆ ಕಾಣುತ್ತಿದ್ದ ಹಾಗೆ ಸ್ವಲ್ಪ ಲಘುವಾಗಿ ನಾಲಿಗೆ ಹರಿಬಿಟ್ಟಿದ್ದಾರೆ.

ಇಲ್ಲೆಲ್ಲಾ ಯಾಕೆ ಪ್ರತಿಮೆ ಇಟ್ಟಿದ್ದಾರೆ. ರಾಜಕುಮಾರ್ ಪ್ರತಿಮೆ ಇಡೊದೇ ದೊಡ್ಡದೊಂದು ಕತೆ ಅಂತ ಉದ್ಧಟತನದಿಂದ ಮಾತನಾಡಿದ್ದಾರೆ. ಅವರು ಅದ್ಯಾವ ಉದ್ದೇಶ ಇಟ್ಟುಕೊಂಡು ಅದೇನು ಹೇಳಿದರೋ? ಕೆಲ ಖಾಸಗಿ ಸುದ್ದಿ ವಾಹಿನಿಗಳು ಅದನ್ನೇ ದೊಡ್ಡದಾಗಿ ಬಿಂಬಿಸಿವೆ. ಅಣ್ಣಾವ್ರಿಗೆ ಹ್ಯಾರಿಸ್ ಅವಮಾನ ಮಾಡಿದ್ದಾರೆ ಅಂತಲೇ ಬೊಬ್ಬೆ ಹೊಡೆಯಲು ಶುರುವಿಟ್ಟುಕೊಂಡಿವೆ.

ಇದು ಹೀಗೆ ಬಿಟ್ಟರೆ ಈ ವಾಹಿನಿಗಳು ಸುಮ್ಮನಿರೋದಿಲ್ಲ. ಅದರ ಬದಲು ಕ್ಷಮೆ ಕೇಳಿಬಿಟ್ಟರೆ ಏನು ಕಳೆದುಕೊಳ್ಳೋದು ಅಂತೇಳಿ ಬುದ್ಧಿ ಉಪಯೋಗಿಸಿದ ಹ್ಯಾರಿಸ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿಬಿಟ್ಟಿದ್ದಾರೆ. ಆ ಮೂಲಕ ಮುಂದೆ ಆಗಬಹುದಾದ ಕಿರಿಕಿರಿಯಿಂದ ಪಾರಾಗಿದ್ದಾರೆ.

ನನಗಂತೂ ಅಣ್ಣಾವ್ರು ಅಂದರೆ ಅಪಾರ ಗೌರವ ಇದೆ. ನಾನು ಹೇಳಿದ್ದು ಆ ಅರ್ಥದಲ್ಲಿ ಅಲ್ಲ. ಆದರೂ ಅಭಿಮಾನಿಗಳಿಗೆ ನನ್ನ ಮಾತಿನಿಂದ ನೋವಾಗಿದ್ರೆ ಕ್ಷಮಿಸಿ ಅಂತ ಸೇಫ್ ಆಗಿಬಿಟ್ಟಿದ್ದಾರೆ. ಹ್ಯಾರಿಸ್ ಏನೂ ಹೇಳಲಿಲ್ಲ ಅಂದರೆ ಮಾಧ್ಯಮವರು ಯಾಕೆ ಸ್ವಾಮಿ ತೋರಿಸ್ತಾರೆ ಅಂತ ಅಣ್ಣಾವ್ರ ಅಭಿಮಾನಿಗಳು ಅದಾಗಲೇ ಫೇಸ್ ಬುಕ್ ನಲ್ಲಿ ಕಮೆಂಟ್ ಹಾಕಿಕೊಂಡಿದ್ದಾರೆ.

ಶಾಸಕ ಹ್ಯಾರಿಸ್ ಗಪ್ ಚುಪ್.

Leave a Reply

Your email address will not be published. Required fields are marked *