ಹಾಯ್ ಬೆಂಗಳೂರ್

ಗೋಲ್ಡನ್ ಗಣೇಶ್ ಗನ್ನಿಟ್ಟು ಮದುವೆ ಮಾಡಿಸಿದ್ದು ನಾನೇ : ರವಿ ಪೂಜಾರಿ

ಅದೇನೇ ಆಗಲಿ, ಮದುವೆಯಾಗಲಿಕ್ಕೆ ಗೋಲ್ಡನ್ ಗಣೇಶ್ ಸುಮ್ಮನೆ ಒಪ್ಪಿಕೊಳ್ಳಲಿಲ್ಲ. ಚಿಕ್ಕ ಪುಟ್ಟ ಥ್ರೆಟ್‌ಗಳಿಗೂ ಅವನು ತಲೆ ಬಾಗಲಿಲ್ಲ. ಬೆಂಗಳೂರಿನ ಜಲ್ಲಿ ವೆಂಕಟೇಶನಂತಹ ಪುಡಿ ರೌಡಿಗಳಿಂದ ಬೆದರಿಕೆ ಹಾಕಿಸಿ ನೋಡಿದರೂ ಗಣೇಶ್ ಬಗ್ಗಲಿಲ್ಲ. ಆಗಲೇ ಶಿಲ್ಪಾಳ ತಮ್ಮ ಷರುಣ್ ಅಲಿಯಾಸ್ ಬಬ್ಲೂ ಮುಂಬೈಯಿಂದ ಪರಮ ನಟೋರಿಯಸ್ ದ್ವೀಪವಾದ ‘ಬಾಲಿ’ಗೆ ಹೊರಟದ್ದು.

 

ಸರಿಯಾಗಿ ಹನ್ನೆರಡು ವರ್ಷಗಳ ಹಿಂದೆ ‘ಪತ್ರಿಕೆ’ ಬರೆದದ್ದು ಅಕ್ಷರಶಃ ನಿಜವಾಗಿದೆ. ಅದೆಲ್ಲೋ ದೂರದ ಸೆನೆಗಲ್‌ನ ಬಳಿಯ ಬಾರ್ಕಿನೋ ಫಾಸೋದಲ್ಲಿದ್ದ ರವಿ ಪೂಜಾರಿಯನ್ನು ತಂದದ್ದೇ ತಂದದ್ದು, ಅವನು ಮೊಟ್ಟ ಮೊದಲನೆಯದಾಗಿ ಹೇಳಿದ್ದೆಂದರೆ ‘‘ನಿಜ ಸಾರ್, ಈ ನಿಮ್ಮ ಸಿನೆಮಾ ನಟ ಗೋಲ್ಡನ್ ಸ್ಟಾರ್ ಗಣೇಶನಿಗೆ ಆ ಹುಡುಗಿ ಶಿಲ್ಪಾ ಶೆಟ್ಟಿಗಾರಳನ್ನು ಗನ್ನಿಟ್ಟು ಮದುವೆ ಮಾಡಿಸಿದ್ದು ನಾನೇ” ಅಂದಿದ್ದಾನೆ. ಹನ್ನೆರಡು ವರ್ಷಗಳ ಹಿಂದೆ ಗಣೇಶ್, ಶಿಲ್ಪಾಳನ್ನು ಜೆ.ಪಿ.ನಗರದ ‘ಸ್ಕಂದ’ ಎಂಬ ಮನೆಯಲ್ಲಿ ಅವುಡುಗಚ್ಚಿಕೊಂಡು ಮದುವೆಯಾದದ್ದು ಒಂದು ರೂಮರ್ ಆಗಿಯಷ್ಟೇ ಉಳಿದಿತ್ತು. ಈಗ ಅದನ್ನು ರವಿ ಪೂಜಾರಿ ಖಚಿತಪಡಿಸಿದ್ದಾರೆ.

‘‘ಈ ಜುಜುಬಿ ಕನ್ನಡ ಸ್ಟಾರ್ ಗಣೇಶನ ಮಾತು ಹಾಗಿರಲಿ. ನಾನು ಬಾಂಬೆಯ ಬಾಲಿವುಡ್‌ನ ಅನೇಕ ಸಿನೆಮಾ ನಟರನ್ನು ಹೆದರಿಸಿದ್ದೇನೆ. ದುಡ್ಡು ಕಿತ್ತಿದ್ದೇನೆ. ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಯಾರ್ಯಾರನ್ನು ಬೆದರಿಸಿದ್ದೇನೆ ಗೊತ್ತಾ ಸರ್? ಶ್ರೀದೇವಿಯನ್ನು ಬೆದರಿಸಿದ್ದೇನೆ, ಅವಳ ಗಂಡ ಬೋನಿ ಕಪೂರ್‌ನನ್ನು ಬೆದರಿಸಿದ್ದೇನೆ. ನನ್ನ ಮಾತಿಗೆ ಇಲ್ಲವೆನ್ನದೇ ರಾಜ್ ಕುಂದ್ರಾ ಹಣ ಕೊಟ್ಟಿದ್ದಾನೆ. ಶಿಲ್ಪಾ ಶೆಟ್ಟಿಯ ಮಾತು ಬಿಡಿ, ಅವಳು ಕಿಮ್ಮಕ್ಕೆನ್ನಲಿಲ್ಲ. ಕೇಳಿದಷ್ಟು ಕೊಟ್ಟಳು. ಇನ್ನೊಂದಿಷ್ಟು ಧಮಕಿ ಹಾಕಿದರೆ ಶಾರೂಕ್ ಖಾನ್ ದುಡ್ಡು ಬಿಚ್ಚುತ್ತಿದ್ದ. ಅಷ್ಟರಲ್ಲಿ ನಾನು ಬೇರ್ಯಾವುದೋ ಕೆಲಸದಲ್ಲಿ ತೊಡಗಿಬಿಟ್ಟೆ. ಹೀಗಾಗಿ ಅವನಿಂದ ಹಣ ಬರುವುದು ತಪ್ಪಿಹೋಯಿತು” ಎಂದು ಮಾತನಾಡುತ್ತಿರುವ ರವಿ ಪೂಜಾರಿ ಒಂದು ಸವಿಸ್ತಾರವಾದ ಪಾತಕ ಜೀವನದ ಹಿನ್ನೆಲೆ ಉಳ್ಳವನು.

ಇವನು ಹೇಳುವ ಪ್ರಕಾರ ಈ ಮುಂಚೆಯೇ ಎರಡು ಮದುವೆಯಾಗಿದ್ದ ಬಾರ್ಕೂರಿನ ಇಷಿಕಾ ಅಲಿಯಾಸ್ ಹರಿಣಿ ಅಲಿಯಾಸ್ ಶಿಲ್ಪಾ, ಗೋಲ್ಡನ್ ಸ್ಟಾರ್ ಗಣೇಶನನ್ನು ಅದ್ಹೇಗೋ ಅಟಕಾಯಿಸಿಕೊಂಡಳು. ‘ಪತ್ರಿಕೆ’ ಗಮನಿಸಿದಂತೆ ಗೋಲ್ಡನ್ ಸ್ಟಾರ್ ಗಣೇಶ್ ತುಂಬ ಹೆಣ್ಣಿನ ಹಪಹಪಿ ಉಳ್ಳವನಲ್ಲ. ಅವನು ಸದ್ಯಕ್ಕೆ ಮದುವೆಯಾಗಿರುವ ಶಿಲ್ಪಾ ನಿಜಕ್ಕೂ ಅನಾಹುತಕಾರಿ ಹುಡುಗಿ. ಅವಳನ್ನು ಗೋಲ್ಡನ್ ಸ್ಟಾರ್ ಗಣೇಶ್ ಮದುವೆಯಾಗುವುದಕ್ಕೆ ಕಾರಣವೇ ಇರಲಿಲ್ಲ. ಏಕೆಂದರೆ ಶಿಲ್ಪಾ ಅವತ್ತಿಗಾಗಲೇ ವಿಕ್ರಂ ಗುಪ್ತಾ ಎಂಬುವವನನ್ನು ಮದುವೆಯಾಗಿದ್ದಳು. ಆ ಮದುವೆ ಮುರಿದುಬಿದ್ದಿತ್ತು. ಅವಳ ತಂದೆ ಶಿವರಾಮ್ ಶೆಟ್ಟಿಗಾರ್ ದುಬೈಯಲ್ಲಿ ಎಂಥದೋ ವ್ಯಾಪಾರ ಮಾಡಿಕೊಂಡು ನೆಲೆಗೊಂಡಿದ್ದರು. ಶಿಲ್ಪಾ ಕೆಲ ಕಾಲ ತನ್ನ ಸೋದರ ಬಬ್ಲೂನೊಂದಿಗೆ ಜೆ.ಪಿ.ನಗರದ ಮನೆಯಲ್ಲಿದ್ದಳು. ವಿಪರೀತ ಮಹತ್ವಾಕಾಂಕ್ಷೆಯ ಈ ಹುಡುಗಿಯ ಕೈಯಿಂದ ಜಸ್ಟ್ ಮಾತು ಮಾತಲ್ಲಿ ಮಿಸ್ ಆದವನು ‘ಡೆಡ್ಲಿ ಸೋಮ’ ಖ್ಯಾತಿಯ ನಾಯಕ ನಟ ಆದಿತ್ಯ. ಸದರಿ ಆದಿತ್ಯನೊಂದಿಗೆ ಅಲ್ಲಿ ಇಲ್ಲಿ ಕಾಣಿಸಿಕೊಂಡ ಶಿಲ್ಪಾಗೆ ಗಣೇಶ್ ಪರಿಚಯವಾದದ್ದು ಆದಿತ್ಯನ ಮೂಲಕ. ಮುಂದೆ ಗಣೇಶ್ ‘ಚೆಲ್ಲಾಟ’ ಸಿನೆಮಾದ ಶೂಟಿಂಗಿಗಾಗಿ ಬಾರ್ಕೂರಿಗೆ ಹೋದಾಗ ಅಲ್ಲಿ ಅವನನ್ನು ಅಟಕಾಯಿಸಿಕೊಂಡವಳು ಶಿಲ್ಪಾ. ಅಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತೆಂಬುದು ಕೇವಲ ರೂಮರ್. ಆದದ್ದೇನೆಂದರೆ ಗಣೇಶನೊಂದಿಗೆ ಜಸ್ಟ್ ಮಾತು ಮಾತು ಆರಂಭಿಸಿದ ಶಿಲ್ಪಾ ಮುಂದೆ ಅವನಿಗೆ ಶಾಶ್ವತವಾಗಿ ಗಂಟುಬಿದ್ದಳು. ಅದೇನು ಮಾಡಿದರೂ ಕೊಸರಿಕೊಳ್ಳಲಾಗದೆ ಗಣೇಶನ ತಲೆ ಗಟ್ಟಿಯಾಗಿ ಹಿಡಿದವನು ಮೈಸೂರಿನ ಪೋಲಿ ಪುಸ್ತಕಗಳ ಸಂಪಾದಕ ರವೀಂದ್ರ ಜೋಶಿ ಎಂಬ ಕ್ರಿಮಿ.

ಅದೇನೇ ಆಗಲಿ, ಮೂರ್ನಾಲ್ಕು ಜನ ಕೈ ಬದಲಾಯಿಸಿದ ಶಿಲ್ಪಾಳನ್ನು ಮದುವೆಯಾಗಲಿಕ್ಕೆ ಗೋಲ್ಡನ್ ಗಣೇಶ್ ಸುಮ್ಮನೆ ಒಪ್ಪಿಕೊಳ್ಳಲಿಲ್ಲ. ಚಿಕ್ಕ ಪುಟ್ಟ ಥ್ರೆಟ್‌ಗಳಿಗೂ ಅವನು ತಲೆ ಬಾಗಲಿಲ್ಲ. ಬೆಂಗಳೂರಿನ ಜಲ್ಲಿ ವೆಂಕಟೇಶನಂತಹ ಪುಡಿ ರೌಡಿಗಳಿಂದ ಬೆದರಿಕೆ ಹಾಕಿಸಿ ನೋಡಿದರೂ ಗಣೇಶ್ ಬಗ್ಗಲಿಲ್ಲ. ಆಗಲೇ ಶಿಲ್ಪಾಳ ತಮ್ಮ ಷರುಣ್ ಅಲಿಯಾಸ್ ಬಬ್ಲೂ ಮುಂಬೈಯಿಂದ ಪರಮ ನಟೋರಿಯಸ್ ದ್ವೀಪವಾದ ‘ಬಾಲಿ’ಗೆ ಹೊರಟದ್ದು.

ಬಾಲಿ ಅಂದ ಕೂಡಲೇ ಕಣ್ಣೆದುರಿಗೆ ಬರುವುದು ಗಂಡು-ಹೆಣ್ಣು  ಬೆತ್ತಲೆ ಮಲಗುವ ಬೀಚುಗಳು, ನೈಟ್ ಕ್ಲಬ್‌ಗಳು, ರೆಸ್ಟುರಾಂಟ್‌ಗಳು. ಆದರೆ ಅಲ್ಲಿ ದೊಡ್ಡದೊಂದು ಮಧ್ಯಮ ವರ್ಗದ ಕ್ರೌಡ್ ಕೂಡ ಇದೆ. ಬಾಲಿಗೂ ಮತ್ತು ಇಂಡೋನೇಷಿಯಾಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಅಲ್ಲಿ ದೊಡ್ಡ ಸಂಖ್ಯೆಯ ಭಾರತೀಯರಿದ್ದಾರೆ. ಜಾಗತಿಕ ಮಟ್ಟದಲ್ಲಿ ಕುಖ್ಯಾತರೆನಿಸಿಕೊಂಡ ಡ್ರಗ್ ಟ್ರಾಫಿಕರ್‌ಗಳಿದ್ದಾರೆ. ‘Hotel K’ ಎಂಬುದು ಡ್ರಗ್ ಪೆಡ್ಲರ್‌ಗಳ ಅತಿದೊಡ್ಡ ಅಡ್ಡೆ. ಇಲ್ಲಿ ಆಸ್ಟ್ರೇಲಿಯನ್ನರು, ಅಮೆರಿಕನ್ನರು, ಜರ್ಮನ್ನರು, ಬ್ರೆಜಿಲ್‌ನವರು, ಫ್ರೆಂಚರು, ಇಂಗ್ಲಿಷರು, ಮೆಕ್ಸಿಕನ್ನರು, ಇಟಾಲಿಯನ್ನರು ಹೀಗೆ ನಾನಾ ದೇಶಗಳ ಡ್ರಗ್ ಪೆಡ್ಲರ್‌ಗಳು ಇದ್ದಾರೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಇಸ್ಲಾಮಿಕ್ ಟೆರರಿಸ್ಟ್‌ಗಳು ಕಾಣಸಿಗುತ್ತಾರೆ.

ಇಂತಹ ಬಾಲಿ ದ್ವೀಪಕ್ಕೆ ಹೋದ ಬಬ್ಲೂ ಅದೇ Hotel K ನ ಕೋಣೆಯೊಂದರಲ್ಲಿ ಭೂಗತಜೀವಿ ರವಿ ಪೂಜಾರಿಯನ್ನು ಭೇಟಿಯಾಗುತ್ತಾನೆ. ಆಗಿನ್ನೂ ರವಿ ಪೂಜಾರಿ ಈ ಮಟ್ಟದ ಕುಖ್ಯಾತಿ ಗಳಿಸಿರಲಿಲ್ಲ. ಅವನ ಕುಖ್ಯಾತಿ ಏನಿದ್ದರೂ ಮುಂಬೈಯ ಮಟ್ಟಿಗೆ ಸೀಮಿತವಾಗಿತ್ತು. ಆದರೆ ಬಬ್ಲೂ ಹೋಗುವ ಹೊತ್ತಿಗೆ ರವಿ ಪೂಜಾರಿ ಬೆಂಗಳೂರಿನಲ್ಲಿ ಶಬ್ನಮ್ ಡೆವಲಪರ್ಸ್‌ ಕಚೇರಿಯ ಮಾರಣ ಹೋಮ ನಡೆಸಿಬಿಟ್ಟಿದ್ದ. ಅವನ ಹುಡುಗರು ಯಾರನ್ನೋ ಕೊಲ್ಲಲು ಹೋಗಿ ಇಬ್ಬರು ನಿಷ್ಪಾಪಿ ಸಿಬ್ಬಂದಿಯನ್ನು ಕೊಂದು ಹಾಕಿದರು. ಯಾವಾಗ ಶಬ್ನಮ್ ಡೆವಲಪರ್ಸ್‌ ಮಾರಣಹೋಮ ದೊಡ್ಡ ಮಟ್ಟಿಗೆ ಸುದ್ದಿಯಾಯಿತೋ ಚಕ್ಕನೆ ಎದ್ದು ಕುಳಿತವಳು ಶಿಲ್ಪಾ ಶೆಟ್ಟಿಗಾರ್ ಅಲಿಯಾಸ್ ಶಿಲ್ಪಾ ಗುಪ್ತಾ. ಅವಳಾಗಲೇ ತನ್ನ ಮೊದಲ ಪತಿ ವಿಕ್ರಂ ಗುಪ್ತಾನಿಗೆ ಬಾರ್ಕೂರಿನ ಹಳ್ಳದ ನೀರು ಕುಡಿಸಿ ಅವನಿಗೆ ಮೂರು ದಾರಿ ತೋರಿಸಿದ್ದಳು. ವಿಪರೀತ ಮಹತ್ವಾಕಾಂಕ್ಷಿಯಾದ ಶಿಲ್ಪಾ ಶತಾಯಗತಾಯ ಗೋಲ್ಡನ್ ಗಣೇಶನಂಥ ದೊಡ್ಡ ಹೆಸರಿನ ಕುಳವನ್ನು ಮದುವೆಯಾಗ ಬಯಸಿದ್ದಳು. ಅವಳ ಆಕಾಂಕ್ಷೆಗೆ ಸಂಪೂರ್ಣ ಸಹಮತ ನೀಡಿದ್ದು ಅವಳ ಅಪ್ಪ ಶಿವರಾಮ್ ಬಾರ್ಕೂರು.

ಶಿವರಾಮ್ ಶೆಟ್ಟಿಗಾರ್ ದುಬೈನಲ್ಲೇ ರವಿ ಪೂಜಾರಿಯ ಪರಿಚಯವಾಗಿತ್ತು. ನನ್ನ ಮಗಳಿಗೆ ನೀನು ಮದುವೆ ಮಾಡಿಸಿ ಕೊಡಬೇಕು ಅಂದಾಗ ಚಿತ್ರನಟ-ನಟಿಯರನ್ನು ಸಾಕಷ್ಟು ಗೋಳು ಹೊಯ್ದುಕೊಂಡು ಅನುಭವವಿದ್ದ ರವಿ ಪೂಜಾರಿ ಶಿಲ್ಪಾಳ ತಮ್ಮ ಬಬ್ಲೂವನ್ನು ಸುಪ್ರಸಿದ್ಧ ಬಾಲಿ ದ್ವೀಪಕ್ಕೆ ಕರೆಸಿಕೊಂಡ. ವಿಚಿತ್ರವೆಂದರೆ ಗಣೇಶನ ಈ ಬಾಮೈದ ಬಾಲಿಗೆ ಹೋದಾಗಲೇ ಅಲ್ಲಿ ಆಕಸ್ಮಿಕವಾಗಿ ಅಲ್‌ಖೈದಾ ಉಗ್ರರು ಒಂದು ಭಯಾನಕವಾದ ಚ್ಝಿಠಿ ನಡೆಸಿ ಬಿಟ್ಟಿದ್ದರು. ಹೀಗಾಗಿ ಬಬ್ಲೂವನ್ನು ರವಿ ಪೂಜಾರಿ ತಾನು ಮೊದಲಿದ್ದ Hotel K ಬದಲಿಗೆ ರಾಡಿಸನ್  ಬ್ಲೂನಲ್ಲಿ ಭೇಟಿಯಾದ. ಬಾಮೈದ ಬಬ್ಲೂ ಅದೆಷ್ಟು ದುಡ್ಡು ಕೊಟ್ಟನೋ ಕೇಳೋಣವೆಂದರೆ ಸಿಸಿಬಿ ಅಧಿಕಾರಿ ರವಿಕುಮಾರ್ ಅಪ್ಪಿತಪ್ಪಿ ಕೂಡ ಫೋನ್ ಎತ್ತುತ್ತಿಲ್ಲ. ರವಿ ಪೂಜಾರಿಗೆ ಬಬ್ಲೂ ಒಂದಷ್ಟು ಹಣ ನೀಡಿರುವುದಂತೂ ನಿಜ. ಬಾಲಿಯಲ್ಲಿ ಕುಳಿತೇ ರವಿ ಪೂಜಾರಿ ಈ ಪ್ಯಾಲಿ ನಗೆಯ, ಬುಡದಲ್ಲಿ ಏನೇನೂ ದಮ್ಮು ಇಲ್ಲದ ಗೋಲ್ಡನ್ ಸ್ಟಾರ್‌ಗೆ ಧಮಕಿ ಹಾಕಿದ್ದು ನಿಜ. ಧಮಕಿಯನ್ನು ಗಣೇಶ್ ಕ್ಯಾರೆ ಮಾಡದೆ ಯಾರಾದಾದರೂ ಸಹಾಯ ತೆಗೆದುಕೊಂಡು ಶಿಲ್ಪಾಳನ್ನು ಧಿಕ್ಕರಿಸಿಬಿಡಬಹುದಿತ್ತು. ಆದರೆ ‘ಗೋಲ್ಡ್’ ನಸೀಬು ತಾಮ್ರದ ಬಣ್ಣಕ್ಕೆ ತಿರುಗಿತ್ತು. ಎರಡು-ಮೂರು ಫೋನ್ ಕರೆಗಳು ಬಂದದ್ದೇ ಬಂದದ್ದು ಜೆ.ಪಿ. ನಗರದ ಸ್ಕಂದ ಎಂಬ ಹೆಸರಿನಲ್ಲಿದ್ದ ಈ ಗೋಲ್ಡನ್ ಸ್ಟಾರ್ ಕಂದ ಶಿಲ್ಪಾ ಕೊರಳಿಗೆ ದೊಡ್ಡ ಸೈಜಿನ ತಾಳಿ ಕಟ್ಟಿ ಶರಣಾಗತನಾಗಿದ್ದ. ಒಬ್ಬ ಯಶಸ್ವಿ ಮನುಷ್ಯನಿಗೆ ಪೀಡೆಯಂತೆ ಹೆಂಡತಿಯೊಬ್ಬಳು ಗಂಟುಬಿದ್ದರೆ ಏನೇನು ಆಗಬೇಕೋ ಅದೆಲ್ಲ ಆಯಿತು. ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟನಾಗಿದ್ದ ಗಣೇಶ್ ಇವತ್ತು ಆ ಯಾವ ಗೋಲ್ಡೂ ಇಲ್ಲದೆ ಅಕ್ಕಸಾಲಿಗರ ಸುತ್ತಿಗೆ ಏಟು ತಿಂದು ಬಕ್ಕಬಾರಲು ಬಿದ್ದಿದ್ದಾನೆ.

-ಆಶಿಕ್ ಮುಲ್ಕಿ

ಅದ್ಯಾರದು ಮುತ್ತಪ್ಪ ರೈ?

‘ಅದ್ಯಾರದು ಮುತ್ತಪ್ಪ ರೈ?’ ಎಂದು ನಗುತ್ತಾ ಅಪ್ಪಟ ತುಳುವಿನಲ್ಲಿ ಕೇಳಿದವನು ಇದೇ ರವಿ ಪೂಜಾರಿ. ಅವನು ಕೇಳಿದರಲ್ಲಿ ಆಶ್ಚರ್ಯವೇನೂ ಇಲ್ಲ. ಬೆಂಗಳೂರಿನ ಬಿಲ್ಡರ್ ಸುಬ್ಬರಾಜುನನ್ನು ಗುಂಡಿಕ್ಕಿ ಕೊಲ್ಲಿಸಿದವನು ಮುತ್ತಪ್ಪ ರೈ ಅಲ್ಲ. ಅದು ಪಾತಕಿ ರವಿ ಪೂಜಾರಿಯ ಕೆಲಸ. ಅದಕ್ಕಾಗಿ ಮುತ್ತಪ್ಪ ರೈ ಏನು ಕೊಟ್ಟನೋ, ಏನು ಬಿಟ್ಟನೋ ಗೊತ್ತಿಲ್ಲ. ಜಿನುಗುತ್ತಿರುವ ಒಂದು ವರ್ತಮಾನದ ಪ್ರಕಾರ ರವಿ ಪೂಜಾರಿ ಮುತ್ತಪ್ಪ ರೈ ಬಳಿಗೆ ಅಜಮಾಸು ಎಂಬತ್ತು ಕೋಟಿ ರುಪಾಯಿಗಳ ಡೀಲ್ ಕೊಂಡೊಯ್ದು ಕೊಟ್ಟ. ಇದರಲ್ಲಿ ನಿನಗೊಂದಿಷ್ಟು ಇಟ್ಟುಕೊಂಡು ನನಗೊಂದಿಷ್ಟು ಕೊಡು ಅಂತ ರವಿ ಪೂಜಾರಿ ಕೇಳಿದ್ದಾನೆ. ಈಗಾಗಲೇ ಒಬ್ಬ ಶುದ್ಧ ವಂಚಕನೆಂದು ಸಾಬೀತಾಗಿರುವ ಮುತ್ತಪ್ಪ ರೈ ಎಂಬತ್ತು ಕೋಟಿ ರುಪಾಯಿಗಳ ಆಸ್ತಿಯ ಡೀಲ್ ಮಾಡಿದನೇ ಹೊರತು ಅದರಲ್ಲಿ ಚಿಕ್ಕ ಕಾಸು ಕೂಡ ಸೆನೆಗಲ್‌ನ ಮಹಾರಾಜ ಹೊಟೇಲ್‌ನ ಈ ರವಿ ಪೂಜಾರಿಗೆ ಕೊಡಲಿಲ್ಲ. ಮುತ್ತಪ್ಪ ರೈನನ್ನು ಕರೆಸಿ ಈ ಕುರಿತು ವಿಚಾರಣೆ ನಡೆಸೋಣವೆಂದರೆ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲರಿಗೆ ಫಕ್ಕನೆ ನೆನಪಾಗಿರುವುದು ‘‘ಅಯ್ಯೋ ಪಾಪ, ಡಾನ್ ಮುತ್ತಪ್ಪ ರೈಗೆ ಮೈತುಂಬ ಕ್ಯಾನ್ಸರ್” ಎಂಬ ಮಾತು. ಹೀಗಾಗಿ ಮುತ್ತಪ್ಪ ರೈ ಬಿಡದಿ ಮನೆಯಲ್ಲಿ ಸೇಫು ಸೇಫು.

Leave a Reply

Your email address will not be published. Required fields are marked *