ಝೆನ್ ಚೀನಾದ ಶತಮೂರ್ಖರಿಗೆ ಹೇಳಿ ಮಾಡಿಸಿದ ಧರ್ಮ

in ಜಾನಕಿ ಕಾಲಂ
  • ಜಾನಕಿ ಕಾಲಂ

ಕೆಲವು ದೇವಸ್ಥಾನಗಳಿಗೆ ವಿಶೇಷ ಶಕ್ತಿಯಿದೆ ಎಂದು ನಮ್ಮನ್ನು ನಂಬಿಸಲಾಗುತ್ತಿತ್ತು. ಅದಕ್ಕೆ ಸೂಕ್ತವಾದ ಕತೆಗಳು ಎಲ್ಲರಿಗೂ ಗೊತ್ತಿರುತ್ತಿದ್ದವು. ಬಳ್ಳಮಂಜ ಎಂಬ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅಮ್ಮ ಆ ದೇವಸ್ಥಾನದ ಸ್ಥಳಪುರಾಣವನ್ನು ವರ್ಷಂಪ್ರತಿ ಹೇಳುತ್ತಿದ್ದಳು. ಬತ್ತ ಅಳೆಯುವ ಬಳ್ಳದಲ್ಲಿ ಒಬ್ಬಳಿಗೆ ಒಂದು ಹಾವು ಸಿಕ್ಕಿತಂತೆ. ಆ ಹಾವು ದೈವಸ್ವರೂಪಿಯಾಗಿದ್ದು ಅಲ್ಲಿ ದೇವಸ್ಥಾನ ಕಟ್ಟಿಸುವಂತೆ ಹೇಳಿತಂತೆ. ಅದು ಸುಬ್ರಹ್ಮಣ್ಯನ ಕ್ಷೇತ್ರ ಎಂಬುದು ತಿಳಿದು ಅಲ್ಲಿ ದೇವಸ್ಥಾನ ಕಟ್ಟಿದರಂತೆ. ಬಳ್ಳ ಎಂದರೆ ಸೇರು. ಮಂಜ ಎಂದರೆ ಹಾವು. ಬಳ್ಳದಲ್ಲಿ ಹಾವು ಸಿಕ್ಕಿದ್ದರಿಂದ ಅದು ಬಳ್ಳಮಂಜ ಆಯಿತು ಎಂದು ಅಮ್ಮ ಹೇಳುತ್ತಿದ್ದ ಕತೆಯನ್ನೇ ಆಧರಿಸಿದ ಬಳ್ಳಮಂಜ ಕ್ಷೇತ್ರ ಮಹಾತ್ಮೆಯಂಥ ಯಕ್ಷಗಾನಗಳೂ ಆಗಾಗ ನಡೆಯುತ್ತಿದ್ದವು. ಆಗೆಲ್ಲ ಬತ್ತ ಅಳೆಯಲೆಂದು ಸೇರು ಕೈಗೆತ್ತಿಕೊಳ್ಳುತ್ತಿದ್ದ ಆ ರೈತ ಹೆಂಗಸು, ಆ ಸೇರಿನೊಳಗಿನಿಂದ ಛಂಗನೆ ಪ್ರತ್ಯಕ್ಷವಾಗುವ ರಬ್ಬರಿನ ಹಾವು, ಅದನ್ನು ನೋಡಿದ ತಕ್ಷಣ ಆಕೆ ನಟಿಸುವ ಅಚ್ಚರಿ ಮತ್ತು ಭಕ್ತಿ, ಆ ಸೇರನ್ನು ಕೆಳಗಿಟ್ಟು ಆಕೆ ನಾಗದೇವರನ್ನು ಒಲಿಸಿಕೊಳ್ಳುವ ರೀತಿ ಇವೆಲ್ಲ ನಮಗೆ ಎಷ್ಟು ಅಭ್ಯಾಸವಾಗಿತ್ತು ಎಂದರೆ ನಮ್ಮ ಮನೆಯಲ್ಲಿರುವ ಸೇರು ನೋಡಿದಾಗೆಲ್ಲ ಅದೇ ನೆನಪಾಗುತ್ತಿತ್ತು. ಸೇರಿನೊಳಗೆ ಹಾವು ಸೇರಿಕೊಂಡಿರಬಹುದಾ ಅನ್ನುವ ಗಾಬರಿಯ ಜೊತೆ, ನಮ್ಮ ಮನೆಯ ಸೇರಿನೊಳಗೇ ಹಾವು ಬಂದು ಸೇರಿಕೊಂಡರೆ ಮತ್ತೊಂದು ಬಳ್ಳಮಂಜ ದೇವಸ್ಥಾನ ಆಗುತ್ತದೆಯಾ ಎಂಬ ಪ್ರಶ್ನೆಯೂ ಮೂಡುತ್ತಿತ್ತು.

ನಮ್ಮೂರಲ್ಲಿ ಪ್ರತಿಯೊಂದು ದೇವಾಲಯಗಳಿಗೂ ಇಂಥ್ದೊಂದು ಐತಿಹ್ಯ ಇದ್ದೇ ಇರುತ್ತಿತ್ತು. ಬಪ್ಪನಾಡು, ಕಟೀಲು, ಪೊಳಲಿ-ಈ ದೇವಸ್ಥಾನಗಳೆಲ್ಲ ಯಾರೋ ಒಬ್ಬರಿಗೆ ದೇವರು ಸಿಕ್ಕಿದ ನಂತರ ತಲೆಯೆತ್ತಿದ ದೇಗುಲಗಳೇ ಆಗಿದ್ದವು. ಪ್ರಸಿದ್ಧವಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದ ಕುರಿತೂ ನಮ್ಮಲ್ಲಿ ಯಕ್ಷಗಾನ ಪ್ರಸಂಗಗಳು ನಡೆಯುತ್ತಿದ್ದವು. ಕುಕ್ಕೆ ಸುಬ್ರಹ್ಮಣ್ಯನ ಕತೆಗೂ ಬಳ್ಳಮಂಜನ ಕತೆಗೂ ಅಂಥ ವ್ಯತ್ಯಾಸವೇನೂ ಇದ್ದಂತಿರಲಿಲ್ಲ. ಇಲ್ಲಿ ಸೇರಿನೊಳಗೆ ಹಾವು ಕಾಣಿಸಿದರೆ ಅಲ್ಲಿ ಕುಕ್ಕೆಯಲ್ಲಿ ಹಾವು ಕಾಣಿಸಿಕೊಂಡಿತ್ತು. ಕಾಡು ಪ್ರದೇಶವಾದ ಸುಬ್ರಹ್ಮಣ್ಯ, ಬಳ್ಳಮಂಜ ಮುಂತಾದ ಕಡೆ ಹಾವು ಬಂದು ಮನೆಯೊಳಗೇ ಸೇರಿಕೊಳ್ಳುವುದು ಅಂಥ ಆಶ್ಚರ್ಯದ ಸಂಗತಿಯೇನೂ ಆಗಿರಲಿಲ್ಲ. ಮತ್ತು ಯಾವಾಗ ಬೇಕಿದ್ದರೂ ಕಚ್ಚಿ ಸಾಯಿಸಬಲ್ಲ ಹಾವಿನ ಬಗ್ಗೆ ಜನರಲ್ಲಿ ಭಯಭಕ್ತಿ ಇರುವುದು ಸಹಜವೇ ಆಗಿತ್ತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಯಾರೋ ಪುಣ್ಯಾತ್ಮರು ಎ್ಲೆಲ್ಲಿ ಸರ್ಪದರ್ಶನ ಆಗಿದೆಯೋ ಅ್ಲೆಲ್ಲ ದೇವಸ್ಥಾನ ಕಟ್ಟಿಸಲಿಕ್ಕೆ ಹೇಳುತ್ತಿದ್ದರೆಂದು ಕಾಣುತ್ತದೆ.

ಈ ಭಕ್ತಿ ಕೂಡ ತುಂಬ ಯಾಂತ್ರಿಕವಾದದ್ದೇನೋ ಅಂತ ನನಗೆ ಎಷ್ಟೋ ಸಲ ಅನ್ನಿಸತೊಡಗಿದೆ. ಈ ದೇವಸ್ಥಾನಗಳಲ್ಲಿ ಇಂತಿಷ್ಟು ಗಂಟೆಗೆ ಪೂಜೆ, ಇಂತಿಷ್ಟು ಗಂಟೆಗೆ ಮಹಾಮಂಗಳಾರತಿ ಎಂದು ಹೇಳಿ, ಅದೇ ಹೊತ್ತಿಗೆ ಎಲ್ಲರೂ ಕೈ ಮುಗಿದು, ತಲೆ ಬಗ್ಗಿಸಿ ನಿಂತು, ಮಹಾನ್ ಭಕ್ತರಂತೆ ನಟಿಸುವುದು, ಮಿಕ್ಕ ಹೊತ್ತಲ್ಲಿ ದೇವರ ಚಿಂತೆಯೇ ಇಲ್ಲದೇ ಊರಿನ ಕತೆಗಳನ್ನು ಮಾತಾಡಿಕೊಂಡಿರುವುದು-ಇವೆಲ್ಲವನ್ನು ನೋಡಿದರೆ ಅವರು ಯಾರೂ ದೈವ ಭಕ್ತರಂತೆ ಕಾಣಿಸುವುದಿಲ್ಲ. ನನ್ನ ಇಷ್ಟು ವರ್ಷಗಳ ಅನುಭವದಲ್ಲಿ ನಾನು ನಿಜವಾದ ಭಕ್ತನನ್ನಾಗಲೀ, ಪ್ರೇಮಿಯನ್ನಾಗಲೀ ನೋಡಿಯೇ ಇಲ್ಲ. ಮಹಾನ್ ಭಕ್ತರೆಂದುಕೊಂಡವರು ಕೂಡ ಸಾಧಾರಣ ಮನುಷ್ಯರಂತೆ ಚೌಕಾಸಿ ಮಾಡುತ್ತಾ,  ಯಾರದೋ ಕುರಿತು ಚಾಡಿ ಹೇಳುತ್ತಾ, ಹಿಂದಿನಿಂದ ಹಂಗಿಸುತ್ತಾ, ಯಾರನ್ನೋ ನಾಶ ಮಾಡುವ ಕುಟಿಲ ಯೋಚನೆಗಳನ್ನು ಮಾಡುತ್ತಿರುವುದನ್ನು ನೋಡಿದವರಿಗೆ ಭಕ್ತಿಯ ಕುರಿತೇ ಒಂಥರದ ಅಪನಂಬಿಕೆ ಹುಟ್ಟಿದರೂ ಹುಟ್ಟೀತು.

ಹೀಗಾಗಿಯೇ ದೇವರನ್ನು ನಂಬಿ ಅನ್ನುವಾಗ ಯಾವ ದೇವರನ್ನು ನಂಬಬೇಕು, ಯಾರ ದೇವರನ್ನು ನಂಬಬೇಕು, ಯಾರಿಗೋಸ್ಕರ ನಂಬಬೇಕು, ಅದರಿಂದ ಲಾಭ ಯಾರಿಗೆ, ನಂಬಿದವರಿಗೋ ನಂಬಿಸಿದವರಿಗೋ ಎಂಬಿತ್ಯಾದಿ ಪ್ರಶ್ನೆಗಳೆಲ್ಲ ಒಟ್ಟಿಗೇ ಮೂಡುತ್ತವೆ.

ನಾನು ಬೆಂಗಳೂರಿಗೆ ಬಂದ ಮೇಲೆ ಈ ಭಕ್ತಿಯ ಹೊಸ ಅವತಾರವನ್ನು ನೋಡಿದೆ. ಬೈಕುಗಳಲ್ಲಿ ಹೋಗುವವರು ದೇವಸ್ಥಾನ ಕಂಡಾಗೆಲ್ಲ ನಮಸ್ಕರಿಸುವಂತೆ ನಟನೆ ಮಾಡಿ ಮುಂದಕ್ಕೆ ಹೋಗುತ್ತಿದ್ದರು. ನನ್ನ ಗೆಳೆಯನೊಬ್ಬ ಹಾಗೆಯೇ ಮಾಡುತ್ತಿದ್ದ. ಒಮ್ಮೆ ನಾನು ಅವನ ಹತ್ತಿರ ನೀನು ನಮಸ್ಕಾರ ಮಾಡಿದ ಆ ದೇವರು ಯಾರು ಎಂದು ಕೇಳಿದೆ. ಅವನಿಗೆ ಗೊತ್ತಿರಲಿಲ್ಲ. ದೇವಸ್ಥಾನದ ಥರ ಕಂಡಿದ್ದರಿಂದ ಅಭ್ಯಾಸಬಲದಿಂದ ಅವನು ನಮಸ್ಕಾರ ಮಾಡಿ ಮುಂದಕ್ಕೆ ಹೋಗಿದ್ದ. ಅವನು ನಮಸ್ಕರಿಸಿದ್ದು ದೇವಾಲಯದ ಶೈಲಿಯನ್ನು ಅನುಕರಿಸಿ ನಿರ್ಮಿಸಿದ್ದ ಒಂದು ಉಪಾಹಾರ ಮಂದಿರವಾಗಿತ್ತು. ಅಲ್ಲಿ ಮದ್ಯಮಾಂಸವೂ ಸಿಗುತ್ತಿತ್ತು.

ಹಾಗಿದ್ದರೆ, ಅದನ್ನು ದೇವಸ್ಥಾನ ಎಂದುಕೊಂಡು ನಮಸ್ಕರಿಸಿದವನ ದೇವರು ಎಲ್ಲಿದ್ದಾನೆ? ಅವನು ನಮಸ್ಕರಿಸುವವನ ಒಳಗೇ ಇರುವವನು ಅಂತಾಯಿತಲ್ಲ. ಹೊರಗೆ ಕಾಣಿಸುವುದು ದೇವರಲ್ಲ, ಒಳಗಿರುವವನು ದೇವರು ಎಂದು ನಂಬಿದವರು ದೇವಸ್ಥಾನಕ್ಕೆ ಹೋಗುವುದಿಲ್ಲ. ದೇವರನ್ನು ಹುಡುಕಿಕೊಂಡು ಅಲೆಯುವುದಿಲ್ಲ.

04

ನಿಮಗೆ ನೆನಪಿರಬಹುದು. 1980ರ ಸುಮಾರಿಗೆ ಕನ್ನಡದಲ್ಲಿ ಫಿಲಾಸಫಿಗಳ ಕಾಯಿಲೆ ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯು.ಜಿ. ಕೃಷ್ಣಮೂರ್ತಿ ಮುಂತಾದವರು ಪ್ರಚಾರಕ್ಕೆ ಬಂದರು. ಜಿಡ್ಡು ಕೃಷ್ಣಮೂರ್ತಿ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೂ ಆ ಹೆಸರು ಕೇಳಿದರೆ ಹಿಂಸೆಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು. ಅದಕ್ಕಿಂತ ಮುಂಚೆ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಹೀಗೇ ತಮ್ಮ ಸಾಹಿತ್ಯಕ್ಕೆ ಬೆನ್ನೆಲುಬಾಗಿಟ್ಟುಕೊಂಡರು. ಅಂಥ ಸಾಹಿತ್ಯ ಶಾಶ್ವತವಾಗಿ ನಿಲ್ಲಲಿಲ್ಲ. ಸಿದ್ಧಾಂತಗಳನ್ನು ನಂಬಿದ ಸಾಹಿತ್ಯಕೃತಿಗಳಂತೆ ಅವು ಕೂಡ ಕಣ್ಮರೆಯಾದವು. ಅದೇ ಸುಮಾರಿಗೆ ಶುರುವಾದ ಮತ್ತೊಂದು ಕಾಯಿಲೆ ಝೆನ್. ಎಲ್ಲರೂ ಇದ್ದಕ್ಕಿದ್ದ ಹಾಗೆ ಝೆನ್ ಬುದ್ಧಿಸಮ್ ಬಗ್ಗೆ ಅಧಿಕೃತ ಮಾಹಿತಿ ಉಳ್ಳವರ ಥರ ಮಾತಾಡತೊಡಗಿದರು. ದುರದೃಷ್ಟವಶಾತ್ ಅದೇ ಹೊತ್ತಿಗೆ ಕೆ.ವಿ. ಸುಬ್ಬಣ್ಣ ಝೆನ್ ಎಂಬೊಂದು ಪುಸ್ತಕವನ್ನೂ ಹೊರತಂದರು. ನ್ಯೂಯಾರ್ಕಿನ ಪೀಟರ್ ಪಾಪರ್ ಪ್ರೆಸ್ ಪ್ರಕಟಿಸಿದ ಝೆನ್ ಕುರಿತ ಪಾಕೆಟ್ ಬುಕ್ ಓದದೇ ಇದ್ದವರಿಗೆ ಸುಬ್ಬಣ್ಣ ಅವರ ಪುಸ್ತಕ ಅದ್ಭುತ ಎನ್ನಿಸಿತು. ಅದೇ ಮೊದಲ ಬಾರಿಗೆ ಅಷ್ಟು ವಿವರವಾಗಿ ಝೆನ್ ಕನ್ನಡಕ್ಕೆ ಬಂದಿತ್ತು ಎನ್ನುವ ಕಾರಣಕ್ಕೂ ಅದು ಕುತೂಹಲ ಕೆರಳಿಸಿತ್ತು. ಎಂದಿನಂತೆ ಸುಬ್ಬಣ್ಣ ತುಂಬ ಅಚ್ಚುಕಟ್ಟಾಗಿ ಅದನ್ನು ಅನುವಾದಿಸಿದ್ದರು.

ಅಲ್ಲಿಂದ ಶುರುವಾದದ್ದು ಝೆನ್ ರಗಳೆ. ಝೆನ್ ಬಗ್ಗೆ ನೂರೆಂಟು ಪುಸ್ತಕಗಳು ಬಂದವು. ಝೆನ್ ನಮ್ಮ ಜೀವನಕ್ರಮಕ್ಕೆ ಹತ್ತಿರವಾಗಿದೆ ಎಂದರು. ಝೆನ್ ಒಗಟು, ಝೆನ್ ಕಾವ್ಯ, ಝೆನ್ ಕತೆಗಳನ್ನು ಪುಂಖಾನುಪುಂಖವಾಗಿ ಬರೆದು ಪ್ರಕಟಿಸಿದರು.

ಅಷ್ಟಕ್ಕೂ ಝೆನ್ ಅಂದರೇನು? ಅದರ ಅರ್ಥ ಧ್ಯಾನ ಎನ್ನುತ್ತಾರೆ. ನವ್ಯದ ಸಾಹಿತಿಗಳಿಗೆ ಧ್ಯಾನ ಎನ್ನುವುದು ತುಂಬ ಪ್ರೀತಿಯ ಪದ. ಕತೆಗಾರನ ಧ್ಯಾನವನ್ನು ಕವಿಯ ಧ್ಯಾನವನ್ನು ಕುರಿತು ಅವರು ಮತ್ತೆ ಮತ್ತೆ ಹೇಳುತ್ತಾ ಹೋಗುತ್ತಾರೆ. ಒಂದು ರೀತಿಯ ಆತ್ಮಸ್ತುತಿಯೂ ಆತ್ಮರತಿಯೂ ಇದರಲ್ಲಿದೆ ಎಂದೂ ನಮಗೆ ಅನ್ನಿಸುತ್ತದೆ. ಯಾಕೆಂದರೆ ನವ್ಯರಿಗಿಂತ ಗಾಢವಾಗಿ ಬರೆದ ಮಾಸ್ತಿ , ಕಾರಂತ ಎಂದೂ ಧ್ಯಾನದ ಬಗ್ಗೆ ಹೇಳಲಿಲ್ಲ. ನಾನು ಇದನ್ನು ಧ್ಯಾನಿಸಿ ಬರೆದೆ ಎಂದು ಬೊಗಳೆ ಬಿಡಲಿಲ್ಲ. ಧೇನಿಸುವುದನ್ನೇ ರೂಪಕವಾಗಿ ಕಟ್ಟಿಕೊಡಲಿಲ್ಲ. ಅದೆಲ್ಲ ಇತ್ತೀಚಿನ ತರಲೆ. ಹೀಗೆ ಧ್ಯಾನದ ಮಾತು ಬಂದಾಗ ಝೆನ್ ಅವರ ನೆರವಿಗೆ ಬಂತು. ಎಲ್ಲರ ಹುಸಿವಾದಗಳನ್ನೂ ಸಮರ್ಥಿಸಿಕೊಳ್ಳುವುದಕ್ಕೆ ಝೆನ್ ಒಳ್ಳೆಯ ಅಸ್ತ್ರವೂ ಆಯಿತು. ನಮ್ಮ ಆಧ್ಯಾತ್ಮಿಕತೆ ನಮ್ಮ ಕ್ಷುಲ್ಲಕತೆಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಬಳಕೆಯಾದಾಗ ಆಗುವ ಅಪಾಯ ಅಷ್ಟಿಷ್ಟಲ್ಲ. ನಾವಂತೂ ನಮ್ಮ ಸೋಮಾರಿತನವನ್ನೂ ಹೇಡಿತನವನ್ನೂ ನಿರುತ್ಸಾಹವನ್ನೂ ಸಮರ್ಥಿಸಿಕೊಳ್ಳುವುದಕ್ಕೆ ನಮ್ಮ ಧಾರ್ಮಿಕ ತತ್ವಗಳನ್ನು ದಂಡಿಯಾಗಿ ಬಳಸಿಕೊಂಡಿದ್ದೇವೆ. ಝೆನ್ ಇವತ್ತು ಎಷ್ಟು ರೇಜಿಗೆ ಹುಟ್ಟಿಸುವ ಪಂಥವಾಗಿದೆ ಎಂದರೆ ಅದು ಒಂದು ಪೊಳ್ಳು ಸಿದ್ಧಾಂತವನ್ನು ಪ್ರತಿಪಾದಿಸುತ್ತಿದೆಯೇನೋ ಅನ್ನುವ ಅನುಮಾನ ಬರುತ್ತದೆ. ಭಾರತದಷ್ಟು ವಿಸ್ತಾರವಾದ ಮತ್ತು ಆಳವಾದ ಧರ್ಮಶ್ರದ್ಧೆ ಇಲ್ಲದ ಚೀನಾಕ್ಕೆ ಸಾವಿರದೈನೂರು ವರುಷಗಳ ಹಿಂದೆ ಬುದ್ಧಧರ್ಮ ಕಾಲಿಟ್ಟಾಗ ಝೆನ್ ಹುಟ್ಟಿಕೊಂಡಿತು ಎನ್ನುತ್ತಾರೆ. ಅದಕ್ಕಿಂತ ಮುಂಚೆ ಚೀನಾದಲ್ಲಿದ್ದದ್ದು ಟಾವೋ ಪಂಥ. ಇದನ್ನೂ ನಾವು ಸಾಕಷ್ಟು ದುರ್ಬಳಕೆ ಮಾಡಿಕೊಂಡಿದ್ದಾಗಿದೆ. ಟಾವೋ ಆಫ್ ಫಿಸಿಕ್ಸ್ , ಟಾವೋ ಆಫ್ ಇಕನಾಮಿಕ್ಸ್ ಮುಂತಾದ ಪುಸ್ತಕಗಳು ಬಂದಿವೆ. ಝೆನ್ ಅಂಡ್ ಮೋಟರ್‌ಸೈಕಲ್ ಮೇಂಟೆನೆನ್ಸ್ ಎಂಬ ಕೃತಿ ಈಗಲೂ ಚೆನ್ನಾಗಿ ಮಾರಾಟವಾಗುತ್ತಿದೆ. ನಮ್ಮ ಲಹರಿಗಳಿಗೆ ಹೊಂದುವಂಥ ತತ್ವಗಳನ್ನು ಹೇಳುತ್ತದೆ ಅನ್ನುವುದೂ ವ್ಯಕ್ತಿಯನ್ನು ಎಲ್ಲ ಕಟ್ಟುಪಾಡುಗಳಿಂದ ಮುಕ್ತಗೊಳಿಸುತ್ತದೆ ಎನ್ನುವುದೂ ಝೆನ್‌ಗಿರುವ ಹೆಗ್ಗಳಿಕೆ. ಏನು ಹೇಳಿದರೂ ಅದು ಝೆನ್. ಅರ್ಥವಾಗದೆ ಇದ್ದರೆ ಅದು ಅಪ್ಪಟ ಝೆನ್. ಅರ್ಥವಾದವನಿಗೆ ಜ್ಞಾನೋದಯವಾಗಿದೆ ಎಂದು ಅರ್ಥ. ಜ್ಞಾನೋದಯವಾದವನು ಅದನ್ನು ಮತ್ತೊಬ್ಬನಿಗೆ ಅರ್ಥ ಮಾಡಿಸುವ ಅಗತ್ಯವೇ ಇಲ್ಲ. ಹೀಗೆ ಝೆನ್‌ಗೆ ಹಲವು ಅನುಕೂಲಗಳಿವೆ. ಚೀನಾದ ಶತಮೂರ್ಖರಿಗೆ ಅದು ಹೇಳಿಮಾಡಿಸಿದ ಧರ್ಮ ಎಂದು ಗೇಲಿಮಾಡಿದವರೂ ಇದ್ದಾರೆ. ಯಾಕೆಂದರೇ ಚೀನಾದ ಮಂದಿ ಮೂಲತಃ ಸೋಮಾರಿಗಳು. ಅದಕ್ಕೆ ತಕ್ಕಂತಿದೆ ಝೆನ್‌ನ ಒಂದು ಸೂತ್ರ;  Sitting quitely doing nothing And the Grass grows by itself.

 

 

Tags:

Leave a Reply

Your email address will not be published.

*