ಗಂಡೂ ಅಲ್ಲದ ಹೆಣ್ಣೂ ಅಲ್ಲದ ಈ ಗೊಣಗಾಟ ನಿಮಗೇಕೆ?

in ಬಾಟಮ್ ಐಟಮ್

ಬಾಟಮ್ ಐಟಮ್:
ನಾನು ಮೊದಲು ಸಿಟ್ಟು ಮಾಡಿಕೊಳ್ಳುತ್ತಿದ್ದೆ. ಮುನಿಯುತ್ತಿದ್ದೆ. ರೇಗುತ್ತಿದ್ದೆ. ಗೊಣಗುತ್ತಿದ್ದೆ. ಇವೆಲ್ಲವುಗಳ ಪೈಕಿ ನನಗೆ ಅತಿ ದೊಡ್ಡ ಬಲಹೀನತೆ ಅನ್ನಿಸಿದ್ದು ಈ ಗೊಣಗುವಿಕೆ. ಸಿಟ್ಟು ಮಾಡಿಕೊಂಡರೆ, ರೇಗಿದರೆ, ಮುನಿದರೆ ಅದು ಒಂದು ಗುಕ್ಕಿಗೆ ಮುಗಿದು ಹೋಗುತ್ತದೆ. ಆದರೆ ಈ ಗೊಣಗುವಿಕೆ ಇದೆಯಲ್ಲ ಅದಕ್ಕೆ ಅಂತ್ಯವೇ ಇಲ್ಲ. ಒಂದು ಸಲ ನಮಗೆ ಗೊಣಗುವಿಕೆ ರೂಢಿಯಾದರೆ ಅದು ಪ್ರತಿನಿತ್ಯ ನಮ್ಮೊಂದಿಗೆ ಹೆಜ್ಜೆ ಹಾಕುತ್ತಾ ಸ್ಮಶಾನದ ತನಕ ಬರುತ್ತದೆ. ಸಾಮಾನ್ಯವಾಗಿ ಈ ಗೊಣಗುವ ಜನ ಪುಕ್ಕಲರಾಗಿರುತ್ತಾರೆ. ಅವರಿಗೆ ರೇಗುವ ಧೈರ್ಯವಿರುವುದಿಲ್ಲ. ಪಕ್ಕದವನಿಗೂ ಕೇಳಿಸದಂತೆ ಸುಮ್ಮನೆ ಮಣ ಮಣ ಮಣ ಎಂದು ಗೊಣಗುತ್ತಿರುತ್ತಾರೆ. ‘‘ಅದೇನು ಸುಡುಗಾಡು ಗೊಣಗುತ್ತಿ, ಜೋರಾಗಿ ಹೇಳಯ್ಯಾ” ಅಂದರೆ ಸ್ವಲ್ಪ ಹೊತ್ತು ಸುಮ್ಮನಿದ್ದು ಗೋಡೆಯ ಮರೆಗೆ ಹೋಗಿ ಗೊಣಗುವಿಕೆ ಆರಂಭಿಸುತ್ತಾರೆ. ನನ್ನ ಪ್ರಕಾರ ನಾವು ಅಂದುಕೊಂಡಾಗ, ಅಂದುಕೊಂಡ ಕೆಲಸ ಸರಿಯಾಗಿ ಆಗಾಗದಿದ್ದರೆ ಸಿಟ್ಟು ಮಾಡಿಕೊಳ್ಳುತ್ತೇವೆ, ರೇಗುತ್ತೇವೆ. ಇವೆರಡೂ ಕೂಡ ಬಲಹೀನತೆಗಳೇ. ಆದರೆ ಗೊಣಗುವಿಕೆ ಇದೆ ನೋಡಿ, ಅದು ಶುದ್ಧಾನುಶುದ್ಧ ಹೇತ್ಲಾಂಡಿತನ. ಪಾಕೆಟ್ ಮನಿ ಕೊಡದ ಅಪ್ಪನ ಮೇಲೆ, ಏನೇನೂ ಕೆಡುಕು ಮಾಡದ ಅಮ್ಮನ ಮೇಲೆ, ಕಾರಣವಿಲ್ಲದೆ ಅತ್ಯಂತ ಪ್ರೀತಿಯ ಅಕ್ಕನ ಮೇಲೆ, ಹೆಣ್ಣು ಕೊಟ್ಟ ಮಾವನ ಮೇಲೆ ಮುಂತಾದವರ ಮೇಲೆ ಒಳಗೊಳಗೇ ಗೊಣಗುವುದು, ಯಾರೆಂದರೆ ಯಾರಿಗೂ ಉಪಯೋಗವಿಲ್ಲ. ಒಮ್ಮೆ ಅಭ್ಯಾಸವಾಗಿ ಹೋದರೆ ಈ ಗೊಣಗುವಿಕೆ ಎಂಬುದು ಸಲೀಸಾಗಿ ಬಿಡುವುದಕ್ಕೂ ಆಗುವುದಿಲ್ಲ. ಕಡೆಗೆ ಯಾರೂ ಸಿಕ್ಕದಿದ್ದರೆ ನಮ್ಮ ಮೇಲೆ ನಾವೇ ಗೊಣಗುತ್ತಿರುತ್ತೇವೆ. ಈ ಜನ್ಮಕ್ಕೆ ಇದು ಇಷ್ಟೆ. ನನ್ನ ಹಣೆಯ ಬರಹವೇ ಇಷ್ಟು. ಇದು ಇನ್ನೆಂದಿಗೂ ಬದಲಾಗುವುದಿಲ್ಲ ಮುಂತಾದ ನಿರ್ಧಾರಗಳಿಗೆ ಬಂದು ನಮ್ಮ ಮೇಲೆ ನಾವೇ ಗೊಣಗುತ್ತಾ ವಿನಾಕಾರಣ ದುಃಖಿತರಾಗುತ್ತೇವೆ.
ನಿಮಗೆ ಗೊಣಗುವ ಅಭ್ಯಾಸವಿದ್ದರೆ ಒಂದೈದು ನಿಮಿಷ ನಿಮ್ಮ ಪಾಡಿಗೆ ನೀವು ಗೊಣಗಿ. ಐದನೇ ನಿಮಿಷ ಥಟ್ ಅಂತ ಗೊಣಗುವುದನ್ನು ನಿಲ್ಲಿಸಿ, ನಾನು ಗೊಣಗುತ್ತಿರುವುದು ಸರಿಯಿದೆಯಾ? ಅಂತ ಪ್ರಶ್ನಿಸಿಕೊಳ್ಳಿ. ನಿಮ್ಮ ಮನಸ್ಸೇ ನಿಮ್ಮನ್ನು ಸಮರ್ಥಿಸುವುದಿಲ್ಲ. ದುಡಿಯಲು ಚೈತನ್ಯವಿರುವ ನೀವು ಪಾಕೆಟ್ ಮನಿ ಕೊಡಲಿಲ್ಲ ಅಂತ ಅದೆಷ್ಟು ದಿನ ಅಪ್ಪನ ಮೇಲೆ ಗೊಣಗುತ್ತೀರಿ. ದಯವಿಟ್ಟು ಗೊಣಗುವುದನ್ನು ನಿಲ್ಲಿಸಿ. ಗೊಣಗುವುದನ್ನು ನಿಲ್ಲಿಸಿದ ಮರುಕ್ಷಣ ಅಪ್ಪನ ಪಾಕೆಟ್ ಮನಿಯ ಹಂಗಿನಿಂದ ಹೊರಬಂದು ನೀವು ದುಡಿಯಲು ಹೊರಡುತ್ತೀರಿ. ಹೆಂಡತಿ ಮಾಡಿ ಹಾಕಿದ ರುಚಿಯಾದ ಅಡುಗೆಯನ್ನೂ ಕೂಡ ಗೊಣಗುತ್ತಾ ತಿನ್ನುವ ನೀವು ಆಕೆಯೆಡೆಗೊಮ್ಮೆ ಪ್ರೀತಿಯಿಂದ ನೋಡಿ. ಹೊಟ್ಟೆ ತುಂಬ ಊಟ ಮಾಡಿ ಎದ್ದು ಹೋಗುತ್ತೀರಿ. ಒಳಿತು ಮಾಡಿದ ಅಕ್ಕನಿಗೆ ಥ್ಯಾಂಕ್ಸ್ ಹೇಳುತ್ತೀರಿ. ಒಟ್ಟಾರೆಯಾಗಿ ನಿಮ್ಮ ವರ್ತನೆಯೇ ಬದಲಾಗುತ್ತದೆ. ಹಾಗೆ ಅದು ಬದಲಾಗಬೇಕು ಕೂಡ. ಏಕೆಂದರೆ ನಾವು ಬದುಕುವ ಕೆಲವೇ ವರ್ಷಗಳನ್ನು ಈ ನಿರರ್ಥಕ ಗೊಣಗಾಟದಲ್ಲಿ ಕಳೆದು ಬಿಡಬಾರದು. ಗೊಣಗಾಟವೆಂಬುದು ಆ ಕಡೆ ಗಂಡೂ ಅಲ್ಲ, ಈ ಕಡೆ ಹೆಣ್ಣೂ ಅಲ್ಲ. ಅದನ್ನೇಕೆ ನಾವು ನಮ್ಮೊಂದಿಗೆ ಸಾಕಿಕೊಳ್ಳಬೇಕು. ‘‘ಈ ರವಿ ಬೆಳಗೆರೆ ಸುಡುಗಾಡು ಇದೇನು ಬರೆಯುತ್ತಾನೆ” ಅಂತ ಗೊಣಗುವ ಬದಲು ‘‘ಏಯ್, ರವಿ ಬೆಳಗೆರೆ ಸರಿಯಾಗಿ ಬರಿಯೋ” ಅಂದು ರೇಗಿ ನೋಡಿ.
ರವಿ ಬೆಳಗೆರೆ ಸಂತುಷ್ಟನಾಗುತ್ತಾನೆ.

-ರವೀ

Tags:

Leave a Reply

Your email address will not be published.

*

Latest from ಬಾಟಮ್ ಐಟಮ್

Go to Top