ಡಿಕೆಶಿ ಪರಮ ಭ್ರಷ್ಟ ಎನ್ನುವುದು ಇಡೀ ರಾಜ್ಯಕ್ಕೇ ಗೊತ್ತಿದೆ

in Uncategorized/ಫೀಡ್ ಬ್ಯಾಕ್
  • ಫೀಡ್‌ಬ್ಯಾಕ್

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಹಿಂದೆ ದ್ವೇಷದ ರಾಜಕಾರಣ ಇದೆ ಎಂಬುದು ಎಲ್ಲರೂ ಹೇಳುತ್ತಿರುವ ಮಾತಾದರೂ ಸುಖಾಸುಮ್ಮನೆ ಅವರನ್ನ ಇ.ಡಿ. ಅಧಿಕಾರಿಗಳು ಅರೆಸ್ಟ್ ಮಾಡಿಲ್ಲವಲ್ಲ. ಇ.ಡಿ. ಮತ್ತು ಸಿ.ಬಿ.ಐ. ಕೇಂದ್ರ ಸರ್ಕಾರದ ಪಂಜರದ ಗಿಳಿಗಳು ಎಂದು ಬಹಳ ಹಿಂದಿನಿಂದಲೂ ಹೇಳಲಾಗುತ್ತಿದೆ. ಆಯಾ ಸರ್ಕಾರಗಳು ತನಗೆ ಬೇಕಾದಂತೆ ಈ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತವೆ ಎಂಬ ಮಾತು ಕೂಡ ಕೇಳಿಬಂದಿವೆ, ಬರುತ್ತಿವೆ ಕೂಡ. ಆದರೆ ಬೆಂಕಿಯೇ ಇಲ್ಲದೆ ಹೊಗೆಯಾಡಲು ಸಾಧ್ಯವೇ? ಡಿ.ಕೆ.ಶಿವಕುಮಾರ್ ಏನು ಅಮಾಯಕರೆ? ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಅನೇಕ ವರ್ಷಗಳಿಂದ ಡಿ.ಕೆ.ಶಿವಕುಮಾರ್ ಮಾಡಿರುವ ಅಕ್ರಮದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಅವರ ವಿರುದ್ಧ ಘರ್ಜಿಸುತ್ತಲೇ ಬಂದಿದ್ದಾರೆ. ಕೆಲ ವರ್ಷಗಳ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ನೇರಾನೇರಾ ಕುಳಿತು ಅವರ ಬೆವರಿಳಿಸಿದ್ದಾರೆ. ಹಾಗಂತ ಅವರೇನು ಬಿಜೆಪಿಯವರಾ? ಸುಮ್ಮನೆ ಏನೋ ಹೇಳಬೇಕು ಅಂತ ಹೇಳುವುದಲ್ಲ. ಡಿ.ಕೆ.ಶಿವಕುಮಾರ್ ಪರಮ ಭ್ರಷ್ಟ ಎನ್ನುವುದು ಇಡೀ ರಾಜ್ಯಕ್ಕೇ ಗೊತ್ತಿರುವ ವಿಚಾರ.

        -ಇಂದ್ರೇಶ್.ವಿ., ಚಿಕ್ಕಬಳ್ಳಾಪುರ 

ಡಿಕೆಶಿ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇ ಅಕ್ರಮ. ಎರಡು ವರ್ಷಗಳಿಂದ ಆದಾಯ ತೆರಿಗೆ ಮತ್ತು ಇ.ಡಿ. ಅಧಿಕಾರಿಗಳು ಅವರ ಮೇಲೊಂದು ಕಣ್ಣಿಟ್ಟೇ ಇದ್ದರು. ಮಗಳ ಆಸ್ತಿ ಏಕಾಏಕಿ ಅಷ್ಟೊಂದು ಏರಿಕೆಯಾಗುತ್ತದೆ ಅಂದರೆ ಅದು ಆರ್ಥಿಕ ಅಪರಾಧದ ಕೆಟಗರಿಗೆ ಬರುತ್ತದೆ ಎಂಬುದು ಡಿಕೆಶಿಗೆ ಅರಿವಿರಲಿಲ್ಲವೇ? ತಾನು ಏನು ಮಾಡಿದರೂ ನಡೆಯುತ್ತದೆ. ನನ್ನನ್ನು ಕೇಳೋರು ಯಾರು ಎಂಬ ಧಿಮಾಕು ಆ ಮನುಷ್ಯನ ಕಣಕಣದಲ್ಲೂ ತುಂಬಿದೆ. ಮಾಡಿದ ಪಾಪಕ್ಕೆ ಒಂದಲ್ಲಾ ಒಂದು ದಿನ ಸರಿಯಾಗಿ ದಂಡ ಕಟ್ಟಲೇಬೇಕಿದೆ. ಡಿಕೆಶಿಗೆ ಈಗ ದಂಡ ಕಟ್ಟುವ ಸಮಯ ಬಂದಿದೆ.

        -ಧೀರೇಂದ್ರಪ್ರಭು, ಹೆಗ್ಗನಹಳ್ಳಿ

ಐ.ಎ.ಎಸ್ ಅಧಿಕಾರಿಯಾಗಬೇಕು ಅಂತ ಎಷ್ಟೋ ಯುವಕ ಯುವತಿಯರು ಹಗಲು ರಾತ್ರಿ ಶ್ರಮ ಪಟ್ಟು ಓದುತ್ತಾರೆ. ಅವರ ಪೈಕಿ ಅನೇಕರು ತಮ್ಮ ಛಲವನ್ನು ಎಡೆಬಿಡದೆ ಸಾಧಿಸಿಯೂ ಸಾಧಿಸುತ್ತಾರೆ. ಅಧಿಕಾರದ ಗದ್ದುಗೆ ಏರಿ ಕೆಲ ವರ್ಷಗಳ ನಂತರ ಅವರ ನಡೆ ನುಡಿಯೇ ಬದಲಾಗಿಬಿಡುತ್ತದೆ. ಅವರಿಟ್ಟುಕೊಂಡಿದ್ದ ಆದರ್ಶಗಳೆಲ್ಲಾ ಮಣ್ಣಿನ ಅಡಿ ಹೂತು ಹೋಗಿರುತ್ತದೆ. ಒಬ್ಬ ಅಣ್ಣಾಮಲೈನಂತಹ, ಒಬ್ಬ ಸೆಂದಿಲ್‌ನಂತಹ ಐ.ಎ.ಎಸ್ ಅಧಿಕಾರಿ ಈ ವ್ಯವಸ್ಥೆಯ ವಿರುದ್ಧ ಬೇಸತ್ತು ಎದ್ದು ಹೊರನಡೆಯುತ್ತಾರೆ.  ಖಂಡಿತವಾಗಿಯೂ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಒಬ್ಬ ಜಿಲ್ಲಾಧಿಕಾರಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಇನ್ನಾದರೂ ಇಂತಹ ಕೆಟ್ಟ ಬೆಳವಣಿಗೆಗಳು ನಡೆಯದಿರಲಿ.

        -ಶಶಿಧರ್ ಮಲ್ಲಪ್ಪ, ತೀರ್ಥಹಳ್ಳಿ

ಹುಬ್ಬಳ್ಳಿ ಪೊಲೀಸ್ ಕಮೀಶನರ್ ದಿಲೀಪ್ ಮತ್ತವರ ಅಧಿಕಾರಿಗಳ ತಂಡ ನಿಜಕ್ಕೂ ಜನ ಮೆಚ್ಚುವಂತಹ ಕೆಲಸ ಮಾಡಿದೆ. ಸ್ಪಾ ಹೆಸರಿನಲ್ಲಿ  ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡೆಗಳನ್ನು ಬಂದ್ ಮಾಡಿರುವುದೇನೋ ಸರಿ. ಆದರೆ ಕೆಲವೇ ತಿಂಗಳಲ್ಲಿ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಬೇಕಿದೆ. ದಕ್ಷ ಅಧಿಕಾರಿ ದಿಲೀಪ್ ಮೇಲೆ ಅವಳಿನಗರದ ಜನರಿಗೆ ಭರವಸೆ ಇದೆ.

        -ಮಾಧವ ದೇಶಪಾಂಡೆ, ಹುಬ್ಬಳ್ಳಿ

ಮಕ್ಕಳ ಕೈಗೆ ಮಚ್ಚು ಕೊಡುತ್ತಿದೆ ಮನೆಹಾಳ ಗೇಮ್ ಪಬ್‌ಜಿ ಓದಿ ಒಂದು ಕ್ಷಣ ಬೆಚ್ಚಿ ಬಿದ್ದೆ. ಇತ್ತೀಚಿನ ದಿನಗಳಲ್ಲಿ ಈ ಪಬ್‌ಜಿ ಗೇಮ್ ಮಕ್ಕಳಲ್ಲಿ ಮೂಡಿಸಿರುವ ಅಡಿಕ್ಷನ್ ಕಂಡರೆ ಭಯವಾಗುತ್ತದೆ. ಗೇಮ್ ಆಡುವುದನ್ನು ತಡೆದ ಎಂಬ ಕಾರಣಕ್ಕೆ ತಂದೆಯನ್ನೇ ಕೊಲೆ ಮಾಡಿಬಿಡೋದಾ? ಇದು ಯುವ ಪೀಳಿಗೆಯನ್ನು ಖಂಡಿತವಾಗಿಯೂ ದಾರಿ ತಪ್ಪಿಸುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಿ ಮೊಬೈಲ್ ಗೇಮ್‌ಗಳನ್ನು ಬ್ಯಾನ್ ಮಾಡದಿದ್ದರೆ ಯುವಪೀಳಿಗೆಯ ಭವಿಷ್ಯ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ.

        -ಲೀಲಾ ಕುಮಟಾ, ಗಿರಿನಗರ  

ಮತ್ತೆ ಆ ದಿನಗಳು ಮರಳುತ್ತಿವೆ. ಈ ವಾಕ್ಯವನ್ನು ಸಾಫ್ಟ್ ಕಾರ್ನರ್‌ನಲ್ಲಿ ಓದಿ ಮನಸ್ಸಿಗೆ ತುಂಬಾನೇ ಸಂತೋಷವಾಯಿತು. ಇತ್ತೀಚೆಗೆ ನೀವು ಆರಂಭಿಸಿರುವ ಯೂಟ್ಯೂಬ್ ಛಾನಲ್ ಅದಾಗಲೇ ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವುದು ನಿಜಕ್ಕೂ ಖುಷಿಯ ವಿಚಾರ. ನಿಜಕ್ಕೂ ಹೇಳಿ ಹೋಗು ಕಾರಣದಂತಹ ಮತ್ತೊಂದು ಕಾದಂಬರಿಯನ್ನು ಇನ್ನೊಬ್ಬರು ಬರೆಯಲಾರರು. ಅದೊಂದು ಮನಮೋಹಕ ಕೃತಿ. ಒಂದೊಂದು ಅಕ್ಷರಗಳು ಮನಸ್ಸಿಗೆ ಆಪ್ತವಾಗಿದೆ. ಕಣ್ಣಿಗೆ ಕಟ್ಟಿದಂತಿದೆ. ಎಲ್ಲೋ ಒಂದೊಂದು ಕಡೆ ಆ ಪಾತ್ರಗಳು ನಮ್ಮನ್ನೇ ಹೋಲುತ್ತವಾ ಅಂತ ಅನ್ನಿಸಿಬಿಡುತ್ತದೆ. ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳಿಗೆ ಆಲ್ ದಿ ಬೆಸ್ಟ್

        -ಶ್ರೀಧರಮೂರ್ತಿ.ಟಿ., ಹಾಸನ  

ಕಳೆದ ಎರಡ್ಮೂರು ವಾರಗಳ ಅಂತರದಲ್ಲಿ ದೇಶ ಕಂಡ ಇಬ್ಬರು ಹಿರಿಯ ನ್ಯಾಯವಾದಿಗಳು ನಮ್ಮನ್ನು ಅಗಲಿರುವುದು ಬೇಸರ ತರಿಸಿದೆ. ಎ.ಕೆ.ಸುಬ್ಬಯ್ಯ ಮತ್ತು ರಾಮ್ ಜೇಠ್ಮಲಾನಿಯಂತಹ ವಕೀಲರು ನಿಜಕ್ಕೂ ವಿರಳ. ಅದರಲ್ಲೂ ಸುಬ್ಬಯ್ಯನವರ ನೇರವಂತಿಕೆಯನ್ನು ನಾನು ಯಾರಲ್ಲೂ ಕಂಡಿಲ್ಲ. ಇವತ್ತು ನಾವು ಅಂಥವರನ್ನು ಕಾಣಲು ಸಾಧ್ಯವಾಗುತ್ತಿಲ್ಲವಲ್ಲ ಎಂಬುದು ನಿಜಕ್ಕೂ ನಮ್ಮ ದುರದೃಷ್ಟ.

        -ಕಲ್ಲೇಶ್ ಜಕ್ಕನಹಳ್ಳಿ

Leave a Reply

Your email address will not be published.

*