ಹಾಯ್ ಬೆಂಗಳೂರ್

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಬರ್ಭರ ಹತ್ಯೆ!

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಬರ್ಭರ ಹತ್ಯೆ!

ಕತ್ತಿಗೆ ನಾಟಿದ ಮಚ್ಚಿನ ಹಿಂದಿದೆ ಬೆಚ್ಚಿ ಬೀಳಿಸೋ ಕಥೆ!

ಕಳೆದ ಒಂದಷ್ಟು ಕಾಲದಿಂದ ಬೆಂಗಳೂರು ರೌಡಿಸಂ ಲೋಕದ ಸದ್ದಡಗಿದಂತಾಗಿತ್ತು. ಸಿಸಿಬಿ ಪೋಲೀಸರೂ ಕೂಡಾ ಇಲ್ಲಿನ ಪುಢಾರಿಗಳನ್ನು ಹೆಡೆಮುರಿ ಕಟ್ಟಿ ಎಲ್ಲ ಆಟಗಳಿಗೂ ಬ್ರೇಕ್ ಹಾಕಿದ್ದರು. ಇದರಿಂದಾಗಿ ನಾಗರಿಕರೆಲ್ಲರೂ ಇನ್ನಾದರೂ ನೆಮ್ಮದಿ ಸಿಕ್ಕೀತೆಂಬ ನಿರೀಕ್ಷೆಯಲ್ಲಿದ್ದರು. ಆದರೀಗ ಅದೆಲ್ಲವನ್ನೂ ಸುಳ್ಳು ಮಾಡುವಂತೆ ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮಚ್ಚು ಲಾಂಗುಗಳು ಸದ್ದು ಮಾಡಿವೆ. ಚಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಮೇಲೆ ಇಂದು ಬೆಳಗ್ಗೆ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ನಡುರಸ್ತೆಯಲ್ಲಿಯೇ ಚಾಕುವಿನಿಂದ ಕುತ್ತಿಗೆ ಸೀಳಿ ಹಲ್ಲೆ ನಡೆಸಲಾಗಿದೆ. ಇದರಿಂದ ಮಾರಣಾಂತಿಕವಾಗಿ ಗಾಯಗೊಂಡಿದ್ದ ರೇಖಾ ಕದಿರೇಶ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಚಲವಾದಿಪಾಳ್ಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಪ್ರತೀ ದಿನವೂ ಕಚೇರಿಗೊಂದು ವಿಸಿಟ್ಟು ಕೊಡೋದು ವಾಡಿಕೆ. ಅದರಂತೆ ಇಂದು ಬೆಳಗ್ಗೆ ಕಚೇರಿಗೆ ತೆರಳಿದ್ದ ಆಕೆ ಅಲ್ಲಿಂದ ಹೊರಗೆ ಬರುತ್ತಿದ್ದಂತೆಯೇ ಲಾಂಗು, ಮಚ್ಚಿನಿಂದ ದಾಳಿ ನಡೆಸಲಾಗಿತ್ತು. ಭೀಕರ ದಾಳಿಗೀಡಾದ ರೇಖಾ ಕುಸಿದು ಬೀಳುತ್ತಿದ್ದಂತೆಯೇ ಆರೋಪಿಗಳೆಲ್ಲ ಕಾಲ್ಕಿತ್ತಿದ್ದರು. ಅಂದಹಾಗೆ ಈ ಹತ್ಯೆ ನಡೆದಿದ್ದು ರೇಖಾ ಅವರ ಸಂಬಂಧಿ ಪೀಟರ್ ಹಾಗೂ ಸುರೇಶ್ ಎಂಬಾತನಿಂದ. ಒಂದಷ್ಟು ದಿನಗಳಿಂದ ಆರೋಪಿಗಳು ವ್ಯವಸ್ಥಿತವಾಗಿ ಸ್ಕೆಚ್ಚು ಹಾಕಿ ಸರಿಕಟ್ಟಾಗಿಯೇ ಕೆಲಸ ಮುಗಿಸಿದಂತಿದೆ.

ಈ ಹಿಂದೆ ೨೦೧೮ರಲ್ಲಿ ರೇಖಾ ಪತಿ ಕದಿರೇಶ್ ಅವರನ್ನು ಶೋಬನ್ ಮತ್ತು ಗ್ಯಾಂಗ್ ಕೊಲೆ ಮಾಡಿತ್ತು. ಇದೀಗ ರೇಖಾ ಕೂಡ ನಡುರಸ್ತೆಯಲ್ಲೇ ಕೊಲೆಯಾಗಿದ್ದಾರೆ. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ದೌಡಾಯಿಸಿ, ಮಾರಾಣಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ರೇಖಾ ಕದಿರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಮೂಲಕ ಚಲವಾದಿಪಾಳ್ಯ ಸೀಮೆಯ ಭೀಕರ ರಕ್ತಚರಿತ್ರೆ ಮತ್ತೊಮ್ಮೆ ಮಗ್ಗಲು ಬದಲಿಸಿದೆ. ಈ ರಾಕ್ಷಸೀಯ ಕೃತ್ಯ ಮಾತ್ರ ಇಡೀ ಬೆಂಗಳೂರನ್ನೇ ತಲ್ಲಣಿಸುವಂತೆ ಮಾಡಿದೆ.

ರೇಖಾ ಕೊಲೆಯ ಹಿಂದೆ ವ್ಯವಸ್ಥಿತವಾದ ಸಂಚಿರೋದು ಮೇಲು ನೋಟಕ್ಕೆ ಗೊತ್ತಾಗುತ್ತದೆ. ಈ ಕೊಲೆಗೆ ಕೊರೋನಾ ಕಾಲದಲ್ಲಿಯೇ ಮುಹೂರ್ತ ಇಡಲಾಗಿತ್ತು. ಇಂದು ಮುಂಜಾನೆಯಿಂದಲೇ ಆಕೆಯ ಚಲನವಲನಗಳ ಮೇಲೆ ಮೂವರು ಕೊಲೆಗಾರರು ಕಣ್ಣಿಟ್ಟಿದ್ದರು. ಮುಂಜಾನೆ ೮ ಗಂಟೆಯಿಂದಲೂ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದರು. ಬೆಳಗ್ಗೆ ರೇಖಾ ಕದಿರೇಶ್ ಊಟ ಕೊಡುವಾಗಲೂ ಕಚೇರಿಯ ಬಳಿಯೇ ಸುತ್ತಾಡಿದ್ದ ಕೊಲೆಗಾರರು ಯಾರಿಗೂ ಅನುಮಾನ ಬಾರದ ಹಾಗೆ ಸಿಸಿ ಟಿವಿ ಕ್ಯಾಮರಾಗಳನ್ನು ಯಾಮಾರಿಸಿದ್ದರು. ಮೂರು ಸಿಸಿ ಕ್ಯಾಮರಾಗಳನ್ನು ವಿಶುವಲ್ ಕಾಣದ ಹಾಗೆ ಮಾಡಿಬಿಟ್ಟಿದ್ದರು.

ಇಂದು ಬೆಳಗ್ಗೆ ಸುಮಾರು ೮.೩೦ರ ವೇಳೆಗೆ ಊಟ ಹಂಚಿಕೆ ಆದ ಬಳಿಕ ಮನೆಗೆ ಹೋಗಿದ್ದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ೯:೩೦ರ ಸುಮಾರಿಗೆ ಮತ್ತೆ ಕಚೇರಿಯತ್ತ ಬಂದಿದ್ದರು. ಕಚೇರಿಗೆ ಬಂದ ಕೂಡಲೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಶುರು ಮಾಡಿದ್ದರು. ಈ ವೇಳೆ ಪೀಟರ್ ಎಂಬಾತ ರೇಖಾ ಕದಿರೇಶ್ ಜೊತೆ ಮಾತನಾಡಲು ಬಂದಿದ್ದ. ಸುಮಾರು ೧೦ ನಿಮಿಷಗಳು ಮಾತನಾಡಿ ಆಕೆಯನ್ನು ಹೊರಗಡೆ ಕರೆದುಕೊಂಡು ಬಂದಿದ್ದ. ಇಷ್ಟೆಲ್ಲ ಆದರೂ ಕೂಡಾ ರೇಖಾಗಾಗಲಿ, ಆಕೆಯ ಸುತ್ತ ನೆರೆದಿದ್ದ ಹಿಂಬಾಲಕರಿಗಾಗಲಿ ಈ ಮಹಾ ಸ್ಕೆಚ್ಚಿನ ಸಣ್ಣ ಸುಳಿವೂ ಕೂಡಾ ಸಿಕ್ಕಿರಲಿಲ್ಲ.

ಹೇಳಿಕೇಳಿ ಪೀಟರ್ ಎಂಬಾಂತ ಸಂಬಂಧಿ. ಆತನೊಂದಿಗೆ ರೇಖಾ ಸಣ್ಣ ಅನುಮಾನವೂ ಇಲ್ಲದೆ ಕಚೇರಿಯಿಂದ ಹೊರ ಬಂದಿದ್ದರು. ಹೊರಗಡೆ ಬರುತ್ತಿದ್ದಂತೆ ತನ್ನ ಬಳಿ ಇದ್ದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ್ದ. ತಕ್ಷಣವೇ ಆತನ ಜೊತೆ ಬಂದಿದ್ದ ಮತ್ತಿಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದರು. ರೇಖಾ ತಪ್ಪಿಸಿಕೊಳ್ಳಲು ಸುಮಾರು ೧೦೦ ಮೀಟರ್ ದೂರ ಓಡಿದರೂ ಬಿಡದೆ ಆಕೆಯನ್ನು ಸುತ್ತುವರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಆಕೆಯ ಕುತ್ತಿಗೆ, ತಲೆ ಭಾಗಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದ ಹಂತಕರು ಗಲಾಟೆ ಕೇಳಿ ಸ್ಥಳೀಯರು ಸುತ್ತುವರೆಯುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದರು.
ಇದು ಚಲವಾದಿಪಾಳ್ಯ ಸೀಮೆಯಲ್ಲಿ ಬಹು ಕಾಲದಿಂದಲೂ ಮಡುಗಟ್ಟಿಕೊಂಡಿರುವ ರಾಜಕೀಯ ಭೂಮಿಕೆಯ ನಾನಾ ಮಾಫಿಯಾಗಳ ಫಲಶೃತಿ. ಈ ಹಿಂದೆ ಇಂಥಾದ್ದೆ ಮತ್ತೊಂದು ಕಾರಣಕ್ಕಾಗಿ ಕದಿರೇಶ್ ಹೆಣವಾಗಿದ್ದ. ಈಗ ರೇಖಾ ಕದಿರೇಶ್ ಕೊಲೆಯಾಗಿದೆ. ಇದೀಗ ಈ ಸೀಮೆಯಲ್ಲಿ ಮತ್ತೆ ಪ್ರತಿಕಾರದ ಕೆಂಡ ಬೆಂಕಿಯಾಗಿದೆ. ಈ ಬಾರಿ ಅದಕ್ಕೆ ರಾಜಕೀಯ ಬಣ್ಣ ಮೆತ್ತಿಕೊಂಡಿದೆ. ಮಾಜಿ ಕಾರ್ಪೋರೇಟರ್ ಎನ್ ಆರ್ ರಮೇಶ್ ಈ ಕೊಲೆಯ ಹಿಂದೆ ಜಮೀರ್ ಅಹಮದ್ ಕೈವಾಡ ಇದೆ ಅಂತ ನೇರವಾಗಿಯೇ ಆರೋಪಿಸಿದ್ದಾರೆ. ನೈಜ ಕಥೆಗಳು ಇನ್ನಷ್ಟೇ ಹೊರಬೀಳಬೇಕಿದೆ.

Leave a Reply

Your email address will not be published. Required fields are marked *