ಹಾಯ್ ಬೆಂಗಳೂರ್

ಅಹಮದಾಬಾದ್ ನ ಪಿಚ್ ಕ್ಯೂರೇಟರ್ ಮೇಲೆ ಇಂಗ್ಲೆಂಡ್ ಕ್ರಿಕೆಟಿಗರು ಗರಂ

ಇಂಗ್ಲೆಂಡ್ ಕ್ರಿಕೆಟ್ ತಂಡ ಕೆಂಡಾಮಂಡಲವಾಗಿದೆ. ಅದಕ್ಕೆ ಕಾರಣ ಕೇವಲ ಒಂದೂವರೆ ದಿನದಲ್ಲಿ ಟೆಸ್ಟ್ ಪಂದ್ಯವೊಂದು ಮುಗಿದದ್ದು ಮತ್ತು ಭಾರತ ಗೆದ್ದದ್ದು. ಅಸಲಿಗೆ ಟೆಸ್ಟ್ ಇತಿಹಾಸದಲ್ಲೇ ಕೇವಲ ಒಂದೂವರೆ ದಿನಕ್ಕೆ ಫಲಿತಾಂಶ ಬಂದ ಉದಾಹರಣೆ ಇಲ್ಲ ಅಂತಲೇ ಹೇಳಬಹುದು.

ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಖರ ಬೌಲಿಂಗ್ ದಾಳಿಯಿಂದ ಇಂಗ್ಲೆಂಡನ್ನು 112ರನ್ ಗಳಿಗೆ ಆಲೌಟ್ ಮಾಡಿತು. ನಂತರ ಬ್ಯಾಟಿಂಗ್ ಮಾಡಿದ ಭಾರತ 145 ರನ್ ಗಳನ್ನು ಗಳಿಸಿ 33 ರನ್ ಲೀಡ್ ಪಡೆಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 81ಕ್ಕೆ ಆಲೌಟ್ ಆಯಿತು. ಕಡೆಗೆ ಭಾರತಕ್ಕೆ ಉಳಿದದ್ದು 49 ರನ್ ಗಳ ಟಾರ್ಗೆಟ್. ಅದನ್ನು ಭಾರತ ಸುಲಭವಾಗಿ ಹೊಡೆದು ಮುಗಿಸಿತು. ಅಲ್ಲಿಗೆ ಒಂದೂವರೆ ದಿನಕ್ಕೆ ಆಟ ಮುಕ್ತಾಯ.

ಆಟ ಮುಗಿದ ಮರುದಿನ ಇಂಗ್ಲೆಂಡ್ ಆಟಗಾರರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅದೆಂಥ ದರಿದ್ರ ಪಿಚ್ ರೆಡಿ ಮಾಡಿದ್ದೀರಿ ಅಂತ ಕ್ಯೂರೇಟರ್ ಮೇಲೆ ಗರಂ ಆಗಿದ್ದಾರೆ. ಮತ್ತು ಈ ಸಂಬಂಧ ಐಸಿಸಿ ಸಾಧ್ಯವಾದರೆ ಗಮನ ಹರಿಸಲಿ ಅಂತ ಮನವಿ ಮಾಡಿದ್ದಾರೆ.

ನಾಲ್ಕನೇ ಟೆಸ್ಟ್ ಪಂದ್ಯ ಕೂಡ ಇದೇ ಅಹಮದಾಬಾದ್ ನ ಮೋದಿ ಸ್ಟೇಡಿಯಂನಲ್ಲಿ ನಡೆಯೋದ್ರಿಂದ ಐಸಿಸಿ ಈ ಬಗ್ಗೆ ಒಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕಿದೆ. ಇಲ್ಲ ಅಂದ್ರೆ ಕೇವಲ ಒಂದೂವರೆ ದಿನಕ್ಕೆ ಟೆಸ್ಟ್ ಮುಗಿದರೆ ಅದಕ್ಕೆ ಐದು ದಿನ ಯಾಕೆ ಬೇಕು. ಮುಂದಿನ ಟೆಸ್ಟ್ ಪಂದ್ಯ ಒಂದೇ ದಿನಕ್ಕೆ ಮುಗಿಯುತ್ತದೆ ಅಂತಿಟ್ಟುಕೊಳ್ಳಿ. ಆಗ ಅದಕ್ಕೆ ಒನ್ ಡೆ ಟೆಸ್ಟ್ ಇಂಟರ್ ನ್ಯಾಷನಲ್ ಅಂತ ಕರೀಬಹುದಲ್ವ ಅಂತ ಇಂಗ್ಲೆಂಡ್ ಆಟಗಾರರು ವ್ಯಂಗ್ಯವಾಡಿದ್ದಾರೆ.

ಅಹಮದಾಬಾದ್ ನ ಪಿಚ್ ಕ್ಯೂರೇಟರ್ ಅದ್ಯಾಕೆ ಹಿಂಗೆ ಮಾಡಿದರೋ ಗೊತ್ತಿಲ್ಲ. ಮೊದಲೇ ಭಾರತದ ಪಿಚ್ ಗಳು ಸ್ಪಿನ್ ಗೆ ಹೇಳಿ ಮಾಡಿಸಿದಂಥವು. ಅಂಥದ್ರಲ್ಲಿ ಈ ಥರದ ಪಿಚ್ ಗಳನ್ನು ಮಾಡಿಸಿಟ್ಟರೆ ಬ್ಯಾಟ್ಸ್ ಮನ್ ಗಳ ಗತಿ ಏನಾಗಬೇಡ.

Leave a Reply

Your email address will not be published. Required fields are marked *