ನಾನು-ಹಿಮ

ಈ ಪ್ರೀತಿ ನಮ್ಮನ್ನೆಲ್ಲ ರಕ್ಷಿಸುತ್ತದೆ

in ಖಾಸ್ । ಬಾತ್

ಈ ಪ್ರೀತಿ ನಮ್ಮನ್ನೆಲ್ಲ ರಕ್ಷಿಸುತ್ತದೆ

ನನ್ನ ಮನೆಯಲ್ಲಿ ನಾನು-ಯಶು-ಹಿಮ-ದರ್ಶನ್ ಮತ್ತು ಅಮ್ಮ ಎಷ್ಟೊಂದು ಸಂತೋಷವಾಗಿದ್ದೇವೆ. ನಾವೆಲ್ಲ ಒಬ್ಬರನ್ನೊಬ್ಬರು ನೋಡಿ ಯಾವುದೋ ಕಾಲವಾಗಿತ್ತು. ಈ ಹುಡುಗಿ ಯಶೋಮತಿ ಟೈಪ್ ಕುಟ್ಟುತ್ತ ಕುಟ್ಟುತ್ತಾ ನನ್ನನ್ನು ಅದೆಷ್ಟು ಪ್ರೀತಿಸಿದಳು ಗೊತ್ತಾ? ಜಗತ್ತು ಸಾವಿರ ಮಾತಾಡಲಿ ನಾವಿಬ್ಬರೂ ಜೊತೆಯಲ್ಲಿ ಕೆಲಸ ಮಾಡುತ್ತ ಮಾಡುತ್ತಾ ಒಬ್ಬರನ್ನೊಬ್ಬರು ಪ್ರೀತಿಸಿದೆವು. ಅವಳಿಗೆ ಆರಂಭದ ದಿನಗಳಲ್ಲಿ ಏನೋ ಅಭದ್ರತೆ. ‘ಚಿಂತೆ ಬೇಡ ಯಶು, ಜಗತ್ತು ಏನೇನನ್ನೋ ಒಪ್ಪಿಕೊಂಡಿದೆ. ಅದು ಏಸುವನ್ನೂ ಒಪ್ಪಿಕೊಂಡಿದೆ. ಇನ್ನು ನನ್ನ-ನಿನ್ನ ಪ್ರೇಮವನ್ನು ಒಪ್ಪಿಕೊಳ್ಳದೇ ಇರುತ್ತದೆಯಾ?’ ಅಂತ ಹೇಳುತ್ತಿದ್ದೆ. ಆತಂಕದ ನಗೆ ನಗುತ್ತಿದ್ದಳು. ನಮ್ಮ ದಾಂಪತ್ಯಕ್ಕೀಗ ಹನ್ನೊಂದು ವರ್ಷದ ಮಗ ಹಿಮವಂತ. ಒಪ್ಪಿಕೊಂಡಿದೆ ಇಡೀ ಜಗತ್ತು. ನಾನು ತರಕಾರಿ ಹೆಚ್ಚಿ ಕೊಡುತ್ತೇನೆ. ಅವಳೊಂದಿಗೆ ಅಡುಗೆ ಮಾಡುತ್ತೇನೆ. ನಾನು ತರಕಾರಿ ಹೆಚ್ಚಿಕೊಡುವುದು ನೋಡಿ ಹಿಮ ಮಷ್ಕಿರಿ ಮಾಡುತ್ತಾನೆ. ಅಪ್ಪ ಕುಕ್ಕಿಂಗ್! ಅಪ್ಪ ಹೆಲ್ಪಿಂಗ್! ಅಂತ. ಅವನ ಪ್ರೀತಿ, ಅಕ್ಕರೆ ನಮ್ಮನ್ನೆಲ್ಲ ಪೊರೆಯುತ್ತದೆ. ನಾವು ಅವನನ್ನು ನಂಬಿದ್ದೇವೆ. ಈ ಪುಟ್ಟ ಮನೆಯೊಳಕ್ಕೆ ಸಾವು ಬರುವುದಿಲ್ಲ. ಇನ್ನು ನಾಶದ್ಯಾವ ಲೆಕ್ಕ?

ನಾನು ಮತ್ತು ಹಿಮ

ಇವತ್ತು ಕೂಡ ಯಶೋಮತಿ ಟೈಪ್ ಕುಟ್ಟುತ್ತಿದ್ದಾಳೆ. ಅವಳದು ಒಂದೇ ಏಕಾಂತ. ಅವಳಿಗೆ ನನ್ನನ್ನು ಪ್ರೀತಿಸುವುದು ಬಿಟ್ಟು ಬೇರೇನೂ ಗೊತ್ತಿಲ್ಲ. ನಾನು ಜಗತ್ತಿನ ಸಾವು-ನೋವುಗಳ ಸಂಖ್ಯೆ ಕೇಳಿ ಕಣ್ಣೀರಾಗುತ್ತೇನೆ. ಈ ದುಃಖ, ಈ ಖಾಯಿಲೆ, ಈ ಬಡತನ, ಈ ಹಾಹಾಕಾರ ಯಾಕಿದ್ದೀತು ಹೇಳಿ? ಅವನ್ಯಾವನೋ ರಂಗಣ್ಣ ಪಬ್ಲಿಕ್ ಟಿವಿ ಮುಂದೆ ಕೂತು ಪ್ರೈವೇಟಾಗಿ ಬೊಗಳುತ್ತಾನೆ; ‘ನೀವು ಆತ್ಮಹತ್ಯೆ ಮಾಡಿಕೊಳ್ಳಿ’ ಅಂತ. ಇನ್ಯಾವನೋ ರಮಾಕಾಂತ ಕೂಡ ಅದೇ ಧಾಟಿಯಲ್ಲಿ ಬೊಗಳುತ್ತಾನೆ. ಇವರಿಬ್ಬರೂ ತಮ್ಮ ತಮ್ಮ ಹೆಂಡತಿಯರನ್ನು ಮನೆಯಲ್ಲಿ ಬಿಟ್ಟು ಬಂದಿದ್ದಾರೆ. ಅವರಿಗೆ ಕೆಮ್ಮು ಬಾರದೇ ಇರಲಿ. ಆ ಹೆಣ್ಣುಮಕ್ಕಳ ಪ್ರೀತಿ ರಂಗಣ್ಣನೂ ಸೇರಿದಂತೆ, ರಮಾಕಾಂತನೂ ಸೇರಿದಂತೆ ನಮ್ಮನ್ನೆಲ್ಲ ಪೊರೆಯಲಿ.

ಅಡುಗೆ ಮನೆಯಲ್ಲಿ ನಾನು ಮತ್ತು ಯಶೋಮತಿ

ಇವತ್ತು ಮನುಷ್ಯ ಸಂಕುಲ ತಲ್ಲಣಗೊಂಡಿದೆ.  ಇದು ಜಗಳಕ್ಕೆ, ಕದನಕ್ಕೆ ಹೊತ್ತಲ್ಲ. ಹಿಂದೂಗಳ, ಮುಸ್ಲಿಂಗಳ ಮೂರ್ಖತನಕ್ಕೆ ಹೊತ್ತಲ್ಲ. ದಿಲ್ಲಿಯ ನಿಜಾಮುದ್ದೀನ್ ಬಾರಿಸಿದ ಮರಣಮೃದಂಗದ ಬಗ್ಗೆ ನನ್ನ ಗೆಳೆಯ ಉಮಾಪತಿ ತುಂಬಾ ಪ್ರಜ್ಞಾವಂತಿಕೆಯಿಂದ ಬರೆದಿದ್ದಾನೆ. ನಾವು ಒಂದು ವಾರವಷ್ಟೆ ಆಫೀಸಿಗೆ ರಜೆ ಘೋಷಿಸಿದೆವು. ಆದರೆ ಯಾರಿಗೂ ತಡೆಯಲಾಗಲಿಲ್ಲ. ಅವರಿವರ ಮಾತು ಹಾಗಿರಲಿ. ನನ್ನ ಪ್ರೀತಿಯ ಚಂದ್ರಪ್ಪ ‘ನಂಕೈಲಿ ಇರಕಾಗಲ್ಲ ಸಾಮಿ, ನಾನ್ ಬರ್ತೀನಿ’ ಎಂದು ಮೊರೆಯಿಟ್ಟ. ನಾವೆಲ್ಲ ನಮ್ಮ ಅಫೀಸಿಗೆ, ನಮ್ಮ ದಿನನಿತ್ಯದ ಬದುಕಿಗೆ, ನಮ್ಮ ರೊಟೀನಿಗೆ ಎಷ್ಟು ಹೊಂದಿಕೊಂಡಿದ್ದೇವಲ್ಲ? ಈ ರೊಟೀನನ್ನು ತಪ್ಪಿಸುವ ತಾಕತ್ತು ಅದ್ಯಾವ ಕೊರೋನಾಗಿದೆ? Am sure ನಾವು ಇದೆಲ್ಲವನ್ನೂ ದಾಟಿ ಬದುಕುತ್ತೇವೆ. ಸಂತೋಷವಾಗಿರುತ್ತೇವೆ. ನಮ್ಮ ಮಕ್ಕಳು ದೊಡ್ಡವರಾಗುವುದನ್ನು ನೋಡುತ್ತೇವೆ. ನಾವು ಆಸೆ ಕಳೆದುಕೊಳ್ಳದಿರೋಣ. ನನ್ನ ಮೊಮ್ಮಗ (ಕರ್ಣ ಮತ್ತು ಲಕ್ಷ್ಮಿಯ ಮಗ) ಅದೆಷ್ಟು ಚೆನ್ನಾಗಿ ದೊಡ್ಡ ದೊಡ್ಡ ಕಣ್ಣು ಬಿಟ್ಟು ನಗುತ್ತಾನೆ. ಅವನನ್ನು ಲಲಿತೆ ಅದೆಷ್ಟು ಚೆನ್ನಾಗಿ ದೂರ ನಿಂತೇ ಮುದ್ದು ಮಾಡುತ್ತಾಳೆ. ನನ್ನ ಚೇತನ, ಅವಳ ಗಂಡ ರಂಜಿತ್, ನನ್ನ ಭಾವನಾ, ಅವಳ ಗಂಡ ಶ್ರೀನಗರ ಕಿಟ್ಟಿ, ನನ್ನ ಮೊಮ್ಮಕ್ಕಳಾದ  ಚಿಂಟು, ಗುಡ್ಡಿ, ಚುಕ್ಕಿ, ನನ್ನ ಕರ್ಣ ಮತ್ತು ಲಕ್ಷ್ಮಿಯ ಕಂದ  ಇವರೆಲ್ಲ ಏನು ತಪ್ಪು ಮಾಡಿದ್ದಾರೆ ಹೇಳಿ? ಇವರು ನೂರು ಕಾಲ ಬದುಕುತ್ತಾರೆ. ಬದುಕಲೇ ಬೇಕು. ಅವರು ಸಾವಿನಂಥ ಸಾವನ್ನೂ ಧಿಕ್ಕರಿಸುತ್ತಾರೆ. ಅವರ ಪ್ರೀತಿ, ಅವರ ಒಲವು ನಮ್ಮನ್ನು ಪೊರೆಯುತ್ತದೆ. ಅವರೆಲ್ಲರ ಪ್ರೀತಿಯಲ್ಲಿ ನಾವು ಮಿಂದೇಳುತ್ತೇವೆ. None can kill us.

ಮೊನ್ನೆ ಚೇತನಾಳ ಮಗಳು ಚುಕ್ಕಿಗೆ ವಿಪರೀತ ಕೆಮ್ಮು. ಅವಳನ್ನೆತ್ತಿಕೊಂಡು ಚೇತನಾ ತಿರುಗದ ವೈದ್ಯರಿಲ್ಲ. ತಿರುಗದ ಲ್ಯಾಬ್ ಗಳಿಲ್ಲ. ಎಲ್ಲ ತಿರುಗಿ ಬಂದ ಮೇಲೆ ಒಂದೇ ನಿಟ್ಟುಸಿರು “ಅಪ್ಪಾ, ಚುಕ್ಕಿ is fine.’’ ನಾನು ಸಂತೋಷದಿಂದ ಕಣ್ಣೀರಾಗುತ್ತೇನೆ. ಅವಳನ್ನು ನೋಡಲಿಕ್ಕೆ “ನಾನು ಬರುತ್ತೇನೆ ಮಗಳೇ’’ ಅಂದೆ. “ಬೇಡ ಬೇಡ ವೃದ್ಧರನ್ನು ದೂರವಿಡಿ’’ ಎಂದಿದ್ದಾರೆ ಅಂದಳು.

ನಾನು ಅದ್ಯಾವ ವೃದ್ಧ? ಇವತ್ತಿಗೂ ಕಾರು ಓಡಿಸುತ್ತೇನೆ. ಸೈಕಲ್ಲು ತುಳಿಯುತ್ತೇನೆ. ಇವಳಿಗೆ ತರಕಾರಿ ಹೆಚ್ಚಿಕೊಡುತ್ತೇನೆ. ಹಾಡು ಕೇಳುತ್ತೇನೆ. ಸುಮ್ಮಸುಮ್ಮನೇ ಮಷ್ಕಿರಿ ಮಾಡುತ್ತೇನೆ. Am young ಅಂದೆ.

ಚೇತನಾ ಸುಮ್ಮನೇ ನಕ್ಕಳು ಹೆ… ಹೆ…

ನಮ್ಮ ಆಫೀಸಿನಲ್ಲಿ ‘ಓ ಮನಸೇ’ ಪತ್ರಿಕೆಯ ರವಿ ಅಜ್ಜೀಪುರ ತಮ್ಮ ಚೇಂಬರ್ ನಲ್ಲಿ ತಾವು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜಗತ್ತಿನ ಪರಿವೆಯೇ ಇಲ್ಲ. ಮನೆಯಲ್ಲಿರುವ ಅವರ ಮನೆಯಾಕೆ, ಅವರ ಪುಟ್ಟಿ ಧನ್ಯಾ ಮತ್ತೆ ಮತ್ತೆ ನೆನಪಾಗುತ್ತಿರಬೇಕು. ಸುಮ್ಮನೆ ದಿಗಂತದತ್ತ ನೋಡುತ್ತಾರೆ. ಅಸಲು ತಲೆಯೇ ಎತ್ತದೆ ನಂಜುಂಡಸ್ವಾಮಿ ಮತ್ತು ಉಷಾ ಟೈಪು ಕುಟ್ಟುತ್ತಿದ್ದಾರೆ. ಇನ್ನು ನಮ್ಮ ವೀಣಾ ಕೊರೋನಾಗೆ ಕ್ಯಾರೇ ಎನ್ನದೆ ಅಫೀಸಿನವರಿಗೆಲ್ಲ ಕಾಫಿ ಹಂಚುತ್ತಾಳೆ. ಅವನು ಅಶ್ವಿನ್ ನೂರ ಇಪ್ಪತ್ತು ಕೆಜಿಗೆ ಕೆಲವೇ ಕೆಲವು ಗ್ರಾಮು ಕಡಿಮೆ ಇದ್ದಾನೆ. ಈ lock down ಮುಗಿಯುವ ಹೊತ್ತಿಗೆ ಒಂದಷ್ಟು ಗ್ರಾಂ ಕಡಿಮೆಯಾದಾನೆಂಬುದು ನಮ್ಮೆಲ್ಲರ ನಿರೀಕ್ಷೆ. ನಮ್ಮ ಆಶಿಕ್ ಮುಲ್ಕಿ ವಿರಹ ವೇದನೆಯಲ್ಲಿ  ಒಂದೇ ಸಮನೆ ಮಲೆಯಾಳಂ ವಿರಹ ಗೀತೆಗಳನ್ನು ಹಾಡತೊಡಗಿದ್ದಾನೆ.

ನಾನು ತರಕಾರಿ ಹಚ್ಚುತ್ತಿರುವುದು

ಅಲ್ಲಿ ಶಾಲೆಯಲ್ಲಿ ಮಕ್ಕಳಿಲ್ಲ. ಶಿಕ್ಷಕಿಯರೂ ಇಲ್ಲ. ನಮ್ಮ ಒಬ್ಬ ಶಿಕ್ಷಕಿ ಕಿಡ್ನಿ failure ಆಗಿ St.John’s ಆಸ್ಪತ್ರೆ ಸೇರಿದ್ದಾರೆ. ಅವರ ಮಗಳು ಮೋನಿಶಾ ಆಕಾಶ-ಭೂಮಿ ಏಕ ಮಾಡಿ ತನ್ನ ತಾಯಿಯನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಅವಳಿಗೆ ನಮ್ಮ ಆಡಳಿತ ಮಂಡಳಿ ಸಾಧ್ಯವಾದಷ್ಟೂ ಸಹಾಯ ಮಾಡುತ್ತಿದೆ. ಅದೆಲ್ಲದರ ಮೇಲೆ ನಮ್ಮೆಲ್ಲರೊಂದಿಗೆ ನಮ್ಮ ಪರಮ ವಾಚಾಳಿ ಹಕ್ಕಿಯಾದ ಸಾರಾ ಇದೆ. ಒಂದೇ ಸಮನೆ ಯಡಿಯೂರಪ್ಪನ ಹಾಗೆ ವಟಗುಡುತ್ತಿದೆ. ಉಳಿದಂತೆ ನಮ್ಮ ದೈತ್ಯಾಕಾರದ ನಾಯಿ ಸಿದ್ದು ಇದೆ. ಅದರೊಂದಿಗೆ ಭಜಗೋವಿಂದಂ ಇದೆ.

ಪಾಪ! ಮನೆಯ ಹಿರಿಯ ನರೇಂದರ್ ಭಾಯ್ ಮೋದಿ ‘ಚಪ್ಪಾಳೆ ಹೊಡೆಯಿರಿ’ ಎಂದ. ಮೂರ್ಖ ಜನ ರಸ್ತೆಗಿಳಿದು ಗುಂಪು ಗುಂಪಾಗಿ ಜಾಗಟೆ ಹೊಡೆದರು. ಈಗ ದೀಪ ಹಚ್ಚಿ ಅಂದಿದ್ದಾನೆ. ಅದೇನೇನು ಬೆಂಕಿ ಹಚ್ಚುತ್ತಾರೋ? ಭಗವಂತ ಬಲ್ಲ.

ಅಂದಹಾಗೆ, ಈ ಕೊರೋನಾ ಬರುತ್ತದೆ ಎಂದು ಅವನ್ಯಾವನೋ ನಾಸ್ಟ್ರಾಡಾಮಸ್ ಸಾವಿರಾರು ವರ್ಷ ಹಿಂದೆ ಹೇಳಿದ್ದನಂತೆ. ಹಾಗಂತ ಟಿವಿಗಳು ಹೇಳುತ್ತಿವೆ. ಈ ಮುಂಡೆಮಕ್ಕಳಿಗೆ ಹೋದ ವರ್ಷವೇ ಇದನ್ನು ಬೊಗಳಲಿಕ್ಕೆ ಏನಾಗಿತ್ತು ರೋಗ? ಅವನ್ಯಾವನೋ ಕೈವಾರ ತಾತಯ್ಯ ರೋಗ ಬರುತ್ತದೆ ಎಂದು ಭವಿಷ್ಯ ಬೊಗಳಿದ್ದನಂತೆ. ಇವರಿಗೆ ಮೊದಲೇ ಹೇಳಲಿಕ್ಕೆ ಏನು ರೋಗ?

ನಮಗೆ ಇಂಥದ್ದೇನೂ ಆಗಿಲ್ಲ. ಅವಳ ಪ್ರೀತಿ ನನಗೆ. ನನ್ನ ಪ್ರೀತಿ ಅವಳಿಗೆ. ನಮ್ಮಿಬ್ಬರ ಪ್ರೀತಿ ಹಿಮವಂತನಿಗೆ ನಿರಂತರವಾಗಿ ಹರಿಯುತ್ತಲೇ ಇದೆ. ಈ ಪ್ರೀತಿ ನಮ್ಮನ್ನೆಲ್ಲ ರಕ್ಷಿಸುತ್ತದೆ. ನಾವು ಎಷ್ಟೋ ವರ್ಷ ಸಂತಸದಿಂದ ಬದುಕುತ್ತೇವೆ.

-ನಿಮ್ಮವನು ಆರ್. ಬಿ.

Leave a Reply

Your email address will not be published.

*

Latest from ಖಾಸ್ । ಬಾತ್

Go to Top