ಹಾಯ್ ಬೆಂಗಳೂರ್

ಇದು ನಿಜವಾದ ಸಾಧನೆಯಲ್ಲವೇ?

ಇದು ನಿಜವಾದ ಸಾಧನೆಯಲ್ಲವೇ?

ನ್ಯೂಯಾರ್ಕ್ ಬಳಿಯ ಆಗರ್ಭ ಶ್ರೀಮಂತ ರೈತ ಕುಟುಂಬದಲ್ಲಿ ಜನಿಸಿದ ಫ್ರಾಂಕ್ಲಿನ್ ರೂಸ್‌ವೆಲ್ಟ್ ತನ್ನ ಬಾಲ್ಯವನ್ನು ತನ್ನ ತಂದೆಯ ಎಸ್ಟೇಟ್‌ನಲ್ಲಿ ಪ್ರಕೃತಿಯ ಮಡಿಲಲ್ಲಿ ಕಳೆದ. ಓದಿನಲ್ಲಿ ಅತ್ಯಂತ ಬುದ್ಧಿವಂತನಾಗಿದ್ದ. ಕಾಲೇಜು ಓದುತ್ತಿದ್ದಾಗ ಆಗಿನ ಅಮೆರಿಕಾದ ಅಧ್ಯಕ್ಷ ಹಾಗೂ ಈತನ ಹತ್ತಿರದ ಸಂಬಂಧಿ ಥಿಯೋಡೋರ್ ರೂಸ್‌ವೆಲ್ಟ್ ಸಂಪರ್ಕಕ್ಕೆ ಬಂದ ಫ್ರಾಂಕ್ಲಿನ್ ಆತನ ವಿಚಾರಧಾರೆಗಳಿಂದ ಆಕರ್ಷಿತನಾದ. ವಿಶೇಷವಾಗಿ ಅಮೆರಿಕಾದ ಬಡ ವರ್ಗಕ್ಕೆ, ಸ್ಲಂ ಜನಗಳಿಗೆ ನೆರವು ನೀಡಲು ರಾಜಕಾರಣ ಸೂಕ್ತ ವೇದಿಕೆಯೆಂದು ಅರಿತ.

ಇದೇ ವೇಳೆಗೆ ಎಲೆನಾರ್ ರೂಸ್‌ವೆಲ್ಟ್ ಎಂಬಾಕೆಯನ್ನು ಮದುವೆಯಾದ. ಈಕೆ ಕೂಡ ಸಮಾಜದ ಕೆಳಸ್ಥರದ ಜನರ ಬದುಕಿನ ಬಗ್ಗೆ ಕಾಳಜಿ ಹೊಂದಿದ್ದರಿಂದ ಸೆನೆಟ್ ಚುನಾವಣೆಗೆ ನಿಲ್ಲಲು ಒತ್ತಾಸೆಯಾದಳು. ಹಲವಾರು ಬಾರಿ ಚುನಾವಣೆ ಗೆದ್ದು ಜನರ ಪ್ರೀತಿಯ ನಾಯಕನಾಗಿದ್ದ ಫ್ರಾಂಕ್ಲಿನ್‌ಗೆ 1921ರಲ್ಲಿ ಆಘಾತವೊಂದು ಕಾದಿತ್ತು. ಆತ ಪೋಲಿಯೋ ಪೀಡಿತನಾದ, ತಂದೆ-ತಾಯಿಗಳು ಮನನೊಂದು ರಾಜಕೀಯ ತೊರೆದು ಎಸ್ಟೇಟ್‌ಗೆ ಬರುವಂತೆ ಒತ್ತಾಯಿಸಿದರು, ಪತ್ನಿ ಅದಕ್ಕೆ ಒಪ್ಪಲಿಲ್ಲ. ತನ್ನ ಗಂಡ ರಾಜಕೀಯದಲ್ಲೆ ಮುಂದುವರಿಯಬೇಕೆಂಬ ಆಸೆ ಆಕೆಯದಾಗಿತ್ತು. ವೀಲ್ ಛೇರ್‌ನಲ್ಲಿ ಗಂಡನನ್ನು ಕುಳ್ಳಿರಿಸಿ ರಾಜಕೀಯ ಸಭೆ ಸಮಾರಂಭಗಳಿಗೆ ಕರೆದೊಯ್ದು ಫ್ರಾಂಕ್ಲಿನ್‌ನನ್ನು ರಾಜಕಾರಣದಲ್ಲಿ ಸಕ್ರಿಯವಾಗಿರಿಸಿದಳು. ಇದೇ ಕಾರಣಕ್ಕೆ ಈತ 1933ರಲ್ಲಿ ಮೊದಲ ಬಾರಿಗೆ ಅಮೆರಿಕಾದ ಅಧ್ಯಕ್ಷನಾದ. ಜೊತೆಗೆ ಇತಿಹಾಸದಲ್ಲಿ ಸತತವಾಗಿ ನಾಲ್ಕು ಬಾರಿ ಅಧ್ಯಕ್ಷನಾದ ಏಕೈಕ ವ್ಯಕ್ತಿ ಎಂಬ ಖ್ಯಾತಿಗೂ ಪಾತ್ರನಾದ. ಪೋಲಿಯೋ ಪೀಡಿತನಾಗಿದ್ದರೂ, ಎರಡನೇ ಮಹಾಯುದ್ಧದಲ್ಲಿ ಕರಿನೆರಳಿನ ವಿಷಾದ ಛಾಯೆ ಇದ್ದಾಗ ಅಮೆರಿಕಾವನ್ನು ಮುನ್ನಡೆಸಿದ ಕೀರ್ತಿಯೂ ಈತನಿಗೆ ಸಂದಿದೆ.

Leave a Reply

Your email address will not be published. Required fields are marked *