ದೊಡ್ಡವರೆಂಬ ಕಿಂಚಿತ್ತು ಗೌರವವಾದರೂ ಬೇಡವೇ ಸುಧಾಕರ್?

in ಹಲೋ ಎಡಿಟೋರಿಯಲ್

ಹಲೋ

ಕಳೆದ ವಾರ ರಾಜ್ಯ ವಿಧಾನಸಭೆಯಲ್ಲಿ ನಮ್ಮ ಸಂವಿಧಾನದ ಆಶಯದ ಕುರಿತು ಚರ್ಚೆ ನಡೆದಿತ್ತು. ಅಂತಹದ್ದೊಂದು ಚರ್ಚೆ ನಡೆಯುತ್ತಿರುವುದು ನೋಡಿ ನನಗೆ ಅಚ್ಚರಿಯಾಗಿತ್ತು. ಈ ಹಿಂದೆ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ‘‘ನಾವು ರಚಿಸಿದ ಸಂವಿಧಾನವನ್ನು ಪಾಲಿಸುವ ವ್ಯಕ್ತಿ ಉತ್ತಮನಾಗಿದ್ದರೆ ಸಂವಿಧಾನದ ಆಶಯಗಳು ಕೂಡ ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತವೆ. ಅದೇ ದುರ್ಬಲ ವ್ಯಕ್ತಿಯ ಕೈಗೆ ಸಂವಿಧಾನ ಸಿಕ್ಕಿದರೆ ಅದು ಅವನತಿಯ ಅಂಚಿಗೆ ಸಾಗುತ್ತದೆ” ಎಂದು ಹೇಳಿದ್ದರು. ಇಲ್ಲಿ ನಾನು ಅವರ ಮಾತನ್ನು ಉಲ್ಲೇಖಿಸಲು ಕಾರಣವಿದೆ.

ಸದನದಲ್ಲಿ ಸಂವಿಧಾನದ ಆಶಯದ ಕುರಿತು ಚರ್ಚೆಯಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಆಗಲೇ ನಮ್ಮ ರಾಜ್ಯ ವಿಧಾನಸಭೆಯ ಘನತೆ, ಅದರ ಗಾಂಭೀರ್ಯ ಮತ್ತು ಗೌರವಕ್ಕೆ ಚ್ಯುತಿ ತರುವಂತಹ ಘಟನೆ ನಡೆದಿದೆ. ಮೊನ್ನೆ ಸದನದಲ್ಲಿ ನಡೆದ ಚರ್ಚೆ ಮತ್ತು ವಾಗ್ವಾದವನ್ನು ನೋಡಿದ ನನಗೆ ನಮ್ಮ ವಿಧಾನಸಭೆಯ ಗಾಂಭೀರ್ಯ ಮಾಯವಾಯಿತೇನೋ ಅಂತ ಅನಿಸುತ್ತಿದೆ. ಇವತ್ತಿಗೂ ಸದನದಲ್ಲಿ ಎಚ್.ಕೆ.ಪಾಟೀಲ್, ರಮೇಶ್ ಕುಮಾರ್‌ರಂಥ ಅತ್ಯುತ್ತಮ ಸಂಸದೀಯ ಪಟುಗಳಿದ್ದಾರೆ. ಅವರ ಎದುರಿನಲ್ಲೇ ಡಾ. ಸುಧಾಕರ್ ಆ ರೀತಿ ಮಾತನಾಡಿದ್ದು ತಪ್ಪು.

ಇಲ್ಲಿ ನಾನು ರಮೇಶ್ ಕುಮಾರ್‌ರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ರಮೇಶ್ ಕುಮಾರ್ ಕೆಲವೊಮ್ಮೆ ಸದನದಲ್ಲಿ ಗಂಭೀರ ವಿಷಯದ ಕುರಿತು ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾಗುವುದು ಸಹಜ. ಅಂತಹ ವೇಳೆ ಅವರು ಅಸಂಸದೀಯ ಪದವನ್ನು ಬಳಸಿದ್ದರೆ ಅದನ್ನು ಸ್ಪೀಕರ್ ಪೀಠದ ಗಮನಕ್ಕೆ ತಂದು ಕಡತದಿಂದ ತೆಗೆಸಬಹುದಾಗಿತ್ತು ಅಥವಾ ಹಾಗೆ ಮಾತನಾಡಿದ ವ್ಯಕ್ತಿಯು ಬೇಷರತ್ತಾಗಿ ವಿಷಾದ ವ್ಯಕ್ತಪಡಿಸುವಂತೆ ಒತ್ತಾಯ ಮಾಡಬಹುದಾಗಿತ್ತು. ಇಂಥ ನಡವಳಿಕೆಯನ್ನು ನಾನು ಬಹಳ ಹಿಂದಿನಿಂದಲೂ ಗಮನಿಸುತ್ತಾ ಬಂದಿದ್ದೇನೆ. ಆದರೆ, ಅದೆಲ್ಲಾ ಬಿಟ್ಟು ಸಚಿವ ಡಾ. ಕೆ.ಸುಧಾಕರ್ ರಮೇಶ್ ಕುಮಾರ್‌ರಂಥ ಹಿರಿಯರಿಗೆ ತುಂಬಿದ ಸದನದಲ್ಲಿ ಏಕವಚನದಲ್ಲಿ ಮಾತನಾಡಿದ್ದು ಖಂಡನೀಯ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂಥವರಿಗೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಕಿವಿ ಹಿಂಡುವ ಅಗತ್ಯವಿದೆ.

ನಮ್ಮ ರಾಜ್ಯದ ಸಂಸದೀಯ ವ್ಯವಸ್ಥೆಗೆ ಅದರದೇ ಆದ ಇತಿಹಾಸವಿದೆ. ಎಸ್.ನಿಜಲಿಂಗಪ್ಪ, ಸಿದ್ದವೀರಪ್ಪ, ಶಾಂತವೇರಿ ಗೋಪಾಲಗೌಡರು, ದೇವರಾಜ ಅರಸು, ಕೆ.ವಿ.ಶಂಕರೇಗೌಡ, ವೀರೇಂದ್ರ ಪಾಟೀಲ್, ಎಂ.ಎಸ್.ರಾಜಶೇಖರಮೂರ್ತಿ, ಅಬ್ದುಲ್ ನಜೀರ್ ಸಾಬ್, ಅಜೀಜ್ ಸೇಠ್, ಎಸ್ಸೆಂ ಕೃಷ್ಣ, ಜಾಲಪ್ಪ, ಸಿಂಧ್ಯಾ, ಎಂ.ಪಿ.ಪ್ರಕಾಶ್ ಅಷ್ಟೇ ಏಕೆ ರೈತ ಸಂಘದ ಪ್ರೊಫೆಸರ್ ನಂಜುಂಡಸ್ವಾಮಿ, ಮಾಧುಸ್ವಾಮಿ, ಶ್ರೀರಾಮರೆಡ್ಡಿ ಮತ್ತು ವಾಟಾಳ್ ನಾಗರಾಜ್‌ರಂತಹ ನಾಯಕರದ್ದು ಒಂದು ತೂಕವಾದರೆ ರಾಮಕೃಷ್ಣ ಹೆಗಡೆ, ದೇವೆಗೌಡರು, ಜೆ.ಎಚ್.ಪಟೇಲ್‌ರದ್ದು ಮತ್ತೊಂದು ತೂಕ ಎಂಬುದು ವಿಧಾನ ಮಂಡಲದ ಉಭಯ ಸದನಗಳ ಕಾರ್ಯ ಕಲಾಪಗಳ ಇತಿಹಾಸ ಕೆದಕಿದಾಗ ನಮಗೆ ಅರಿವಾಗುತ್ತದೆ.

ಬಹುಶಃ 1999ಕ್ಕೆ ಇಂಥ ನಾಯಕರ ಉಪಸ್ಥಿತಿ ಕೊನೆಯಾಯಿತೇನೋ ಅಂತ ಅನ್ನಿಸುತ್ತದೆ. ದೇವೆಗೌಡ ಮತ್ತು ಜೆ.ಎಚ್.ಪಟೇಲರ ಅವಧಿಯಲ್ಲೇ ಇಂಥ ಘಟಾನುಘಟಿ ಸಂಸದೀಯ ಪಟುಗಳಿದ್ದರು. ಆಗೆಲ್ಲಾ ಜನಸೇವೆ ಮಾಡುವ ತುಡಿತ ಹೊಂದಿರುವ ನಾಯಕರು ಶಾಸಕರಾಗುತ್ತಿದ್ದರು. ಅವರು ಉತ್ತಮ ನಡವಳಿಕೆ ಹಾಗೂ ಕ್ರೀಯಾಶೀಲತೆಯಿಂದ ಸದನದಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಮೂಲಕ ಇಡೀ ಸದನದ ಗಾಂಭೀರ್ಯವನ್ನು ಹೆಚ್ಚಿಸುತ್ತಿದ್ದರು. ಆದರೆ ಯಾವಾಗ ಜಾತಿಯ ಜೊತೆಗೆ ಹಣದ ಥೈಲಿ ಕೆಲಸ ಮಾಡತೊಡಗಿತೋ

ಅಂದಿನಿಂದ ನಮ್ಮ ರಾಜ್ಯದ ಸಂಸದೀಯ ವ್ಯವಸ್ಥೆ ಕುಸಿಯುತ್ತಾ ಬಂದಿತು.

ಇಂಥದ್ದೊಂದು ವ್ಯವಸ್ಥೆಗೆ ಜಾಗತೀಕರಣ ಕಾರಣವೆಂಬುದು ನನ್ನ ಸ್ಪಷ್ಟ ಅನಿಸಿಕೆ. ನೀವೊಮ್ಮೆ 2004ರ ಹಿಂದಿನ ರಾಜಕಾರಣವನ್ನು ನೋಡಿ. ಆಗೆಲ್ಲಾ ಶಾಸಕರಾಗಿ ಗೆದ್ದು ಬರುವವರಿಗೆ ಕಾನೂನು ಪದವಿಯ ಅರ್ಹತೆ ಇತ್ತು. ಇಲ್ಲದಿದ್ದರೆ ಪ್ರಜ್ಞಾವಂತಿಕೆಯಾದರೂ ಇರುತ್ತಿತ್ತು. ಅಂಥವರನ್ನು ಜನರೇ ಕರೆತಂದು ಚುನಾವಣೆಗೆ ನಿಲ್ಲಿಸಿ ಕೈಯಿಂದ ದುಡ್ಡು ಹಾಕಿ ಗೆಲ್ಲಿಸಿ ಕಳಿಸುತ್ತಿದ್ದರು. ತೊಂಬತ್ತರ ದಶಕದಲ್ಲೂ ಇದು ನಡೆದಿದೆ. ರೈತ ಸಂಘದ ಅಭ್ಯರ್ಥಿಗಳನ್ನು ಜನರೇ ಓಟಿನ ಜೊತೆಗೆ ಹಣ ಕೊಟ್ಟು ಗೆಲ್ಲಿಸಿದ್ದಾರೆ. ಆದರೆ ಜಾಗತೀಕರಣದ ಪ್ರಭಾವ ನಮ್ಮ ಚುನಾವಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದ್ದಂತೆ ಇಡೀ ವ್ಯವಸ್ಥೆಯೇ ಬುಡಮೇಲಾಗಿ ಹೋಯಿತು.

ಉದಾಹರಣೆಗೆ ನಮ್ಮ ಚುನಾವಣಾ ಆಯೋಗವನ್ನೇ ತೆಗೆದುಕೊಳ್ಳಿ. ಅದು ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಇಪ್ಪತ್ತೆಂಟು ಲಕ್ಷ ರುಪಾಯಿ ಖರ್ಚು ಮಾಡಬೇಕೆಂದು ನಿಗದಿಪಡಿಸಿದೆ. ನೀವೊಮ್ಮೆ ಯೋಚಿಸಿ. ಇವತ್ತಿನ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಯಾವುದೇ ಒಬ್ಬ ಅಭ್ಯರ್ಥಿ ಇಪ್ಪತ್ತೆಂಟು ಲಕ್ಷ ಖರ್ಚು ಮಾಡಿ ಚುನಾವಣೆ ಎದುರಿಸಲು ಸಾಧ್ಯವೇ? ಏನಿಲ್ಲವೆಂದರೂ ಇಂದು ಇಪ್ಪತ್ತೈದು ಕೋಟಿ ಸುರಿಯಲು ಸಿದ್ಧನಿರಬೇಕು.

ಹಾಗಾದರೆ ಇಂಥ ವ್ಯವಸ್ಥೆಯಲ್ಲಿ ಮೌಲ್ಯಗಳಿಗೆ ಬೆಲೆ ಕೊಡುವ ವ್ಯಕ್ತಿಗಳು ಅದ್ಹೇಗೆ ತಾನೇ ಬಂದಾರು? ಗೆದ್ದು ಬರುವವರೆಲ್ಲ ರಿಯಲ್ ಎಸ್ಟೇಟ್ ಧಣಿಗಳು, ಗಣಿ ಮತ್ತು ಕ್ಯಾಪಿಟೇಷನ್ ಕುಳಗಳು, ಬಂಡವಾಳಶಾಹಿಗಳು. ಹೀಗೆ ಬಂಡವಾಳ ಹಾಕಿ ಗೆದ್ದು ಬಂದವರಿಂದ ನಾವು ಅದ್ಹೇಗೆ ತಾನೇ ಮೌಲ್ಯಯುತ ರಾಜಕಾರಣವನ್ನು ನಿರೀಕ್ಷಿಸಲು ಸಾಧ್ಯ? ಅವರದೇನಿದ್ದರೂ ಚುನಾವಣೆಯಲ್ಲಿ ಹಾಕಿದ ಬಂಡವಾಳವನ್ನು ವಾಪಸ್ಸು ತೆಗೆಯುವುದಷ್ಟೇ ಕೆಲಸ.

ಇಂಥ ವ್ಯವಸ್ಥೆಯ ಕೂಸೇ ಮೊನ್ನೆ ಸದನದಲ್ಲಿ ರಮೇಶ್ ಕುಮಾರ್‌ರಂಥ ಹಿರಿಯರ ಮೇಲೆ ಏಕವಚನ ಪ್ರಯೋಗ ಮಾಡಿದ್ದು. ಡಾ. ಕೆ.ಸುಧಾಕರ್ ಕೂಡ ಕ್ಯಾಪಿಟೇಷನ್ ದಂಧೆಯಿಂದ ಬಂದವರೇ. ಅವರು ಈ ಹಿಂದೆ ರಾಜಿನಾಮೆ ನೀಡಿದಾಗ ರಮೇಶ್ ಕುಮಾರ್ ಸ್ಪೀಕರ್ ಸ್ಥಾನದಲ್ಲಿದ್ದರು. ತನ್ನನ್ನು ಅನರ್ಹಗೊಳಿಸಿದರು ಎಂಬ ಕಾರಣಕ್ಕೆ ಸಿಟ್ಟಾದರೆ ಅದು ನಮ್ಮ ಸಂಸದೀಯ ವ್ಯವಸ್ಥೆಗೆ ಕಳಂಕ. ಸ್ಪೀಕರ್ ಕಾಗೇರಿ ಇನ್ನು ಮುಂದಾದರೂ ಸದನದಲ್ಲಿ ಇಂಥ ನಡವಳಿಕೆಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಲಿ.

       -ರವಿ ಬೆಳಗೆರೆ

Leave a Reply

Your email address will not be published.

*

Latest from ಹಲೋ ಎಡಿಟೋರಿಯಲ್

Go to Top