ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ: : ದರಿದ್ರ ಹಣ, ಪಾಪಿ ಹಸಿವು

  • ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ದರಿದ್ರ ಹಣ, ಪಾಪಿ ಹಸಿವು

ಸುಮಾರು ನಾಲ್ಕೈದು ವರ್ಷಗಳ ಹಿಂದೆ ನಾನು ಮನೆ ಬಿಟ್ಟು, ದುಡಿಯಬೇಕು ಎಂಬ ಕಾರಣಕ್ಕಾಗಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿದ್ದಾಗ ನಡೆದ ಘಟನೆ.

ಆಗಷ್ಟೇ ನನ್ನನ್ನು ಹೊಸಪೇಟೆ ಬಸ್‌ಸ್ಟ್ಯಾಂಡಿಗೆ ಹೊಂದಿಕೊಂಡಿರುವ ಮಯೂರ ಲಾಡ್ಜ್‌ನಿಂದ ಹೊರಹಾಕಿದ್ದರು. ಲಾಡ್ಜ್ ಮುಂದೆ ಒಂದು ಎಸ್ಟಿಡಿ ಬೂತ್ ಇದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಪೋಲಿಯೋ ಪೀಡಿತ ಹುಡುಗನೊಬ್ಬನ ಸಹಾಯದಿಂದ ನನ್ನ ಲಗೇಜು ಬೂತ್ ಸೇರಿತ್ತು. ಕೈಯಲ್ಲಿ ಚಿಕ್ಕಾಸೂ ಇರಲಿಲ್ಲ: ಸಾವಿರದ ನೂರರ ಮೊಬೈಲೊಂದರ ಹೊರತಾಗಿ. ಬಸ್ಟ್ಯಾಂಡ್‌ನಲ್ಲೇ ನನ್ನ ಎಲ್ಲಾ ಕಾರ್ಯಕ್ರಮಗಳೂ ಜರುಗುತ್ತಿತ್ತು. ಊರಿಗೆ ಹಿಂತಿರುಗಲು ಮನಸ್ಸಿಲ್ಲ. ಕೆಲಸಗಳೂ ಸರಿಯಾಗಿ ನಡೆಯುತ್ತಿರಲಿಲ್ಲ. ಆಗ ಹೊಸಪೇಟೆ, ಸಂಡೂರು, ಬಳ್ಳಾರಿಯ ಭಾಗದಲ್ಲಿ ಕಬ್ಬಿಣದ ಅದಿರಿಗೆ ಚಿನ್ನದ ಬೆಲೆ ಬಂದಿತ್ತು. ನನಗಿನ್ನೂ ಆ ವ್ಯವಹಾರ ಹೊಸದು. ಸಾವಿರ ಆಸೆಗಳನ್ನು ಇಟ್ಟುಕೊಂಡು ಬಂದ ನಾನು, ಕಮೀಷನ್ ಏಜೆಂಟ್‌ನಂತೆ ಕೆಲಸ ಮಾಡುತ್ತಿದ್ದೆ. ಬಂದು ಮೂರು ತಿಂಗಳಾಗಿತ್ತು. ಇದ್ದ ಬದ್ದ ಹಣವೆಲ್ಲಾ ಖಾಲಿಯಾಗಿ ಫುಟ್‌ಪಾತ್‌ಗೆ ಬಂದು ನಿಂತಿದ್ದೆ.

ಮೂರ್‍ನಾಲ್ಕು ದಿನಗಳ ಸತತ ಉಪವಾಸ ನನ್ನನ್ನು ಕಂಗೆಡಿಸಿ, ಊರಿಗೆ ಹಿಂತಿರುಗುವಂತೆ ಪ್ರೇರೇಪಿಸಿತ್ತು. ಆ ದಿನ ಇನ್ನಿಲ್ಲದ ಸುಸ್ತಿನಿಂದ ಯಾವುದಾದರೂ ಲಾರಿ ಹಿಡಿದು ಊರು ಸೇರಲು ತೀರ್ಮಾನಿಸಿದೆ. ಮಯೂರ ಲಾಡ್ಜ್ ಹಿಂದಿರುವ ಗಣಪತಿ ದೇವಸ್ಥಾನದಲ್ಲಿ ಇಡೀ ದಿನ ಕಾಲ ಕಳೆದು ಬಿಟ್ಟೆ. ಸಂಜೆ ಹೊತ್ತಿಗೆ ಸೀದಾ ಎಸ್ಟಿಡಿ ಬೂತ್‌ಗೆ ಬಂದವನೇ ಗೆಳೆಯನಿಗೆ ಬರುವೆನೆಂದು ಹೇಳಿ ಲಗೇಜು ಪಡೆದು ಇನ್ನೂ ಹತ್ತು ಹೆಜ್ಜೆ ಇಟ್ಟಿರಲಿಲ್ಲ, ನನ್ನ ಮೊಬೈಲ್ ರಿಂಗ್ ಆಯ್ತು. ಮಂಗಳೂರಿನ ನನ್ನ client ರೆಹಮಾನ್ ಕರೆ ಮಾಡಿದ್ದರು. ಅವರು ಹೇಳಿದ್ದಿಷ್ಟೆ “ನಾಗೂ, ಏನ್ಮಾಡ್ತಿಯೋ ಗೊತ್ತಿಲ್ಲ, ಬೆಳಗ್ಗೆ ಐದು ಗಂಟೆ ಒಳಗೆ ಬೇಲೆಕೆರೆ ಪೋರ್ಟ್‌ಗೆ ಒಂದು ಸಾವಿರ ಟನ್ ೬೨ ಗ್ರೇಡಿನ ಅದಿರು ಲೋಡ್ ಮಾಡಬೇಕು. ಆಗುತ್ತಾ?” ಅಂದರು. `ಆಗುತ್ತೆ’ ಅಂದೆ. ಸೀದಾ ಅವರು ಉಳಿದುಕೊಂಡಿದ್ದ ಪ್ರಿಯದರ್ಶಿನಿ ಲಾಡ್ಜ್‌ಗೆ ಹೋದೆ. ಕೈಗೆ ನಲವತ್ತೆರಡು ಲಕ್ಷ ರುಪಾಯಿ, ಒಂದು Invoice ಪುಸ್ತಕ ಹಾಗೂ ಕಾರನ್ನು ತೆಗೆದುಕೊಂಡು ಹೋಗಲು ಡ್ರೈವರ್ ಸಮೇತ ಕಳಿಸಿದರು. ತಲೆ ತಿರುಗುತ್ತಿತ್ತು. ಒಂದೆಡೆ, ಹಸಿವು! ಇನ್ನೊಂದೆಡೆ ಆತ್ಮವಿಶ್ವಾಸ! ಹಸಿವು ಮರೆತ್ಹೋಯ್ತು!

ಆಗಲೇ ರಾತ್ರಿ ಎಂಟೂವರೆ. ಸರಿ, ಲಾರಿಗಳನ್ನು ಹೊಂದಿಸಿ, permit ಹೊಂದಿಸಿ ಲೋಡ್ ಮುಗಿಸಿದಾಗ ಬೆಳಗಿನ ಜಾವ ಐದು ಗಂಟೆ. ಸೀದಾ A1 ಡಾಬಾದಿಂದ ಸ್ವಲ್ಪ ಮುಂದೆ ಬಂದು ಕಾರು ನಿಲ್ಲಿಸಿ, ಟೀ ಹಾಗೂ ಬ್ರೆಡ್ ತೆಗೆದುಕೊಂಡೆ. ತಿನ್ನೋಕೇ ಆಗ್ತಿಲ್ಲ. ಹೊಟ್ಟೆ ತುಂಬಾ ನೀರು ಕುಡಿದೆ. ಎಲ್ಲಾ ವಾಂತಿ ಆಯ್ತು. ಬ್ಯಾಗಲ್ಲಿ ನನ್ನ ಅವತ್ತಿನ ದುಡಿಮೆ ಹಣ ಸಾಕಷ್ಟಿದೆ. ಅನ್ನ ಸೇರ್‍ತಾ ಇಲ್ಲ. ಈ ಹಣ ಇಲ್ಲದಾಗ ಹಸಿವು ಹುಚ್ಚು ನಾಯಿಯಂತೆ ಅಟ್ಟಿಸಿಕೊಂಡು ಬರುತ್ತೆ, ಹಣ ಇದ್ದಾಗ ತೆಪ್ಪಗಿರುತ್ತೆ : ಸಾಕಿದ ನಾಯಿ ಥರ.

ನನ್ನ ಬಳಿ ಹಣ ಇದೆ. At the same time ನನಗೆ ಬ್ರೆಡ್ಡು ಮತ್ತು ಟೀ (ಅನ್ನ) ಬೇಕಿದೆ. ಬಹುಶಃ ನನ್ನ ನಾಲ್ಕು ದಿನದ ಉಪವಾಸ ಇದ್ದ ಮನಸ್ಸು ಎರಡನ್ನೂ ಒಪ್ಪಿಕೊಳ್ಳಲಿಲ್ಲ. ಥೂ ದರಿದ್ರ ಹಣ, ಪಾಪಿ ಹಸಿವು.

-ನಾಗಕುಮಾರ ಚೌಕಿಮಠ, ಚಿಕ್ಕನಾಯ್ಕನಹಳ್ಳಿ

Leave a Reply

Your email address will not be published. Required fields are marked *