ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ: ಸ್ನೇಹದ ಮುಂದೆ ಬಡ್ಡಿ ಬರುತ್ತಾ?

  • ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

“ಸ್ನೇಹದ ಮುಂದೆ ಬಡ್ಡಿ ಬರುತ್ತಾ?”

ನನ್ನ ಆತ್ಮೀಯ ಸ್ನೇಹಿತನೊಬ್ಬ ಶಿವುಕುಮಾರ್ ಅಂತ ಇದ್ದಾನೆ. ನನಗೆ ವಿದ್ಯೆ ಕಲಿಸಿದ ಮೇಷ್ಟ್ರ ಮಗ. ಒಂದನೆಯ ತರಗತಿಯಿಂದ ಹತ್ತನೆಯ ತರಗತಿವರೆಗೂ ಒಟ್ಟಿಗೆ ಓದಿದ ಗೆಳೆತನ. ಅವನು-ನಾನು ತುಂಬಾ ಆತ್ಮೀಯವಾಗಿ, ಒಂದೇ ತಾಯಿಯ ಮಕ್ಕಳಂತೆ ಬೆಳೆದವು. ಅವರ ತಂದೆ ಅನುಕೂಲಸ್ಥರಾದ್ದರಿಂದ ಸಹಜವಾಗಿ ಅವನ ಕೈಗೆ ಹಣ ಸೇರಿತ್ತು. ಆಗ ನನಗೆ ತುರ್ತಾಗಿ ಇಪ್ಪತ್ತು ಸಾವಿರ ರುಪಾಯಿ ಬೇಕಾಗಿತ್ತು.

ಆತ ನನಗೆ ಇಪ್ಪತ್ತು ಸಾವಿರ ರುಪಾಯಿ ಕೊಟ್ಟ; ಮೂರು ಪರ್ಸೆಂಟ್ ಬಡ್ಡಿಗೆ. ಆಗ ನನ್ನ-ಅವನ ಗೆಳೆತನಕ್ಕಿಂತ ಆ ಬಡ್ಡಿ ಅವನ ಸ್ನೇಹ ಮಾಡಿತ್ತು. ತಿರುಗಿಸಿ ಕೊಡಲು ಒಂದು ವರ್ಷವಾಯಿತು. ಅವನಿಗೆ ಅನುಮಾನದ ಹುಳ ಕೊರೆಯಲಾರಂಭಿಸಿತು. ಸ್ನೇಹಕ್ಕೆ ಗಂಟುಬಿದ್ದ ಕಾಲ ಬದಲಾಯಿತು. ಅವನಿಗೆ ಹಣವೇ ಪ್ರಾಮುಖ್ಯವಾಯಿತು.

ಒಂದು ದಿನ ರಾತ್ರಿ ಹತ್ತಕ್ಕೆ ಮನೆಗೆ ಬಂದ ಅವನು ದುಡ್ಡಿಗೆ ಪೀಡಿಸಲಾರಂಭಿಸಿದ. ನಾನು ನಿಸ್ಸಹಾಯಕನಾಗಿದ್ದೆ. ಆತ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ನಾನು ತಡೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಗ್ಯಾರಂಟಿಗೆ ಬಾಂಡ್ ಪೇಪರ್ ಕೇಳಿದ. ಅವನು ಕೇಳಿದ ರೀತಿಯಲ್ಲೇ ಮಾರನೇ ದಿನ ಬೆಳಗ್ಗೆ ಇಪ್ಪತ್ತು ರುಪಾಯಿ ಬಾಂಡ್ ಪೇಪರ್ ತರಿಸಿ ಅದರಲ್ಲಿ “ನನ್ನ  ಸ್ನೇಹಿತನಾದ ಶಿವುಕುಮಾರ್‌ಗೆ ಹಣ ಹಿಂದಿರುಗಿಸದೆ ಆಕಸ್ಮಾತ್ ನಾನು ಸತ್ತು ಹೋದರೆ ನನ್ನ ಹೆಸರಿಗೆ ಇರುವ ಮನೆಯನ್ನು ಅವನ ಹೆಸರಿಗೆ ಬರೆದು ಕೊಡಿ” ಎಂದು ಬರೆಸಿಕೊಟ್ಟೆ. ದೇವರ ದಯೆಯಿಂದ ನನಗೆ ಬರುವ ಹಣ ಬಂತು. ನಾನು ಅವನಿಗೆ ಕೊಡಬೇಕಾದ ಹಣ + ಬಡ್ಡಿ ಎರಡೂ ಕೊಟ್ಟೆ. ಆ ಬಾಂಡ್ ಪೇಪರ್ ತರಿಸಿಕೊಂಡೆ. ಹಲವು ದಿನಗಳು ಕಳೆದವು. ನನ್ನ ಪರಿಸ್ಥಿತಿ ಅವನಿಗೆ ಬಂತು. ಅವನ ಕಷ್ಟಕ್ಕಾಗಿ ಆತ ನನ್ನ ಹತ್ತಿರ ಬಂದು ಹಣ ಕೇಳಿದ. ನಾನು ಬಾಂಡ್ ಕೇಳಲಿಲ್ಲ. ಹಣ ಕೊಟ್ಟೆ. ಜೊತೆಗೆ ಬಡ್ಡಿಯೂ ಕೇಳಲಿಲ್ಲ. ಸುಮಾರು ದಿನಗಳ ನಂತರ ಹಣ ತಂದು ಕೊಟ್ಟ. ಆಗ ನಾನು ಬಾಂಡಂತೂ ಕೇಳಲಿಲ್ಲ ಬಡ್ಡಿಯನ್ನಾದರೂ ಕೊಡಪ್ಪ ಅಂತ ತಮಾಷೆಗೆ ಕೇಳಿದೆ. ಆತ ಕೊಟ್ಟಿದ್ದರೂ ನಾನು ತೆಗೆದುಕೊಳ್ಳುತ್ತಿರಲಿಲ್ಲ. ಆತ ಸುಮ್ಮನೆ ನಕ್ಕ. ಆದರೆ ಅವನು ನನ್ನಲ್ಲಿ ಆ ನಗು ಮರೆ ಮಾಡಿದ್ದ. ಆಗ ಅವನಿಗೆ ಅರ್ಥವಾಗಿರಬೇಕು “ಹಣಕ್ಕಿಂತ ಸ್ನೇಹವೇ ಮುಖ್ಯ” ಎಂದು.

ಆ ನನ್ನ ಸ್ನೇಹಿತ ಮೊನ್ನೆ ಫೋನ್ ಮಾಡಿದ್ದ. ನನಗೆ ನೀನೇ ಆದರ್ಶ ದೇವರ ಸಮಾನ ಎಂದು. ನಾನು ಯಾವಾಗಲಾದರೂ ಸೂಟ್‌ಕೇಸ್ ತೆರೆದರೆ ಅವನು ಬರೆಸಿಕೊಂಡ ಬಾಂಡ್ ಕೈಗೆ ಸಿಗುತ್ತದೆ. ಹಾಗೇ ಒಮ್ಮೆ ಅದರ ಮೇಲೆ ಕಣ್ಣಾಡಿಸಿ ತೆಗೆದಿಡುತ್ತೇನೆ : ಅವನ ನೆನಪಿಗಾಗಿ.

-ಇ.ಎಚ್. ಬಸವರಾಜ್, ಶಿಕಾರಿಪುರ

Leave a Reply

Your email address will not be published. Required fields are marked *