ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ: ಹಾಗೆ ಕೊಟ್ಟ ಹಣಕ್ಕೆ ಬೆಲೆ ಎಷ್ಟು?

ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ಹಾಗೆ ಕೊಟ್ಟ ಹಣಕ್ಕೆ ಬೆಲೆ ಎಷ್ಟು?

ಸುಮಾರು ನಲವತ್ತು-ನಲವತ್ತೈದು ವರ್ಷಗಳ ಹಿಂದಿನ ಮಾತು. ಆಗ ತಾನೇ ನಾನು ಪಿಯುಸಿ ಪಾಸಾಗಿದ್ದೆ. ಡಾಕ್ಟರ್ ಆಗಬೇಕೆಂಬ ಮಹದಾಸೆ ಮನದಲ್ಲಿತ್ತು. ಆದರೆ ಮನೆಯಲ್ಲಿ ಕಡು ಬಡತನ! ಕುಲ-ಬಾಂಧವರ ಫ್ರೀ ಹಾಸ್ಟೆಲ್‌ನಲ್ಲಿ ಸೀಟು ಸಿಕ್ಕಿದ್ದರಿಂದ ಪಿಯುಸಿ ಮಾಡುವ ಅವಕಾಶ ಸಿಕ್ಕಿತ್ತು. ಮೆಡಿಕಲ್ ಸೀಟ್‌ಗಾಗಿ ಇಂಟರ್‌ವ್ಯೂ ಬಂದಿತ್ತು. ಬಳ್ಳಾರಿಗೆ ಹೋಗಿ ಬರಲು ಐವತ್ತು ರುಪಾಯಿ ಬೇಕಾಗಿತ್ತು. ಬೇರೆಯವರ ಅಂಗಡಿಯಲ್ಲಿ ನೌಕರಿ ಮಾಡುತ್ತಿರುವ ಅಣ್ಣನಿಗೆ ಐವತ್ತು ರುಪಾಯಿ ಹೊಂದಿಸುವುದಾಗಲಿಲ್ಲ. ನಂತರದ ವಿದ್ಯಾಭ್ಯಾಸದ ಖರ್ಚು ದೊಡ್ಡ ಸಮಸ್ಯೆ. ಅಣ್ಣ ಯಾರ ಯಾರನ್ನೋ ಕೇಳಿದರಂತೆ. ನಮ್ಮ  ಹುಡುಗನಿಗೆ ನಿಮ್ಮ ಮಗಳನ್ನೇ ಮಾಡಿಕೊಳ್ಳುತ್ತೇವೆ, ದಯಮಾಡಿ ಸಹಾಯ ಮಾಡಿ ಎಂದರಂತೆ. “ನಂತರ ನಿಮ್ಮ ಹುಡುಗ ಮದುವೆ ಮಾಡಿಕೊಳ್ಳುವನೆಂಬುದಕ್ಕೆ ಏನು ಗ್ಯಾರಂಟಿ?” ಅಂತ ಕೇಳಿದರಂತೆ. ಅಲ್ಲಿಗೆ ಐವತ್ತು ರುಪಾಯಿ ಸಿಗಲಿಲ್ಲ. ನನ್ನ ಡಾಕ್ಟರ್ ಆಗುವ ಕನಸು ನುಚ್ಚು ನೂರಾಯ್ತು..!!

ನಂತರ ಹಾಸ್ಟೆಲ್‌ನಲ್ಲೇ ಇದ್ದು ಬಿ.ಎಸ್ಸಿ ಮುಗಿಸಿ ಖಾಸಗಿ ಕಂಪೆನಿಯಲ್ಲಿ ನೌಕರಿ ಮಾಡಿ ನಂತರ ಪ್ರಮೋಷನ್‌ಗಾಗಿ, ಹೆಚ್ಚಿನ ಸಂಬಳಕ್ಕಾಗಿ ನೌಕರಿ ಬದಲಿಸುತ್ತಾ ಹೈದ್ರಾಬಾದ್-ಮದ್ರಾಸ್-ಬೆಂಗಳೂರು-ಬೆಳಗಾಂ ಸುತ್ತಿ ಇಪ್ಪತ್ತೈದು ವರ್ಷಗಳ ನೌಕರಿಯ ನಂತರ ವಿಆರ್‌ಎಸ್ ತೆಗೆದುಕೊಂಡೆ. ಎಲ್‌ಎಲ್‌ಬಿ ಮಾಡುತ್ತಿರುವಾಗ ಒಬ್ಬ ಗೆಳೆಯನಿಗೆ ಮೂರ್ಛೆ ರೋಗವಿತ್ತು. ಮಾನಸಿಕ ವೈದ್ಯರಲ್ಲಿ ಹೋದ ಗೆಳೆಯನಿಗೆ ಅವರು `ನೀನು ಸತತ ಚಿಕಿತ್ಸೆ ಪಡೆಯದಿದ್ದರೆ ಸತ್ತು ಹೋಗುತ್ತೀಯಾ. ನಿನಗೆ ಜೀವ ಮುಖ್ಯವೋ, ಹಣ ಮುಖ್ಯವೋ’ ಅಂದಾಗ `ಸರ್, ನನಗೆ ಹಣ ಮುಖ್ಯ’ ಅಂದನಂತೆ. ಅವನು ಅದನ್ನೇ ಬಂದು ಹೇಳಿದಾಗ ಕೂಡಲೇ ಹಣದ ಸಹಾಯ ಮಾಡಿದೆ. ಆರು ತಿಂಗಳಿಗಾಗುವಷ್ಟು ಮಾತ್ರೆಗಳನ್ನು ಅವನಿಗೆ ಕೊಡಿಸಿದೆ. ಅವನು ಇಂದು ಹೈದ್ರಾಬಾದಿನಲ್ಲಿ ಪ್ರತಿಷ್ಠಿತ ವಕೀಲನಾಗಿದ್ದಾನೆ.

ಎಂ.ಸುದರ್ಶನ, ಧಾರವಾಡ

Leave a Reply

Your email address will not be published. Required fields are marked *