ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ: ಕಳೆದು ಹೋದ ಅದು ಮತ್ತೆ ಸಿಕ್ಕಲಿಲ್ಲ!

  • ದಿಲ್ ನೆ ಫಿರ್ ಯಾದ್ ಕಿಯಾ: ಕಳೆದು ಹೋದ ಅದು ಮತ್ತೆ ಸಿಕ್ಕಲಿಲ್ಲ!

ಕಭೀ ಕಭೀ ಮೇರೆ ದಿಲ್ ಮೇ

ನಾನಾಗ ತೀರ್ಥಹಳ್ಳಿಯ ಪಾಲಿಟೆಕ್ನಿಕ್‌ನಲ್ಲಿ ಓದುತ್ತಿದ್ದೆ. ಹುಡುಗಿಯರಿದ್ದದ್ದು ಕೇವಲ ಬೆರಳೆಣಿಕೆಯಷ್ಟು. ನನಗಲ್ಲಿ ಸಿಕ್ಕವಳೇ ಚೇತು-ಚೇತನಾ. ನಮ್ಮ ವಿಭಾಗಗಳು ಬೇರೆಯಾದರೂ ಅವಳ ನಿಷ್ಕಲ್ಮಶ ನಗೆಯೇ ಸಾಕಾಯಿತು, ಗಾಢ ಸ್ನೇಹಕ್ಕೆ. ಒಂದು ದಿನ ಅವಳು ಸಿಗದಿದ್ದರೂ ನನಗೇನೋ ಕಸಿವಿಸಿ, ಬೇಸರ. ಅವಳ ಜೊತೆ ಮಾತಾಡಲು ಇನ್ನೂ ಒಂದು ದಿನ ಕಾಯಬೇಕಲ್ಲ ಅಂತ. ಹುಚ್ಚು ಖೋಡಿ ಮನಸು. ನಮ್ಮ possessiveness ಹೇಗಿತ್ತೆಂದರೆ ಕಾಲೇಜಿಗೆ ಅವಳು ಬರುತ್ತಿದ್ದಂತೆ ಮೊದಲು ನನಗೆ ವಿಶ್ ಮಾಡಿಯೇ ಕ್ಲಾಸಿಗೆ ಹೋಗಬೇಕಾಗಿತ್ತು. ಒಂದು ದಿನ ತಪ್ಪಿದರೂ ಹುಸಿ ಮುನಿಸು ತೋರಿಸುತ್ತಿದ್ದೆ. ಕೈಗೆ ಸಿಗದೆ ಪರದಾಡಿಸುತ್ತಿದ್ದೆ. ಆಗೆಲ್ಲ ದೊಡ್ಡ ಲೆಟರ್ ಬರೀತಾ ಇದ್ದಳು.

`ನಿನಗೆ ಏನಾಗಿದೆ? ನನ್ನ ಹತ್ರ ಏಕೆ ಮಾತಾಡಲ್ಲ? ಕೋಪಾನಾ? ಸಾರಿ, ನಿನ್ನ ಜೊತೆ ಮಾತಾಡ್ದೆ ಇರೋಕ್ಕಾಗಲ್ಲ. ಪ್ಲೀಸ್ ಮಾತಾಡು’ ಅಂತೆಲ್ಲ. ನನಗೂ ಅದೇ ಬೇಕಾಗಿತ್ತು. ನಾನೂ ಬರೆಯುತ್ತಿದ್ದೆ. ಅದರ ಸುಖ ಬರೆದವರಿಗೇ ಗೊತ್ತು. ಆಗೆಲ್ಲ ಮನಸ್ಸು ಹಗುರಾಗ್ತಿತ್ತು. ಉಲ್ಲಾಸಗೊಳ್ತಿತ್ತು. ಡ್ರಾಯಿಂಗ್ ಕ್ಲಾಸ್‌ನಲ್ಲಿ ಟೇಬಲ್ ಎದುರು ಬಂದು ನಿಂತು ಪದೇಪದೆ ಕಣ್ಣು ಮಿಟುಕಿಸುತ್ತಿದ್ದಳು. ತನ್ನ ಕೀಟಲೆ-ತುಂಟತನದಿಂದ ನನ್ನ ಕೋಪವನ್ನು ತಣ್ಣಗಾಗಿಸುತ್ತಿದ್ದಳು. ಆಗೆಲ್ಲ ನನ್ನ ಸ್ನೇಹಿತರ ಬಳಿ ಬಂದು `ನನ್ನ ಅನಂತು ಎಲ್ಲಿ?’ ಎಂದು ಕೇಳುತ್ತಿದ್ದಳು. ಸ್ನೇಹಿತರೇ ನನ್ನನ್ನು ಬಯ್ಯುತ್ತಿದ್ದರು. ಅವಳು ಅಷ್ಟು ಮೈಮೇಲೆ ಬಿದ್ದರೂ ಸುಮ್ಮನೆ ಇದ್ದೀಯಲ್ಲ ಅಂತ. ಎಲ್ಲರಿಗೂ ರಾಖಿ ಕಟ್ಟಿದ್ದ ಅವಳು `ನೀನು ನನ್ನ ಬೆಸ್ಟ್ ಫ್ರೆಂಡ್’ ನಿನಗೆ ಕಟ್ಟಲ್ಲ ಅಂತಿದ್ದಳು. ನಾನವಳನ್ನ ತುಂಬಾ ಹಚ್ಚಿಕೊಂಡಿದ್ದೆ. ಅವಳ ಮೇಲೆ ತುಂಬಾ ಗೌರವವಿತ್ತು. ಅಭಿಮಾನವಿತ್ತು. ಅವಳನ್ನು ನಾನೆಂದೂ ಪ್ರೀತಿಸಲಿಲ್ಲ. ಆದರೆ ಅವಳ ನಗುವನ್ನು ಮರೆತು, ಸ್ನೇಹವನ್ನು ತೊರೆಯಲು ನಾನೆಂದೂ ಸಿದ್ಧನಿರಲಿಲ್ಲ. ಕೊನೆಯವರೆಗೂ ನಮ್ಮ ಸ್ನೇಹವನ್ನ ಉಳಿಸಿಕೊಳ್ಳಲು ಬಯಸಿದ್ದೆ. ಆದರೆ ಕಾಲೇಜಿನ ಕೊನೆಯ ದಿನಗಳಲ್ಲಿ ಅವಳು ಮಾತಾಡುವುದನ್ನೇ ಕಡಿಮೆ ಮಾಡಿದಳು. ಕೇಳಿದರೆ `ಇಲ್ಲ’ ಅನ್ನೋ ಉತ್ತರ. ಪತ್ರಗಳಿಗೆ ಉತ್ತರಿಸುವುದನ್ನೇ ನಿಲ್ಲಿಸಿದಳು. ಫೋನಾಯಿಸಿದರೂ ಸಿಗಲಿಲ್ಲ. ಪರೀಕ್ಷಾ ಸಮಯ ಬೇರೆ. ನನಗೆ ಹುಚ್ಚು ಹಿಡಿದಂತಾಯಿತು. ದುಂಬಾಲು ಬಿದ್ದು ಕೇಳಿದೆ. ನನಗೇ ಅಸಹ್ಯ ಬರುವಷ್ಟು `ಸಾರಿ’ ಕೇಳಿದೆ, ಕಾರಣ ಕೇಳಿದೆ, ಯಾಕೆ ಹೀಗ್ಮಾಡ್ತಿದ್ದಿ ಎಂದೆ. ಅವಳು ಕರಗಲೇ ಇಲ್ಲ. `ನಾನು ಏನು ಮಾಡಬೇಕೊ ಅದನ್ನೇ ಮಾಡಿದ್ದೇನೆ, ಕ್ಷಮಿಸು-ಮರೆತು ಬಿಡು’ ಎಂದಳು.

ನನ್ನ ಹೃದಯ ಚೂರಾಯಿತು. ನನ್ನ ತಪ್ಪೇನೆಂದು ಚಿದಂಬರ ರಹಸ್ಯವಾಗಿಯೇ ಉಳಿಯಿತು. ಅವಳೀಗ ಮದುವೆಯಾಗಿ ಯುಎಸ್‌ನಲ್ಲಿದ್ದಾಳಂತೆ. ಹದಿನೈದು ವರ್ಷಗಳಾಯ್ತು. ಸೆಪ್ಟಂಬರ್ ಇಪ್ಪತ್ತೊಂದರ ಅವಳ ಬರ್ತ್‌ಡೇ ನೆನಪಾಗತ್ತೆ. ನಾನು ಯಾವತ್ತೂ ಅವಳ ಪ್ರೀತಿಗಾಗಿ ಹಾತೊರೆಯಲಿಲ್ಲ. ಸ್ನೇಹಕ್ಕಾಗಿ ಪರಿತಪಿಸಿದೆ. ಅವಳು ತೋರಿದ ಪ್ರೀತಿ-ವಿಶ್ವಾಸ, ಸ್ನೇಹ-ತುಂಟತನ ನನ್ನ ಮನದಲ್ಲಿನ್ನೂ ಹಸಿರಾಗೇ ಇದೆ. ಅವಳಿಗೆ ನೆನಪಿದ್ದೀತೋ ಇಲ್ಲವೋ ನಾ ಅರಿಯೆ. ಅವಳ ನೆನಪು ಕಾಡುತ್ತೆ. ಸದಾ ಕಣ್ಣು ತುಂಬಿ ಬರುತ್ತೆ. ಶಾಂತ ಸಾಗರದಲ್ಲಿ ಒಮ್ಮೆಲೆ ಸುನಾಮಿ ಎದ್ದಂತೆ “ಮರೆತೇನೆಂದಾರೆ ಮರೆಯಲಿ ಹ್ಯಾಂಗ? ಮಾವುತ್ಸೇತುಂಗಾ” ಕಂಬಾರರ ಹಾಡು ಎಲ್ಲೋ ಕೇಳಿ ಬರುತ್ತಿದೆ. ಹೃದಯ ಭಾರವಾಗಿದೆ.

-ಅನಂತಮೂರ್ತಿ, ಬೆಂಗಳೂರು

Leave a Reply

Your email address will not be published. Required fields are marked *