ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ: ಆ ಹನ್ನೊಂದು ರುಪಾಯಿ ಒಂದು ವರ್ಷದ ಅಧ್ಯಯನಕ್ಕೆ ಕಲ್ಲು ಹಾಕಿತು

  • ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ಆ ಹನ್ನೊಂದು ರುಪಾಯಿ ಒಂದು ವರ್ಷದ ಅಧ್ಯಯನಕ್ಕೆ ಕಲ್ಲು ಹಾಕಿತು

೧೯೬೮ನೇ ಇಸ್ವಿ… ಎಂಟನೇ ತರಗತಿಗೆ ಸೇರಲು ಅಂದೇ ಕೊನೆ ದಿನ. ಅಂದು ಮುಂಜಾನೆ ಪಡಸಾಲೆಯಲ್ಲಿ ಕುಳಿತ ಅಪ್ಪನ ಬಳಿ ಹೋಗಿ “ಅಪ್ಪಾ… ಹನ್ನೊಂದು ರುಪಾಯಿ ಕೊಡು. ಇವತ್ತು ಹೈಸ್ಕೂಲಿಗೆ ಹೋಗಿ ಎಂಟನೇ ತರಗತಿಗೆ ಹೆಸರು ಹಚ್ಚಬೇಕು, ಇವತ್ತೇ ಕಡೆ ತಾರೀಕು…”ಹೆದರುತ್ತಾ ಕೇಳಿದೆ. ಆಗ ಅವರು “ಯಾಕಪಾ ನಿನಗ ಮನ್ಯಾಗಿನ ಪರಿಸ್ಥಿತಿ ಗೊತ್ತೆತಿಲ್ಲ. ಈಗ ನನ್ನ ಕೈಯಾಗ ರೊಕ್ಕ ಇಲ್ಲ” ಎಂದು ಖಡಾಖಂಡಿತವಾಗಿ ಹೇಳಿದರು. ನಾನು ಬಿಡದೆ “ಇಲ್ಲಪಾ… ಇವತ್ತು ಕಡೇ ತಾರೀಕು” ಎಂದೆ. “ಇಲ್ಲಲೇ ನನ್ನ  ಹತ್ರ ರೊಕ್ಕ ಇಲ್ಲ. ನೀನು ಸಾಲಿನೂ ಕಲಿ ಬ್ಯಾಡ. ನನ್ನ ಕೂಡ ದುಡಿಯಾಕ ನಡಿ” ಎಂದು ಗದರಿಸಿದರು. ನಾನು ನಿರಾಶೆಯಿಂದ ಒಳಗಿದ್ದ ಅವ್ವನ ಹತ್ತಿರ ಹೋಗಿ “ಯವ್ವಾ… ಅಪ್ಪ ರೊಕ್ಕ ಇಲ್ಲ ಅಂತಾನ. ನಾನು ಸಾಲಿಗೆ ಹೆಸರು ಹಚ್ಚಬೇಕು. ಇವತ್ತ ಕಡೇದಿನ. ಈಗ ನಾನು ಏನ ಮಾಡಲಬ್ಬೇ… ”ಅಂದಾಗ ಅವ್ವ ನನ್ನ ಮೈದಡುವುತ್ತಾ “ಮಾಂತಾ ನೀನ ನೋಡತಿಯಲ್ಲ, ಈ ವರ್ಷ ನಿನ್ನಕ್ಕನ ಲಗ್ನ ಮಾಡೆವಿ. ಅದಕ್ಕಂತ ಸಾಲಾನೂ ಮಾಡೆವಿ. ಅದರಾಗ ನಿನಗೂ ಕೊಡಾಕ ರೊಕ್ಕ ಎಲ್ಲಿ ಅದಾವು. ನೀನು ಸಾಲಿ ಬಿಟ್ಟಬಿಡ. ನಮ್ಮ ಕೂಡ ಹೊಲಕ್ಕ ನಡಿ. ನಮ್ಮಂಥವರಿಗೆ ಸಾಲಿ ಯಾಕ ಬೇಕಪಾ…” ಎಂದು ಸಾಂತ್ವನದ ಮಾತು ಹೇಳಿದಳು. ನನಗೆ ಅಳು ತಡೆಯಲಾಗಲಿಲ್ಲ.

ಕಿತ್ತು ತಿನ್ನುವ ಬಡತನದಲ್ಲಿ ಒಂಬತ್ತು ಕುಡಿಗಳಿಗೆ ಜನ್ಮ ನೀಡಿದ್ದ ಅವರು, ಮಕ್ಕಳ ಲಾಲನೆ ಪಾಲನೆ ಮಾಡಿದ್ದರು. ಒಂದ್ಹೊತ್ತು ಉಂಡರೆ, ಒಂದ್ಹೊತ್ತು ಉಪವಾಸ. ಇಂತಹ ಸಮಯದಲ್ಲಿ ಯಾವ ಅಪ್ಪ-ಅವ್ವ ತಮ್ಮ ಮಕ್ಕಳನ್ನ ರೊಕ್ಕ ಕೊಟ್ಟು ಸಾಲಿ ಕಲಿಸುತ್ತಾರೆ ಹೇಳ್ರಿ…! ಅಪ್ಪ-ಅವ್ವನ ನಿರ್ಧಾರದಿಂದ ನನಗೆ ಬಹಳ ನಿರಾಶೆಯಾಯ್ತು. ಏಕಾದರೂ ಬಡವರ ಹೊಟ್ಟೆಯಲ್ಲಿ ಹುಟ್ಟಿದೆನಪ್ಪಾ ಎಂದು ಅನಿಸಿತು. ಅಪ್ಪ-ಅವ್ವನ ಜತೆ ದುಡಿಮೆ ಪ್ರಾರಂಭಿಸಿದೆ. ಬಡವರ ಬದುಕಿನ ಬರಡಿಗೆ ಸ್ವಲ್ಪ ಕಸುವು ಬಂತು. ಮರುವರ್ಷ ಅಪ್ಪ-ಅವ್ವ, ಅಣ್ಣ-ಅಕ್ಕಂದಿರ ಸಹಕಾರ, ಸಹಾಯದಿಂದ ನನ್ನನ್ನ ಎಂಟನೇ ತರಗತಿಗೆ ಸೇರಿಸಲಾಯಿತು. ಅಂತೂ ಇಂತೂ ಮೆಟ್ರಿಕ್ ಮುಗಿಸಿದ ಕೆಲ ವರ್ಷಗಳ ನಂತರ ಬಸ್ ಕಂಡಕ್ಟರ್ ಆದೆ. ನೆಮ್ಮದಿಯ ಜೀವನ ಪ್ರಾರಂಭವಾಯ್ತು. ಆದರೆ  ಆ ಹನ್ನೊಂದು ರುಪಾಯಿ ನನ್ನ ಅಧ್ಯಯನದ ಒಂದು ವರ್ಷಕ್ಕೆ ಕಲ್ಲು ಹಾಕಿತ್ತು. ಆ ಹನ್ನೊಂದು ರುಪಾಯಿ ಇದ್ದಿದ್ದರೆ, ನನ್ನ ಶಿಕ್ಷಣ ಇನ್ನಷ್ಟು ಮುಂದುವರಿದು ಹೆಚ್ಚಿನ ಶಿಕ್ಷಣ ಪಡೆದು ಪ್ರಮುಖ ಹುದ್ದೆಯನ್ನು ಅಲಂಕರಿಸಬಹುದಿತ್ತೇನೋ?

-ಮಹಂತೇಶ್ ವಿ. ಕೋಳಿವಾಡ, ಹುಬ್ಬಳ್ಳಿ

Leave a Reply

Your email address will not be published. Required fields are marked *