ದೆಹಲಿ ಕೋಮುಗಲಭೆಗಳ ಪೈಶಾಚಿಕ ಪ್ರಸಂಗಗಳು

in ಉಮಾಪತಿ ಅಂಕಣ

ದೆಹಲಿ ಕೋಮುಗಲಭೆಗಳ ಪೈಶಾಚಿಕ ಪ್ರಸಂಗಗಳು

ದಿಲ್ಲಿ ಅಬ್ ದೂರ್ ನಹಿ – ಡಿ. ಉಮಾಪತಿ

ಗುಜರಾತಿನಿಂದ ತೆವಳಿದ ಕೋಮು ಗಲಭೆಯ ವಿಖ್ಯಾತ ವಿಕರಾಳ ಮಾದರಿ ದೆಹಲಿಯ ಸಾವುಗಳನ್ನು ಅರ್ಧ ಶತಕದತ್ತ ಒಯ್ಯತೊಡಗಿದೆ. ತಿವಿದು, ಬಡಿದು ಜನಗಣಮನ ಹಾಡುವಂತೆ ದೆಹಲಿ ಪೊಲೀಸರು ಗದರಿದ್ದ ಅರೆ ಜೀವಿತ ಮುಸ್ಲಿಂ ಯುವಕರ ಪೈಕಿ ಒಬ್ಬ ಪ್ರಾಣಬಿಟ್ಟಿದ್ದಾನೆ. ಮಗಳೊಬ್ಬಳು ತಂದೆಯ ಅಳಿದುಳಿದ ಅವಶೇಷವಾಗಿ ದೇಹದಿಂದ ಛಿದ್ರಗೊಂಡ ಕಾಲನ್ನು ಇಟ್ಟುಕೊಂಡು ಡಿ.ಎನ್.ಎ. ಪರೀಕ್ಷೆಯ ಫಲಿತಾಂಶಕ್ಕೆ ಕಾದಿದ್ದಾಳೆ. ಕೈಗೆ ಸಿಕ್ಕಿದ ಅಮಾಯಕ ಹಿಂದೂಗಳನ್ನು ಮುಸ್ಲಿಮರೂ ಬಡಿದು ಕೊಂದಿದ್ದಾರೆ. ನೈಋತ್ಯ ದೆಹಲಿಯ ಭಾರೀ ಚರಂಡಿಗಳಲ್ಲಿ ಕೊಳೆತ ಹೆಣಗಳು ತೇಲತೊಡಗಿವೆ. ರಣಕೇಕೆ, ರಕ್ತಪಾತ, ಅಟ್ಟಹಾಸ, ಅಕ್ರಂದನಗಳು ಅಡಗಿವೆ. ದಿಕ್ಕುಗಾಣದ ತಬ್ಬಲಿತನ, ದುಃಖ, ಆಘಾತಗಳು ಮಡುಗಟ್ಟಿವೆ. ಬದುಕುಗಳನ್ನು ಬಂಧು ಮಿತ್ರರನ್ನು ಕಳೆದುಕೊಂಡು ಬರಿಗೈಯಾಗಿರುವವರು ತಮ್ಮ ನೆಲದ್ಲೇ ಅನಾಥರಾಗಿದ್ದಾರೆ. ಪರಕೀಯತೆ ಮುತ್ತಿ ಕಾಡಿದೆ. ಬೆಂದ ಬದುಕುಗಳನ್ನು ಎಲ್ಲಿಂದ ಪುನಃ ಕಟ್ಟಬೇಕೋ ಕಾಣದಾಗಿದ್ದಾರೆ.

ಹದ್ದುಬಸ್ತುಗಳಿಲ್ಲದೆ ಹೂಂಕರಿಸಿದ ಕ್ರೌರ್ಯ ಆಮಾನುಷತೆ ಪೈಶಾಚಿಕ ನಗ್ನ ನರ್ತನದ ನಡುವೆ ಮಾನವೀಯತೆ ಮತ್ತು ಬಂಧುತ್ವದ ಪ್ರೀತಿ ಹರಿಸಿ ಜೀವಗಳನ್ನು ಕಾಪಾಡಿದ ಸಹಬಾಳ್ವೆ ಸಾಮರಸ್ಯದ ಅನೇಕ ಚೇತೋಹರಿ ಉದಾಹರಣೆಗಳು ಕಾರ್ಮೋಡದ ನಡುವಿನ ಕೋಲ್ಮಿಂಚಿನಂತೆ ಗೋಚರಿಸಿವೆ. ಮುಸಲ್ಮಾನರು ಮಾನವ ಸರಪಳಿ ರಚಿಸಿ ಹಿಂದೂ ದೇಗುಲವನ್ನು ಕಾದಿದ್ದಾರೆ. ಹಿಂದೂವೊಬ್ಬ ಮುಸ್ಲಿಂ ನೆರೆಹೊರೆಯವರನ್ನು ರಕ್ಷಿಸಲು ಮುಂದಾಗಿ ಸುಟ್ಟ ಗಾಯಗಳಿಂದ ಸಾವು ಬದುಕಿನ ತೂಗುಯ್ಯಾಲೆಯಲ್ಲಿ ಮಲಗಿದ್ದಾನೆ. ಮಸೀದಿಯ ಮಿನಾರಿನ ಮೇಲೆ ಹಾರಿಸಲಾಗಿದ್ದ ಹನುಮಾನ್ ಧ್ವಜವನ್ನು ಹಿಂದೂ ಯುವಕ ರವಿ ಕೆಳಗಿಳಿಸಿದ್ದಾನೆ. ಹಿಂದೂಗಳು ಮುರಿದ ಮಿನಾರನ್ನು ಕರಸೇವೆ ಮಾಡಿ ಪುನಃ ಕಟ್ಟಿದ್ದಾರೆ.

ದೇಶದ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಮೂಗಿನ ಕೆಳಗೆ ಮೂರು ದಿನಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಸಂಪೂರ್ಣ ಕುಸಿದು ಗಲಭೆಕೋರರ ಕಾಲ ಕೆಳಗೆ ನರಳಿದ ಪರಿ ಸೋಜಿಗ ಮತ್ತು ಖೇದ ಉಂಟು ಮಾಡಿದೆ. ದೆಹಲಿ ಪೊಲೀಸ್ ವ್ಯವಸ್ಥೆ ಖುದ್ದಾಗಿ ಮುಂದೆ ನಿಂತು ಕೊಲೆಗಡುಕ ಗಲಭೆಕೋರ ಗುಂಪುಗಳಿಗೆ ಉತ್ತೇಜನ ನೀಡಿದ ಅನೇಕ ಕರಾಳ ನಿದರ್ಶನಗಳು ಹೊರಬಿದ್ದಿವೆ. ಮನುಷ್ಯ ಮೃಗದ ಭೀಭತ್ಸ ಮತ್ತು ಪೈಶಾಚಿಕ ವರ್ತನೆಯ ಕತೆಗಳು ಒಂದಕ್ಕಿಂತ ಮತ್ತೊಂದು ಘೋರ ಎಂಬಂತೆ ಎದ್ದು ಬರತೊಡಗಿವೆ.

ಇಂತಹ ಪೊಲೀಸ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ. ದಂಡಿಸಬೇಕಾದವರ ರಕ್ಷಣೆಗೆ ಮುಂದಾಗಿದೆ ಕೇಂದ್ರ ಸರ್ಕಾರ. ಪೊಲೀಸರನ್ನು ದಂಡಿಸುವುದನ್ನು ಬಿಟ್ಟು ನ್ಯಾಯವನ್ನು ನೇಣಿಗೇರಿಸಲಾಗಿದೆ. ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಬಿಜೆಪಿ ತಲೆಯಾಳುಗಳ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆಯ ಕಿರುಬೆರಳು ಕೂಡ ಇದುವರೆಗೆ ಕದಲಿಲ್ಲ.

ವರ್ಗಾವಣೆಯಾದ ನ್ಯಾಯಮೂರ್ತಿಯವರ ಜಾಗದಲ್ಲಿ ಕುಳಿತು ವಿಚಾರಣೆ ನಡೆಸಿದ ಮತ್ತೊಂದು ನ್ಯಾಯಪೀಠ ದೆಹಲಿ ಪೊಲೀಸರ ನಿಷ್ಕ್ರಿಯತೆ ಕುರಿತ ಕೇಸಿನ ವಿಚಾರಣೆಯನ್ನು ಒಂದೂವರೆ ತಿಂಗಳ ಕಾಲ ಮುಂದಕ್ಕೆ ಹಾಕಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಶಾಂತಿಯಾತ್ರೆಯಲ್ಲೂ ಕೋಮುವಾದವನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ ಕುರಿತು ಆಳುವ ವ್ಯವಸ್ಥೆಯ ಮೌನ ಕಿವಿ ಗಡಚಿಕ್ಕಿದೆ. ಜೈಲಿಗೆ ಅಟ್ಟಬೇಕಾದ ವ್ಯಕ್ತಿಗೆ ವೈ ಕೆಟಗರಿಯ ಸರ್ಕಾರಿ ಮೈಗಾವಲನ್ನು ಒದಗಿಸಿರುವುದು ವಿಕೃತಿಯ ಪರಮಾವಧಿ.

ಕೋಮು ಗಲಭೆಗಳು ಪೂರ್ವನಿಯೋಜಿತ ಎನ್ನಲು ಹಲವು ಪುರಾವೆಗಳು ಮೇಲೆ ತೇಲಿವೆ. ದಾಳಿಗೆ ಸಿಕ್ಕ ಶಿವವಿಹಾರದ ಶಾಲೆಯೊಂದು ಪಾಳು ಬಿದ್ದಿದೆ. ಶಾಲೆಯ ಅಂಗುಲಂಗುಲವೂ ಕರಕಲಾಗಿದೆ. ಪ್ರತಿಯೊಂದು ಪಂಖಾವನ್ನೂ ಛಾವಣಿಯಿಂದ ಎಬ್ಬಿಸಿ ಕೀಳಲಾಗಿದೆ. ಪ್ರಯೋಗಶಾಲೆಯನ್ನು ಸುಟ್ಟು ಹಾಕಲಾಗಿದೆ. ಐ.ಟಿ. ವಿಭಾಗದ ಎಲ್ಲ ಕಂಪ್ಯೂಟರುಗಳನ್ನು ಜಜ್ಜಿ ಹಾಕಲಾಗಿದೆ. ವಿದ್ಯಾರ್ಥಿಗಳು ಕುಳಿತುಕೊಳ್ಳುವ ಒಂದೊಂದು ಬೆಂಚು, ಡೆಸ್ಕುಗಳನ್ನೂ ಬಿಡದೆ ಹೊರತಂದು ರಾಶಿ ಹಾಕಿ ಸುಡಲಾಗಿದೆ. ಉಳಿದದ್ದು ಅವುಗಳ ಅಸ್ಥಿಪಂಜರ ಅಷ್ಟೇ. ಬೀಗ ಹಾಕಿದ್ದ ಗೇಟಿನಿಂದ ಬಾರದೆ ನಾಲ್ಕು ಅಂತಸ್ತಿನ ಈ ಶಾಲೆಯನ್ನು ನಲವತ್ತು ಅಡಿ ಹಗ್ಗ ಏರಿ ಲಗ್ಗೆ ಹಾಕಿದ್ದರು ಗಲಭೆಕೋರರು. ಆರಾಮಾಗಿ ಶಾಲೆಯಲ್ಲಿ ಊಟ ಮಾಡಿ ಆ ನಂತರ ಧ್ವಂಸಕ್ಕೆ ಕೈ ಹಚ್ಚಿದರು. ಪಕ್ಕದ ಕಟ್ಟಡದ ಮಾಳಿಗೆ ಮೇಲೆ ಕ್ರೇಟುಗಟ್ಟಲೆ ಪೆಟ್ರೋಲ್ ಬಾಂಬುಗಳನ್ನು ಇಟ್ಟುಕೊಂಡಿದ್ದರು. ಟ್ರಕ್ ಟೈರು ಟ್ಯೂಬುಗಳಿಂದ ಮಾಡಿದ ಭಾರೀ ಕ್ಯಾಟರ್ ಬಿಲ್ ಬಳಸಿ ಪೆಟ್ರೋಲ್ ಬಾಂಬುಗಳು, ಆ್ಯಸಿಡ್ ಪೌಚುಗಳು, ಕಲ್ಲುಗಳನ್ನು ನೆರೆಹೊರೆಯ ದೂರ ದೂರದ ಅಂಗಡಿಗಳತ್ತ, ಮನೆಗಳತ್ತ ಬೀಸಲಾಯಿತು. ಸನಿಹದ ನೂರಕ್ಕೂ ಹೆಚ್ಚು ವಾಹನಗಳು ಸುಟ್ಟು ಹೋದವು. ಮಧ್ಯಾಹ್ನ ಎರಡು ಗಂಟೆಗೆ ತರಗತಿಗಳು ಮುಗಿದು ಮಕ್ಕಳು ತೆರಳಿದ ನಂತರ ಈ ಕೃತ್ಯ ಎಸಗಲಾಗಿದೆ ಎನ್ನುತ್ತಾನೆ ಶಾಲೆಯ ಮಾಲೀಕ ಫೈಸಲ್. ಇಂತಹ ಸುಧಾರಿತ ಭಾರೀ ಕ್ಯಾಟರ್ ಬಿಲ್‌ಗಳನ್ನು ಕೋಮು ದಂಗೆಯಲ್ಲಿ ಬಳಸಿರುವುದು ಇದೇ ಮೊದಲು. ಈ ಪ್ರದೇಶದ ಹತ್ತು-ಹದಿನೈದು ಜಾಗಗಳಲ್ಲಿ ಇವುಗಳನ್ನು ಹೂಡಲಾಗಿತ್ತು. ನಾಡ ಪಿಸ್ತೂಲುಗಳು ಹೇರಳ ಬಳಕೆಯಾಗಿವೆ. ಐದು ಸಾವಿರ ಸುತ್ತು ಗುಂಡುಗಳು ಸಿಡಿದಿವೆ. ಮಡಿದವರು ಮತ್ತು ಗಾಯಗೊಂಡ ಬಹುತೇಕರು ಈ ಗುಂಡುಗಳ ಬಲಿಪಶುಗಳು. ಬಿಹಾರ ಮತ್ತು ಉತ್ತರಪ್ರದೇಶದ ನಾಡಪಿಸ್ತೂಲುಗಳಿವು ಎಂಬುದು ಪೊಲೀಸರ ಹೇಳಿಕೆ.

ದೆಹಲಿ ಇಂತಹ ಮಾರಣಹೋಮ ಕಂಡದ್ದು ಮೂವತ್ತಾರು ವರ್ಷಗಳ ಹಿಂದೆ 1984ರ ಸಿಖ್ ವಿರೋಧಿ ದಂಗೆಗಳಲ್ಲಿ. ಆಗ ಕೆಮೆರಾ ಫೋನುಗಳು, ಅಂತರ್ಜಾಲ ಹಾಗೂ ಖಾಸಗಿ ಟೆಲಿವಿಷನ್ ಸುದ್ದಿ ಛಾನಲ್‌ಗಳು ಇರಲಿಲ್ಲ. ಈ ಗಲಭೆಗಳನ್ನು ಪ್ರಚೋದಿಸಿದ ಕಾಂಗ್ರೆಸ್ ತಲೆಯಾಳುಗಳು ಯಾರೆಂದು ಎಲ್ಲರಿಗೂ ಗೊತ್ತಿತ್ತು. ಆದರೆ ವಾಜಪೇಯಿ ಸರ್ಕಾರ ನ್ಯಾಯಮೂರ್ತಿ ನಾನಾವತಿ ಆಯೋಗ ನೇಮಕ ಮಾಡುವ ತನಕ ಇವರ ಕೂದಲೂ ಕೊಂಕಲಿಲ್ಲ. 1984ರ ದಂಗೆಗಳನ್ನು ಕಂಡವರು ಅಂದು ಮತ್ತು ಇಂದಿನ ನಡುವೆ ಪಕ್ಕಾ ಸಾಮ್ಯತೆ ಗುರುತಿಸಿದ್ದಾರೆ. ಅಂದು ಕೂಡ ಮೊದಲು ದಾಳಿ ಮಾಡಿದವರು ಸ್ಥಳೀಯರಲ್ಲ. ಅಂದು ಕೂಡ ಗಲಭೆಗಳಿಗೆ ನಿಷ್ಕ್ರಿಯ ಸರ್ಕಾರ ಮೂಕ ಸಾಕ್ಷಿಯಾಗಿತ್ತು. ಪೊಲೀಸರು ಸರ್ಕಾರದ ಇಂಗಿತ ಅರಿತು ಗಲಭೆಕೋರರ ಪರವಾಗಿ ನಿಂತರು. ಬಳಸಲಾದ ಬಂದೂಕುಗಳ, ಪಿಸ್ತೂಲುಗಳ ಸಂಖ್ಯೆಯೂ ಅದೇ ಪ್ರಮಾಣದ್ದು. 2002ರ ಗುಜರಾತ್ ಕೋಮು ಗಲಭೆಗಳೂ ಇದೇ ಮಾದರಿಯಲ್ಲಿ ಜರುಗಿದವು.

2004ರ ಬಿಜೆಪಿ ಸೋಲಿಗೆ ಗುಜರಾತ್ ಕೋಮು ಗಲಭೆಗಳನ್ನು ದೂರಿದ್ದರು ವಾಜಪೇಯಿ. ಅಭಿವೃದ್ಧಿಯನ್ನು ಆಧರಿಸಿದ ಚುನಾವಣಾ ಪ್ರಚಾರಾಂದೋಲನ ‘ಇಂಡಿಯಾ ಶೈನಿಂಗ್’ ಕೈ ಕೊಟ್ಟಿತ್ತು. ಉತ್ತರಪ್ರದೇಶದಲ್ಲಿ ಬಿಜೆಪಿಯ ಗೆಲುವು ಇಪ್ಪತ್ತೆರಡರಿಂದ ಹತ್ತೊಂಬತ್ತು ಸೀಟುಗಳಿಗೆ ಕುಸಿದಿತ್ತು. ವಾಜಪೇಯಿ ನಿವೃತ್ತರಾದರು. ಕೋಮು ಧೃವೀಕರಣದ ಹಳೆಯ ತಂತ್ರಕ್ಕೆ ಮರಳಿತು ಬಿಜೆಪಿ. ಒಂದು ದೊಡ್ಡ ಕೋಮುಗಲಭೆಗೆ ಬದಲಾಗಿ ಬೇರು ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಸಣ್ಣ ಸಣ್ಣ ಕೋಮು ಗಲಭೆಗಳು ಜರುಗಿದವು. ಖಾಯಂ ಆಗಿ ಕೋಮುವಾದದ ಕೊಪ್ಪರಿಗೆಯನ್ನು ಕುದಿಬಿಂದುವಿನಲ್ಲಿ ಇಡುವುದು ಹೊಸ ತಂತ್ರವಾಗಿತ್ತು. 2013ರ ಪಶ್ಚಿಮೀ ಉತ್ತರಪ್ರದೇಶದ ಗಲಭೆಗಳು ಐವತ್ತೈದು ಮಂದಿಯನ್ನು ಬಲಿ ತೆಗೆದುಕೊಂಡಿದ್ದವು. ಕೋಮುವಾದ ಗ್ರಾಮಾಂತರಗಳಿಗೆ ವ್ಯಾಪಿಸಿ ಬೇರೂರಿತ್ತು.

ದೆಹಲಿ ಗಲಭೆಗಳು ಚುನಾವಣೆಯ ನಂತರ ಜರುಗಿವೆ. ಖಾಯಂ ಧ್ರುವೀಕರಣದ ಜೊತೆ ಜೊತೆಗೆ ಸಿಎಎ ವಿರೋಧಿಗಳಿಗೆ ಪಾಠ ಕಲಿಸುವುದು ಇವುಗಳ ಉದ್ದೇಶ. ನೈಋತ್ಯ ದೆಹಲಿಯ ಶಿವವಿಹಾರದಂತಹ ಮಿಶ್ರ ವಸತಿ ಪ್ರದೇಶಗಳಿಂದ ಮುಸಲ್ಮಾನರನ್ನು ಹೊರದಬ್ಬಿ ಅವರದೇ ಎಛಿಠಿಠಿಟಗಳತ್ತ ತಳ್ಳಲಾಗಿದೆ. ಇನ್ನಷ್ಟು ಬಟ್ಲಾ ಹೌಸ್‌ಗಳು, ಜಾಮಿಯಾ ನಗರಗಳು ತಲೆಯೆತ್ತುವುದು ಖಚಿತ. ಹರಿಯಾಣ-ದೆಹಲಿ ಗಡಿ ಪ್ರದೇಶದ ನಿಖಿಲ್ ವಿಹಾರದ ಮುಸ್ಲಿಂ ಕುಟುಂಬಗಳನ್ನು ಬೆದರಿಸಿ ಹೋಳಿ ಹಬ್ಬದೊಳಗೆ ಪರಾರಿಯಾಗುವಂತೆ ತಾಕೀತು ಮಾಡಲಾಗಿದೆ. ಮಾರಿದರೂ ಅವರ ಮನೆಗಳನ್ನು ಅರ್ಧ ಬೆಲೆಗೂ ಕೊಳ್ಳುವವರಿಲ್ಲ. ಬೆಂದ ಮನೆಗಳ ಒಡೆತನದ ಕಾಗದ ಪತ್ರಗಳೂ ಸುಟ್ಟುಹೋಗಿವೆ. ನನ್ನದೇ ಮನೆಯೆಂದು ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಶಿವವಿಹಾರದ ಎರಡು ಪಾರ್ಕಿಂಗ್ ತಾಣಗಳ ಸುಮಾರು ಇನ್ನೂರು ವಾಹನಗಳು ಉರಿದು ಹೋಗಿವೆ. ಈ ಸೀಮೆಯಲ್ಲಿ ಎರಡು ದಿನಗಳ ಕೋಮುಗಲಭೆಗಳು ಸುಟ್ಟು ಹಾಕಿದ ವಾಹನಗಳ ಸಂಖ್ಯೆ ಸಾವಿರ ಮುಟ್ಟಬಹುದು ಎನ್ನುತ್ತಾರೆ ಪೊಲೀಸರು. ಶಿವವಿಹಾರದಲ್ಲಿ ಸಾಲು ಸಾಲು ರಸ್ತೆಗಳು, ಗಲ್ಲಿಗಳಲ್ಲಿ ಉರಿದ ಮನೆಗಳು ಭಣಗುಟ್ಟಿವೆ. ಕಲ್ಲುಗಳು, ಇಟ್ಟಿಗೆಗಳು, ಗಾಜುಗಳು, ಸುಟ್ಟು ಕರಕಲಾದ ವಸ್ತುಗಳ ಅಸ್ಥಿ ಪಂಜರಗಳು, ಅವುಗಳ ಅಡಿಯಲ್ಲಿ ಕರಿ ಬೂದಿಯ ಹಾಸಿಗೆ ಹೊದ್ದು ಮಲಗಿವೆ ಬೀದಿಗಳು. ಪಲಾಯನ ಮಾಡಿರುವ ಜನ ವಾಪಸು ಬರುವರೋ, ಬಾರರೋ ತಿಳಿಯದು. ಅಲ್ಲಲ್ಲಿ ಸುಡುವ ಚಿತೆಗಳಿಂದ ಹೊಗೆ ಏಳುವ ಸ್ಮಶಾನದ ರೂಪ ಧರಿಸಿದೆ ಶಿವವಿಹಾರ.

ಗಲಭೆಗಳು ಆರಿ ವಾರವೇ ಆದರೂ ನಾಪತ್ತೆಯಾದ ಸಂಬಂಧಿಕರನ್ನು ಆಸ್ಪತ್ರೆಯ ಶವಾಗಾರಗಳಲ್ಲಿ, ಭಾರೀ ಚರಂಡಿಗಳಲ್ಲಿ ಹುಡುಕುತ್ತಿರುವವರ ಸಂಕಟ ಅಡಗಿಲ್ಲ. ಎರಡು ಕೋಮುಗಳೂ ಈ ಕಿಚ್ಚಿನಿಂದ ಬಚಾವಾಗಿಲ್ಲ.

ದೆಹಲಿಯ ನರಮೇಧದ ಬೂದಿ ಇನ್ನೂ ಪೂರ್ಣ ತಣಿದಿಲ್ಲ. ರಕ್ತದಾಹದ ರಣಕೇಕೆ ಬಂಗಾಳದಲ್ಲಿ ಮೊಳಗಿದೆ.

Leave a Reply

Your email address will not be published.

*

Latest from ಉಮಾಪತಿ ಅಂಕಣ

Go to Top