ರಾಜ್ಯ ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನೇಮಕ
ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸ ಜವಾಬ್ದಾರಿ ಹೆಗಲೇರಿದೆ. ಅವರನ್ನು ಕೃಷಿ ಇಲಾಖೆ ರಾಯಭಾರಿಯಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇಮಿಸಿದ್ದಾರೆ. ಯಾವುದೇ ಸಂಭಾವನೆ ಪಡೆಯದೆ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ದರ್ಶನ್ ಒಪ್ಪಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.
ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ದರ್ಶನ್ ಉತ್ತೇಜಿಸಲಿದ್ದಾರೆ. ಈ ಮೂಲಕ ರೈತರಲ್ಲಿ ಭರವಸೆಯನ್ನು ಹುಟ್ಟುಹಾಕುತ್ತಾರೆ. ದರ್ಶನ್ ಸ್ವತಃ ಕೃಷಿಕರೂ ಹೌದು ಎಂದು ಸಚಿವ ಬಿ. ಸಿ ಪಾಟೀಲ್ ತಿಳಿಸಿದ್ದಾರೆ.
ಈ ಹಿಂದೆ ಅವರು ಶಿಕ್ಷಣ ಹಕ್ಕಿನ (ಆರ್ಟಿಇ) ರಾಯಭಾರಿಯಾಗಿ, ಪುನೀತ್ ಅವರನ್ನು ಹಿಂದುಳಿದ ಚಾಮರಾಜನಗರ ಜಿಲ್ಲೆಯ ‘ಅಭಿವೃದ್ಧಿ ರಾಯಭಾರಿ’ ಎಂದು ನೇಮಿಸಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ನನಗೆ ವಹಿಸಿರುವ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ ಮತ್ತು ಸರ್ಕಾರ ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಅಂತ ದರ್ಶನ್ ಹೇಳಿದ್ದಾರೆ.