ಹಾಯ್ ಬೆಂಗಳೂರ್

ಬಾಟಮ್ ಐಟಮ್: ದಾಂಪತ್ಯವೆಂಬ ಪಾತ್ರೆಯ ಕೆಳಗೆ ಪರ್ಪಸ್ ಎಂಬ ನಿತ್ಯಾಗ್ನಿ ಉರಿಸುತ್ತಲೇ ಇರಬೇಕು!

ಬಾಟಮ್ ಐಟಮ್:

ದಾಂಪತ್ಯವೆಂಬ ಪಾತ್ರೆಯ ಕೆಳಗೆ ಪರ್ಪಸ್ ಎಂಬ ನಿತ್ಯಾಗ್ನಿ ಉರಿಸುತ್ತಲೇ ಇರಬೇಕು!

ಯಾಕೆ ಹೆಸರಿಡುತ್ತೀ ಸಂಬಂಧಕ್ಕೆ?

ನಂಗೆ ನೀನು ಏನೂ ಆಗಬೇಕಿಲ್ಲ. ಅಣ್ಣ, ತಮ್ಮ, ಬಂಧು, ಸಂಬಂಧಿ, ಗೆಳೆಯ, ಗೆಳತಿ, ಕಲೀಗು, ಪ್ರತಿಸ್ಪರ್ಧಿ, ಸಹಚಾರಿ…. ಉಹುಂ, ಬೇಕಾಗಿಲ್ಲ. ಅಸಲು ನಮ್ಮ ಸಂಬಂಧಕ್ಕೊಂದು ಹೆಸರೇ ಬೇಕಾಗಿಲ್ಲ. ಇದಕ್ಕೆ ಬೇಕಾಗಿರೋದು-ಕೇವಲ purpose! ಹೆಸರೇ ಇಡದ ಸಂಬಂಧಗಳು ಕಡೆತನಕ ಬದುಕಿಬಿಡಬಹುದು. ದೊಡ್ಡ ಸಮಾರಂಭ ಮಾಡಿ, ಸಾವಿರಾರು ಮಂದಿಗೆ ಅನ್ನಹಾಕಿ, ವಿಡಿಯೋ ತೆಗೆಸಿ-‘ಗಂಡ ಹೆಂಡ್ತಿ’ ಅಂತ ಹೆಸರಿಟ್ಟುಕೊಂಡೆವಲ್ಲ? ಆ ಸಂಬಂಧ ಸತ್ತೇ ಹೋಗಬಹುದು. ಪ್ರಶ್ನೆ ಅದಲ್ಲ; ನಮ್ಮ ಸಂಬಂಧಕ್ಕೊಂದು purpose ಅಂತ ಇದೆಯಾ? ಅದೇ ಇಲ್ಲ ಅಂದ ಮೇಲೆ  ಅಂಧ ಸಂಬಂಧ ಕಟ್ಟಿಕೊಂಡು ನಂಗೂ-ನಿಂಗೂ ಏನಾಗಬೇಕಾಗಿದೆ. Get lost.

ಅವರ ಸಂಬಂಧದ ಸ್ಥಿತಿ ಏನಾಗಿದೆಯೋ ನೋಡು? ಸಂಜೆಯ ಇಳಿಗತ್ತಲಲ್ಲಿ ಭೇಟಿಯಾದರು. ರಾತ್ರಿಯ ಹೊತ್ತಿಗೆ ದೇಹಗಳಲ್ಲಿ ರಕ್ಕಸ ಕೆಮಿಸ್ಟ್ರಿ. ಬೆಳಗ್ಗೆ ಎದ್ದರೆ ಮತ್ತೆ ಇಬ್ಬರೂ ಅಪರಿಚಿತರು. ಸೆಕ್ಸು ಅವರ ಪಾಲಿನ ಆ ಮಟ್ಟದ purpose ಆಗಿತ್ತು. ಅದು ಮುಗಿದು ಹೋಯಿತು. ಅವರ ಮಧ್ಯದ ಬಂಧ ಅದರಾಚೆಗೆ ಬೆಳೆಯಲಿಲ್ಲ.

ಮದುವೆಗಳು ಇದಕ್ಕಿಂತ ಭಿನ್ನವೇನಲ್ಲ. ಎಲ್ಲೋ ಭೇಟಿಯಾಗುತ್ತೇವೆ. ಪ್ರೀತಿಸುತ್ತೇವೆ. ಇಡೀ (?) ಸಮಾಜವನ್ನು ಎದುರು ಹಾಕಿಕೊಂಡಿದ್ದೇವೆ ಅಂತ ನಮಗೆ ನಾವೇ ಭಾವಿಸಿಕೊಳ್ಳುತ್ತೇವೆ. ಅದೇ ಹುಮ್ಮಸ್ಸಿನಲ್ಲಿ ಮದುವೆಯಾಗುತ್ತೇವೆ. ಅಲ್ಲಿಗೆ ಒಂದು ಹಂತದ purpose ಮುಗಿಯುತ್ತೆ. ಅದಾದ ಮೇಲೆ ಮಕ್ಕಳಾಗುತ್ತವೆ. ಅದು ಎರಡನೇ ಹಂತದ ಪರ್ಪಸ್ಸು. ಆಮೇಲೆ ನಮಗೆ ಅರಿವಾಗುವುದರೊಳಗಾಗಿ  ನಮ್ಮ ಮಧ್ಯಕ್ಕೆ ಮಕ್ಕಳು ಬಂದು ಮಲಗಿ ಬಿಟ್ಟಿರುತ್ತವೆ. ನಮ್ಮ ಸಂಬಂಧ ಅಸಲಿಗೆ ಯಾವತ್ತೋ ಮುಗಿದು ಹೋಗಿರುತ್ತದೆ. ಮಕ್ಕಳನ್ನು ಬೆಳೆಸೋದೇ ಪರ್ಪಸ್ ಆಗಿ ಬಿಟ್ಟಿರುತ್ತೆ. ಅವು ಬೆಳೆದ ಮೇಲೆ? ಬೆಳೆದು ತಮ್ಮವೇ ಆದ ಪರ್ಪಸ್‌ಗಳನ್ನು ಹುಡುಕಿಕೊಂಡ ಮೇಲೆ? ಆಮೇಲೆ ನಮಗೆ ಮತ್ತೆ ನಮ್ಮಿಬ್ಬರ ಮೊದಲ ಭೇಟಿ ನೆನಪಾಗುತ್ತದಾ? ನಾವು ಒಬ್ಬರನ್ನೊಬ್ಬರು ಮತ್ತೆ ಅದೇ ಕಾಂಕ್ಷೆಯಿಂದ ಹುಡುಕಿಕೊಂಡು ಬಂದು ಸಂಧಿಸುತ್ತೇವಾ? ಪ್ರೀತಿಸೋದು, ಮದುವೆಯಾಗೋದು, ಅದಕ್ಕಾಗಿ ಇಡೀ(?) ಸಮಾಜವನ್ನು ಎದುರು ಹಾಕಿಕೊಳ್ಳೋದು, ಮಕ್ಕಳನ್ನು ಮಾಡಿಕೊಳ್ಳುವುದು, ಅವರನ್ನು ಬೆಳೆಸೋದು- ಅರೇ, ನಮ್ಮ ಸಂಬಂಧದ purpose ಬರೀ ಇಷ್ಟೇ ಆಗಿತ್ತಾ?

ಹೆಚ್ಚಿನ ಸಲ, ಹೆಚ್ಚಿನ ಸಂಬಂಧಗಳಲ್ಲಿ ಬರೀ ಇಷ್ಟೇ ಆಗಿರುತ್ತದೆ. ಗಂಡ ಹೆಂಡತಿಯ ಮಧ್ಯೆ ಮಕ್ಕಳು ಮಲಗಿರುತ್ತವೆ. ಮನೆಗಳಲ್ಲಿ, ಮನಗಳಲ್ಲಿ ಗೋಡೆಗಳೆದ್ದಿರುತ್ತವೆ. ವರಾಂಡದಲ್ಲಿ  ಛೇರು ಹಾಕಿಕೊಂಡು ದಿನಾ ಕೂತಿರುತ್ತಾರೆ. ಆದರೆ ಮಾತೇ ಸತ್ತು ಹೋಗಿರುತ್ತವೆ. ಅಕಸ್ಮಾತ್ ಅವರಿಬ್ಬರ ನಡುವೆ ಮಕ್ಕಳು ಎಂಬ ಸೇತುವೆಗಳು ಹುಟ್ಟಿಕೊಳ್ಳದೆ ಹೋಗಿದ್ದಿದ್ದರೆ ಆ ಸಂಬಂಧ ಅದೆಷ್ಟೋ ವರ್ಷಗಳಿಗೆ ಮೊದಲೇ ಅರ್ಧಹೀನವಾಗಿ ಬಿಡುತ್ತಿತ್ತಲ್ಲವಾ? ನಿಮಗೆ ಭೈರಪ್ಪನವರ ಕಾದಂಬರಿ ‘ವಂಶವೃಕ್ಷ’ ಓದಿದ್ದು ನೆನಪಿದೆಯಾ? ಅದರಲ್ಲಿ ಸದಾಶಿವರಾಯ ಇತಿಹಾಸ ಸಂಶೋಧಕ. ಆತನ ಹೆಂಡತಿ ನಾಗಲಕ್ಷ್ಮಿ. ತುಂಬ ಒಳ್ಳೆಯವಳು. ಆತನೂ ಅಷ್ಟೆ. ಅವರಿಗೆ ಮನೆಯಿದೆ, ಮಗುವಿದೆ, ಸಂಸಾರವಿದೆ. ಆದರೆ ಎಲ್ಲೋ ಒಂದು ಕಡೆ ಅವರ ಸಂಬಂಧಕ್ಕೊಂದು purpose ಇಲ್ಲ. ಹಾಗಿರುವಾಗ ಶ್ರೀಲಂಕಾದಿಂದ ಇತಿಹಾಸ ಕಲಿಯಲು ಕರುಣಾರತ್ನೆ ಬರುತ್ತಾಳೆ. ಸದಾಶಿವರಾಯನೊಂದಿಗೆ ಕೆಲಸ ಮಾಡುತ್ತ ಮಾಡುತ್ತ ಒಂದು ಪ್ರೀತಿ ಬೆಳೆಯುತ್ತೆ. ಅದೂ ಒಂದು ಸಂಬಂಧ. ಅದಕ್ಕೊಂದು purpose ಇದೆ. ಕರುಣಾರತ್ನೆ ತುಂಬ ದಿನ ಮದುವೆಯೇ ಆಗದೆ, ಕಡೆಗೂ ಮಕ್ಕಳಾಗದೆ ಅವನೊಂದಿಗೆ ಉಳಿದು ಬಿಡುತ್ತಾಳೆ. ಉಳಿದದ್ದು ಅವನಿಗೋಸ್ಕರವಾ? ಅವರಿಬ್ಬರೂ ಕಂಡುಕೊಂಡ ಆ ಸಂಬಂಧದಾಚೆಗಿನ purposeಗೋಸ್ಕರವಾ? ಇಂಧದ್ದೇ ಒಂದು purpose ಸದಾಶಿವರಾಯನಿಗೂ-ನಾಗಲಕ್ಷ್ಮಿಗೂ ಮಧ್ಯೆ ಇದ್ದಿದ್ದರೆ ಆ ಸಂಸಾರ ಛಿದ್ರಗೊಳ್ಳದೆ ಇರುತ್ತಿತ್ತಲ್ಲವಾ?

ಸಂಬಂಧಗಳನ್ನು ಕಲ್ಪಿಸಿಕೊಳ್ಳುವಾಗ ನಾವು ಯೋಚಿಸಬೇಕಾದದ್ದೇ ಇದರ ಬಗ್ಗೆ. ಅವನು ಒಳ್ಳೆಯವನಾ ಕೆಟ್ಟವನಾ? ಕುರೂಪಿಯಾ ಹ್ಯಾಂಡ್ಸಮ್ಮಾ? ದುಡ್ಡಿದೆಯಾ ತಿರುಬೋಕಿಯಾ? ವಯಸ್ಸು ದೊಡ್ಡದಾ ಸರಿಯಿದೆಯಾ? ಇವ್ಯಾವೂ ಪ್ರಶ್ನೆಗಳೇ ಅಲ್ಲ. ಅವನೊಂದಿಗೆ ನಾನು ಒಂದು ಕನಸನ್ನ, ಒಂದು ಸಾಧನೆಯನ್ನ, ಯಾವುದೋ ಬೃಹತ್ ಹಂಬಲವನ್ನ, ಅಪರೂಪದ್ದೆನಿಸುವ  purposeನ್ನ ಹಂಚಿಕೊಳ್ಳಲು ಸಾಧ್ಯವಿದೆಯಾ? ಹಾಗಂತ ಯೋಚಿಸು. ಕೇವಲ ಒಂದು ಗಂಡು ಮತ್ತು ಒಂದು ಹೆಣ್ಣು ಒಟ್ಟಿಗಿದ್ದು ಮಾಡುವಂಧ ಕೆಲಸವೇ ಆದರೆ, ನಿನ್ನ ಕನಸಿನ ಲಿಮಿಟ್ಟೇ ಅಷ್ಟಾದರೆ-ನೀನು ತುಂಬ ತುಂಬ ಸಾಮಾನ್ಯಳಾದ ಹುಡುಗಿ. ನಿನಗೆ ನಿನ್ನಷ್ಟೇ ಸಾಮಾನ್ಯನಾದ ಹುಡುಗ ಸಿಕ್ಕರೆ ಸಾಕು. ಅವನಲ್ಲದಿದ್ದರೆ, ಅವನಷ್ಟೇ ಸಾಮಾನ್ಯನಾದ ಮತ್ತೊಬ್ಬ ಹುಡುಗ ಸಿಕ್ಕರೂ ಆದೀತು. ಒಂದು ಅರ್ಧಹೀನ ಸಂಬಂಧವನ್ನು ಕೂಡ ಸತ್ತುಹೋಗುವ ತನಕ ಸ್ವಾದ ಮುಗಿದ ಚೂಯಿಂಗ್‌ಗಮ್ ಅಗೆದಂತೆ ಅಗೆಯುತ್ತಲೇ ಇರ್ತೀಯ. ನಿನ್ನ ಮಟ್ಟಕ್ಕೆ, ನಿನ್ನ ಚಿಂತನೆಯ  ಮಟ್ಟಕ್ಕೆ ನೀನು ಸುಖಿಯೂ ಆಗಿರಬಹುದು. Be that and be happy.  ನಿನ್ನಂಧವರಿಗೆ ಒಂದು ಸಂಬಂಧದಾಚೆಗಿನ ಸಂಬಂಧ, ವಿವರಣೆಯಾಚೆಗಿನ purpose ಖಂಡಿತ ಬೇಕಾಗಿರುವುದಿಲ್ಲ. ನೀವು ಸುಖಿಗಳು.’

ಆದರೆ ಅವರು ಕೆಲವರಿರುತ್ತಾರೆ. ಮೇಡಂ ಕ್ಯೂರಿ ಮತ್ತು ಆಕೆಯ ಗಂಡನಂಧವರು! ದೇವಿಕಾರಾಣಿ-ರೋರಿಚ್, ಸತ್ಯಜಿತ್ ರೇ ಮತ್ತು ಮಾಧವಿ, ಸಾಹಿರ್-ಅಮೃತಾ ಪ್ರೀತಮ್, ಶಬಾನಾ-ಜಾವೇದ್…. ಹೀಗೆ ಕೆಲವು ಅಪರೂಪದ ಉದಾಹರಣೆಗಳು ಹುಡುಕಿದರೆ ಮಾತ್ರ ಸಿಗುವಂಧವಿವೆ. ಅವರ ನಡುವೆ ಪ್ರೀತಿ ಇದ್ದೂ ಇಲ್ಲದಂತಿತ್ತು. ಇದ್ದ ಪ್ರೀತಿಗೆ ಅದನ್ನು ಮೀರಿದ ಪರ್ಪಸ್ ಒಂದಿತ್ತು. ಕೆಲವರು ತಮ್ಮ ಸಂಬಂಧಕ್ಕೆ ಹೆಸರಿಟ್ಟುಕೊಂಡರು. ಉಳಿದವರು ತಮ್ಮ ಸಂಬಂಧಕ್ಕೆ ‘ಪರ್ಪಸ್’ ಅಂತಲೇ ಹೆಸರಿಟ್ಟುಕೊಂಡರು. ಇವತ್ತು ಪಿಯರಿ ಕ್ಯೂರಿ ಮತ್ತು ಮೇಡಂ ಕ್ಯೂರಿ ಎಷ್ಟು ಮಟ್ಟಸವಾಗಿ, ಓರಣವಾಗಿ, ಅಚ್ಚುಕಟ್ಟಾಗಿ ದಾಂಪತ್ಯ ನಡೆಸಿದರು ಅಂತ ಯಾರೂ ಕೇಳುವುದಿಲ್ಲ. ಆತ ಬಂದ ಕೂಡಲೆ ಮೇಡಂ ಕ್ಯೂರಿ ಕಾಲಿಗೆ ಬಿಸಿ ನೀರು ಕೊಟ್ಟು, ಬಿಸಿ ಬಿಸಿ ಅಡುಗೆ ಬಡಿಸಿ, ಎಲೆ ಮಡಚಿಕೊಟ್ಟಳಾ ಅಂತ ಪ್ರಶ್ನೆ ಹಾಕುವುದಿಲ್ಲ. ಅವರ purposeಗೆ, ಆ ಉದ್ದೇಶಕ್ಕೆ ಅವರ ಸಂಬಂಧ (ಅದನ್ನು ದಾಂಪತ್ಯ ಅಂತ ಕರೆದರೆ ಅದು ನಿಮ್ಮಿಷ್ಟ) ಪೂರಕವಾಗಿತ್ತಾ? ಬೆಸೆದುಕೊಂಡ ಸಂಬಂಧದ ಉದ್ದೇಶ ಈಡೇರಿತಾ? ಇತಿಹಾಸ ಅಷ್ಟನ್ನು ಮಾತ್ರ ಕೇಳಿ ತಿಳಿದುಕೊಳ್ಳುತ್ತದೆ.

ಈಗ ಹೇಳು ನಿನಗೆ ಸಂಬಂಧ ಬೇಕಾ? ಅದಕ್ಕೊಂದು ಹೆಸರು ಬೇಕಾ? ಅಧವಾ ಅದೇನೂ ಇಲ್ಲದೆ- ಕೇವಲ ಒಂದು purpose ನಮ್ಮಿಬ್ಬರನ್ನು ಸಲಹಬೇಕಾ?

ಇಷ್ಟು ಮಾತ್ರದ ಪ್ರಶ್ನೆ ಕೇಳಿಕೊಂಡರೆ ಸಾಕು, ಈ ತನಕ ನಾವಿಟ್ಟುಕೊಂಡಿರುವ ಅನೇಕ ಸಂಬಂಧಗಳ ಅರ್ಧಹೀನತೆ ಬಯಲಾಗಿ ಹೋಗುತ್ತದೆ. ಸಂಬಂಧಗಳು ಅರ್ಧಹೀನವಾಗಿ ಹೋದಾಗ ಅವುಗಳಿಗೊಂದು ತಿರುವು ಕೊಟ್ಟು, ಒಂದು ಹಂತಕ್ಕೆ ತಂದು ನಿಲ್ಲಿಸಿ ಅವುಗಳಿಂದ ಕಳಚಿಕೊಂಡು ಬಿಡುವುದು ಕ್ಷೇಮ. ಇನ್ನೊಂದು ಹೆಂಗಸು ಸಿಕ್ಕಳು ಅನ್ನೋ ಕಾರಣಕ್ಕೆ ತನ್ನ ಹೆಂಡತಿಯನ್ನು ಬಿಟ್ಟು ಬಿಡುವವನು ಎಷ್ಟು ಮೂರ್ಖನೋ, ಇನ್ನೊಬ್ಬಳು ಸಿಗಲಿಲ್ಲವೆಂಬ ಒಂದೇ ಕಾರಣಕ್ಕಾಗಿ ತನ್ನ ಹೆಂಡತಿಯೊಂದಿಗೆ, ಬೇಕಿಲ್ಲದಿದ್ದರೂ ಬದುಕುವವನೂ ಅಷ್ಟೇ ಮೂರ್ಖ. ಮದುವೆಯಾಚೆಗೆ ಮತ್ತೊಂದು ಸಂಬಂಧವಿರಿಸಿಕೊಳ್ಳುವ ಮನುಷ್ಯ ಕೇವಲ ಸೆಕ್ಸು ಹುಡುಕಿಕೊಂಡು, ಬದಲಾವಣೆ ಹುಡುಕಿಕೊಂಡು, thrill ಹುಡುಕಿಕೊಂಡು ಹೊರಟಿದ್ದರೆ-ಅವನು stupid. ಯಾವತ್ತೋ ಒಂದು ದಿನ ವಾಪಸು ಬರುತ್ತಾನೆ. ಅದರ ಬಗ್ಗೆ ಚಿಂತೆ ಬೇಡ. ಆದರೆ ಒಂದು purpose ಅವನನ್ನ ಸೆಳೆಯುತ್ತಿದ್ದರೆ ಮಾತ್ರ ಹುಶಾರಾಗಿರಿ. ಅವನಿಗೆ ನಿಮ್ಮೊಂದಿಗಿನ ಸಂಬಂಧ ಅರ್ಧಹೀನವೆನ್ನಿಸತೊಡಗಿದೆ. ತಕ್ಷಣ ನಿಮ್ಮ ಸಂಬಂಧಕ್ಕೊಂದು purpose ತಂದಿಟ್ಟುಕೊಳ್ಳಿ. ಒಂದು ಮನೆ ಕಟ್ಟಿ. ಮಗಳ ಮದುವೆ plan ಮಾಡಿ. ಇಬ್ಬರೂ ಸೇರಿ ಮಾಡಬೇಕಾದ, ಮಾಡಬಹುದಾದ (ಸೆಕ್ಸ್ ಬಿಟ್ಟು) ಯಾವುದಾದರೂ ಅರ್ಧಪೂರ್ಣ ಕೆಲಸವನ್ನು ತಕ್ಷಣ ಹಮ್ಮಿಕೊಳ್ಳಿ. ದಾಂಪತ್ಯ ಕೂಡ ಒಂದು ವಿಚಿತ್ರ ಪಾತ್ರೆ. ಅದರೊಳಗಿನ ನೀರು ದಿನಾ ಆವಿಯಾಗುತ್ತಿರುತ್ತದೆ. ಇಬ್ಬರೂ ತಂದು ಸುರಿಯುತ್ತಲೇ ಇರಬೇಕು. ಪಾತ್ರೆಯ ಬುಡದಲ್ಲಿ ಪರ್ಪಸ್ ಎಂಬ ನಿತ್ಯಾಗ್ನಿ ಉರಿಸುತ್ತಲೇ ಇರಬೇಕು.

– ರವೀ

Leave a Reply

Your email address will not be published. Required fields are marked *