ನೂರು ಮುಖ ಸಾವಿರ ದನಿ: ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್‍ಸ್‌ನ ಡಿ.ಶಂಕರ್ ಸಿಂಗ್-4

in ನೂರು ಮುಖ ಸಾವಿರ ದನಿ
  • ಭಾಗ-೪ :

ಕನ್ನಡ  ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬ

ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್‍ಸ್‌ನ ಡಿ.ಶಂಕರ್ ಸಿಂಗ್

೧೯೫೪ರಲ್ಲಿ ನಿರ್ಮಾಣವಾದ `ಬೇಡರ ಕಣ್ಣಪ್ಪ’ ಚಿತ್ರದ `ಕಣ್ಣಪ್ಪ’ ಮುಖ್ಯ ಪಾತ್ರದ ಮೂಲಕ ಕನ್ನಡ ಚಿತ್ರರಂಗದ ದಂತಕತೆ, ಕನ್ನಡದ ಕಣ್ಮಣಿ ಡಾ|| ರಾಜ್ ಅವರ ಚಿತ್ರ ಚೈತ್ರಯಾತ್ರೆ ಆರಂಭವಾಗುತ್ತದೆ. ಕಲಾರತ್ನ, ಚಂದುಳ್ಳಿ ಚೆಲುವ ಕಲ್ಯಾಣ್ ಕುಮಾರ್ `ನಟಶೇಖರ’ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿದ್ದೂ ಸಹ ಅದೇ ವರ್ಷ. ಆದರೆ ೧೯೪೭ರಲ್ಲಿ ನಿರ್ಮಾಣ-ನಿರ್ದೇಶನ ಆರಂಭಿಸಿದ್ದ `ಮಹಾತ್ಮಾ’ ಚಿತ್ರ ಸಂಸ್ಥೆ ೧೯೫೪ರವರೆಗೆ  ಏಳು ವರ್ಷಗಳಲ್ಲಿ ಹನ್ನೊಂದು ಚಿತ್ರಗಳನ್ನು ನಿರ್ಮಿಸಿರುತ್ತೆ. ಅಷ್ಟೇ ಅಲ್ಲ ೧೯೪೭ರಲ್ಲೇ ಚಿತ್ರರಂಗ ಪಾದಾರ್ಪಣೆ ಮಾಡಿದ್ದ ಶ್ರೀಮತಿ ಪ್ರತಿಮಾದೇವಿ ಅವರು ಅದೇ ಅವಧಿಯಲ್ಲಿ (೧೯೫೪ರವರೆಗೆ) ಹೆಚ್ಚೂ ಕಡಿಮೆ ಆ ಎಲ್ಲ ಹನ್ನೊಂದು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

`ಶಿವಶರಣೆ ನಂಬಿಯಕ್ಕ’ ಕಥಾವಸ್ತುವಿನ ಲೇಖಕ, ಪಿ.ಗುಂಡೂರಾವ್ ಅವರು ಅದನ್ನು ಸೂಕ್ತ ಸಂಭಾವನೆ ಪಡೆದು ಡಿ.ಶಂಕರ್‌ಸಿಂಗ್ ಅವರಿಗೆ ಕೊಟ್ಟಿದ್ದರು. ನಂತರ ಅದೇ ಲೇಖಕರು ಅದೇ ಕತೆಯನ್ನು ಬಿ.ಆರ್.ಪಂತಲು ಅವರಿಗೂ (ಅವರಿಂದಲೂ ಸಂಭಾವನೆ ಪಡೆದು) ಕೊಟ್ಟು ಬಿಟ್ಟರು. ಈ ವಿಷಯ ತಿಳಿದ ಪಂತುಲು ಅವರು ಮೂರೇ ತಿಂಗಳಲ್ಲಿ ಈ ಚಿತ್ರ ತಯಾರಿಸಿ ಬಿಡುಗಡೆ ಮಾಡಲು ನಿರ್ಧರಿಸಿದರು. ಅದರ ತಯಾರಿಕೆಯನ್ನೂ ಅದ್ಧೂರಿಯಾಗಿಯೂ ಶೀಘ್ರಗತಿಯಲ್ಲೂ ಆರಂಭಿಸಿಬಿಟ್ಟರು. ಇದನ್ನು ತಿಳಿದ ಡಿ. ಶಂಕರ್‌ಸಿಂಗ್ ಅವರು ಕೇವಲ ಇಪ್ಪತ್ತೆಂಟು ದಿನಗಳಲ್ಲಿ ಶಿವಶರಣೆ ನಂಬಿಯಕ್ಕ ಹೆಸರಿನ ತಮ್ಮ ಚಿತ್ರವನ್ನು ತಯಾರಿಸಿ, ಸೆನ್ಸಾರ್ ಮಾಡಿಸಿ ಬಿಡುಗಡೆ ಸಹ ಮಾಡಿಬಿಟ್ಟರು. ಚಿತ್ರವನ್ನು ಜನ ಮೆಚ್ಚಿದರು ಯಶಸ್ವಿಯೂ ಆಯಿತು. ಆದರೆ ಮೂರು ತಿಂಗಳ ನಂತರ ಪಂತುಲು ಅವರು ಬಿಡುಗಡೆ ಮಾಡಿದ `ಶಿವಶರಣೆ ನಂಬಿಯಕ್ಕ’ ಚಿತ್ರವನ್ನು ಜನ ಮೆಚ್ಚಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಅದು ಸೋತಿತು. ಇದರಿಂದ ಪಂತುಲು ಅವರಿಗೆ ಬೇಸರವಾದರೂ ಸಹ ನಂತರ ಶಂಕರ್‌ಸಿಂಗ್ ಅವರ `ನಂಬಿಯಕ್ಕ’ ಚಿತ್ರ ನೋಡಿ ತಮ್ಮ ಚಿತ್ರಕ್ಕಿಂತಲೂ ಅದು ಚೆನ್ನಾಗಿದೆ ಅಂತ ಮನಬಿಚ್ಚಿ ಹೇಳಿದರು. ಇದು ಪಂತುಲು ಅವರ ವಿಶಾಲ ಹಾಗೂ ದೊಡ್ಡ ಗುಣವೂ ಹೌದು. ಹೀಗೇ ಅನಿವಾರ್ಯವಾಗಿ ಸಂದರ್ಭಕ್ಕೆ ಅನುಗುಣವಾಗಿ ಆ ಕಾಲದಲ್ಲಿ ಕೇವಲ ಇಪ್ಪತ್ತೆಂಟು ದಿನಗಳಲ್ಲಿ ಒಂದು ಚಿತ್ರದ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡಿದ ಅತಿರಥ ಡಿ.ಶಂಕರ್‌ಸಿಂಗ್ ಅವರು. ಅದಕ್ಕಾಗಿ ಅವರು ಏಕಕಾಲದಲ್ಲಿ ಮೂರು ಮೂರು ಕಡೆ ಚಿತ್ರೀಕರಣ ಮಾಡಲಾಗಿತ್ತು ಅಂತ ರಾಜೇಂದ್ರಸಿಂಗ್ ಬಾಬು ಅವರು ಸ್ವತಃ ನನಗೆ ಹೇಳಿದರು.

ಒಂದು ಕಾಲದಲ್ಲಿ ವಧುದಕ್ಷಿಣೆ (ತೆರ ಕೊಟ್ಟು ಕನ್ಯೆ ತರುವ) ಪದ್ಧತಿ ಇದ್ದಿತು. ನಂತರ ಅದು ಬದಲಾಗಿ ವರದಕ್ಷಿಣೆ ನೀಡಿ ವರ ನಿಗದಿ ಮಾಡುವ ಪರಿಪಾಠ ಆರಂಭವಾಯಿತು. ನಂತರ ವರದಕ್ಷಿಣೆಯ ಪದ್ಧತಿ ಒಂದು ಸಾಮಾಜಿಕ ಪಿಡುಗೇ ಆಗಿ ಹೋಯಿತು. ಈ ಸಮಸ್ಯೆಯ ಹಿನ್ನೆಲೆಯ ಕಥಾವಸ್ತುವಿನ ಚಿತ್ರವನ್ನು ಡಿ.ಶಂಕರ್‌ಸಿಂಗ್ ಅವರು ೧೯೫೭ರಲ್ಲೇ ತಯಾರಿಸಿದ್ದರು. ಉದಯಕುಮಾರ್ ಮತ್ತು ಪ್ರತಿಮಾದೇವಿ ಅವರು ಈ ಚಿತ್ರದ ನಾಯಕ ಮತ್ತು ನಾಯಕಿ. ಹಿಂದಿ ಚಿತ್ರ ಗೀತೆಗಳನ್ನು ಯಥಾವ್ತತಾಗಿ ತಮಿಳಿಗೆ ಭಟ್ಟಿ ಇಳಿಸುತ್ತಿದ್ದ ಸಂಗೀತ ನಿರ್ದೇಶಕರು ಯಾರು ಗೊತ್ತೇ? ಪ್ರಸಿದ್ಧ ಮಾಡರ್ನ್ ಥಿಯೇಟರ್‍ಸ್ ನಿರ್ಮಾಣದ ಬಹುತೇಕ ಎಲ್ಲ ಚಿತ್ರಗಳ ಸಂಗೀತ ನಿರ್ದೇಶಕರಾಗಿದ್ದ ವೇದ ಅವರು. ಕನ್ನಡದಲ್ಲಿ ಇತರೆ ಭಾಷೆ ಚಿತ್ರಗಳ ಅನೇಕ ಹಾಡುಗಳನ್ನು ಯಥಾವತ್ತಾಗಿ ಭಟ್ಟಿ ಇಳಿಸಿದ ಸಂಗೀತ ನಿರ್ದೇಶಕರು ಸತ್ಯಂ. ಅವರು ಹೆಚ್ಚಿನ ಚಿತ್ರಗಳಲ್ಲಿ ಸ್ವಂತ ಸಂಗೀತದ ಅದ್ಭುತ ಹಾಡುಗಳನ್ನೂ ಸಹ ನೀಡಿದ್ದಾರೆ. ಅದಿರಲಿ ಬಿಡಿ.

ಇದನ್ನು ಯಾಕೆ ಹೇಳಿದೆ ಅಂದರೆ ಇವರಿಗಿಂತ ಮುಂಚೆಯೇ ಅಂದರೆ ೧೯೫೧ರಲ್ಲೇ ಕನ್ನಡ ಚಿತ್ರರಂಗಕ್ಕೆ ಸಂಗೀತಗಾರರಾಗಿ ಬಂದ ಪಿ.ಶಾಮಣ್ಣ ತಮ್ಮ ಅನೇಕ ಚಿತ್ರಗಳಿಗೆ ನೀಡಿದ ಸಂಗೀತದಲ್ಲಿ ಜನಪ್ರಿಯ ಹಿಂದೀ (ಮಹಲ್ ಇತ್ಯಾದಿ) ಚಿತ್ರಗೀತೆಗಳನ್ನು ಯಶಸ್ವಿಯಾಗಿ ಭಟ್ಟಿ ಇಳಿಸಿದ್ದರು. ಈ `ವರದಕ್ಷಿಣೆ’ ಚಿತ್ರದಲ್ಲಿನ ಹಾಡುಗಳು ಸಹ ಕೆಲ ಹಿಂದೀ ಚಿತ್ರಗಳ ಹಾಡುಗಳ ಅನುಕರಣೆಯಾಗಿದ್ದವು. ದೇವ್ ಆನಂದ್‌ರ ಪೇಯಿಂಗ್ ಗೆಸ್ಟ್ ಹಿಂದಿ ಚಿತ್ರದ “ಛೋಡ್ ದೋ ಆಚಲ್ ಜಮಾನ ಕ್ಯಾ ಕಹೇಗಾ” ಎಂಬ ಜನಪ್ರಿಯ ಹಾಡು ಈ ಚಿತ್ರದಲ್ಲಿ “ಸಾಕು ಸಾಕು ಈ ವಿನೋದ ಕೈ ಬಿಡೀಗ” ಎಂಬುದಾಗಿ ಬಂದಿದೆ. ಉದಯಕುಮಾರ್ ಮತ್ತು ಪ್ರತಿಮಾದೇವಿ ಅವರ ಮೇಲೆ ಈ ಹಾಡು ಚಿತ್ರಿತವಾಗಿದೆ. ಹಿಂದಿಯಲ್ಲಿ ದೇವ್ ಆನಂದ್ ಮತ್ತು ನೂತನ್ ಅವರ ಮೇಲೆ ಈ ಹಾಡು ಚಿತ್ರಿತವಾಗಿದೆ. ಕಿಶೋರ್‌ಕುಮಾರ್ ಹಾಗೂ ಆಶಾ ಭೋಂಸ್ಲೆ ಇದನ್ನು ಹಾಡಿದ್ದಾರೆ. ಕನ್ನಡದಲ್ಲಿ ಬಾಗೇಪಲ್ಲಿ ಸುಬ್ರಮಣ್ಯಂ ಮತ್ತು ರಾಣಿ ಹಾಡಿದ್ದಾರೆ. ಹಿಂದಿಯಲ್ಲಿ ಹೊರಾಂಗಣದಲ್ಲಿ ಚಿತ್ರಿತವಾದ ಈ ಗೀತೆಯನ್ನು ಕನ್ನಡದಲ್ಲಿ ಒಳಾಂಗಣದಲ್ಲಿ ಚಿತ್ರೀಕರಿಸಿಲಾಗಿದೆ. ಪ್ರತಿಮಾದೇವಿ ಅವರು ಈ ಹಾಡಿನಲ್ಲಿ ಲವಲವಿಕೆಯಿಂದ (ನೂತನ್‌ಗಿಂತಲೂ) ಚುರುಕಾಗಿ ಅಭಿನಯಿಸಿದ್ದಾರೆ.

೧೯೬೧ರ `ರಾಜಾ ಸತ್ಯವ್ರತ’ ಎಂಬ ಚಿತ್ರ ಡಿ.ಶಂಕರ್‌ಸಿಂಗ್ ಅವರು ತಮ್ಮದಲ್ಲದ ಬೇರೆಯವರ ನಿರ್ಮಾಣ ಸಂಸ್ಥೆಗಾಗಿ ನಿರ್ದೇಶಿಸಿದ ಚಿತ್ರ. ಇದರಲ್ಲಿ ಅವರ ಮತ್ತೊಬ್ಬ  ಪುತ್ರ ಸಂಗ್ರಾಮ್‌ಸಿಂಗ್ ಬಾಲನಟನಾಗಿ ಅಭಿನಯಿಸಿದ್ದ.

ಪ್ರತಿಮಾದೇವಿಯವರು ಡಾ|| ರಾಜ್ ಜೋಡಿಯಾಗಿ ಪ್ರಪ್ರಥಮವಾಗಿ ಅಭಿನಯಿಸಿದ ೧೯೬೧ರ ಚಿತ್ರ `ಭಕ್ತ ಚೇತ’. ಇದರಲ್ಲಿ ರಾಜೇಂದ್ರಸಿಂಗ್ ಬಾಬು ಬಾಲನಟನಾಗಿ ಅಭಿನಯಿಸಿದ್ದಾರೆ. ಪರಿಶಿಷ್ಠ ಜಾತಿಗೆ ಸೇರಿದ ಚಪ್ಪಲಿ ತಯಾರಿಸುವ ಕಾಯಕದ `ಚೇತ’ ತನ್ನ ಕಷ್ಟ ಕಾರ್ಪಣ್ಯದ ಜೀವನದಲ್ಲೇ ಸಾಧನೆ ಮಾಡುವ ಕಥಾವಸ್ತುವಿನ ಚಿತ್ರ ಇದು. ಇಂತಹ ಕಥಾವಸ್ತುವಿನ ಚಿತ್ರವನ್ನು ಆ ಕಾಲದಲ್ಲೇ ತಯಾರಿಸಿದ ಶಂಕರ್‌ಸಿಂಗ್ ಅವರು ಅಭಿನಂದನಾರ್ಹರು ಅಲ್ಲವೇ!

`ಬೇಡರ ಕಣ್ಣಪ್ಪ’ ಚಿತ್ರದ `ಕಣ್ಣಪ್ಪ’

ಈಗ ಶಂಕರ್ ಸಿಂಗ್ ಅವರ ವೈಯುಕ್ತಿಕ ಹಿನ್ನಲೆ ಬಗ್ಗೆ ಕೊಂಚ ನೋಡೋಣ. ಅವರು ಬ್ರೂಕ್ ಬಾಂಡ್ ಟೀ ಕಂಪೆನಿಯಲ್ಲಿ ನೌಕರರಾಗಿದ್ದರು. ಅವರು ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅದರಲ್ಲಿ  ಸಕ್ರಿಯವಾಗಿ ಭಾಗವಹಿಸಿ ಜೈಲಿಗೂ ಹೋಗಿ ಬಂದಿದ್ದರು. ಮಹಾತ್ಮಾ ಗಾಂಧಿ ಅವರ ಅಭಿಮಾನಿಗಳು ಮತ್ತು ಅವರ ಕಟ್ಟಾ ಅನುಯಾಯಿಗಳೂ ಆಗಿದ್ದರು. ಅಷ್ಟೇ ಅಲ್ಲ ಜವಾಹರ್‌ಲಾಲ್ ನೆಹರು ಅವರ ಅಭಿಮಾನಿ ಹಾಗೂ ಅನುಯಾಯಿಗಳೂ ಆಗಿದ್ದರು. ಅದೇ ಕಾರಣದಿಂದಲೇ ಬಿ.ವಿಠಲಾಚಾರ್ಯ ಹಾಗೂ ಇವರು ಸೇರಿ ಅರಸೀಕರೆಯಲ್ಲಿ ೧೯೪೨ರಲ್ಲಿ ಎರಡು ಟೂರಿಂಗ್ ಟಾಕೀಸ್ ಆರಂಭಿಸುವಾಗ ಒಂದಕ್ಕೆ `ಮಹಾತ್ಮಾ ಟೂರಿಂಗ್ ಟಾಕಿಸ್’ ಅಂತಲೂ ಮತ್ತೊಂದಕ್ಕೆ `ಜವಾಹರ್‌ ಟೂರಿಂಗ್ ಟಾಕೀಸ್’ ಅಂತಲೂ ಹೆಸರಿಟ್ಟರು. ನಂತರ ಅದೇ ಇಬ್ಬರೂ ಸೇರಿ ೧೯೪೬ರಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸುವಾಗ ಅದಕ್ಕೂ ಸಹ `ಮಹಾತ್ಮಾ ಪಿಕ್ಚರ್ಸ್’ ಅಂತಲೇ ಹೆಸರಿಟ್ಟರು.

ಮದರಾಸಿನಲ್ಲಿ ನೆಲೆ ನಿಂತಿದ್ದ ಕನ್ನಡ ಚಿತ್ರಗಳ ನಿರ್ಮಾಣ ಕರ್ನಾಟಕಕ್ಕೆ ತಿರುಗುವಂತೆ ಸ್ಥಳಾಂತರಗೊಳ್ಳುವಂತೆ ಮಾಡುವಲ್ಲಿ ವಿಠಲಾಚಾರ್ಯ ಸೇರಿದಂತೆ ಶಂಕರ್‌ಸಿಂಗ್ ಮುಖ್ಯ ಮತ್ತು ಮೂಲ ಕಾರಣ. ಅದಕ್ಕೆ ಪೂರಕವಾಗಿ ಶಂಕರ್‌ಸಿಂಗ್ ತಮ್ಮ ಎಲ್ಲ ಚಿತ್ರಗಳನ್ನು ಕರ್ನಾಟಕದಲ್ಲೇ ಒಂದೂವರೆ ದಶಕಗಳಿಂದ ಮಾಡುತ್ತಾ ಬಂದ ಕಾರಣ ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿ ನಿರ್ಮಾಣವಾಗುವ ಕನ್ನಡ ಚಿತ್ರಗಳಿಗೆ ಸಹಾಯಧನ ಕೊಡಲು ೧೯೬೨ರಿಂದ ಆರಂಭಿಸಿತು. ಶಂಕರ್ ಸಿಂಗ್ ಅವರ ಸಲಹೆಯಂತೆ ನಿಜಲಿಂಗಪ್ಪ (ಮುಖ್ಯಮಂತ್ರಿ) ಅವರ ಸರ್ಕಾರ ಸಿನಿಮಾ ಟಿಕೆಟಿಗೆ ಒಂದು ರೂಪಾಯಿನಂತೆ ಸರ್‌ಚಾರ್ಜ್ ವಿಧಿಸಿ ಅದನ್ನು ಸಹಾಯಧನ ನೀಡಲು ಆರಂಭಿಸಿತು. ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಮದರಾಸಿನಿಂದ ಕರ್ನಾಟಕಕ್ಕೆ ಬಂದು ನೆಲೆಯೂರಲು ಸಾಧ್ಯವಾಯಿತು. ಸಿಂಗ್ ಅವರ ಈ ಸಾಧನೆ ಸಾಮಾನ್ಯವೇ.

ಕರ್ನಾಟಕದ ಒಳಗೆ ಹಾಗೂ ಹೊರಗೆ ಹೆಚ್ಚು ಚಿತ್ರಗಳಿಗೆ ಹೊರಾಂಗಣ ಚಿತ್ರೀಕರಣದ ಮಾಡಿ ಮೇಲ್ಪಂಕ್ತಿ ಹಾಕಿ ಕೊಟ್ಟ ಕೀರ್ತಿ ಹಾಗೂ  ಹಿರಿಮೆ ಇವರಿಗೆ ಸಲ್ಲುತ್ತದೆ.

೧೯೪೭ರಿಂದ ೧೯೭೭ರವರೆಗೆ ಡಿ.ಶಂಕರ್‌ಸಿಂಗ್ ಅವರು ಚಿತ್ರ ನಿರ್ಮಾಣ ಹಾಗೂ (ಕೆಲವು ಹೊರತು) ನಿರ್ದೇಶನದಲ್ಲಿ  ಸುಮಾರು ಮೂರು ದಶಕಗಳವರೆಗೆ ತೊಡಗಿದ್ದರು. ಈ ಅವಧಿಯಲ್ಲಿ ಅವರು ನಿರ್ಮಿಸಿದ ಒಟ್ಟು ಚಿತ್ರಗಳು ಇಪ್ಪತ್ತೈದಕ್ಕೂ ಹೆಚ್ಚು. ೧೯೪೭ರ ಶ್ರೀಕೃಷ್ಣಲೀಲಾ ಪ್ರಥಮ ಚಿತ್ರ. ನಂತರ ಅವರು ನಿರ್ಮಿಸಿದ ಚಿತ್ರಗಳ ಹೆಸರುಗಳು ಇಂತಿವೆ. `ಭಕ್ತರಾಮದಾಸ್’, `ನಾಗಕನ್ನಿಕಾ’, `ಜಗನ್ಮೋಹಿನಿ’, `ಶ್ರೀನಿವಾಸ ಕಲ್ಯಾಣ’, `ಚಂಚಲಕುಮಾರಿ’, `ದಳ್ಳಾಲಿ’, `ಸೌಭಾಗ್ಯಲಕ್ಷ್ಮಿ’, `ಮುಟ್ಟಿದ್ದೆಲ್ಲಾ ಚಿನ್ನ’, `ಮಾಡಿದ್ದುಣ್ಣೋ ಮಾರಾಯ’, `ಅಷಾಢಭೂತಿ’, ` ಗಂಧರ್ವ ಕನ್ಯೆ’, `ಶಿವಶರಣೆ ನಂಬಿಯಕ್ಕ’, `ದೈವ ಸಂಕಲ್ಪ’, ` ವರದಕ್ಷಿಣೆ’, `ಪ್ರಭುಲಿಂಗ ಲೀಲೆ’, ` ಮಂಗಳ ಸೂತ್ರ’, ` ಶಿವಲಿಂಗ ಸಾಕ್ಷಿ’, ` ರಾಜಾ ಸತ್ಯವ್ರತ’, `ಭಕ್ತ ಚೇತ’, `ಧರ್ಮಸ್ಥಳ ಮಹಾತ್ಮೆ’, ` ಪಾತಾಳ ಮೋಹಿನಿ’, `ಬ್ಲಾಕ್ ಮಾರ್ಕೆಟ್’, `ಧನಪಿಶಾಚಿ’, `ಲಕ್ಷಾಧೀಶ್ವರ’, ` ಭಲೇ ಕಿಲಾಡಿ’, `ಬಂಗಾರದ ಕಳ್ಳ’ ಮುಂತಾದವು. ೧೯೭೩ರಲ್ಲಿ ನಿರ್ಮಾಣವಾದ ಅವರದೇ ನಿರ್ದೇಶನದ ಬಂಗಾರದ ಕಳ್ಳ ಮಹಾತ್ಮಾ ಸಂಸ್ಥೆಯಡಿ ನಿರ್ಮಿಸಿ, ನಿರ್ದೇಶಿಸಿದ ಅವರ ಕೊನೆಯ ಚಿತ್ರ. ಅದರಲ್ಲಿ ಅರಸೀಕೆರೆಯ ಗಣಪತಿ ಆಸ್ಥಾನ ಮಂಟಪವನ್ನು ಸಹ ಚಿತ್ರೀಕರಿಸಲಾಗಿದೆ.

– (ಮುಂದುವರೆಯುವುದು)

Leave a Reply

Your email address will not be published.

*

Latest from ನೂರು ಮುಖ ಸಾವಿರ ದನಿ

ನೂರು ಮುಖ ಸಾವಿರ ದನಿ: ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್ಸ್‌ನ ಡಿ.ಶಂಕರ್ ಸಿಂಗ್

ಕನ್ನಡ  ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬ ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್ಸ್‌ನ ಡಿ.ಶಂಕರ್ ಸಿಂಗ್ ಭಾಗ-೫ ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು,
Go to Top