ಮಗುವನ್ನು ಚಿವುಟೋದು ಮತ್ತು ತೊಟ್ಟಿಲನ್ನು ತೂಗೋದ್ರಲ್ಲಿ ಚೀನಾ ಎತ್ತಿದ ಕೈ
ಈ ಚೀನಾದ ನರಿ ಬುದ್ಧಿಯನ್ನು ಅರ್ಥ ಮಾಡಿಕೊಂಡು ನಮ್ಮ ಕೇಂದ್ರ ಸರ್ಕಾರ ಬಹಳ ಹುಷಾರಾಗಿ ವರ್ತಿಸಬೇಕು. ಇಷ್ಟು ತಿಂಗಳುಗಳ ಕಾಲ ಗಡಿಯಲ್ಲಿ ನಮ್ಮ ಸೈನಿಕರ ವಿರುದ್ಧ ಹುನ್ನಾರ ಹೂಡಿಕೊಂಡು ಕೂತಿದ್ದ ಚೀನಾ ಇವತ್ತು ಬೇರೆಯದೇ ರಾಗ ಹಾಡುತ್ತಿದೆ.
ಭಾರತದಲ್ಲಿ ನಡೆಯಲಿರುವ ಈ ವರ್ಷದ ಬ್ರಿಕ್ಸ್ ಸಮಾವೇಶದಲ್ಲಿ ಭಾಗವಹಿಸುತ್ತೇವೆ. ಬ್ರಿಕ್ಸ್ ಒಕ್ಕೂಟದ ಸದಸ್ಯ ರಾಷ್ಟ್ರಗಳ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ಜೊತೆಗೆ ಕೆಲಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಹೇಳುವ ಮೂಲಕ ಭಾರತಕ್ಕೆ ಅಚ್ಚರಿ ಮೂಡಿಸಿದೆ.
ಚೀನಾ ಬಲು ಬುದ್ಧಿವಂತ ದೇಶ. ಅಷ್ಟೇ ಕುಯುಕ್ತಿ ಕೂಡ ಇದೆ. ಅದು ಯಾವಾಗಲೂ ಅಷ್ಟೇ ತನ್ನ ಅಭಿವೃದ್ಧಿ ಮತ್ತು ಸುರಕ್ಷತೆಯನ್ನು ಮಾತ್ರ ಬಯಸುತ್ತದೆ. ಹೀಗಾಗಿ ಅದು ಯಾವಾಗಲೂ ಅಷ್ಟೇ ಡಬಲ್ ಗೇಮ್ ಆಡುವುದರಲ್ಲಿ ಎತ್ತಿದ ಕೈ ಅನಿಸಿಕೊಳ್ಳುತ್ತದೆ.
“ಬ್ರಿಕ್ಸ್ ಸಮಾವೇಶಕ್ಕೆ ಮತ್ತು ಅಲ್ಲಿ ಕೈಗೊಳ್ಳುವ ನಿರ್ಧಾರಗಳಿಗೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ. ಭಾರತವೂ ಸೇರಿದಂತೆ ಬ್ರಿಕ್ಸ್ ಒಕ್ಕೂಟದಲ್ಲಿರುವ ಇತರೆ ಸದಸ್ಯ ರಾಷ್ಟ್ರಗಳಿಗೂ ನಮ್ಮ ಬೆಂಬಲ ಸದಾ ಇರುತ್ತದೆ ಅಂತ ಚೀನಾ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಒಂದು ಕಡೆ ಮಗುವನ್ನು ಚಿವುಟುತ್ತಾ ಮತ್ತೊಂದು ಕಡೆ ತೊಟ್ಟಿಲನ್ನೂ ತೂಗುವ ಚೀನಾದ ಈ ದರಿದ್ರ ಕೆಲಸ ನೋಡುತ್ತಿದ್ದರೆ ಅಸಹ್ಯ ಎನಿಸುತ್ತದೆ ಅಂತಾರೆ ಅಂತಾರಾಷ್ಟ್ರೀಯ ತಜ್ಞರು.