ಹಾಯ್ ಬೆಂಗಳೂರ್

ಬುಲೆಟ್ ಪ್ರಕಾಶಿಸುತ್ತಿಲ್ಲ!

ಬುಲೆಟ್ ಪ್ರಕಾಶಿಸುತ್ತಿಲ್ಲ!

ಒಂದಷ್ಟು ಜನರ ಪ್ರೀತಿ, ಒಂದಷ್ಟು ಜನರ ದ್ವೇಷ ಕಟ್ಟಿಕೊಂಡಿದ್ದ ನಟ ಬುಲೆಟ್ ಪ್ರಕಾಶ್ ತಮ್ಮ ಜೀವನ ಪಯಣವನ್ನು ಮುಗಿಸಿದ್ದಾರೆ. ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದ ಬುಲೆಟ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬಿಡುಗಡೆ ಆಗಬೇಕಿರುವ ಸಿನೆಮಾಗಳನ್ನೂ ಸೇರಿಸಿ ಮುನ್ನೂರೈವತ್ತು ಚಿತ್ರಗಳಲ್ಲಿ ನಟಿಸಿರುವ ಬುಲೆಟ್ ತಮ್ಮದೇ ಆದ ಹಾಸ್ಯಪ್ರಿಯರ ಬಳಗ ಹೊಂದಿದ್ದರು. ತಮ್ಮ ಎಂಟ್ರಿಗೆ ವಿಷಲ್ ಬೀಳುವ, ಚಪ್ಪಾಳೆ ಗಿಟ್ಟಿಸಿಕೊಳ್ಳುವ ಮಟ್ಟದ ಜನಪ್ರಿಯತೆ ಗಳಿಸಿದ್ದರು.

ಅಸಲಿಗೆ ಬುಲೆಟ್ ತುಂಬಾ ಸ್ವಾಭಿಮಾನಿ. ತೂಕದ ವ್ಯಕ್ತಿತ್ವ. ಮೂರು ವರ್ಷದ ಹಿಂದೆ ದೇಹದ ತೂಕ ಇಳಿಸಿಕೊಳ್ಳುವ ಸಾಹಸಕ್ಕೆ ಹೋಗಿದ್ದ ಬುಲೆಟ್ ಪಥ್ಯ ಮಾಡುವ ವಿಚಾರದಲ್ಲಿ ಎಡವಿದ್ದರು. ನೂರಾ ನಲವತ್ತು ಕೆಜಿಯಿಂದ ತೊಂಬತ್ತು ಕೆಜಿಗೆ ಇಳಿದಿದ್ದರು. ಹಾಗೆ ತೂಕ ಇಳಿಸಿಕೊಳ್ಳುವ ಭರದಲ್ಲಿ ಆಹಾರ ಕ್ರಮದಲ್ಲಿ ಬದಲಾವಣೆ ಆಗಿ ಆಗಲೇ ಸಾವಿನ ಮನೆಯ ಕದ ತಟ್ಟಿ ಬಂದಿದ್ದರು.

ಅಂದಹಾಗೆ ಬುಲೆಟ್ ಪ್ರಕಾಶ್ ಒಂದಷ್ಟು ಹೀರೋಗಳ ಜೊತೆ ತುಂಬಾ ಚೆನ್ನಾಗಿದ್ದರು. ಇನ್ನೊಂದಷ್ಟು ಕಲಾವಿದರ ಬಗ್ಗೆ ನೇರವಾಗಿ ಮಾತನಾಡಿ ವಿಶ್ವಾಸ ಕೆಡಿಸಿಕೊಂಡಿದ್ದರು. ಅದು ಅವರಿಗೆ ಸಿಗಬೇಕಾದ ಪಾತ್ರಗಳ ಮೇಲೆ ಹೊಡೆತ ಕೊಟ್ಟಿತ್ತು. ಜೊತೆಗೆ ಚಿಕ್ಕಣ್ಣ-ಕುರಿ ಪ್ರತಾಪ್ ಮೊದಲಾದ ಹೊಸ ಹೊಸ ಹಾಸ್ಯ ಕಲಾವಿದರು ಬುಲೆಟ್, ಸಾಧು ಮೊದಲಾದ ದೊಡ್ಡ ತಲೆಗಳ ಜಾಗಕ್ಕೆ ಬಂದು ಕುಳಿತಿದ್ದರ ಪರಿಣಾಮ ಸಹಜವಾಗಿ ಬುಲೆಟ್ ಥರದ ನಟರ ಕರಿಯರ್ ಮೇಲೆ ಹೊಡೆತ ಕೊಟ್ಟಿತ್ತು. ‘ದಯವಿಟ್ಟು ಅವಕಾಶ ಕೊಡಿ. ನಾನು ಮುಖಕ್ಕೆ ಬಣ್ಣ ಹಚ್ಚಬೇಕು’ ಎಂದು ಬುಲೆಟ್ ಎಷ್ಟೋ ನಿರ್ಮಾಪಕರ, ನಿರ್ದೇಶಕರ ಬಳಿ ಗೋಗರೆದದ್ದೂ ಇದೆ. ತಾನೊಂದು ದೊಡ್ಡ ಸ್ಟಾರ್ ಸಿನೆಮಾ ನಿರ್ಮಾಣ ಮಾಡಬೇಕು ಎಂದು ಹಠಕ್ಕೆ ಬಿದ್ದು ಓಡಾಡಿದ್ದೂ ಇದೆ. ಆದರೆ ಅದು ಈಡೇರದೆ ಹೋದ ಕಾರಣದಿಂದ ಕೊರಗಿ ಕಣ್ಣೀರಾಗಿದ್ದೂ ಇದೆ. ಅದೇನೇ ಇದ್ದರೂ ಕನ್ನಡ ಹಾಸ್ಯ ಲೋಕದ ಬಂಡೆಯಂತಿದ್ದ ಬುಲೆಟ್ ಪ್ರಕಾಶ್ ಇನ್ನು ನೆನಪು ಮಾತ್ರ.

Leave a Reply

Your email address will not be published. Required fields are marked *