ಸಾಫ್ಟ್ ಕಾರ್ನರ್:
ಹಿಂದೆಂದೂ ಇರದಷ್ಟು ತೀವ್ರವಾದ ರೀತಿಯಲ್ಲಿ ಭಾರತ ದೇಶ ಇಬ್ಭಾಗವಾಗತೊಡಗಿದೆಯೇನೋ ಅನ್ನಿಸಿ ಖಿನ್ನನಾಗುತ್ತೇನೆ. ಅಜಮಾಸು ನಲವತ್ತು ವರ್ಷಗಳಿಂದ ಇತಿಹಾಸವನ್ನು ಓದುತ್ತಾ ಬೆಳೆದವನು ನಾನು. ಭಾರತ ಇಬ್ಭಾಗವಾದ ಮಾತು ಬಿಡಿ : ಆಗ ನಾನಿನ್ನೂ ಹುಟ್ಟಿರಲಿಲ್ಲ. ಆದರೆ ಎಮರ್ಜೆನ್ಸಿಯನ್ನು ನೋಡಿದೆ. ಅದರ ಕರಾಳತೆ ಮುಗಿದದ್ದನ್ನೂ ನೋಡಿದೆ. ಮೋದಿ ಆಯ್ಕೆಯಾಗಿ ಬಂದು ‘ಅಚ್ಛೇ ದಿನ್ ಆಯೇಂಗೇ’ ಅಂದಾಗ ಕಟ್ಟಾ ಬಿಜೆಪಿಯವರಿಗಿಂತ ಹೆಚ್ಚಾಗಿ ಎಕ್ಸೈಟ್ ಆದವನು ನಾನು. ಈಗ ನಿಜಕ್ಕೂ ಮೋದಿಯ ‘ಅಚ್ಛೇ ದಿನ್’ ಬಂದಿರುವುದನ್ನು ನೋಡಿ ಗಾಬರಿಯಾಗಿ ಕುಳಿತಿದ್ದೇನೆ. ನನ್ನ ಪ್ರೀತಿಯ ಮಿತ್ರ ಶಿರೂರು ಹನುಮಂತರೆಡ್ಡಿ ‘ಈ ದರಿದ್ರ ದೇಶಕ್ಕೆ ಭವಿಷ್ಯವಿಲ್ಲ’ ಅಂತ ಅಮೆರಿಕಾದಲ್ಲಿ ಕುಳಿತು ನಿಡುಸುಯ್ಯುವುದನ್ನು ನೋಡಿ ಇನ್ನಷ್ಟು ಖಿನ್ನನಾಗುತ್ತೇನೆ. ಇಷ್ಟು ಭಯಾನಕವಾಗಿ ಹಿಂದೆಂದೂ ನಮ್ಮ ದೇಶದಲ್ಲಿ polarization ಆಗಿರಲಿಲ್ಲ. ‘ನೀನು ಹಿಂದೂವಾ? ಮುಸಲ್ಮಾನನಾ?’ ಅಂತ ಹಿಂದೆ ಯಾವತ್ತೂ, ಯಾರನ್ನೂ ಕೇಳಿರಲಿಲ್ಲ. ಇವತ್ತು ಪ್ರತಿಯೊಬ್ಬರೂ ಹಾಗಂತ ಕೇಳುವುದನ್ನು ನೋಡುತ್ತಿದ್ದೇನೆ. ನೀವೊಬ್ಬ ಹಿಂದೂ ಅಂತ ಹೆಮ್ಮೆ ಪಡುವುದರಲ್ಲಿ ಅದೇನು ಹೆಗ್ಗಳಿಕೆ ಇದೆಯೋ ಕಾಣೆ. ನೀವೊಬ್ಬ ಮುಸಲ್ಮಾನನೆಂದು ಗಡ್ಡ ನೀವಿಕೊಳ್ಳುವುದರಲ್ಲಿ ಅದ್ಯಾವ ಸಂಭ್ರಮವಿದೆಯೋ ಕಾಣೆ. ಏಕೆಂದರೆ ನಾವ್ಯಾರೂ ಬ್ರಾಹ್ಮಣನಾಗಬೇಕು, ಲಿಂಗಾಯತನಾಗಬೇಕು, ಕುರುಬನಾಗಬೇಕು, ಮುಸ್ಲಿಮನಾಗಬೇಕು ಅಂತ ಅಪ್ಲಿಕೇಷನ್ ಹಾಕಿಕೊಂಡು ಹುಟ್ಟಿದವರಲ್ಲ. ನಾವು ಯಾವ ಜಾತಿಯಲ್ಲಿ ಹುಟ್ಟಿದರೂ, ಯಾವ ಧರ್ಮದಲ್ಲಿ ಬೆಳೆಯುತ್ತಿದ್ದರೂ ನಮಗದು ಮುಖ್ಯವಾಗಲೇಬಾರದು. ಈ ಕಾರಣಕ್ಕಾಗಿ ನಾನು ನನ್ನ ‘ಪ್ರಾಥರ್ನಾ’ ಶಾಲೆಯನ್ನು ಸಂಪೂರ್ಣವಾಗಿ ಜಾತಿಯ ವಿಷದಿಂದ ಹೊರಗಿಟ್ಟು ಬೆಳೆಸುತ್ತಿದ್ದೇನೆ. ಬಹುಶಃ ನನ್ನ ಈ ಸೂಕ್ಷ್ಮ ಮನಸಿನಿಂದಾಗಿಯೇ ನಾನು ಹೆಚ್ಚು ಗಾಬರಿಗೊಳ್ಳುತ್ತಿದ್ದೇನೆ. ಹೆಚ್ಚು ಭಾವುಕನಾಗುತ್ತೇನೆ. ಈ ಬಗ್ಗೆ ಒಬ್ಬ ಖಾವಿಧಾರಿ ಸಂತ ಸ್ವಾಮಿ ಹರ್ಷಾನಂದಾಜೀ ಮಹಾರಾಜ್ ಮಾತನಾಡಿರುವುದರ ಸಾರಾಂಶವನ್ನು ಒಳಪುಟಗಳಲ್ಲಿ ನಿಮಗೆ ನೀಡಿದ್ದೇನೆ.
ಇವೆಲ್ಲವುಗಳ ನಡುವೆಯೇ ಮಾರ್ಚ್ ಹದಿನೈದು ಬರುತ್ತಿದೆ. ಚರಿತ್ರೆಯ ಮಹಾನ್ ಪಾತ್ರಗಳಲ್ಲಿ ಒಬ್ಬನಾದ ಜ್ಯೂಲಿಯಸ್ ಸೀಝರ್ ಕೊಲೆಯಾದ ದಿನವೇ ಈ ರವಿ ಎಂಬ ಬೆಳಗೆರೆ ಹುಟ್ಟಿದ್ದು. ನನಗದು ಮಹಾನ್ ದಿನವೆಂದು ಯಾವತ್ತೂ ಅನ್ನಿಸಿಲ್ಲ. ಚಿಕ್ಕಂದಿನಲ್ಲಿ ನಮ್ಮಮ್ಮ ಎಣ್ಣೆ ನೀರು ಹಾಕಿ, ಹೊಸ ಬಟ್ಟೆ ತೊಡಿಸಿ, ತಲೆ ಬಾಚಿ ಕೆನ್ನೆಯ ಮೇಲೊಂದು ಹೂ ಮುತ್ತನ್ನಿರಿಸಿ ತಬ್ಬಿಕೊಳ್ಳುತ್ತಿದ್ದಳು. ಬೆಳೆಯುತ್ತಾ ಬೆಳೆಯುತ್ತಾ ಹುಡುಗರು-ಹುಡುಗಿಯರು ಹ್ಯಾಪಿ ಬರ್ತ್ಡೇ ಅನ್ನುತ್ತಿದ್ದಾಗ ಸಂಭ್ರಮಿಸಿ ಉಬ್ಬುತ್ತಿದ್ದೆ. ಈಗಲೂ ಅನ್ನುತ್ತಾರೆ. ಆದರೆ ಒಳ ಮನಸು ಬೇರೆಯದನ್ನೇ ಹೇಳುತ್ತದೆ. ‘‘ಮ್, ಗೋರಿಯ ಕಡೆಗೆ ಇನ್ನೊಂದು ಹೆಜ್ಜೆ ಇಡುತ್ತಿದ್ದೀಯ”. ಆ ಮಾತು ಕಿವಿಗೆ ಬಿದ್ದಾಗ ದಡಬಡಿಸಿ ಎದ್ದು ಕುಳಿತು ನಾನು ಏನೇನನ್ನು ಮಾಡಬೇಕೋ ಅದನ್ನು ಮಾಡಿ ಮುಗಿಸಲು ಸರಬರನೆ ಅಣಿಯಾಗುತ್ತೇನೆ. ಈ ಸಲದ ಮಾರ್ಚ್ ಹದಿನೈದರಂದು ನಿಮ್ಮನ್ನು ಭೇಟಿಯಾಗುವ ಆಸೆ ತುಂಬ ಇದ್ದರೂ ಎರಡು ಕಾರಣಗಳಿಗಾಗಿ ನಿಮ್ಮನ್ನ ಕ್ಷಮೆ ಕೇಳುತ್ತಿದ್ದೇನೆ. ಮೊದಲನೆದು ನೀವೆಲ್ಲ ಬಲ್ಲಂತೆ ಕೊರೋನಾ ಹಾವಳಿ. ಪ್ರೀತಿ ಏನೇ ಇದ್ದರೂ, ಎಷ್ಟೇ ಇದ್ದರೂ ನಾವು ನಮ್ಮ ನಮ್ಮ ಆರೋಗ್ಯ ನೋಡಿಕೊಳ್ಳಬೇಕು ತಾನೆ. ಆದ್ದರಿಂದ ಕೆಲವು ದಿನ ಬಿಟ್ಟು ನನ್ನ ಒಂದಷ್ಟು ಪುಸ್ತಕಗಳನ್ನು ಬಿಡುಗಡೆ ಮಾಡಬೇಕಿರುವ ಸಂದರ್ಭದಲ್ಲಿ ನಿಮ್ಮನ್ನು ಖಂಡಿತ ಕರೆಯುತ್ತೇನೆ, ಆಗ ಸೇರೋಣ. ಎರಡನೆಯ ಕಾರಣವೆಂದರೆ ಅನಿವಾರ್ಯವಾಗಿ ನಾನು ಮಾರ್ಚ್ ಹದಿನಾಲ್ಕರಂದೇ ಹೊರಟು ಚಿಕ್ಕದೊಂದು ವಿದೇಶ ಯಾತ್ರೆ ಮುಗಿಸಿ ಬರಬೇಕಾಗಿದೆ. ಅದನ್ನು ಎಷ್ಟೇ ಮುಂದೂಡಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ.
-ಬೆಳಗೆರೆ