ಹಾಯ್ ಬೆಂಗಳೂರ್

ಸೈನ್ಯದ ನಡಿಗೆಯ ಲಯವನ್ನು ತಂದಿರುವುದು ಲಕ್ಷ್ಮೀಶನ ವೈಶಿಷ್ಟ್ಯ

  • ಬೆಳಗೆರೆ ಕೃಷ್ಣ ಶಾಸ್ತ್ರಿ: ಅವರು ಎಂದೂ ಮರೆಯಲಿಲ್ಲ
  • ಭಾಗ-23

ಸೈನ್ಯದ ನಡಿಗೆಯ ಲಯವನ್ನು ತಂದಿರುವುದು ಲಕ್ಷ್ಮೀಶನ ವೈಶಿಷ್ಟ್ಯ

ಇದೊಂದು ಅನುಪ್ರಾಸಾಲಂಕಾರ. ಸಾಲು ಸಾಲಾಗಿರುವ ಸಾಲ್ಮರಗಳು, ಗುಂಪು ಗುಂಪಾಗಿರುವ (ಕುಳ=ಸಮೂಹ, ಸಂಪು) ಬಕುಳ ಗಿಡಗಳು, ತಾಳೆ, ಹಿಂತಾಳೆ ಮರಗಳೂ, ಮೊದಲ ಹೂ ಬಿಟ್ಟಿರುವ ಮರಗಳು, ತಮಾಲ ಮತ್ತು ಮಾಲತಿ ಮರಗಳೂ, ಒತ್ತೊತ್ತಾಗಿರುವ ಬಾಳೆ (ರಂಭ) ಗಿಡಗಳೂ, ಮಂದಾರ ಮರಗಳೂ, ಜಾಲರಿಯಂತೆ ಒಂದಕ್ಕೊಂದು ಹೆಣೆದುಕೊಂಡಿರುವ ಜಾಲಿಯ ಗಿಡಗಳೂ, ಹೊನ್ನೆ, ಸುರಹೊನ್ನೆ ಮರಗಳು, ಪಾಲ, ಪಾಲಾಕ್ಷ ಮರಗಳೂ, ಗಟ್ಟಿ ಮುಟ್ಟಾದ ತರುಣ ವಯಸ್ಸಿನ ಹುಣಸೇ ಮರ (ಆಮ್ರ), ತೂಗುವ ಅಶೋಕವೃಕ್ಷಗಳಿಂದ ಕೂಡಿದ ದೊಡ್ಡ ಉದ್ಯಾನ ಎಷ್ಟು  ಚೆಲಿವಿನದೋ?-ಇಲ್ಲಿ ಪದ್ಯ ಓದಲಿಕ್ಕೆ/ಕೇಳಲಿಕ್ಕೆ ಎಷ್ಟು ಸೊಗಸಾಗಿದೆಯೋ ಹಾಗೆಯೇ ಕಾಡಿನಲ್ಲಿರಬಹುದಾದ ಚಿತ್ರ ಮನೋಜ್ಞವಾಗಿದೆ. ಇಂತಹ ಅನೇಕ ಪದ್ಯಗಳು ಒಮ್ಮೆ ಓದಿದರೆ ಅರ್ಥವಾಗುವುದು ಕಷ್ಟ, ಆದರೆ ನಿಧಾನವಾಗಿ ಅರ್ಥ ಬಿಡಿಸಿಕೊಂಡು ಓದಿದಾಗ ಆ ಪದ್ಯದ ಮಹತ್ವ ಗೊತ್ತಾಗುತ್ತದೆ.

ಅಂತಹುದೇ ಮತ್ತೊಂದು ಅನುಪ್ರಾಸ ಮತ್ತು ಉತ್ಪ್ರೇಕ್ಷೆ ಅಲಂಕಾರದ ಈ ಪದ್ಯ ನೋಡಿ:

ಎತ್ತಿ ಬಹು ಸತ್ತಿಗೆಯ ಮೊತ್ತಂಗಳೆತ್ತಲುಂ ಕತ್ತಲಿಸೆ ಪೊತ್ತ ಮಸೆವೆತ್ತ ಬಲ್ಗತ್ತಿಗಳ ಕಿತ್ತು

ಭಟರೆತ್ತಿ ಜಡಿಯುತ್ತಿರಲ್ಕತ್ತ ಬೆಳಗಿತ್ತುವವು ಮತ್ತೆ ಬಲಕೆ ಸುತ್ತಲುಂ ಕೆತ್ತುವೊಲ್

ಮತ್ತಗಜಮೊತ್ತರಿಸಿ ಮುತ್ತಿ ನಡೆಯುತ್ತೆ ಲರನೊತ್ತಿ ನಿಲಿಸುತ್ತಿರಲು

ದತ್ತಚಮರೋತ್ಥಿತ ಮರುತ್ತತಿಯೊಳುತ್ತಮ ಹೊಮೊತ್ತರಂ ಬಿತ್ತರಿಸಿತು

ಇದೊಂದು ಸೈನ್ಯದ ಆಗಮನವನ್ನು ಹೇಳುವ ಪದ್ಯ. ವಿಶೇಷವೆಂದರೆ ಸೈನ್ಯದ ನಡಿಗೆಯ ಲಯವನ್ನು ತಂದಿರುವುದು ಲಕ್ಷ್ಮೀಶನ ವೈಶಿಷ್ಟ್ಯ. Left Right Left Right ಎಂಬಂತೆ ಎತ್ತಿ ‘ಬಹ ಸತ್ತಿಗೆಯ…’ ಓದಬಹುದು. ಎರಡೂ ಕಡೆಯ ಸೈನಿಕರು ನುಗ್ಗಿದಾಗ ಅವರಿಗಿಡದ ಛತ್ರಿಗಳು ಇಡೀ ರಣರಂಗವನ್ನು ಕಗ್ಗತ್ತಲನ್ನಾಗಿಸಿದವಂತೆ. ಆಗ ಶತ್ರುಗಳನ್ನು ಕತ್ತರಿಸಲೆಂದು ಹಿರಿದ ಮೇಲೆತ್ತಿ ಬೀಸುವ ಖಡ್ಗಗಳಿಂದ ಬಂದ ಫಳಾರೆನ್ನುವ ಬೆಳಕು ಆ ಕತ್ತಲೆಯನ್ನು ಹೋಗಲಾಡಿಸಿತಂತೆ. ಹಾಗೆಯೇ ಇನ್ನೊಂದು ಕಡೆ ಮತ್ತೇರಿದ ಆನೆಗಳು ಒತ್ತರಿಸಿ ಬಂದ ಕಾರಣ ಅಲ್ಲಿ ಗಾಳಿಯೇ ಇಲ್ಲದ ವಾತಾವರಣ ನಿರ್ಮಾಣವಾಯಿತಂತೆ. ಆಗ ರಾಜರಿಗೆ ಬೀಸಲು ತಂದಿದ್ದ ಚಾಮರಗಳಿಂದ ಗಾಳಿ ಹಾಕಿದರಂತೆ. ಇಲ್ಲಿ ಉತ್ಪ್ರೇಕ್ಷೆ ಇದ್ದರೂ ಆ ರಣರಂಗದ ಭೀಭತ್ಸ ವರ್ಣನೆಯನ್ನು ಹೇಗೆ ಕಟ್ಟಿ ಕೊಡುತ್ತಾನೆ ನೋಡಿ ಲಕ್ಷ್ಮೀಶ.

ಅಂತದೇ ಇನ್ನೊಂದು ಪದ್ಯ ಇದು.

ಸುರ್ರನೆ ಸುಳಿದು ಸುತ್ತಿ ಬೆಂಡಾಗೆ ಕುದುರೆಗಳ್‌|

ಕಿರ್ರನೆ ಕಪೀಶ್ವರ ಪಲ್ಗಿರಿದು ಚೀರಲ್ಕೆ|

ಕರ್ರನೆ ಕವಿಯೆ ಕೆತ್ತಲೆ ಶಿರೋಭ್ರಮಣೆಯಿಂ ಕೃಷ್ಣ ಲುಗುಣರ್ಗೆ

ಘರ್ರನೆ ಪೊರಳ್ದು ಗಾಲಿಗಳೇಳೆ ಧರಣಿಯಂ |

ತಿರ್ರನೆ ತಿರುಗುವ ಸುಟ್ಟುರೆ ಗಾಳಿಯಂದದಿಂ |

ಸರ್ರನೆ ಸರಿದುದು ಹಿಂದಕೆ ರಥಂ ಮತ್ತವನಸುರಾರಿ ಬಣ್ಣಿಸಿದನ್ ||

ಇಲ್ಲಿ ಉತ್ಪ್ರೇಕ್ಷೆಯ ಜೊತೆಗೆ ಸಹಜೋಕ್ತಿಯನ್ನೂ ತಂದಿದ್ದಾನೆ. ರಣರಂಗದ ಭೀಭತ್ಸ ವಾತಾವರಣವನ್ನು ಸಹಜೋಕ್ತಿಗಳಿಂದ ನಿರೂಪಿಸಿರುವ ಕ್ರಮ ವಿಶೇಷವಾದದು. ಇಲ್ಲಿ ಸುರ್ರನೆ ಸುಳಿದು ಎನ್ನುತ್ತಾನೆಯೇ ಹೊರತು ಪುರ್ರನೆ ಎನ್ನುವುದಿಲ್ಲ. ಕಿರ್ರನೆ ಕಿರುಚಿದ ರಥದ ಮೇಲಿದ್ದ ಲಾಂಛನದ ಕಪೀಶ್ವರ ಎಂದು ಹೇಳುತ್ತಾನೆಯೇ ಹೊರತು ಕರ್ರನೆ ಎನ್ನುವುದಿಲ್ಲ. ಅದೇ ಕತ್ತಲೆ ಕವಿಯಿತು ಎನ್ನುವಾಗ ನಾವು ಸಾಮಾನ್ಯವಾಗಿ ಹೇಳುವಂತೆ ಕರ್ರನೆ ಕತ್ತಲು ಕವಿಯಿತು ಎನ್ನುತ್ತಾನೆ. ತಿರ್ರನೆ ತಿರುಗುವ ಸುಂಟರಗಾಳಿಯಂತೆ ಎಂದು ಹೇಳುತ್ತಾನೆಯೇ ಹೊರತು, ಪುರ್ರನೆ ತಿರುಗುವ ಎಂದು ಹೇಳುವುದಿಲ್ಲ. ಸರ್ರನೆ ಎನ್ನುವಾಗಿನ ಫೋರ್ಸ್‌ನ್ನು ಗಮನಿಸಿ. ಹೀಗೆ ಅನುಪ್ರಾಸ ಮತ್ತು ಉತ್ಪ್ರೇಕ್ಷೆ, ಸಹಜೋಕ್ತಿಯನ್ನು ಒಟ್ಟೊಟ್ಟಿಗೆ ತರಬೇಕಾದರೆ ಲಕ್ಷ್ಮೀಶನ ಕಾವ್ಯರಚನಾ ಪ್ರತಿಭೆ ಎಂತಹದ್ದಾಗಿರಬೇಕು. ಇಂತಹ ಅನೇಕ ಪದ್ಯಗಳ ಕಡೆಗೆ ಸಿದ್ದಯ್ಯನವರು ನಮ್ಮ ಗಮನಸೆಳೆಯುತ್ತಿದ್ದರು. ತೀರಾ ಕ್ಲಿಷ್ಟವಾದ ಪದ್ಯಗಳನ್ನು ಹೇಳಿ-ನಮಗೆ ಅರ್ಥ ಹೇಳು ಎಂದು ಪರೀಕ್ಷಿಸುತ್ತಿದ್ದರು. ಅಷ್ಟೇ ಅಲ್ಲ; ನಾವೇ ಯೋಚಿಸುವಂತೆ, ಅರ್ಥ ಮಾಡಿಕೊಳ್ಳುವಂತೆ ಗೈಡ್ ಮಾಡುತ್ತಿದ್ದರು.

(ಮುಂದುವರೆಯುವುದು)

Leave a Reply

Your email address will not be published. Required fields are marked *