ಹಾಯ್ ಬೆಂಗಳೂರ್

ಐಶ್ವರ್‍ಯ ಬಂದರೆ ಯಾರಿಗೆ ಕೊಡಲಿ?

  • ಬೆಳಗೆರೆ ಕೃಷ್ಣ ಶಾಸ್ತ್ರಿ: ಅವರು ಎಂದೂ ಮರೆಯಲಿಲ್ಲ : ಭಾಗ-೨೧

ಐಶ್ವರ್‍ಯ ಬಂದರೆ ಯಾರಿಗೆ ಕೊಡಲಿ?

`ಈ ಕೂಳು ಈ ಬಾಳು ಒಪ್ಪಿಗೆ ಇದ್ದರೆ ಕ್ಲಾಸ್ ಕೊಡ್ತೀನಿ. ಇಲ್ಲದಿದ್ದರೆ ನಿಮ್ಮ ಡ್ಯೂಟಿ ರಿಪೋರ್ಟ್ ತೆಗೆದುಕೊಂಡು ಹೋಗಬಹುದು’ ಎಂದು ನಾನು ಬರೆದುಕೊಟ್ಟಿದ್ದ ಡ್ಯೂಟಿ ರಿಪೋರ್ಟ್ ಮತ್ತು ಆರ್ಡ್‌ರ್ ಕಾಪಿಯನ್ನು ವಾಪಸ್ ಕೊಟ್ಟರು. ಒಬ್ಬ ಮೇಲಾಧಿಕಾರಿ ಕೊಟ್ಟ ಆದೇಶವನ್ನು ಹಿಂದಿರುಗಿಸುವಂತಹ ಸಿದ್ದಯ್ಯನವರ ದಿಟ್ಟತನ ನನಗೆ ಆಗಲೇ ಅರಿವಾಯಿತು. ಆ ವೇಳೆಗೆ ಅವರಿಗೆ ಸುಮಾರು ೨೦ ವರ್ಷ ಸರ್ವೀಸ್ ಆಗಿತ್ತು. ಇಲಾಖೆಯಲ್ಲಿ ಒಳ್ಳೆಯ ಹೆಸರೂ ಇತ್ತು. ಕ್ಲೋಸ್‌ಕಾಲರ್ ಕೋಟು, ಕಚ್ಚೆ-ಪಂಚೆ, ಹಳ್ಳಿ ಮೆಟ್ಟು, ಮೈಸೂರು ಪೇಟ (ಜರಿ ಇಲ್ಲದ್ದು) ಎರಡೂ ಕಡೆ ಭುಜದ ಮೇಲೆ ಇಳಿಬಿಟ್ಟಿದ್ದ ವಸ್ತ್ರ-ಶಲ್ಯ.

ಸಿದ್ದಯ್ಯನವರಿಗಿದ್ದ ಸಾಹಿತ್ಯಿಕ ಜ್ಞಾನ, ಶಿಕ್ಷಕ ವೃತ್ತಿಯ ಬಗೆಗಿನ ನಿಷ್ಠೆ, ದಕ್ಷತೆ ನನಗೆ ದಿನದಿನಕ್ಕೆ ಗೊತ್ತಾಗುತ್ತಿತ್ತು. ಅವರು ಹೇಳಿದ್ದು `೨೦ ರೂಪಾಯಿ ಕೂಳು, ಪಾಠ ಮಾಡೋ ಬಾಳು’ ಎಂದು. `೨೧ ರೂಪಾಯಿ ಬೇಕಿತ್ತು, ಇಪ್ಪತ್ತೆರಡು ಬೇಕಿತ್ತು ಎಂಬುವವನು ಮೇಷ್ಟ್ರು ಕೆಲಸ ಮಾಡಬಾರದು. ಹುಡುಗರಿಗೆ ಯಾವಾಗ್ಲೂ ಪಾಠ ಮಾಡೋದೇ? ಎನ್ನುವವನೂ ಉಪಾಧ್ಯಾಯ ಆಗಬಾರದು. ಇದೇ ಕೂಳು ಇದೇ ಬಾಳು ಎಂಬುವವನಿಗೆ ಮಾತ್ರ ಉಪಾಧ್ಯಾಯ ವೃತ್ತಿ’ ಎಂಬುದು ಅವರ ಸಿದ್ಧಾಂತದ ಮಾತಲ್ಲ; ನಡವಳಿಕೆಯಲ್ಲಿ ಕಂಡ ಗುಣ.

ಪ್ರತಿದಿನ ಸಂಜೆ ಸಿದ್ದಯ್ಯನವರು ಆ ಹಳ್ಳಿಯಿಂದ ಅರ್ಧಮೈಲಿ ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದರು (ಅಲ್ಲಿ ಬೆಂಗಳೂರಿಗೆ ಹೋಗುವ ಮೈನ್ ರೋಡ್ ಸಿಗುತ್ತದೆ). ಅಲ್ಲೊಂದು ಮರದ ಕೆಳಗೆ ಕುಳಿತು ನಾವು ಕ್ಲಾಸ್‌ರೂಮಿನಲ್ಲಿ ಆರೂ ಜನರ ಪಾಠದ ಕ್ರಮಗಳನ್ನೂ ಗಮನಿಸುತ್ತಾ, ತಾವೂ ಪಾಠ ಮಾಡುತ್ತಾ, ನಾವು ಮಾಡಿದ ಪಾಠದ ತಪ್ಪು-ಒಪ್ಪುಗಳ ಕುರಿತು ಸಿದ್ದಯ್ಯನವರು ವಿವರಿಸುತ್ತಿದ್ದರು, ತಿದ್ದುತ್ತಿದ್ದರು. ಒಂದು ದಿನ ಹೀಗಾಯ್ತು: ದ್ರೌಪದಿ ವಸ್ತ್ರಾಪಹರಣ ಪ್ರಸಂಗವನ್ನು ನಾನು ಆ ದಿನ ಗದುಗಿನ ಭಾರತದಲ್ಲಿ ಪಾಠ ಮಾಡುತ್ತಾ ಒಬ್ಬ ಹುಡುಗನನ್ನು `ದ್ರೌಪದಿಯ ವಸ್ತ್ರವನ್ನು ಸೆಳೆದವನು ಯಾರು?’ ಎಂದು ಕೇಳಿದ್ದೇನೆ. ಆತ `ದುಸ್ವಾಸ ಸಾರ್’ ಎಂದಿದ್ದಾನೆ.

`ಸರಿ’ ಎಂದು ನಾನು ಮುಂದೆ ಹೋಗಿದ್ದೇನೆ.

ಸಂಜೆ ಆ ಮರದ ಕೆಳಗೆ ಕುಳಿತಾಗ ಸಿದ್ದಯ್ಯನವರು `ಶಾಸ್ತ್ರಿಗಳೇ, ದ್ರೌಪದಿ ವಸ್ತ್ರಾಪಹರಣ ಮಾಡಿದವರು ಯಾರು?’ ಎಂದು ಕೇಳಿದರು.

`ದುಶ್ಯಾಸನ’ ಎಂದೆ

`ಹೌದು ದುಶ್ಯಾಸನ. ದುಶ್ಯಾಸನ` ಎಂದು ಗಟ್ಟಿಯಾಗಿ ನಾಲ್ಕು ಬಾರಿ ಹೇಳಿ ‘ಬೆಳಗ್ಗೆ ನೀವು ಆ ಹುಡುಗನನ್ನು ಕೇಳಿದಾಗ ಆತ ಏನು ಹೇಳಿದ?’

`ಇದನ್ನೇ ಹೇಳಿದ ಸಾರ್’ ಎಂದೆ

`ಇಲ್ಲ ಇಲ್ಲ ನೀವು ಗಮನಿಸಿಲ್ಲ, ಆತ ದುಸ್ವಾಸ ಎಂದ. ನೀವು ಅವನಿಗೆ ವಿಚಾರ ತಿಳಿದಿದೆ, ಎಂದು ಮುಂದೆ ಹೋದಿರಿ. ಆದರೆ ಆತನ ಉಚ್ಚಾರ ಸರಿ ಇತ್ತೋ? ದುಸ್ವಾಸ ಎನ್ನುವ ಹೆಸರು ಸರಿಯೋ? ನೀವು ಈಗ ಹೇಳುತ್ತಿದ್ದೀರಿ ದುಶ್ಯಾಸನ ಎಂದು. ಆತ ದುಸ್ವಾಸ ಹೇಗಾದ? ನೀವು ವಿಚಾರ ತಿಳಿಸುವುದಷ್ಟೇ ಅಲ್ಲ ಆತನಿಗೆ ಭಾಷೆಯನ್ನು ಕಲಿಸುತ್ತಿದ್ದೀರಿ. ಓದುವುದನ್ನು, ಬರೆಯುವುದನ್ನು, ಉಚ್ಚರಿಸುವುದನ್ನು ಕಲಿಸುತ್ತಿದ್ದೀರಿ. ವಿದ್ಯಾರ್ಥಿಗಳಿಗೆ ಮೇಷ್ಟ್ರು ಎಂದರೆ-ಪರಬ್ರಹ್ಮನಿಗಿಂತ ದೊಡ್ಡವನು. ಈಗ ಅವನಿಗೆ ದುಸ್ವಾಸ ಎಂದು ಹೇಳಿಕೊಟ್ಟು ನಾಳೆ ಯಾರಾದರೂ ದುಶ್ಯಾಸನ ಎಂದರೆ-ಇಲ್ಲ ಕಣ್ರಿ ನಮ್ಮ ಮೇಷ್ಟ್ರು ಹೇಳಿಕೊಟ್ಟಿರುವುದೇ ಹೀಗೆ-ನಮ್ಮ ಮೇಷ್ಟ್ರಿಗಿನ್ನ ನಿನಗೆ ಗೊತ್ತೇನು? ಎನ್ನುತ್ತಾನೆ. ಯಾಕೆಂದರೆ ಅವನ ಪಾಲಿಗೆ ಮೇಷ್ಟ್ರು ಎಂದರೆ ಸರ್ವಜ್ಞ. ಆತನಿಗೆ ಗೊತ್ತಿಲ್ಲದಿರುವ ವಿಷಯವೇ ಇಲ್ಲ. ಆತ ಹೇಳಿದ್ದೇ ಸರಿ. ಹೀಗಿರುವಾಗ ಹುಡುಗನನ್ನು ನೀವು ತಿದ್ದಿದ್ದೆಲ್ಲಿ?’ ಹೀಗೆ ಹೇಳುವುದರ ಮೂಲಕ ನನ್ನ ಜೀವನದುದ್ದಕ್ಕೂ ವಿಚಾರವನ್ನು ಭಾಷೆಯನ್ನು ಗಮನಿಸುವಂಥಾದ್ದು ಸಿದ್ದಯ್ಯನವರ ಮೂಲಕ ಬಂತು. ಇಂಥಾ ಅನೇಕ ನಿದರ್ಶನಗಳು ಅವರಿಂದ ಬರುತ್ತಿತ್ತು.

ಸಿದ್ದಯ್ಯನವರು `ಉಪಾಧ್ಯಾಯನಾಗಿರುವವನು ಬಡವನಾಗಿರಬೇಕು ಕಣಯ್ಯ. ಐಶ್ವರ್‍ಯ ಬಂದರೆ ಯಾರಿಗೆ ಕೊಡಲಿ? ಇದರಿಂದ ಎಷ್ಟು ಬಡ್ಡಿ ಬರುತ್ತೆ? ಮತ್ತೆಲ್ಲಿ ತೊಡಗಿಸಲಿ? ಅದರಿಂದೇನು ಬರುತ್ತೆ? ಹೀಗೆ ಯೋಚಿಸುವುದರಿಂದ ಶಾಲೆಯ ಕಡೆಗೆ ಗಮನ ಕೊಡದೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಉಪಾಧ್ಯಾಯನಾದವನು ತದೇಕವೃತ್ತಿ ಎನ್ನುವಂತೆ ಕೆಲಸ ಮಾಡಬೇಕು’ ಎಂಬ ಮಾತುಗಳನ್ನೂ ಹೇಳುತ್ತಿದ್ದರು. ವಿಶೇಷವೆಂದರೆ ಸಿದ್ದಯ್ಯನವರು ಹಾಗಿದ್ದರು.

(ಮುಂದುವರೆಯುವುದು)

Leave a Reply

Your email address will not be published. Required fields are marked *