ಹಾಯ್ ಬೆಂಗಳೂರ್

ಬೆಳಗೆರೆ ಕೃಷ್ಣ ಶಾಸ್ತ್ರಿ: ಸೇವಾಶ್ರಮದ ಲೆಕ್ಕಾಚಾರದಲ್ಲಿ ನಾಲ್ಕಾಣೆ ಕಡಿಮೆ

  • ಬೆಳಗೆರೆ ಕೃಷ್ಣ ಶಾಸ್ತ್ರಿ:

ಅವರು ಎಂದೂ ಮರೆಯಲಿಲ್ಲ

  • ಭಾಗ-20

ಸೇವಾಶ್ರಮದ ಪ್ರಾರಂಭೋತ್ಸವಕ್ಕೆ ಗಾಂಧೀಜಿಯವರನ್ನು ಆಹ್ವಾನಿಸಲಾಯಿತಾದರೂ ಅವರು ಬರಲಿಲ್ಲ. ಅವರ ಪ್ರತಿನಿಧಿಗಳಾಗಿ ಜಮುನಾಲಾಲ್ ಬಜಾಜ್, ಸರ್ದಾರ್ ವಲ್ಲಭರಾಯ್ ಪಟೇಲ್, ರಾಜಾಜಿ ಮೊದಲಾದ ಗಣ್ಯರು ಬಂದರು. ಮುಂದೆ ಅನೇಕ ಬಾರಿ ಈ ಎಲ್ಲ ಗಣ್ಯರು ಇಲ್ಲಿಗೆ ಭೇಟಿ ಕೊಟ್ಟರು. ಈ ಆಶ್ರಮ ಕೇವಲ ವಿದ್ಯಾಕೇಂದ್ರವಾಗಿಯಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭೂಗತ ಚಳವಳಿಗಾರರ ಕೇಂದ್ರವೂ ಆಗಿತ್ತು.

ಲಿಂಗಣ್ಣನವರು ಹಾಸ್ಟೆಲ್‌ನಲ್ಲಿಯೇ ಊಟ ಮಾಡುತ್ತಿದ್ದರು. ಊಟದ ಬಾಬ್ತು ಕಳೆದು ತಮ್ಮ ಸಂಬಳ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ಲಿಂಗಣ್ಣನವರು ಸೇವಾಶ್ರಮದ ಲೆಕ್ಕಾಚಾರದಲ್ಲಿ ನಾಲ್ಕಾಣೆ ಕಡಿಮೆಯಾಗಿದ್ದಕ್ಕೆ ಆ ದಿನದ ಊಟ ಬಿಟ್ಟು ಸರಿದೂಗಿಸಿದರು ಎಂಬ ವಿಷಯ ತಿಳಿದುಬಂತು.

ನಾನೊಮ್ಮೆ ಸೇವಾಶ್ರಮಕ್ಕೆ ಹೋದಾಗ ಕಳ್ಳಕರಿಯ ಎಂಬುವನಿದ್ದ. ಆತನ ಬಗೆಗೆ ವಿಚಾರಿಸಿದ್ದಕ್ಕೆ ತಾನು ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡ ಕರಿಯ ಎಂಬುದಾಗಿಯೂ, ಲಿಂಗಣ್ಣನವರ ಸಂಪರ್ಕಕ್ಕೆ ಬಂದು ಮನಃಪರಿವರ್ತನೆ ಹೊಂದಿ ಸೇವಾಶ್ರಮದಲ್ಲಿಯೇ ಕೆಲಸಕ್ಕೆ ನಿಯುಕ್ತಿಗೊಂಡಿರುವುದಾಗಿಯೂ ತಿಳಿಸಿದ (ಆತ ಒಮ್ಮೆ ಬೆಳಗೆರೆಗೂ ಬಂದಿದ್ದ).

ಹೀಗೆ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಲಿಂಗಣ್ಣನವರು ತಮ್ಮ ಲಕ್ಷಾಂತರ ರೂಪಾಯಿಯ ಹಣ, ಆಸ್ತಿ, ಕಾರ್ಖಾನೆ ಎಲ್ಲವನ್ನೂ ಗಾಂಧೀಜಿಯವರಿಗೆ ಅರ್ಪಿಸಿದ್ದು, ಅವರ ಸೂಚನೆಯ ಮೇರೆಗೆ ಸೇವಾಶ್ರಮ ಸ್ಥಾಪಿಸಿ ಗುಮಾಸ್ತರಾಗಿ ದುಡಿದದ್ದು-ಈ ವಿಷಯವನ್ನು ಈಗ ಯಾರಿಗಾದರೂ ಹೇಳಿದರೆ ಆಶ್ಚರ್ಯಪಡುತ್ತಾರೆ. ಆಗಿನ ಕಾಲದ ಜನ ಹಾಗೆ ನಡೆದುಕೊಳ್ಳುತ್ತಿದ್ದರು ಎಂಬುದು ವಿಶೇಷ.

***

ಸಿದ್ಧಯ್ಯ

ಚಳ್ಳಕೆರೆ ತಾಲ್ಲೂಕು ಹೆಗ್ಗೆರೆಯಲ್ಲಿ ನಾನು ಉಪಾಧ್ಯಾಯ ವೃತ್ತಿಗಾಗಿ ಸೇರಿಕೊಂಡೆ. ಆಗ ನನಗೆ ವಯಸ್ಸು ೨೫ ವರ್ಷ. ಆಗ ಹೊಸದಾಗಿ ನ್ಯೂಟೈಪ್ ಮಿಡಲ್ ಸ್ಕೂಲ್ ಎಂಬ ಸರ್ಕಾರಿ ಶಾಲೆಗಳು ಪ್ರಾರಂಭವಾಗಿದ್ದವು. ಹೆಗ್ಗೆರೆಯಲ್ಲಿ ನಾನು ಇಂಗ್ಲೀಷ್ ಟೀಚರ್ ಆಗಿ-ಎಂದರೆ ಬದಲಿ ಮೇಷ್ಟಾಗಿ ಸೇರಿಕೊಂಡೆ (ಖಾಯಂ ಕೆಲಸವಲ್ಲ. ಆದರೂ ಆದೀತು ಇಲ್ಲದಿದ್ದರೆ ಇಲ್ಲ).

ಆ ದಿನ ಬೆಳಗ್ಗೆಯೇ ಸ್ಕೂಲಿಗೆ ಹೋಗಿ ನನಗೆ ಬಂದಿದ್ದ ಆರ್ಡರ್ ಕಾಪಿಯನ್ನು ಹೆಡ್ ಮಾಸ್ಟರ್ ಅವರ ಮುಂದಿಟ್ಟೆ. ಅವರು ಅದನ್ನು ಓದಿ. `ಆಗಲಿ, ಡ್ಯೂಟಿ ರಿಪೋರ್ಟ್ ಬರೆದುಕೊಡಿ’ ಎಂದು-ಒಂದು ಪೇಪರ್, ಪೆನ್ನನ್ನು ನನ್ನ ಮುಂದಿಟ್ಟರು. ನಾನು ನಿಂತೇ ಇಂಗ್ಲಿಷಿನಲ್ಲಿ ಡ್ಯೂಟಿ ರಿಪೋರ್ಟ್ ಬರೆದು ಅವರಿಗೆ ಕೊಟ್ಟೆ  (ಇಂಗ್ಲಿಷ್ ಟೀಚರ್ ಆದ್ದರಿಂದ). ಆದರೆ ಆ ಹೆಡ್ಮಾಸ್ಟರ್‌ಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಅವರ ಹೆಸರು ಸಿದ್ಧಯ್ಯ. ಆ ಲೆಟರ್ ನೋಡಿ- ತಲೆಯಲ್ಲಾಡಿಸಿ-ನನ್ನ ಕಡೆ ತಿರುಗಿ `ಆಹ. ಆಹ. ಬೇರೆಯವರ ನೆರವಿಲ್ಲದೆಯೆ ಡ್ಯೂಟಿ ರಿಪೋರ್ಟ್ ಬರೆಯಲಿಕ್ಕೆ ಬರುತ್ತೆ ಎಂದಾಯ್ತು’ ಎಂದರು. ಅವರ ಈ ತೀರ್ಮಾನದಲ್ಲಿ ವ್ಯಕ್ತಿಯ ಯೋಗ್ಯತೆಯನ್ನು ಕಟ್ಟುವುದು ಕಾಣುತ್ತಿತ್ತು. ಯಾರೇ ಆಗಿರಲಿ ಅವರ ವರ್ತನೆಯಲ್ಲಿಯೇ ಆ ಯೋಗ್ಯತೆಯನ್ನೂ ಗುರುತಿಸುವುದು ಸಿದ್ಧಯ್ಯನವರ ವ್ಯಕ್ತಿತ್ವದಲ್ಲಿತ್ತು. ಮುಂದುವರೆದು-

`ಸಂಬಳ ಎಷ್ಟು ಗೊತ್ತೊ?’

ಸುಮ್ಮನಿದ್ದೆ.

`ತಿಂಗಳಿಗೆ ಇಪ್ಪತ್ತು ರುಪಾಯಿ’ ಎಂದರು.

ಆಗಲೂ ಸುಮ್ಮನಿದ್ದೆ. ಸುಮಾರು ಐವತ್ತು ಅಡಿ ಅಗಲ, ಐವತ್ತು ಅಡಿ ಉದ್ದದ ಮಾಳಿಗೆ, ಜಂತಿಯಿರುವ ದೊಡ್ಡ ಹಾಲು. ಅದೇ ಕ್ಲಾಸು ರೂಮು. ಅದನ್ನು ತೋರಿಸಿ `ನೋಡಿ ಆ ಮೂಲೆಯಲ್ಲಿ ಕುಳಿತು ಪಾಠ ಮಾಡಬೇಕು’ (ಎಂಟು ಕ್ಲಾಸ್‌ಗಳು, ಆರು ಜನ ಟೀಚರ್‍ಸ್‌. ಅವರಲ್ಲಿ ನಾನೂ ಒಬ್ಬ).

`ಆಯ್ತು’ ಎಂದೆ.

`ಇಪ್ಪತ್ತು ರೂಪಾಯಿ ಕೂಳು, ಪಾಠ ಮಾಡೋ ಬಾಳು, ಇವೆರಡೂ ಒಪ್ಪಿಗೆನೋ?’

(ಮುಂದುವರೆಯುವುದು)

Leave a Reply

Your email address will not be published. Required fields are marked *