ಬರೆಯಲು ಹೊರಟವನ ಮನಸ್ಸಿನಲ್ಲಿ ಮೊದಲು ನಾನೇಕೆ ಬರೆಯಬೇಕು ಎಂಬ ಪ್ರಶ್ನೆ ಹುಟ್ಟಬೇಕು

in Uncategorized/ಜಾನಕಿ ಕಾಲಂ

ಜಾನಕಿ ಕಾಲಂ:

ನಮ್ಮೂರು ಉಪ್ಪಿನಂಗಡಿ. ಅದನ್ನು ಮೂರು ದಿಕ್ಕಿನಿಂದಲೂ ನದಿ ಸುತ್ತುವರಿದಿದೆ. ಚಾರ್ಮಾಡಿ ಘಾಟಿ ಇಳಿದು ಬೆಳ್ತಂಗಡಿಯಿಂದ ಉಪ್ಪಿನಂಗಡಿಗೆ ಹೋಗುವವರಿಗೆ ನೇತ್ರಾವತಿ ನದಿ ಎದುರಾಗುತ್ತದೆ. ಸಂಪಾಜೆ ಘಾಟಿ ಬಳಸಿಕೊಂಡು ಪುತ್ತೂರು ಕಡೆಯಿಂದ ಬರುವವರಿಗೆ ಕುಮಾರಧಾರ ನದಿ ಅಡ್ಡ ಬರುತ್ತದೆ. ಇದ್ಯಾವುದೂ ಬೇಡ ಎಂದು ಶಿರಾಡಿ ಘಾಟಿ ಇಳಿದು ಹೋಗುತ್ತೀರಾದರೆ ಕೆಂಪುಹೊಳೆಯಿಂದ ಹಿಡಿದು ಹೆಸರೇ ಇಲ್ಲದ ಅಸಂಖ್ಯಾತ ಕಿರುತೊರೆಗಳು ನಿಮ್ಮ ದಾರಿಗೆ ಎದುರಾಗುತ್ತವೆ. ನದಿಯನ್ನು ದಾಟಿ ಹೋಗದೇ ನಮ್ಮೂರು ನಿಮಗೆ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ನಮ್ಮೂರಿಗೆ ಹೋಗಬೇಕೆಂದರೆ ಸೇತುವೆ ದಾಟುವುದು ಅನಿವಾರ್ಯ. ಬರೆಯುವುದು ಹೇಗೆ? ಓದುಗನನ್ನು ಮುಟ್ಟುವುದು ಹೇಗೆ ಎಂದು ಕೇಳಿದ ಹುಡುಗರಿಗೆಲ್ಲ ನಮ್ಮೂರೇ ಉತ್ತರ. ನಮ್ಮೂರನ್ನು ನೀವು ಪ್ರವೇಶಿಸಬೇಕಿದ್ದರೆ ನದಿಯನ್ನು ದಾಟಬೇಕು. ನದಿಯನ್ನು ಹೇಗೆ ದಾಟುತ್ತೀರಿ ಅನ್ನುವುದು ಅವರವರ ಚಾಕಚಕ್ಯತೆಗೆ ಬಿಟ್ಟದ್ದು. ಸೇತುವೆಯ ಮೂಲಕವೋ, ದೋಣಿಯ ಮುಖಾಂತರವೋ,  ತೆಪ್ಪದಲ್ಲಿಯೋ ನದಿ ಒಣಗಿದಾಗ ನಡೆದುಕೊಂಡೋ ಎದೆಗಾರಿಕೆ ಇರುವವರು ಈಜಿಕೊಂಡೋ ಊರು ಸೇರಬಹುದು. ಯಾರು ನದಿಯಾಚೆಗೆ ನಿಂತ ಪ್ರಯಾಣಿಕರನ್ನು ಸುಲಲಿತವಾಗಿ, ಸುಖವಾಗಿ ಊರು ತಲುಪಿಸುತ್ತಾರೆ ಅನ್ನುವುದು ಕೂಡ ಮುಖ್ಯ. ಒಬ್ಬ ಲೇಖಕ ಸೇತುವೆ ಕಟ್ಟಿ, ಮತ್ತೊಬ್ಬ ದೋಣಿಯೇರಿಸಿ, ಮತ್ತೊಬ್ಬ ಈಜುತ್ತಲೇ ಬೆನ್ನ ಮೇಲೆ ಹಾಕಿಕೊಂಡು ಮತ್ತೊಬ್ಬನನ್ನು ನದಿ ದಾಟಿಸಬಹುದು. ಅದು ನದಿ ದಾಟಲು ಹೊರಟಿರುವವರ ಹುಮ್ಮಸ್ಸು, ತಾಕತ್ತು, ತ್ರಾಣ, ಪ್ರಾಣದ ಮೇಲಿನ ಆಸೆ, ಸಾಹಸಪ್ರಿಯತೆಗಳನ್ನು ಅವಲಂಬಿಸಿಕೊಂಡಿರುತ್ತದೆ.

ಹೀಗೆ ನದಿ ದಾಟಿಸಲು ಹೊರಟ ಲೇಖಕ ಹೇಗಿರಬೇಕು? ಹೇಗೆ ತಯಾರಾಗಬೇಕು? ಅವನು ಏನೇನು ಸಿದ್ಧತೆ ಮಾಡಿಕೊಂಡಿರಬೇಕು ಅನ್ನುವುದನ್ನೆಲ್ಲ ವಿವರಿಸುವುದು ಕಷ್ಟ. ಆದರೆ ಈ ಕಷ್ಟಕಾಲದಲ್ಲಿ ಇಂಥ ಪ್ರಶ್ನೆಯನ್ನು ಕೇಳುವವರೇ ಅಪರೂಪ ಆದ್ದರಿಂದ ಉತ್ತರಿಸುವುದು ಅಗತ್ಯ ಕೂಡ. ಮೊನ್ನೆ ಭಾಷಣ ಮಾಡುತ್ತಾ ಖ್ಯಾತ ವಿಮರ್ಶಕರೊಬ್ಬರು, ಲೇಖಕರಾಗಲು ಹೊರಡುವವರು ಇಡೀ ಕನ್ನಡ ಸಾಹಿತ್ಯವನ್ನು ಮೊದಲು ಓದಬೇಕು ಎಂದು ಸುಗ್ರೀವೊ ಹೊರಡಿಸಿದ್ದರು. ಹೊಸದಾಗಿ ಬರೆಯುವವರು ಹಾಗೇನಾದರೂ ಮಾಡಲು ಹೊರಟರೆ, ಕೇವಲ ಓದಲಿಕ್ಕೇ ಮೂರು ಜನ್ಮ ಎತ್ತಬೇಕಾಗುತ್ತದೆ. ಮುನ್ನೂರು ವರುಷಗಳ ಹಿಂದೆ ಅಷ್ಟಾಗಿ ಸಾಹಿತ್ಯ ಸೃಷ್ಟಿಯಾಗದೇ ಇದ್ದ ಕಾಲದಲ್ಲಿ ಓದಿಯೇ ಬರೆಯಬೇಕು ಎಂಬ ವಾದವನ್ನು ಒಪ್ಪಿಕೊಳ್ಳಬಹುದಾಗಿತ್ತೋ ಏನೋ? ಈಗ ಹಾಗೆಂದು ವಿಧಿಸುವುದು ಕಷ್ಟವೇ. ಬರೆಯಲು ಹೊರಟವನು ಮೊಟ್ಟ ಮೊದಲಿಗೆ ನಾನೇಕೆ ಬರೆಯಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಅವನು ಬರೆಯುತ್ತಿರುವುದು ಖುಷಿಗೋ ಜನಪ್ರಿಯತೆಗೋ ಲೇಖಕ ಎಂದು ಕರೆಸಿಕೊಳ್ಳುವುದಕ್ಕೋ ಆಗಿದ್ದರೆ ಅವನು ಬರೆಯಬೇಕಾಗಿಲ್ಲ ಎಂಬ ವಾದವನ್ನೂ ನವ್ಯದ ಲೇಖಕರು ಮಂಡಿಸಿ, ಬರೆಯುವುದು ಅವನ ಆಂತರಿಕ ತುರ್ತು ಆಗಬೇಕು ಎಂದೆಲ್ಲ ಫರ್ಮಾನು ಹೊರಡಿಸಿದ್ದರು. ಬರಹದಲ್ಲಿ ತಾತ್ವಿಕತೆ, ಬದ್ಧತೆ, ಮಣ್ಣು, ಮಸಿಯೆಲ್ಲ ಇರಬೇಕೆಂದು ಈಗಲೂ ಒಂದು ವರ್ಗದ ಬರಹಗಾರರು ವಾದಿಸುವುದಿದೆ. ಅವನ್ನೆಲ್ಲ ಬರೆಯಹೊರಡುವವನು ಮನಸ್ಸಿಗೆ ಹಚ್ಚಿಕೊಳ್ಳಬೇಕಾಗಿಲ್ಲ. ಬರಹಗಾರನಾಗಲು ಹೊರಟವನಿಗೆ ಕೊನೆಗೂ ತಾನೊಬ್ಬ ಓದುಗನಾದರೂ ಆದೇನು ಎಂಬ ನಂಬಿಕೆಯಿದ್ದರೆ ಸಾಕು. ಕ್ರಿಕೆಟ್ ಆಟ ಕಲಿತವರಿಗೆಲ್ಲ ರಣಜಿಯಲ್ಲೋ ಟೆಸ್ಟ್‌ನ್ಲೋ ಆಡಲು ಅವಕಾಶ ಸಿಕ್ಕೇ ಸಿಗುತ್ತದೆ ಅಂತೇನಿಲ್ಲ. ಅವರು ಆ ಆಟವನ್ನು ಪ್ರೀತಿಸುವ ನೋಡುಗರಂತೂ ಆಗುತ್ತಾರಲ್ಲ. ಬರೆಯುವುದು ಹೇಗೆ? ಏನನ್ನು ಬರೆಯಬೇಕು? ಕವಿತೆಯೋ? ಕವಿತೆಯೇ ಶ್ರೇಷ್ಠ ಅಂತೆಲ್ಲ ವಾದಿಸುವವರ ಮಾತು ಕೇಳಬೇಡಿ. ನನ್ನ ಪ್ರಕಾರ ಕವಿತೆ ಬರೆಯದೇ ಇರುವುದೇ ಒಳ್ಳೆಯದು. ಇವತ್ತು ಭಾವಗೀತೆಯೂ ಮನಸ್ಸಿನಲ್ಲಿ ಉಳಿಯುವುದಿಲ್ಲ, ನವ್ಯಕವಿತೆಯೂ ಗಮನ ಸೆಳೆಯುವುದಿಲ್ಲ. ನಿಮ್ಮ ಕವಿತೆಯನ್ನು ಓದಿದಾಗ ಸಿಗುವ ಪ್ರತಿಕ್ರಿಯೆಗಳನ್ನು ಗಮನಿಸಿ. ಒಂದು ಸಾಲನ್ನು ಓದಿ, ಅದು ಅವರಿಗೆ ಎಷ್ಟು ಅರ್ಥವಾಯಿತು ಎಂದು ತಿಳಿದುಕೊಳ್ಳಲು ಯತ್ನಿಸಿ. ಅರ್ಥವಾಗದೇ ಹೋದರೆ, ಬರೆದು ಪ್ರಯೋಜನ ಇಲ್ಲ. ಅರ್ಥವಾದರೆ, ಆಗಲೂ ಕವಿತೆ ಬರೆದು ಪ್ರಯೋಜನ ಇಲ್ಲ. ಕವಿತೆ ಇರುವುದು ಅರ್ಥವಾಗಲಿಕ್ಕಲ್ಲ, ಬೆಚ್ಚಿ ಬೀಳಿಸುವುದಕ್ಕೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ? ಎಂಬ ಸಾಲನ್ನು ಓದಿದಾಗ ಇರುವುದು ಮತ್ತು ಇರದುದು ಎಂಬ ಎರಡೂ ಪದ ನಮಗೆ ಅರ್ಥವಾಗುತ್ತದೆ. ಆದರೆ ಇಡೀ ಸಾಲು ನಮಗೆ ಮತ್ತೇನನ್ನೋ ಹೇಳುತ್ತಿರುವಂತಿದೆ. ನದಿ ದಾಟಲು ಹೊರಟವನಿಗೆ ಇದ್ದಕ್ಕಿದ್ದಂತೆ ನದಿಯ ಆಳದ ಅರಿವಾದಂತೆ, ಒಮ್ಮೆ ದೋಣಿ ಕುಲುಕಿ, ಜೀವ ಅಲುಗಾಡಿದಂತೆ, ಸುರಕ್ಷಿತವಾಗಿ ಆ ದಡ ಸೇರುತ್ತೇನೋ ಇಲ್ಲವೋ ಎಂಬ ಭಯ ಕಾಡಿದಂತೆ, ಕವಿತೆಯೂ ಕಾಡದೇ ಹೋದರೆ ಕವಿತೆ ಬಹುಕಾಲ ಬದುಕುವುದಿಲ್ಲ. ಇನ್ನಷ್ಟು ಖಚಿತವಾಗಿ ಹೇಳಬೇಕೆಂದರೆ, ಅಂಥ ಕವಿತೆ ಹುಟ್ಟಿರುವುದೇ ಇಲ್ಲ. ಅದೊಂದು ಪದಗುಚ್ಚವಷ್ಟೇ ಆಗಿರುತ್ತದೆ. ಒಂದು ಪದಕೋಶವನ್ನು ಕೊಡವಿದಾಗಲೂ ಒಂದಷ್ಟು ಅಳ್ಳಕವಾದ ಪದಗಳು ಉದುರುತ್ತವಲ್ಲ, ಹಾಗೆ! ಕವಿತೆಗಳನ್ನು ನೆನಪಿಟ್ಟುಕೊಳ್ಳುವ ಕಾಲವೇ ಆಗಿಹೋಯಿತೇನೋ ಅನ್ನಿಸುತ್ತದೆ. ಶ್ರುತಿ ಮತ್ತು ಸ್ಮೃತಿಗೆ ಬೇಕಾದ ಪರಿಕರಗಳು ಪದ್ಯದೊಳಗಿಲ್ಲದೇ ಇರುವುದರಿಂದ, ಇವತ್ತಿನ ಭಾಷೆಯಲ್ಲಿ ಅಂಥ ಛಂದೋಬದ್ಧ, ಲಯಬದ್ಧ ಕವಿತೆಗಳನ್ನು ಕಟ್ಟುವುದು ಅಸಾಧ್ಯವೋ ಏನೋ? ಹಾಗೆ ಕಟ್ಟಲು ಹೊರಟಾಗ ಕೂಡ ಛಂದಸ್ಸಿಗಿಂತ ಮುಖ್ಯವಾದ ಎಷ್ಟೋ ಸಂಗತಿಗಳು ಕೈ ತಪ್ಪಿಹೋಗಬಹುದು ಎಂಬ ಆತಂಕವೂ ಕವಿಯನ್ನು ಕಾಡಬಹುದು. ಲಯಕ್ಕೆಂದು ಪ್ರಾಸಕ್ಕೆಂದು ಅಸಂಬದ್ಧ ಪದವೊಂದನ್ನು ತುರುಕಿಸುವುದು ಕೂಡ ಕವಿತೆಯ ಕತ್ತು ಕೊಯ್ದಂತೆಯೇ ಅಲ್ಲವೇ? ಹಾಗೆ ನೋಡಿದರೆ ಇಂಗ್ಲಿಷ್ ಪದ್ಯಗಳನ್ನೂ ಯಾರೂ ಉರು ಹಚ್ಚುವುದಿಲ್ಲ. ಪುಸ್ತಕ ನೋಡಿಕೊಂಡು ಓದಿಕೊಳ್ಳುತ್ತಾರೆ. ಇಂಗ್ಲಿಷಿನಲ್ಲಿ ಮೌಖಿಕ ಪರಂಪರೆಯೇ ಇರಲಿಲ್ಲವಾಗಿ, ಅಲ್ಲಿ ಮೌಖಿಕ ಕಾವ್ಯಗಳೇ ಇಲ್ಲ. ಬ್ಯಾಲಡ್ ಎಂದು ಕರೆಸಿಕೊಳ್ಳುವ ಗೀತ ಪ್ರಕಾರ ಕೂಡ ಮೂಲತಃ ಬರಹಕ್ಕೆ ನಿಷ್ಠವಾದದ್ದಾಗಿತ್ತು.

ಇವೆಲ್ಲ ಬರೆಯಹೊರಡುವವರಿಗೆ ಮುನ್ನುಡಿಯೂ ಅಲ್ಲ, ಎಚ್ಚರಿಕೆಯೂ ಅಲ್ಲ. ಒಂದು ಪುಟ್ಟ ಟಿಪ್ಪಣಿ ಮಾತ್ರ. ಎಲ್ಲಾ ಟಿಪ್ಪಣಿಗಳನ್ನೂ ಬರಹಗಾರ ಧಿಕ್ಕರಿಸಿ ಮುಂದುವರಿಯಬಹುದು ಎನ್ನುವುದೇ ಬರಹಕ್ಕಿರುವ ಶಕ್ತಿ. ಬೇರೆ ಮಾಧ್ಯಮಗಳಂತೆ ಬರಹಕ್ಕೆ ಶಾಸ್ತ್ರೀಯತೆಯ ಹಂಗಿಲ್ಲ. ನಮಗೀಗ ತುಂಬ ಮುಖ್ಯವಾಗಿರುವುದು ಬರೆಯಲು ಹೊರಡುವವನನ್ನು ಕಾಡುವ ಸಂಗತಿಗಳು ಏನೇನು ಅನ್ನುವುದು. ಬರಹಗಾರನ ಮೊದಲ ಶತ್ರು ಅಪನಂಬಿಕೆ. ನನಗೆ ಓದುಗರಿದ್ದಾರೋ ಇಲ್ಲವೋ ಎಂಬ ಅಪನಂಬಿಕೆಯಲ್ಲಿ ಲೇಖಕ ಬರೆಯಕೂಡದು. ಒಬ್ಬ ಓದುಗನಿದ್ದರೂ ಸಾಕು ಅನ್ನುವ ಹಮ್ಮಿನ್ಲೇ ಆತ ಬರೆಯಲು ಶುರು ಮಾಡಬೇಕು. ಬರೆಯಲು ಹೊರಡುವಾಗಲೇ ಇದು ಯಾರಿಗೆ ಎಂಬ ಪ್ರಶ್ನೆ ಅಪ್ರಸ್ತುತ. ಲೇಖಕನ ಎರಡನೆಯ ವೈರಿ ಚಂಚಲತೆ. ಬರೆಯಲು ಶುರು ಮಾಡುತ್ತಿದ್ದಂತೆ ಅನೇಕ ಪ್ರಶ್ನೆಗಳು ಎದುರಾಗುತ್ತದೆ. ಎಲ್ಲಿಂದ ಶುರು ಮಾಡಬೇಕು. ಹೇಗೆ ಬರೆಯಬೇಕು. ಆಡುಭಾಷೆಯೋ ಗ್ರಂಥಸ್ಥ ಭಾಷೆಯೋ? ನಿರೂಪಕನಿಂದ ಹೇಳಿಸಬೇಕೋ ತಾನೇ ನಿರೂಪಕ ಆಗಬೇಕೋ? ಪ್ರಥಮ ಪುರುಷವೋ ಬೇರೆಯವನ ಮೂಲಕ ಹೇಳಿಸಲೋ? ಇವನ್ನೆಲ್ಲ ಯೋಚಿಸಬಾರದು. ಒಂದು ಕತೆ ಬರೆಯಲು ಹೊರಟವನಿಗೆ ಒಂದು ಸಾಲು ಅದು ಹೇಗೋ ಹೊಳೆದುಬಿಡುತ್ತದೆ. ಅದನ್ನು ಹಿಂಬಾಲಿಸಿಕೊಂಡು ಹೋದರೆ ಕತೆ ಸಿಗುತ್ತದೆ. ಆ ಸಾಲು ಹೊಳೆಯುವ ತನಕ ಕಾಯುವುದು ಅನಿವಾರ್ಯ. ಒಂದೇ ಸಲ ಬರೆದು ಮುಗಿಸಬೇಕೋ, ಆಗೀಗ ಒಂಚೂರು ಚೂರು ಬರೆಯಬೇಕೋ ಎಂಬ ಕಷ್ಟವನ್ನು ಬಹುತೇಕ ಎಲ್ಲ ಲೇಖಕರೂ ಎದುರಿಸುತ್ತಾರೆ. ಸಾಮಾನ್ಯವಾಗಿ ಸಣ್ಣಕತೆಯಾದರೆ ಒಂದೇ ಏಟಿಗೆ ಬರೆದುಬಿಡುವುದು ಒಳ್ಳೆಯದು. ಕಾದಂಬರಿಯಾದರೆ ಒಂದೇ ಮನಸ್ಥಿತಿಯಲ್ಲಿ ಬರೆಯುವುದು ಲೇಸು. ಕಾದಂಬರಿಯನ್ನು ಬರೆಯ ಹೊರಡುವವನಿಗೆ ಕಾದಂಬರಿಯ ಕುರಿತೇ ಅನುಮಾನ ಇರಕೂಡದು. ಅಲ್ಲಿಯ ಪಾತ್ರಗಳ ಬಗ್ಗೆ ಪೂರ್ತಿ ಗೊತ್ತಿದ್ದವನಂತೆ, ತಾನು ಹೇಳುತ್ತಿರುವುದು ಕತೆಯಲ್ಲ, ಎಲ್ಲೋ ನಡೆದ ಅಥವಾ ಮುಂದೊಂದು ದಿನ ನಡೆಯಲಿರುವ ಸಂಗತಿ ಎಂಬಷ್ಟು ಆತ್ಮವಿಶ್ವಾಸದಲ್ಲೇ ಅವನು ಕತೆ ಹೇಳಬೇಕು. ಬರೆಯುವ ಹೊತ್ತಿಗೆ ಬೇರೆ ಸಂಗತಿಗಳು ಕಾಡದಂತೆ ನೋಡಿಕೊಳ್ಳಬೇಕು. ಈಗಂತೂ ಹಿಂಸೆ ಕೊಡುವುದಕ್ಕೆ ಫೋನು, ಕಾಲಿಂಗ್ ಬೆಲ್ಲು, ವಾಟ್ಸಪ್ಪು, ಈಮೇಲು-ಮುಂತಾದ ಸಾವಿರ ಸಂಗತಿಗಳಿವೆ. ಒಂದು ಪಾತ್ರ ಇನ್ನೇನು ಒಳಗೆ ಬರುತ್ತಿರುವ ಹೊತ್ತಿಗೆ, ನಿಮ್ಮ ಗಮನ ಬೇರೆ ಕಡೆ ಹೋದರೆ, ಆ ಪಾತ್ರ ಥಟ್ಟನೆ ವಾಪಸ್ಸು ಹೋಗಿಬಿಡುತ್ತದೆ. ಹಾಗೆ ವಾಪಸ್ಸು ಹೋದ ಪಾತ್ರ ಮತ್ತೆಂದೂ ಮರಳಿ ನಿಮ್ಮ ಬಳಿಗೆ ಬರುವುದಿಲ್ಲ. ನೀವು ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ.

ಲೇಖಕನಾಗಲು ಹೊರಡುವವನು ಮೊದಲ ನಲವತ್ತು ವರುಷ ಅನುವಾದ ಮಾಡುವ ಗೋಜಿಗೆ ಹೋಗಬಾರದು. ಅದರಲ್ಲೂ ಕಾದಂಬರಿಯನ್ನೋ, ಲೇಖನಗಳನ್ನೋ ಅನುವಾದಿಸುವ ಜವಾಬ್ದಾರಿ ಹೊತ್ತುಕೊಳ್ಳಬಾರದು. ಅದು ಆತನ ಒಳಗಿರುವ ಸೃಜನಶೀಲ ಲೇಖಕನನ್ನು ಕಂಗೆಡಿಸುತ್ತದೆ. ಅನುವಾದ ಅನ್ನುವುದು ನಿಜವಾದ ಸೃಜನಶೀಲ ಲೇಖಕನಿಗೆ ಒಂಥರದಲ್ಲಿ ವಿವಾಹೇತರ ಸಂಬಂಧ ಇದ್ದಂತೆ. ಹುಟ್ಟಿದ ಮಕ್ಕಳನ್ನು ಆತ ಎಂದೂ ತನ್ನವೆಂದು ಕರೆದುಕೊಳ್ಳಲಾರ. ಈತನ ಆಸ್ತಿಯೂ ಅವುಗಳ ಪಾಲಾಗುವುದಿಲ್ಲ!

ನೀವು, ಕತೆಗಾರರು, ತುಂಬ ಕ್ರೂರಿಗಳು. ಒಂದು ಪಾತ್ರವನ್ನು ಕೆಟ್ಟದಾಗಿ ಚಿತ್ರಿಸುತ್ತೀರಿ. ಒಳ್ಳೆಯ ಪಾತ್ರಕ್ಕೆ ತುಂಬ ಕಷ್ಟ ಕೊಡುತ್ತೀರಿ. ನೋಯುವುದೇ ಬಹು ದೊಡ್ಡ ವ್ರತ ಎಂಬಂತೆ ತೋರಿಸುತ್ತೀರಿ. ಅಷ್ಟಕ್ಕೂ ಒಂದು ಪಾತ್ರ ಹೀಗೇ ಅಂತ ನಿರ್ಧರಿಸುವುದಕ್ಕೆ ನೀವು ಯಾರು? ಯಾಕೆ ಆ ಪಾತ್ರಕ್ಕೆ ನೀವು ಒಳ್ಳೆಯದನ್ನು ಮಾಡಬಾರದು? – ಓದುಗರೊಬ್ಬರು ಈ ಪ್ರಶ್ನೆಯನ್ನು ಮುಂದಿಟ್ಟಾಗ ನನಗೆ ಥಟ್ಟನೆ ನೆನಪಾದದ್ದು ಯಶವಂತ ಚಿತ್ತಾಲರ ಕತೆ. ಅವರು ‘ಕತೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟಿದ’ ಎಂಬ ಕತೆಯೊಂದನ್ನು ತುಂಬಾ ಹಿಂದೆ ಬರೆದಿದ್ದರು. ಆ ಕತೆಯಲ್ಲಿ ಅವರ ಕತೆಯೊಳಗಿನ ಪಾತ್ರವೊಂದು ಸೀದಾ ಮನೆಗೇ ಬಂದುಬಿಡುತ್ತದೆ. ಬಂದು ಕತೆಗಾರನನ್ನು ಅದೇನೋ ಪ್ರಶ್ನೆ ಮಾಡುತ್ತದೆ. ಕತೆಗಾರನ ಜೊತೆ ಮಾತಾಡುತ್ತದೆ. ಅದು ತನ್ನ ಕತೆಯ ಪಾತ್ರವೇ ಇರಬಹುದೇನೋ ಎಂಬಂತೆ, ಇರಲಾರದೇನೋ ಅನ್ನಿಸುವಂತೆ ತುಂಬ ಸೂಕ್ಷ್ಮವಾಗಿ ಆ ಪ್ರಸಂಗವನ್ನು ಚಿತ್ತಾಲರು ನಿರ್ವಹಿಸಿದ್ದರು. ತೇಜಸ್ವಿಯವರ ಕಾದಂಬರಿಯಲ್ಲೂ ಅಂಥ್ದೊಂದು ಪ್ರಸಂಗ ಎದುರಾಗಿತ್ತು. ಅವರ ‘ಕರ್ವಾಲೋ’ ಕಾದಂಬರಿಯಲ್ಲಿ ಬರುವ ಪಾತ್ರವೊಂದು ತಾತ್ವಿಕ ಪ್ರಶ್ನೆಯೊಂದಿಗೆ ಅವರಿಗೆ ಎದುರಾಗಿತ್ತಂತೆ. ಆ ಕತೆಯಲ್ಲಿ ಅವರು ಗೊಲ್ಲರವನಿಗೂ ಮತ್ತೊಂದು ಜಾತಿಯ ಹುಡುಗಿಗೂ ಸಂಬಂಧ ಇದೆ ಅನ್ನುವ ಅರ್ಥದಲ್ಲೇನೋ ಬರೆದಿದ್ದರೆಂದು ಕಾಣುತ್ತದೆ. ಆತ ಬಂದು ನಮ್ಮ ಜಾತಿ ಕೆಡಿಸಿದ್ದೀರಿ ಸಾರ್ ಎಂದು ತೇಜಸ್ವಿಯವರ ಎದುರು ಕೂತುಬಿಟ್ಟಿದ್ದನಂತೆ. ಹೀಗೆ ಎಷ್ಟೋ ಸಲ ಆಗುತ್ತಲೇ ಇರುತ್ತದೆ.

       (ಮುಂದುವರೆಯುವುದು)

Leave a Reply

Your email address will not be published.

*