ಬದುಕಿನ ಎಲ್ಲೆಗಳನ್ನು ದಾಟಿ ಬದುಕಿದ ಲೇಖಕ ಹೆಮಿಂಗ್ವೆ-1

in ಪ್ರಥಮ ಪಾಂಡವ
  • ಪ್ರಥಮ ಪಾಂಡವ

ಸಡಿಲವಾದ ಜುಬ್ಬಾ ಪೈಜಾಮ, ಜೇಬಿಲ್ಲೊಂದು ಸಾಧಾರಣ ಪೆನ್ನು, ಕೊಂಚ ಕೆದರಿದ ಕ್ರಾಪು, ಇಷ್ಟಗಲ ಕನ್ನಡಕ, ಪೆಪ್ಪರ್-ಸಾಲ್ಟ್ ಲುಕ್ಕಿನ ದಾಡಿ, ಹೆಗಲಿಗೆ ಒಂದು ಬಟ್ಟೆಯ ಚೀಲ ಹಾಗೂ ಕಾಲಿಗೆ ದೇಸಿ ಚಪ್ಪಲಿ. ಬಹುಶಃ ಸಾಹಿತಿಗಳು ಅಂದ ತಕ್ಷಣ ನಮ್ಮ ಜನಸಾಮಾನ್ಯರಲ್ಲಿ ಮೂಡಿ ನಿಲ್ಲುವ ಆಕೃತಿ ಇಷ್ಟು ಮಾತ್ರ. ಕವಿ-ಲೇಖಕರೆಂದರೆ ಬರೀ ರಗಳೆ, ಷಟ್ಪದಿ, ಪ್ರಾಸ, ವ್ಯಾಕರಣ, ರೂಪಕಗಳನ್ನು ಜೋಡಿಸುತ್ತಾ, ದಿನಕ್ಕೊಂದು ಪ್ರೇಮ ಕವಿತೆ ಗೀಚುತ್ತಾ ಕೂರುವವರು ಎಂಬಿತ್ಯಾದಿ ಮೌಢ್ಯಗಳು ನಮ್ಮ ವಲಯದಲ್ಲಿವೆ. ಈ ಕಲ್ಪನೆ ಕೇವಲ ಸಾಮಾನ್ಯ ಯೋಗ್ಯತೆಯ ಜನರಿಗಷ್ಟೇ ಇದ್ದಿದ್ದರೆ ಅಷ್ಟೊಂದು ಅಚ್ಚರಿ ಪಡಬೇಕಾದ್ದಿಲ್ಲ. ಆದರೆ ಐಎಎಸ್, ಐಪಿಎಸ್ ತೇರ್ಗಡೆಯಾದವರಲ್ಲೂ ಇಂಥ ಸೀಮಿತ ತಿಳುವಳಿಕೆ ಇರುತ್ತೆಂದರೆ ನಮ್ಮ ಸಮಾಜ ಎಷ್ಟು congest ಆಗಿದೆ, ಎಂಥಹ ಅಭಿರುಚಿಹೀನ ಸಂಸ್ಕಾರದಲ್ಲಿ ಬೆಳೆಯುತ್ತಿದೆ ಎನ್ನುವುದು ಮನವರಿಕೆಯಾಗುತ್ತದೆ. ಭಾರತವನ್ನು ಹಾವಾಡಿಗರ ದೇಶ ಎಂದು ಪಾಶ್ಚಿಮಾತ್ಯರು ಕರೆದಿದ್ದರಲ್ಲಿ ಅತಿಶಯೋಕ್ತಿ ಇಲ್ಲ ಅನ್ನಿಸುವುದು ಅಂಥ ಸನ್ನಿವೇಶಗಳ್ಲೇ. ಇನ್ನು ಒಬ್ಬ ಲೇಖಕನಾದವ ಕೈಯಲ್ಲಿ ಗಾಲ್ಫ್  ಕ್ಲಬ್ಬನ್ನೋ ಅಥವಾ ಟೆನ್ನಿಸ್ ರ್ಯಾಕೆಟ್ಟನ್ನೋ ಹಿಡಿದು ನಿಂತಿರುವುದು ನೋಡಿಬಿಟ್ಟರೆ ಈ ಆಟಕ್ಕೂ ಈ ಕವಿಗೂ ಎಲ್ಲಿಂದ ಸಂಬಂಧ ಎಂದು ಐಪಿಎಸ್ ಅಧಿಕಾರಿ ದಂಗಾಗಬಹುದು. ಯಾಕೆಂದರೆ ಕವಿಗೂ ಲೇಖನಿಗೂ ವ್ಯತ್ಯಾಸ ಗೊತ್ತಿಲ್ಲದವ ಕೂಡ ನಮ್ಮ ದೇಶದಲ್ಲಿ ಐಪಿಎಸ್ ಪಾಸು ಮಾಡಲು ಸಾಧ್ಯ!

ಬರಹಗಾರನಿಗೆ ಸಮಾಜದ, ನಿಸರ್ಗದ ಪ್ರತಿಯೊಂದೂ ಸಹ ಬರೆಯುವ ವಸ್ತು. ಯಾವುದೂ ಆತನಿಗೆ ನಿಷಿದ್ಧವಲ್ಲ. ಇದು ತನಗೆ ಸಂಬಂಧಿಸಿದ್ದಲ್ಲ ಎಂದು ಸಾಹಿತಿ ಹೆಜ್ಜೆಹೆಜ್ಜೆಗೂ ನುಣುಚಿಕೊಳ್ಳುತ್ತಾ ಹೋದರೆ ಆತ ಪುರಾತನ ಕಾಲದ ಆಸ್ಥಾನ ಕವಿಗಳಂತೆ ಗಮಕ ತ್ರಿಪದಿಗಳ್ಲೇ ಗೋಣು ಚೆಲ್ಲಿಬಿಡುತ್ತಾನೆ.

ಹೆಮಿಂಗ್ವೆಗೆ ಈಜು, ಜೂಜು, ಮೋಜು, ಶಿಕಾರಿ, ಜುಗಾರಿ, ಪ್ರಣಯ ಇವೆಲ್ಲ ಅತಿ ಪ್ರಿಯವಾದ ಹವ್ಯಾಸಗಳಾಗಿದ್ದವು. ಈ ತರಹೇವಾರಿ ಅನುಭವಗಳಿಂದ ಸತ್ವವನ್ನು ಬಸಿದುಕೊಂಡ ಕಾರಣಕ್ಕೆ ಆತ ವಿಶ್ವದ ಮೇರು ಲೇಖಕನಾದ. ಆತನಿಗೆ ಸಾಹಿತ್ಯಕ್ಕೆ ಕೊಡಬಹುದಾದ ಪ್ರಪಂಚದ ಉತ್ಕಷ್ಟ ಪ್ರಶಸ್ತಿ ನೊಬೆಲ್ ಸೇರಿದಂತೆ ಪುಲಿಟ್ಜರ್ ಪುರಸ್ಕಾರ ಸಿಕ್ಕಿತು. ಒಬ್ಬ ಬರಹಗಾರನಿಗೆ ಅನುಭವಗಳು ಬಂಡವಾಳ. ಸ್ಟ್ಯಾನ್‌ಫೋರ್ಡ್ ವಾಂಗ್, ಡೇವಿಡ್ ಸ್ಕ್ಲಾಂಸ್ಕಿ, ಮ್ಯಾಕ್ಸ್ ರೂಬಿನ್, ಡಾಯ್ಲ್ ಬ್ರೂನ್ಸನ್ ಮುಂತಾದ ಜಾಗತಿಕ ಲೇಖಕರ ಬಗ್ಗೆ ಒಮ್ಮೆ ಕೆದಕಿ ನೋಡಿದರೆ ಬರಹಗಾರರ ವಿಭಿನ್ನ ಅಭಿರುಚಿಗಳು, ವಿಚಿತ್ರ ಹುಚ್ಚುಗಳು ನಮಗೆ ಗೊತ್ತಾಗುತ್ತವೆ.ಅದಕ್ಕೆ Larger-than-life lifestyle ಎನ್ನುತ್ತಾರೆ. ಜೀವನಕ್ಕಿಂತ ದೊಡ್ಡದಾದ ಜೀವನಶೈಲಿ. ಜನರಿಗೆ ಇದು ಅರಿವಾದ ದಿನ ಹಳೇ ಲಾರಿಗಳಲ್ಲಿ ಗೇರ್ ಹಾಕಿದಾಗ ಬುಸ್ ಅಂತ ಸದ್ದು ಬರೋ ಹಾಗೆ ನಿಟ್ಟುಸಿರು ಬಿಡುವ ಸರದಿ ನಮ್ಮದಾಗಬಹುದು.


ಜಗತ್ಪ್ರಸಿದ್ಧ ಲೇಖಕ ಅರ್ನೆಸ್ಟ್ ಮಿಲ್ಲರ್ ಹೆಮಿಂಗ್ವೆ ಬಗ್ಗೆ ರವಿ ಬೆಳಗೆರೆಯವರು ಸಾಕಷ್ಟು ಸಲ ಬರೆದಿದ್ದಾರೆ. ಆತನನ್ನು ಒಂದು ತಾತ್ವಿಕ ಚೌಕಟ್ಟಿನಲ್ಲಿ ಇರಿಸಿ, ಎಷ್ಟು ಸೊಗಸಾಗಿ ಮತ್ತು ಎಷ್ಟು ಸರಳವಾಗಿ ಹೆಮಿಂಗ್ವೆ ಕುರಿತು ಒಂದು ರಸಪೂರ್ಣ ಗ್ರಹಿಕೆ ಓದುಗನಿಗೆ ದೊರಕಿಸಲು ಸಾಧ್ಯವೋ ಅದನ್ನು ಬೆಳಗೆರೆಯವರು ಮಾಡಿದ್ದಾರೆ. ಅವರು ಖೀರು ಬಡಿಸಿಯಾಗಿದೆ. ನಾನೊಂದಿಷ್ಟು ನೀರು ಬಡಿಸಲು ಯತ್ನಿಸುತ್ತೇನೆ.


ಅರ್ನೆಸ್ಟ್ ಹೆಮಿಂಗ್ವೆ ಅಮೆರಿಕದಲ್ಲಿ ತುಂಬಾ ಜನಮನ್ನಣೆ ಗಳಿಸಿದ್ದ ಕಥೆಗಾರ, ಕಾದಂಬರಿಕಾರ. ಆದರೆ ಹೆಮಿಂಗ್ವೆಯ ವೈಯಕ್ತಿಕ ಬದುಕಿನ ವಿವರಗಳೂ ಸಹಿತ ಅವನ ಕೃತಿಗಳಿಗಿಂತ ಸ್ವಾರಸ್ಯಕರವಾಗಿವೆ. ಹೆಮಿಂಗ್ವೆ ಬಹಳ ಒರಟು ಸ್ವಭಾವದ ಮನುಷ್ಯನಾಗಿದ್ದ. ಎಲ್ಲೆಂದರಲ್ಲಿ ಡ್ರೈವ್ ಮಾಡುತ್ತಾ, ಯದ್ವಾತದ್ವಾ ಕುಡಿಯುತ್ತಾ, ಸವನ್ನಾ ನಗರಿಯಲ್ಲಿ ಜೂಜಾಡುತ್ತಾ, ವನ್ಯ ಧಾಮಗಳಲ್ಲಿ ಪಶುಗಳನ್ನು ಬೇಟೆಯಾಡುತ್ತಾ, ಬುಲ್ ಫೈಟಿಂಗ್‌ನಲ್ಲಿ ಭಾಗವಹಿಸುತ್ತಾ ಅನನ್ಯವಾಗಿ ಜೀವಿಸಿದಂತಹ ಔಚ್ಟಜಛ್ಟಿಠಿಚ್ಞ್ಝಜ್ಛಿಛಿ ವ್ಯಕ್ತಿತ್ವದವ. ಬದುಕಿನ ಎ್ಲೆಗಳನ್ನು ದಾಟಿ ಬದುಕಿದವ.

ಯುದ್ಧಗಳನ್ನು ಆತ ತೀವ್ರ ಶ್ರದ್ಧೆಯಿಂದ ಗಮನಿಸುತ್ತಿದ್ದ. ಬರವಣಿಗೆ ಹೆಮಿಂಗ್ವೆಯ ಉಸಿರು. ಆತನ ಮೇಲೆ ಬಂದ ಅಸಂಖ್ಯಾತ ಬಯಾಗ್ರಫಿಗಳು ಮತ್ತು ವ್ಯಕ್ತಿಚಿತ್ರಗಳನ್ನು ಓದಿಯಾದ ಮೇಲೂ ಕೆಲ ನಿಜಾಂಶಗಳಿಂದ ನಮ್ಮ ಕಣ್ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೆಮಿಂಗ್ವೆ ನಾನಾ ರೋಗಗಳಿಂದ ಬಳಲುತ್ತಿದ್ದ. ಹೆಮಿಂಗ್ವೆಗೆ ಗಂಭೀರವಾದ ಮಾನಸಿಕ ಅನಾರೋಗ್ಯ ಬಾಧಿಸುತ್ತಿತ್ತು. ಅವನು ಎಷ್ಟು ಬಂಡಾಯ ಮನೋಭಾವದವನಾಗಿದ್ದನೋ ಅಷ್ಟೇ ಮಟ್ಟಿಗೆ ದುಷ್ಟನಾಗಿದ್ದ.

ಹೆಮಿಂಗ್ವೆಗೆ ಕಾಯಿಲೆಗಳಿದ್ದರೂ ಅದರಿಂದ ಪವಾಡಸದೃಶವಾಗಿ ಬಚಾವಾಗಿರುತ್ತಿದ್ದ. He was a genuine survivor.

. ಆಂಥ್ರಾಕ್ಸ್, ಮಲೇರಿಯಾ, ನ್ಯುಮೋನಿಯಾ, ಭೇದಿ, ಚರ್ಮದ ಕ್ಯಾನ್ಸರ್, ಹೆಪಟೈಟಿಸ್, ಅನೇಮಿಯಾ, ಮಧುಮೇಹ, ಅಧಿಕ ರಕ್ತದೊತ್ತಡ, ಎರಡು ವಿಮಾನ ಅಪಘಾತ, ಹಾನಿಗೀಡಾದ ಕಿಡ್ನಿ, ಹಾನಿಗೀಡಾದ ಯಕೃತ್ತು, ಮುರಿದ ಎಲುಬುಗಳು ಹಾಗೂ ಮುರಿದ ಕತ್ತು… ಇಷ್ಟೆಲ್ಲಾ ಸಮಸ್ಯೆಗಳೊಂದಿಗೆ ಅವನು ಕ್ರಿಯಾಶೀಲನಾಗಿದ್ದ. ಹೆಮಿಂಗ್ವೆಯನ್ನು ಕೊಲ್ಲಬಹುದಾಗಿದ್ದ ಏಕೈಕ ವಸ್ತು ಹೆಮಿಂಗ್ವೆ ಮಾತ್ರ ಅನ್ನಿಸುತ್ತದೆ! ಅಮೆರಿಕದ ತನಿಖಾ ಏಜೆನ್ಸಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತನ್ನ ವಸ್ತುಗಳನ್ನು ಜಪ್ತಿ ಮಾಡಿ ತನ್ನನ್ನು ಹೋದ್ಲೆಲ್ಲ ಹಿಂಬಾಲಿಸುತ್ತಿದೆ ಎಂದು ಹೆಮಿಂಗ್ವೆ ಭಾವಿಸಿದ್ದ. ಇಂಥ ವಿವಿಧ ಅತಿರೇಕದ ಮಾನಸಿಕ ಅಸ್ವಸ್ಥತೆಗಳ ಸಲುವಾಗಿ ಹೆಮಿಂಗ್ವೆಯ ಪತ್ನಿ ಆತನನ್ನು ಮೆಂಟಲ್ ಆಸ್ಪತ್ರೆಗೆ ದಾಖಲಿಸುವಂತಾಯಿತು. ಅಲ್ಲಿ ಅವನಿಗೆ ತನ್ನ ಹೆಸರು ಶಾಶ್ವತವಾಗಿ ಮರೆತು ಹೋಗುವ ತನಕ ಎಲೆಕ್ಟ್ರಿಕ್ ಶಾಕ್ ಕೊಡಲಾಯ್ತು. ಅಲ್ಲಿಂದಾಚೆಗೆ ಅವನಿಂದ ಒಂದಕ್ಷರ ಬರೆಯಲು ಸಾಧ್ಯವಾಗಲಿಲ್ಲ. ತನ್ನ ಮೂವತ್ತಾರನೇ ಎಲೆಕ್ಟ್ರಿಕ್ ಶಾಕ್ ಬಳಿಕ ಹೆಮಿಂಗ್ವೆ ಆತ್ಮಹತ್ಯೆ ಮಾಡಿಕೊಂಡ. ಅಚ್ಚರಿ ಎಂದರೆ, ಹೆಮಿಂಗ್ವೆ ನಂಬಿದ್ದಂತೆಯೇ ತನಿಖಾ ಏಜೆನ್ಸಿ ಆತನ ವಸ್ತುಗಳನ್ನು ಜಪ್ತಿ ಮಾಡಿದ್ದಲ್ಲದೆ ಆತನನ್ನು ಹಿಂಬಾಲಿಸುತ್ತಿದ್ದುದೂ ನಿಜವೆಂದು ಒಪ್ಪಿಕೊಂಡಿತು.

ಕೆಲವೊಮ್ಮೆ ಹೆಮಿಂಗ್ವೆಯ ಬದುಕು ಮತ್ತು ಆತನ ಬಹು ಪ್ರಧಾನ ಭಾಗ ಯಾವುದೆಂದು ಗುರುತಿಸುವುದು ಕಷ್ಟವಾಗುತ್ತದೆ. ಅದೃಷ್ಟವಶಾತ್ ಆತನ ಜೀವನದ ಮೇಲೆ ಬಹಳಷ್ಟು ಮಾಹಿತಿ ಲಭ್ಯವಿದೆ. ಓಕ್ ಪಾರ್ಕ್‌ನಲ್ಲಿ ಜನನದಿಂದ ಹಿಡಿದು ಅರವತ್ತೆರಡನೇ ವಯಸ್ಸಿನಲ್ಲಿ ಆತ ಸಾಯುವ ತನಕ ಹೆಮಿಂಗ್ವೆಯ ಜೀವನ ವೃತ್ತಾಂತ ಕೂಲಂಕಷವಾಗಿ ದಾಖಲಾಗಿದೆ. ಹೆಮಿಂಗ್ವೆಯ ಬದುಕೆಂಬ ಆಳವಾದ ಬಾವಿಯೊಳಕ್ಕೆ ಬಿದ್ದು ಮತ್ತೆ ಮೇಲೇರಿ ಬರಲಾಗದೇ ಇರುವುದು ಯಾರಿಗಾದರೂ ಸಲೀಸು.

ಹೆಮಿಂಗ್ವೆ ಹುಟ್ಟಿದ್ದು 1899ರಲ್ಲಿ. ಹೊಸ ಶತಮಾನದ ಮುಂಜಾವಿನಲ್ಲಿ ಜನಿಸಿದಂತಹ ಪ್ರತಿ ಮಗುವಿನ ಹಾಗೆ ಹೆಮಿಂಗ್ವೆಯ ಬಾಲ್ಯ ಕೂಡಾ ಅಮೆರಿಕದಲ್ಲಿ ಕ್ರಾಂತಿ ತಂದ ಕ್ಷಿಪ್ರ ಬದಲಾವಣೆಗಳು ಹಾಗೂ ಪ್ರಗತಿಯ ಕಾಲಮಾನಕ್ಕೆ ಸಾಕ್ಷಿಯಾಗಿತ್ತು. ಹೆಮಿಂಗ್ವೆಯ ತಂದೆ ಒಬ್ಬ ವೈದ್ಯ. ತಾಯಿ ಸಂಗೀತಗಾರ್ತಿ. ಅಪ್ಪ-ಅಮ್ಮ ಇಬ್ಬರೂ ಆತನ ಬರವಣಿಗೆಯನ್ನು ಅತಿಯಾಗಿ ಪ್ರಭಾವಿಸಿದ್ದಾರೆ. ವಿಜ್ಞಾನ, ತರ್ಕ ಹಾಗೂ ಕಲೆಯಲ್ಲಿ ಹೆಮಿಂಗ್ವೆ ಆಸಕ್ತಿ ತಳೆಯಲು ಅವನ ಪೋಷಕರು ಮುಖ್ಯ ಪಾತ್ರ ವಹಿಸಿದ್ದರು. ಆತ ಶ್ರೀಮಂತವಾದ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದ ಎಂದು ಇತಿಹಾಸಕಾರ ಮತ್ತು ಅರ್ನೆಸ್ಟ್ ಹೆಮಿಂಗ್ವೆ ಫೌಂಡೇಶನ್ ಆಫ್ ಓಕ್ ಪಾರ್ಕ್‌ನ ಆಡಳಿತ ಮಂಡಳಿ ಸದಸ್ಯ ರೆಡ್ ಗ್ರಿಫಿನ್ ಹೇಳುತ್ತಾರೆ.

ಪ್ರೌಢಶಾಲೆಯಿಂದ ಪದವೀಧರನಾದ ಬಳಿಕ ಹೆಮಿಂಗ್ವೆ ಕನ್ಸಾಸ್ ನಗರಿಗೆ ಹೊರಟ. ಅಲ್ಲಿ ಸ್ಟಾರ್ ಪತ್ರಿಕೆಯ ವರದಿಗಾರನ ಕೆಲಸ. ಪ್ರತಿಭಟನೆ, ಗಲಭೆಗಳು ಮತ್ತು ಕ್ರೈಂ ವರದಿಗಳನ್ನು ಕವರ್ ಮಾಡುವ ಜವಾಬ್ದಾರಿಯನ್ನು ಅವನಿಗೆ ನೀಡಲಾಗಿತ್ತು. 1917 ಮತ್ತು 1918ನೇ ಇಸವಿಯ ಅವನ ಈ ಚಿಕ್ಕ ಅನುಭವ ಹೆಮಿಂಗ್ವೆಯನ್ನು ಒಬ್ಬ ಲೇಖಕನನ್ನಾಗಿಸುವಲ್ಲಿ ಬಹು ಗುರುತರ ಪ್ರಭಾವ ಬೀರಿತು. ಹಾಗೆಂದು ಸ್ವತಃ ಹೆಮಿಂಗ್ವೆ ಒಂದೆಡೆ ದಾಖಲಿಸಿದ್ದ. ಒಬ್ಬ ಉದಯೋನ್ಮುಖ ಪತ್ರಕರ್ತನಾಗಿ ಹೆಮಿಂಗ್ವೆ ತನ್ನ ವಾರ್ತಾ ವರದಿಗಳನ್ನು ತಕ್ಷಣದ ವಿದ್ಯಮಾನಗಳ ಮೇಲೆ ಕೇಂದ್ರೀಕರಿಸಿ, ಬಹಳ ಕಡಿಮೆ ವಿವರಣೆ ಹಾಗೂ ತೀರ ಸರಳ ಸನ್ನಿವೇಶದೊಂದಿಗೆ ಬರೆಯುವುದನ್ನು ಕಲಿತಿದ್ದು ಇದೇ ಸಣ್ಣ ಅವಧಿಯಲ್ಲಿ.

ಹುಟ್ಟು ಅನ್ವೇಷಣಾ ಗುಣದವನಾಗಿದ್ದ ಹೆಮಿಂಗ್ವೆ ಯುದ್ಧದಲ್ಲಿ ಸೆಣಸಲು ಸೇನಾಪಡೆಯಲ್ಲಿ ಸ್ಥಾನವನ್ನೂ ಗಳಿಸಿದ್ದ. ಆದರೆ ವೈದ್ಯಕೀಯ ಕಾರಣಗಳಿಂದ ಅವನು ಬಹಳ ಕಾಲ ಸೈನಿಕನಾಗಿರಲು ಸಾಧ್ಯವಾಗಲಿಲ್ಲ. ಬದಲಿಗೆ ಹೆಮಿಂಗ್ವೆಯನ್ನು ರೆಡ್ ಕ್ರಾಸ್‌ನ ಅಂಬ್ಯುಲೆನ್ಸ್ ಚಾಲಕನಾಗಿ ಮಾಡಲಾಯಿತು. ಮಷಿನ್ ಗನ್ ಫೈರ್‌ನಿಂದ ಅವನ ಎರಡೂ ಕಾಲುಗಳಿಗೆ ಘಾಸಿಯಾಗಿತ್ತು. ಈ ಸ್ಥಿತಿಯಲ್ಲೂ ಅವನು ತನ್ನ ಸಹ ಸೈನಿಕರನ್ನು ಸುರಕ್ಷಿತ ಜಾಗಕ್ಕೆ ರವಾನಿಸುವಲ್ಲಿ ಯಶಸ್ವಿಯಾಗಿದ್ದ. ಇದರಿಂದಾಗಿ ಹೆಮಿಂಗ್ವೆ ಇಟಲಿಯವನಲ್ಲದಿದ್ದರೂ ಇಟಲಿಯನ್ ಸಿಲ್ವರ್ ಮೆಡಲ್ ಆಫ್ ಮಿಲಿಟರಿ ವೆಲೋರ್ ಪುರಸ್ಕಾರ ಸಿಕ್ಕಿತು.

ಮಿಲನ್ ಆಸ್ಪತ್ರೆಗೆ ಹೆಮಿಂಗ್ವೆ ದಾಖಲಾಗಿದ್ದಾಗ ನರ್ಸ್ ಒಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದ. ಇದು ಆತ 1929ರಲ್ಲಿ ಬರೆದ ಅ A Farewell to Arms ಎಂಬ ಅಭಿಜಾತ ಕೃತಿಗೆ ಸ್ಫೂರ್ತಿಯಾಯಿತೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ದುರಂತದಲ್ಲಿ ಅಂತ್ಯವಾಗುವ ಈ ಕಾದಂಬರಿ ಮೊದಲನೇ ವಿಶ್ವ ಯುದ್ಧದಲ್ಲಿ ಗಾಯಗೊಂಡ ಅಂಬ್ಯುಲೆನ್ಸ್ ಚಾಲಕ ತನ್ನ ಶುಶ್ರೂಕಿಯೊಂದಿಗೆ ಪ್ರೇಮದಲ್ಲಿ ತೊಡಗುವ ವಿರೋಚಿತ ಕಥೆಯನ್ನು ಹೇಳುತ್ತದೆ.

       (ಮುಂದುವರಿಯುವುದು…)

Leave a Reply

Your email address will not be published.

*