ಹಾಯ್ ಬೆಂಗಳೂರ್

ಅವರು ಎಂದೂ ಮರೆಯಲಿಲ್ಲ: ಭಾಗ-10

ಬೆಳಗೆರೆ ಕೃಷ್ಣ ಶಾಸ್ತ್ರಿ:

ಅವರು ಎಂದೂ ಮರೆಯಲಿಲ್ಲ: ಭಾಗ-10

ಈ ಮಧ್ಯೆ ಡಿ.ಸಿ.ಯವರು ಶೃಂಗೇರಿಗೆ ಹೋಗುವ ಸಂದರ್ಭ ಬಂದಿದೆ. ನಮ್ಮ ತಂದೆಯವರನ್ನು `ಶೃಂಗೇರಿಗೆ ಹೋಗ್ತಿದ್ದೇನೆ ನೀವೂ ಬರ್‍ತಿರಾ’ ಎಂದು ಕೇಳಿದ್ದಕ್ಕೆ-

`ಹೌದ್ಹೌದು ಬರ್‍ತಿನಿ. ಶಂಕರರ ಶಾರದಾಪೀಠ ಶೃಂಗೇರಿ ನೋಡಬೇಕು’ ಎಂದರು. ಮಾರನೆಯ ಬೆಳಗ್ಗೆ ಕಾರಿನಲ್ಲಿ ಇವರನ್ನು ಕರೆದುಕೊಂಡು ಶೃಂಗೇರಿಗೆ ಹೋಗಿ ಮಠದಲ್ಲಿ ಬಿಟ್ಟು, ಅಲ್ಲಿದ್ದವರಿಗೆ-

`ನೋಡಿ ಇವ್ರು ತುಂಬಾ ದೊಡ್ಡವರು. ಒಂದಷ್ಟು ದಿವ್ಸ ಇಲ್ಲಿ ಬಿಟ್ಟು ಹೋಗ್ತಿನಿ. ನಾನು ಮತ್ತೆ ಟೂರ್ ಮುಗಿಸಿ ಬರೋವರೆಗೂ ಇವರನ್ನ ನೀವು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದ್ಹೇಳಿ ಹೊರಟರು ಡಿ.ಸಿ.

ಮಠದವರು ಡಿ.ಸಿ.ಯವರು `ಚೆನ್ನಾಗಿ ನೋಡಿಕೊಳ್ಳಿ, ಎಂದಮೇಲೆ ಅವರ ಅಣ್ಣನೋ, ಚಿಕ್ಕಪ್ಪನೋ ಅಥವಾ ಮಾವನೋ ಇರಬೇಕೆಂದು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಊರು, ದೇವಸ್ಥಾನ ಎಲ್ಲಾ ತೋರಿಸಿದ್ದಾರೆ.

ನಮ್ಮ ತಂದೆಗೂ ಸಾಕಷ್ಟು ಚೆನ್ನಾಗಿಯೇ ಸಂಸ್ಕೃತ ಬರುತ್ತಿದ್ದುದರಿಂದ (ಕಂಚಿಯಲ್ಲಿ ಅಭ್ಯಾಸ ಮಾಡಿದ್ದರು ಚಿಕ್ಕಂದಿನಲ್ಲಿ) ಅಲ್ಲಿನ ವಿದ್ಯಾರ್ಥಿಗಳಿಗೆಲ್ಲಾ ಸಂಸ್ಕೃತದ ಶ್ಲೋಕಗಳನ್ನು ಹೇಳಿಕೊಟ್ಟು ವಿವರಿಸಿ, ಸಾಕಷ್ಟು ದೊಡ್ಡ ವಿದ್ವಾಂಸರಪ್ಪ ಇವರು-ಡಿ.ಸಿ.ಯವರ ಸಂಬಂಧಿಕರು ಅಥವಾ ಅವರಿಗೆ ತುಂಬಾ ಬೇಕಾದವರು ಇರಬೇಕು ಎಂಬುದು ಅಲ್ಲಿದ್ದವರಿಗೆಲ್ಲಾ ಮನವರಿಕೆಯಾಗಿದೆ.

ನಮ್ಮ ತಂದೆಗೆ ಒಂದು ಚಟ ಇತ್ತು. `ಕಾಫಿ’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು, ಹಾಡುತ್ತಿರಲಿ, ಮಾತನಾಡುತ್ತಿರಲಿ, ಅದನ್ನು ಅಲ್ಲಿಗೇ ನಿಲ್ಲಿಸಿ-`ಕಾಫಿ ಬೇಕಲ್ಲಪ್ಪ ಈಗ’ ಎಂದು ಬಿಡುತ್ತಿದ್ದರು. ಕಾಫಿ ತಂದುಕೊಟ್ಟರೇ ಮುಂದಿನ ಮಾತು. ಇಲ್ಲದಿದ್ರೆ ಇಲ್ಲ. ಆ ಮಠದಲ್ಲಾದರೂ ಎಷ್ಟು ಸಲ ಕಾಫಿ ಕೊಡುತ್ತಾರೆ? ಬೆಳಗ್ಗೆ ಮತ್ತು ಸಂಜೆ ಎರಡ್ಹೊತ್ತು ಕೊಡುತ್ತಿದ್ದರು. ಸರಿ, ಇವರು ತಮಗೋಸ್ಕರ, ಒಂದು ಹೊಟೇಲ್ ಗುರುತು ಮಾಡಿಕೊಂಡು ಬಿಟ್ಟಿದ್ದರು.

ಒಂದು ದಿನ ಮಧ್ಯಾಹ್ನ ಮೂರು ಅಥವಾ ಮೂರುವರೆ ಆಗಿರಬಹುದು. ಹೊರಗಡೆಗೆ ಹೋಗಿದ್ದಾರೆ. ಮಧ್ಯೆ ಮಳೆ ಬಂದಿದೆ. ಯಾರದೋ ಮನೆಯ ಮುಂದೆ ನಿಂತುಬಿಟ್ಟಿದ್ದಾರೆ. ಎಷ್ಟು ಹೊತ್ತಾದರೂ ಮಳೆ ನಿಲ್ಲಲೇ ಇಲ್ಲ. ಸ್ವಲ್ಪ ಹೊತ್ತಾದ ಮೇಲೆ, ಆ ಮನೆಯವರು ಹೊರಗೆ ಬಂದು `ಯಾರು ಯಜಮಾನ್ರು’ ಎಂದು ಕೇಳಿದ್ದಾರೆ.

`ನಾನು… ನಾನೇನೋ ಕಾಫಿ ಕುಡಿಯೋಣ ಅಂತ ಹೊರಗೆ ಬಂದೆ. ಈ ಮಳೆ ಬಿಡ್ತಾನೆ ಇಲ್ಲ. ಅದಕ್ಕೆ ಕಾಯ್ತಾ ಇದ್ದೀನಿ’ ಎಂದರು ನಮ್ಮ ತಂದೆ.

`ಕಾಫಿ ಕುಡಿಯಬೇಕಿತ್ತೆ’ ಆ ಮನೆಯವರು ಕೇಳಿದ್ದಾರೆ.

`ಹೂನಪ್ಪ’ ಯಾತಕ್ಕೂ ಕೇಳ್ತಾರೆ ಎಂದು ಇವರೂ ಮಾಮೂಲಾಗಿ ಹೇಳಿದರು.

`ನಮ್ಮ ಮನೆ ಒಳಗೆ ಕುಡೀತೀರಾ?’ ಸಂಕೋಚದಿಂದ ಕೇಳಿದ್ದಾರೆ ಆ ಮನೆಯವರು.

`ಮನೆ ಒಳಗಲ್ಲದಿದ್ರೆ ಹೊರಗೆ ತಂದುಕೊಡಿ ಕುಡೀತಿನಿ’ ಎಂದರು. ಇವರಿಗೆ ಸದ್ಯ ಕಾಫಿ ಸಿಕ್ಕರೆ ಸಾಕು. ಹೊರಗೆ ಮಳೆ, ಛಳಿ ಬೇರೆ!

`ಅಲ್ಲ ಯಜಮಾನ್ರೆ, ನಾನು ಯಾಕೆ ಕೇಳ್ದೆ ಅಂದ್ರೆ… ನಾವು ಮುಸಲ್ಮಾನ್ರು’ ಸಂಕೋಚದಿಂದಲೇ ಕೇಳಿದರು ಆ ವ್ಯಕ್ತಿ.

`ಅಯ್ಯಾ, ನಾನು ಕೇಳಿದ್ದು ಕಾಫಿನ, ನಿನ್ನ ಜಾತಿನಲ್ಲ’ ಎಂದರು ನಮ್ಮ ತಂದೆ.

ಆ ವ್ಯಕ್ತಿಗೆ ಖುಷಿಯಾಗಿ `ಹಾಗಾದ್ರೆ ಬನ್ನಿ ಒಳಗೆ’ ಎಂದು ನಮ್ಮ ತಂದೆಯನ್ನು ಒಳಗೆ ಕರೆದರು. ನಮ್ಮ ತಂದೆ ಬಾಗಿಲ ತನಕ ಹೋಗಿ, `ಏನಪ್ಪ ನಿಮ್ಮಲ್ಲಿ ಹೆಂಗಸರು ಘೋಷಾ ಹಾಕ್ತಾರೆ. ನನ್ನನ್ನು ಒಳಗೆ ಕರೀತಿದ್ದೀಯಲ್ಲಾ’ ಎಂದದ್ದಕ್ಕೆ-ಆತ `ಪರ್‍ವಾಗಿಲ್ಲ ಬನ್ನಿ’ ಎಂದು ಕರೆದಿದ್ದಾನೆ.

`ಉಹೂಂ. ಆಯಮ್ಮ ಬಂದು ಕರೆದ್ರೆ ಮಾತ್ರ ಬರ್‍ತಿನಿ’ ಎಂದು ನಿಂತೇಬಿಟ್ಟರಂತೆ. ಆತ ಒಳಗೆ ಹೋಗಿ ಆತನ ಹೆಂಡತಿಗೆ ಹೇಳಿ ಕಳಿಸಿ, ಆಕೆ ಬಂದು `ಬನ್ನಿ ತಾತಾ ಒಳಗೆ’ ಎಂದ ಮೇಲೆ `ನೋಡಮ್ಮಾ ನೀನು ತಾತಾ ಅಂತ ಕರೆದಿದ್ದೀಯ. ನಾನು ತಾ ತಾ ಅಂತ್ಲೇ ಬರೋದು. ಬಂದಾಗೆಲ್ಲಾ ಕಾಫಿ ತಾ’ ಎಂದರು. ಅವರೆಲ್ಲಾ ಬಿದ್ದು ಬಿದ್ದು ನಕ್ಕರು.

(ಮುಂದುವರೆಯುವುದು)

Leave a Reply

Your email address will not be published. Required fields are marked *