ಹಾಯ್ ಬೆಂಗಳೂರ್

ಬೆಳಗೆರೆ ಕೃಷ್ಣ ಶಾಸ್ತ್ರಿ : ಅವರು ಎಂದೂ ಮರೆಯಲಿಲ್ಲ -ಭಾಗ-9

ಬೆಳಗೆರೆ ಕೃಷ್ಣ ಶಾಸ್ತ್ರಿ ಅಂಕಣ:

ಅವರು ಎಂದೂ ಮರೆಯಲಿಲ್ಲ

  • ಭಾಗ-೯

ಆ ವ್ಯಕ್ತಿಗೆ ಅದು ತುಂಬಾ ಮಹತ್ವದ ಚೀಟಿ ಇರಬೇಕೆನಿಸಿ, ಅದನ್ನ ಹಿಡಿದುಕೊಳ್ಳಲಿಕ್ಕೆ ಅದರ ಹಿಂದೆ ಓಡಿದರಂತೆ. ಡಿ.ಸಿಯವರ ಮನೆ ಮತ್ತು ಆಫೀಸು ಒಂದೇ ಕಾಂಪೌಂಡಿನಲ್ಲಿದ್ದದ್ದರಿಂದ ಎಲ್ಲಾ ಜನ ಯಾಕೆ ಹೀಗೆ ಓಡ್ತಿದ್ದಾರೆ ಎಂದು ಆಶ್ಚರ್ಯದಿಂದ ನೋಡುತ್ತಿದ್ದರಂತೆ. ಆ ಚೀಟಿ ಒಂದಷ್ಟು ದೂರ ಹೋಗಿ ಒಂದು ಗಿಡಕ್ಕೆ ತಗುಲಿಕೊಂಡಿತ್ತಂತೆ. ಆ ವ್ಯಕ್ತಿ ಈ ಚೀಟಿನ ತಂದು `ತಗೊಳ್ಳಿ ನಿಮ್ಮ ಚೀಟಿ’ ಎಂದು ನಮ್ಮಪ್ಪನ ಕೈಗೆ ಕೊಟ್ಟಿದ್ದಾರೆ. ಅವರಿಗೆ ಗೊತ್ತಾಗಿದೆ ನಮ್ಮ ತಂದೆಯ ಹೆಸರು. ಆದರೂ ತೋರಿಸಿಕೊಂಡಿಲ್ಲ. ಆ ವ್ಯಕ್ತಿನೇ ಡಿ.ಸಿ.! ಆ ಪೇಟ, ಪಂಚೆ ಎಲ್ಲಾ ನೋಡಿ ಇವನ್ಯಾರೋ ಗುಮಾಸ್ತನೋ, ಜವಾನನೋ ಇರಬೇಕು ಎಂದುಕೊಂಡು-ಅಷ್ಟಾಗಿ ಗಮನಿಸದೆ `ಸರಿ ತಂದುಕೊಟ್ಯಲ್ಲ ಮಾರಾಯ. ಹೋಗು ನಿನ್ನ ಕೆಲಸಕ್ಕೆ’ ಎಂದು ಮನೆ ಸುತ್ತಾ ನೋಡಿಕೊಂಡು ಒಳಕ್ಕೆ ಹೋಗಿದ್ದಾರೆ. ಆ ವ್ಯಕ್ತಿ ಇವರು ಒಳಕ್ಕೆ ಬರುವ ಮುಂಚೆಯೇ ಹೋಗಿ ಜವಾನನ ಹತ್ತಿರ `ಒಬ್ಬ ವಯಸ್ಸಾದ ಯಜಮಾನ್ರು ಬರ್‍ತಾರೆ ಒಳಕ್ಕೆ ಬಿಡು’ ಎಂದ್ಹೇಳಿ ಮನೆಗೆ ಹೋಗಿದ್ದಾರೆ.

ಇವರು ಬರುತ್ತಿದ್ದಂತೆ ಆ ಜವಾನ ಒಳಕ್ಕೆ ಕರೆದುಕೊಂಡು ಹೋಗಿ, ವರಾಂಡದಲ್ಲಿ ಕೂರಿಸಿ `ಸಾಹೇಬ್ರು ಒಳಗಿದ್ದಾರೆ ಬರ್‍ತಾರೆ’ ಎಂದು ಹೇಳಿ ಹೋಗಿದ್ದಾನೆ.

ಈ ಡಿ.ಸಿ.ಸಾಹೇಬ್ರು ಒಳಗೆ ಹೋದವರೇ ತಮ್ಮ ಪೇಟ, ಕೋಟು ತೆಗೆದಿಟ್ಟು ಖಾಲಿ ಷರಟು, ಪಂಚೆಯಲ್ಲಿ ಬಂದು `ಏನೆಜಮಾನ್ರೆ, ನೀವು ಕಾಫಿ ಗೀಫಿ ಏನಾದ್ರೂ ತಗೊಳ್ತಿರೋ’ ಎಂದೆ ಕೇಳಿದ್ದಾರೆ.

ನಮ್ಮ ತಂದೆ ಆ ವ್ಯಕ್ತಿಯನ್ನು ಅಷ್ಟಾಗಿ ಗಮನಿಸದೆ, `ಹೌದಪ್ಪ ಕಾಫಿ ಬೇಕು, ಬಿಸಿಬಿಸಿಯಾಗಿರಬೇಕು, ಸಕ್ರೆ ಜಾಸ್ತಿ ಹಾಕಿರ್‍ಬೇಕಪ್ಪ’ ಎಂದಿದ್ದಾರೆ.

`ಪರ್‍ವಾಗಿಲ್ಲ ನಾನು ಕುಳಿತುಕೊಳ್ಳಬಹುದು’ ಎಂದು ನಕ್ಕಿದ್ದಾರೆ ಆ ವ್ಯಕ್ತಿ.

ನಮ್ಮ ತಂದೆಗೆ ಆಗ ಗೊತ್ತಾಗಿದೆ. ಇವರೇ ಡೆಪ್ಯೂಟಿ ಕಮಿಷನರ್! ಎಂದು. ನಮ್ಮ ತಂದೆ ಹೊರಗೆ ನಡೆದದ್ದನ್ನು ನೆನಸಿಕೊಂಡು ಗಟ್ಟಿಯಾಗಿ ನಗ್ತಾ ಇದ್ದರಂತೆ.

ಡಿ.ಸಿ.ಯವರು `ಯಾಕೆಜಮಾನ್ರೆ ನಗ್ತಾ ಇದ್ದಿರಲ್ಲ’ ಎಂದು ಕೇಳಿದ್ದಕ್ಕೆ, `ನೀವು ಡಿ.ಸಿ. ಅಂತ ಗೊತ್ತಾಗಲೇ ಇಲ್ಲವಲ್ಲ. ಆ ಚೀಟಿ ಗಾಳಿಗೋದ್ರೆ ಅದರ ಹಿಂದೆ ಓಡೋದ್ರಲ್ಲಾ… ಅಲ್ಲಿ ನೋಡ್ತಿದ್ದ ಎಲ್ಲ ಜನ ಏನೆಂದುಕೊಂಡಿರಬೇಡ? ಎಂಥಾ ಕೆಲ್ಸ ಆಗೋಯ್ತಲ್ಲ’ ಎಂದರಂತೆ.

`ಜನ ಏನೋ ಅಂದುಕೊಳ್ತಾರೆ, ಅಂದುಕೊಳ್ಳಲಿ ಬಿಡಿ. ನಮಗ್ಯಾಕೆ’ ಎಂದು ಸುಮ್ಮನಾಗಿಬಿಟ್ಟರು. ಅಷ್ಟರಲ್ಲಿ ಅವರ ಹೆಂಡತಿ ಸೀತಾಲಕ್ಷ್ಮೀ (ಅವರೂ ನಮಗೆ ಆಮೇಲೆ ಪರಿಚಯವಾದರು. ನಾವೆಲ್ಲ ಬಂದು ಹೋಗಿ ಮಾಡುವಷ್ಟು ಹತ್ತಿರದ ಕುಟುಂಬವಾಯ್ತು) ಕಾಫಿ ತಂದು ಕೊಟ್ಟಿದ್ದಾರೆ. `ಸ್ವಲ್ಪ ಹೊತ್ತು ಕುಳಿತಿರಿ. ನಾನು ಆಫೀಸಿನ ಹತ್ತಿರ ಹೋಗ್‌ಬರ್‍ತಿನಿ’ ಎಂದು ಆಫೀಸಿಗೆ ಹೋದರಂತೆ ಡಿ.ಸಿ.

ಈ ಅಜ್ಜ ಒಳಗಡೆ ಡೈನಿಂಗ್ ಹಾಲಿಗೆ ಹೋಗಿ, ಡಿ.ಸಿ.ಆವರ ಹೆಂಡತಿ ಹತ್ತಿರ ಮಾತಾಡಿ, ಹಾಡ್ಹೇಳಿಕೊಂಡು ಕುಳಿತುಬಿಟ್ಟಿದ್ದಾರೆ. ಆ ಜವಾನ ಕೂಡ ಇವರ ಹಾಡುಗಳನ್ನು ಕೇಳೋಕೆ ಬಾಗಿಲ ಹತ್ತಿರ ನಿಂತುಬಿಟ್ಟಿದ್ದಾರೆ. ಸಾಕಷ್ಟು ಸಮಯವಾಗಿದೆ. ಈ ಮಧ್ಯೆ ಡಿ.ಸಿ. ಮನೆಗೆ ಬಂದು ಹೋಗಿದ್ದಾರೆ. ಅದರ ಪರಿವೆ ಕೂಡ ಯಾರಿಗೂ ಇಲ್ಲದಷ್ಟು ಹಾಡುಗಳನ್ನು ಕೇಳುವುದರಲ್ಲಿ  ಮನೆ ಮಂದಿಯೆಲ್ಲಾ ಮೈಮರೆತುಬಿಟ್ಟಿದ್ದಾರೆ. ಎರಡನೆಯ ಬಾರಿಯೋ ಮೂರನೆಯ ಬಾರಿಯೋ ಬಂದಾಗ ಇವರೆಲ್ಲ ಮೈಮರೆತಿರುವ ವಿಷಯ ಗೊತ್ತಾಗಿ `ಏನ್ರಯ್ಯಾ ಈ ಮನೆ ಒಳಗೆ ಯಾರು ಬಂದ್ರು ಯಾರು ಹೋದ್ರು ವಿಚಾರ್‍ಸೋರೇ ಇಲ್ಲವಲ್ಲ’ ಎಂದು ಕೇಳಿದರು.

ಆಗ ಅವರಿಗೆಲ್ಲಾ ಎಚ್ಚರವಾಗಿ `ಸಾಹೇಬ್ರು ಬಂದ್ರು’ ಎಂದು ಹೊರಗೆ ಬಂದರು.

ಹೀಗೇ ನಮ್ಮ ತಂದೆ ಒಂದ್ಹೇಂಟ್ಹತ್ತು ದಿವಸ ಅಲ್ಲೇ ಇದ್ದರಂತೆ. ಅವರು ಎಲ್ಲಿರಬೇಕೆಂದರೆ ಅಲ್ಲಿ ಇದ್ದು ಬಿಡುತ್ತಿದ್ದರು. ಎಲ್ಲಿಗೆ ಹೋಗಬೇಕು ಅಂದರೆ ಅಲ್ಲಿಗೆ ಹೋಗಿಬಿಡುತ್ತಿದ್ದರು.

(ಮುಂದುವರೆಯುವುದು)

Leave a Reply

Your email address will not be published. Required fields are marked *