ಹಾಯ್ ಬೆಂಗಳೂರ್

ಅವರು ಎಂದೂ ಮರೆಯಲಿಲ್ಲ: ಭಾಗ-12

ಬೆಳಗೆರೆ ಕೃಷ್ಣ ಶಾಸ್ತ್ರಿ:

ಅವರು ಎಂದೂ ಮರೆಯಲಿಲ್ಲ: ಭಾಗ-೧೨

ಕೊನೆಯವರೆಗೂ ನಮ್ಮ ತಂದೆ ಜನಿವಾರ ಹಾಕ್ಕೊಳ್ಳಲೇ ಇಲ್ಲ. `ಹೋಗ್ಲಿ ಬಿಡೋ ಅದು ಇದ್ದು ನನಗೇನಾಗಬೇಕು’ ಎಂದೆಲ್ಲಾ ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಹೀಗೆ ನಮ್ಮ ತಂದೆ ಒಂದು ನೆಲೆಯಲ್ಲಿ ಜಾತ್ಯತೀತ ಮನೋದ್ದೇಶವುಳ್ಳವರಾಗಿದ್ದರು. ನಮ್ಮಲ್ಲಿ ಜಾತಿಗಳ ಕಲ್ಪನೆ ನಿರ್‍ಮಾಣ ಯಾವ ಉನ್ನತ ಅರ್ಥದೊಳಗೆ ಆಯ್ತೋ ಆನಂತರದಲ್ಲಿ ಅದೆಲ್ಲಾ ಹೇಗೆ ಮಾರ್ಪಾಟುಗಳಾಗಿ ರಿಜಿಡಿಟಿ ಬಂದು ಕೇವಲ ಹೊರಮೈಯಲ್ಲಿ ಮಾತ್ರ ಉಳಿದುಕೊಂಡು ಬಿಟ್ಟಿವೆಯೋ ಹಾಗೇ ಅದರ ಆಳದಲ್ಲಿ ಉಳಿಯಲಿಲ್ಲ. ಹೀಗಾಗಿಯೇ ಇವತ್ತು ಎಲ್ಲದಕ್ಕೂ ಗೊಂದಲ ನಿರ್ಮಾಣವಾಗಿಬಿಟ್ಟಿದೆ. ಯಾವುದಕ್ಕೂ ಈ ಜಾತಿಯೇ ಕಾರಣ ಆಗಿಬಿಟ್ಟಿದೆ. ನಮ್ಮ ಮನೆಯಲ್ಲಿ, ಸುತ್ತ ಮುತ್ತ ಕುಟುಂಬದಲ್ಲೂ ನಾವು ಜಾತೀನ ಲೆಕ್ಕಿಸುತ್ತಿರಲಿಲ್ಲ. ಅದನ್ನು ನಾನು ದೊಡ್ಡಸ್ತಿಕೆ ಎಂದು ಹೇಳುತ್ತಿಲ್ಲ. ಆದರೆ ನಮ್ಮ ತಂದೆ ಹಾಗೆ ನಡಕೊಂಡಿದ್ದರು. ಅದರಿಂದಲೇ ಸ್ವಾಭಾವಿಕವಾಗಿ ನಮಗೂ ಹಾಗೆ ನಡೆದುಕೊಳ್ಳಲು ಸಾಧ್ಯವಾಯ್ತು ಎಂಬ ಕಾರಣಕ್ಕಾಗಿ ಹೇಳುತ್ತಿದ್ದೇನೆ.

ನನ್ನ ತಂದೆ ತಮ್ಮ ಜೀವನದ ಬಹುಪಾಲನ್ನು ಪರ್ಯಟನೆಯಲ್ಲೇ ಕಳೆದರು. ಅವರು ಕಂಡ, ಕೇಳಿದ ಸಾಹಿತಿಗಳು, ವಿಚಾರವಂತರು, ಆಧ್ಯಾತ್ಮಿಗಳು ಇಂತಹ ಯಾರನ್ನೋ ಹುಡುಕಿಕೊಂಡು ಎಲ್ಲಿಗೆಂದರಲ್ಲಿಗೆ ಹೋಗಿಬಿಡುತ್ತಿದ್ದರು. ಅಲ್ಲಿ ಎಷ್ಟು ದಿನ ಕಳೆಯಿತು ಎಂಬುದರ ಗಮನವೇ ಇಲ್ಲದೆ ಅವರೊಂದಿಗೆ ಇದ್ದು ಬಿಡುತ್ತಿದ್ದರು. ಇದರಿಂದ ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಅವರ ಸಮೀಪದ ಬಂಧು ವರ್ಗಕ್ಕೂ ಸಾಧ್ಯವಾಗಲಿಲ್ಲ. ಅನೇಕರಿಗೆ ಅವರು ಹುಚ್ಚರಂತೆ ಕಂಡಿರಬಹುದು. ಜನರು ಏನೆನ್ನುತ್ತಾರೆಂದು ಗಮನಿಸದೆ ಅವರು ತಮ್ಮದೇ ಮಾರ್ಗದಲ್ಲಿ ಸಾಗುತ್ತಿದ್ದರು.

ಆದರೆ ತೊಂಬತ್ತರ ಗಡಿ ಮುಟ್ಟಿದಾಗ ಅವರ ನಿಶ್ಶಕ್ತಿಯ ಕಾರಣದಿಂದ ಅವರನ್ನು ಒಂದು ಕಡೆ ನೆಲೆಯಾಗಿ ನಿಲ್ಲುವಂತೆ ಮಾಡಬೇಕಾದ್ದು ಅನಿವಾರ್ಯವಾಯಿತು. ಆಗ ನಾನಿದ್ದ ಹಳ್ಳಿಗೆ (ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆಗೆ) ಅವರನ್ನು ಒತ್ತಾಯ ಮಾಡಿ ಕರೆತಂದೆ. ಆ ವೃದ್ಧಾಪ್ಯದಲ್ಲೂ ಅವರ ಮನಸ್ಸು ಹುರುಪು ಹುಮ್ಮಸ್ಸುಗಳನ್ನು ಕಳೆದುಕೊಂಡಿರಲಿಲ್ಲ. ಆದ್ದರಿಂದ ತಮ್ಮ ಶರೀರ ಸೋತುಹೋಗಿದೆ ಎಂಬ ಅರಿವೇ ಅವರಿಗಾಗಿರಲಿಲ್ಲ. ಮಾತೆತ್ತಿದರೆ `ನಾನು ಧಾರವಾಡಕ್ಕೆ ಹೋಗಬೇಕು, ಬೇಂದ್ರೆಯವರಲ್ಲಿ ಮಾತನಾಡಬೇಕಾದ್ದು ಬಹಳ ಇದೆ. ಕೈಲಾಸಂ-ನಾನು ಕಾಣುವ ಮೊದಲೇ ಹೋಗಿಬಿಟ್ಟರು; ಇದೆಂತಹ ಅನ್ಯಾಯ! ಶಿವರಾಮ ಕಾರಂತರನ್ನು ನಾನು ಕಂಡೇ ಇಲ್ಲ. ಅವರೀಗ ಬೆಂಗಳೂರಿಗೆ ಬರುತ್ತಾರಂತೆ. ಮಾಸ್ತಿಯವರ ಮನೆಗೋ, ಗುಂಡಪ್ಪನವರ ಮನೆಗೋ ಹೋದರಾಯಿತು. ಕಾರಂತರ ಭೇಟಿ ಮಾಡಿಸುತ್ತಾರೆ. ಹಾಗೆಯೇ ಬಳ್ಳಾರಿಗೆ ಹೋಗಿ ನಾಗೇಶ ಶಾಸ್ತ್ರಿಗಳನ್ನು ಮಾತನಾಡಿಕೊಂಡು ಬಂದುಬಿಡುತ್ತೇನೆ’ ಎಂದು ಹಗಲಿರುಳೂ ಪ್ರಯಾಣ ಸಿದ್ಧರಾಗಿಯೇ ಇರುತ್ತಿದ್ದರು. ನಾನು ಇದಕ್ಕೆ ತಪ್ಪಿಸಿಕೊಂಡೇ ಓಡಾಡುತ್ತಿದ್ದೆ. ಆದರೆ ನಾನು ಒಬ್ಬಂಟಿಗನಾದ ಕಾರಣ ಅವರಿಗೆ ಊಟ ಉಪಚಾರ ಮಾಡಿಸಿಕೊಂಡು ಅವರೊಂದಿಗೆ ಇರಲೇಬೇಕಾಗಿತ್ತು. ಆ ಸಮಯದಲ್ಲೆಲ್ಲಾ ಅವರ ಪ್ರಯಾಣದ ಮಾತೇ ಮಾತು.

`ನಿಮ್ಮ ದೇಹಸ್ಥಿತಿ ಚೆನ್ನಾಗಿಲ್ಲ. ಸುಮ್ಮನೆ ಹಾಯಾಗಿ ಇಲ್ಲೇ ಇದ್ದು ಬಿಡಿ’ ಎಂದು ನನ್ನ ವಾದ.

(ಮುಂದುವರೆಯುವುದು)

Leave a Reply

Your email address will not be published. Required fields are marked *