ಹಾಯ್ ಬೆಂಗಳೂರ್

ಅವರು ಎಂದೂ ಮರೆಯಲಿಲ್ಲ ಭಾಗ-15

  • ಬೆಳಗೆರೆ ಕೃಷ್ಣ ಶಾಸ್ತ್ರಿ ಅಂಕಣ:

ಅವರು ಎಂದೂ ಮರೆಯಲಿಲ್ಲ ಭಾಗ-15

ಒಮ್ಮೆ ಪಕ್ಕದ ಊರಿನ ಒಬ್ಬ ಕುರುಬರ ಹುಡುಗ ಚಿತ್ರದುರ್ಗದ ಕಾಲೇಜಿನಲ್ಲಿ ಬಿ.ಎಸ್ಸಿ. ಓದುತ್ತಿದ್ದಾನೆ ಎಂಬ ವಿಚಾರ ಬಂತು. ಅದು ಇವರ ಪರಿಚಯದ ಮನೆ. `ಏನ್ ನಮ್ಮ ರಾಯಣ್ಣನ ಮೊಮ್ಮಗನೇ? ಎಂತಹ ಸೋಜಿಗ! ಇದಕ್ಕೇನೆನ್ನಬೇಕು! ಕುರಿ ಕಾಯುವ ಮನೆಯಲ್ಲಿ ಕಾಲೇಜು ಓದುವ ಹುಡುಗ ಹುಟ್ಟಿದ್ದಾನೆ. ಬುದ್ಧಿ ಸಂಸ್ಕಾರಗಳು ಯಾರಿಗೂ ಗುತ್ತಿಗೆ ಕೊಟ್ಟಿದ್ದಲ್ಲ’ ಎಂದು ಊರಲ್ಲೆಲ್ಲಾ ತಮ್ಮ ಸಂತೋಷವನ್ನು ಹೇಳಿಕೊಂಡು ಓಡಾಡಿದರು. ಮರುದಿನ ಊಟದ ಸಮಯಕ್ಕೆ ಬರಲಿಲ್ಲ. ದಿನವೆಲ್ಲಾ ಇವರ ಸುಳಿವೇ ಇಲ್ಲ. ಸಂಜೆಯ ವೇಳೆಗೆ ಎತ್ತಿನ ಗಾಡಿಯಲ್ಲಿ ಬಂದು ಇಳಿದರು. `ನನ್ನ ಮನಸ್ಸು ತಡೆಯಲಿಲ್ಲ. ಆ ಕಾಲೇಜಿನಲ್ಲಿ ಓದುವ ಹುಡುಗನನ್ನು ಮಾತಾಡಿಸೋಣವೆಂದು ಹೋಗಿದ್ದೆ’ ಎಂದರು. ಆದರೆ ಚಿತ್ರದುರ್ಗದಲ್ಲಿ ಓದುತ್ತಿರುವ ಹುಡುಗ ಇವರು ಹೋದಾಗ ಆ ಹಳ್ಳಿಯಲ್ಲಿ ಸಿಕ್ಕಲು ಸಾಧ್ಯವೇ? ಆತನ ತಾಯಿ ಕೆಂಚವ್ವನನ್ನೇ ಮಾತನಾಡಿಸಿ ಆಕೆಗೆ ಕೈಮುಗಿದರಂತೆ. `ನನಗ್ಯಾಕೆ ಸ್ವಾಮಿ ಕೈ ಮುಗೀತೀಯಾ?’ ಎಂದು ಆಕೆ ಕೇಳಿದಾಗ `ನಿನ್ನ ಹೊಟ್ಟ್ಯಾಗ ಎಂಥ ಮಗ ಹುಟ್ಟಿದ್ದಾನೆ ಅಂಬೋದು ನಿನಗ್ಗೊತ್ತಿಲ್ಲಾ ಕೆಂಚವ್ವ ಅದು ನನಗ್ಗೊತ್ತು. ಅದಕ್ಕೆ ನಿನಗೆ ಕೈ ಮುಗಿತೀನಿ’ ಎಂದು ಹೇಳಿ ಆಕೆ ಕೊಟ್ಟ ಹಾಲು ಕುಡಿದು ಬಂದರಂತೆ. ಇಂಥಾ ಕಥೆಗಳು ಎಷ್ಟೋ!

ಹೀಗೆ ಸುಮಾರು ಎರಡು ವರ್ಷ ಕಳೆಯಿತು. ಅವರ ದೈಹಿಕ ಶಕ್ತಿ ಮತ್ತಷ್ಟು ಕುಂದಿತು. ಆಗ ನನ್ನ ಅಕ್ಕ ರುಕ್ಕಮ್ಮ ಇವರ ಉಪಚಾರಕ್ಕಾಗಿ ಬಂದು ನಿಂತರು. ಸ್ನಾನ, ಬಟ್ಟೆ, ಹಾಸಿಗೆ, ಪಾತ್ರೆ ಇತ್ಯಾದಿಗಳನ್ನು ನೋಡಿಕೊಳ್ಳಲು ಇಬ್ಬರು ಆಳುಗಳು ಸಿದ್ಧರಾದರು. ಇವರ ತಿರುಗಾಟ ಕಡಿಮೆಯಾದಂತೆ ಊರಿನ ಜನವೇ ಇವರಿದ್ದ ಕಡೆ ಬಂದು ಮುತ್ತುವುದಾಯಿತು. ಅವರೊಂದಿಗೆ ಮಾತೋ ಮಾತು, ನಗುವೋ ನಗು. ಕಾಲ ಕಳೆಯುತ್ತಿದ್ದುದೇ ಯಾರ ಗಮನಕ್ಕೂ ಬರುತ್ತಿರಲಿಲ್ಲ.

ಪ್ರತಿದಿನ ಸಂಜೆ ಬುಡೇನಪ್ಪ, ಇಮ್ಮಣ್ಣ, ಕರಿಯಜ್ಜಿ, ಹುಸೇನಪ್ಪ, ರಂಗಪ್ಪ ಇವರುಗಳ ಜಕ್ಕಿ, ಡಕ್ಕಿ, ತಾಳಸಮೇತ ಭಜನೆ, ಆದಾದ ಮೇಲೆ ಬೆಳದಿಂಗಳಲ್ಲಿ ಉದ್ದನ್ನೇ ಸಿರಿಯಜ್ಜ, ಗುಂಡಜ್ಜಗಳ, ರಂಗಪ್ಪ ಸಂಗಡಿಗರಿಂದ ಕೋಲಾಟ. ಈ ಮಧ್ಯೆ ಇವರು ಹಾಡುವುದಂತೂ ತಪ್ಪುತ್ತಿರಲಿಲ್ಲ. ಅಲ್ಲಿ ಬಂದವರ ಮೇಲೆ ಅಥವಾ ಅಲ್ಲಿ ನಡೆದ ಸಂಗತಿಗಳನ್ನೇ ಕುರಿತು ಆಗಲೇ ಕೋಲುಪದ ಕಟ್ಟಿ ಹಾಡಿ ಕುಣಿಸುತ್ತಿದ್ದರು. ಆ ವಯಸ್ಸಿನಲ್ಲೂ ಅವರ ಕಂಚಿನ ಕಂಠ ಕುಂದಿರಲಿಲ್ಲ. ಇದೆಲ್ಲಾ ಮುಗಿದ ಮೇಲೆ, ಉಳಿದ ನಾಲ್ಕಾರು ಜನರನ್ನು ಕೂರಿಸಿಕೊಂಡು ಒಳ್ಳೊಳ್ಳೆಯ ವಿಚಾರಗಳನ್ನು ಸ್ವಾರಸ್ಯವಾಗಿ ಹೇಳುತ್ತಿದ್ದರು. ಅಲ್ಲಿ ಮುಖ್ಯವಾಗಿ ಅಧ್ಯಾತ್ಮಿಕ ವಾತಾವರಣ ಇರುತ್ತಿತ್ತು. ಈ ಎಲ್ಲಾ ಸಮಯಗಳಲ್ಲೂ ಬಹುಮಟ್ಟಿಗೆ ನಾನಿರುತ್ತಿದ್ದೆ.

ಒಂದು ದಿನ ಅರ್ಧ ರಾತ್ರಿಯಾದ ಮೇಲೆ ನೋಡಿಕೊಂಡು ಬರೋಣವೆಂದು ಹೋದೆ. ಒಬ್ಬರೇ ಮಾತನಾಡಿಕೊಳ್ಳುವುದು ಕೇಳಿಸಿತು. ಉಪನಿಷತ್ತಿನ ಶ್ಲೋಕಗಳ ವ್ಯಾಖ್ಯಾನ ನಡೆದಿತ್ತು. ಹೊರಗಿನಿಂದ ಆಲಿಸುವವರಿಗೆ ಅಲ್ಲೊಂದು ದೊಡ್ಡ ಸಭೆ ಸೇರಿದೆ. ಚರ್ಚೆ, ವಿಚಾರ ವಿನಿಮಯ, ಉಪನ್ಯಾಸ ನಡೆದಿದೆ. ಆದರೆ ಎಲ್ಲವೂ ಏಕಪಾತ್ರಾಭಿನಯ.

ಒಮ್ಮೆ ಎಲ್ಲರೂ ಕುಳಿತಿದ್ದಾಗ ಮರಣದ ವಿಚಾರ ಬಂತು. ಅಲ್ಲಿದ್ದ ಒಬ್ಬಾತನನ್ನು ಕುರಿತು `ನೋಡು ರಂಗಣ್ಣ! ದೇವರು ಮರಣ ಅಂತ ಒಂದು ಮಾಡಿದ್ದಾನೆ. ಹುಟ್ಬೇಕಂತೆ, ಬೆಳೀಬೇಕಂತೆ, ದುಡೀಬೇಕಂತೆ, ಕಡೆಗೊಂದು ದಿನ ಹೆಂಡ್ರು ಮಕ್ಳು, ಬಂಧು, ಬಳಗ, ಒಡವೆ, ಆಸ್ತಿ ಎಲ್ಲ ಬಿಟ್ಟು ಸತ್ತೋಗ್ಬೇಕಂತೆ! ಎಂತಾ ಅನ್ಯಾಯ ಮಾಡೌನೆ ಈ ಆಳ್ಮನೆ ದೇವ್ರು. ದೇವರ ಮ್ಯಾಲೆ ನನಗಂತೂ ಭಾರಿ ಸಿಟ್ಟು. ನೀನೇನಂತೀಯಾ?’ ಎಂದರು.

`ಅದೇ ಸ್ವಾಮಿ, ಓಟೂ ಬಿಟ್ಟು ಸಾಯ್ಬೇಕು ಅಂದ್ರೆ ಯಾರಿಗೂ ಮನಸ್ಸಾಗಲ್ಲ. ಆದರೆ ಈ ಮರಣ ಮಾತ್ರ ಯಾರಿಗೂ ತಪ್ಪಿಲ್ವಲ್ಲ!’

`ನನಗಂತೂ ದೇವರ ಮೇಲೆ ಹಲ್ಲು ಹಲ್ಲು ಕಡಿಯುವಂಥ ಸಿಟ್ಟಿತ್ತು. ಆದರೆ ಈಗ ಅಂಗಿಲ್ಲ. ದೇವರು ನಮ್ಗಿಂತ ಭಾರಿ ಬುದ್ಧಿವಂತ; ಅಷ್ಟೇ ಅಲ್ಲ, ಭಾರಿ ದಯಾವಂತ ಅಂಬೋದು ಈಗೀಗ ಗೊತ್ತಾಗಿ ಅವನಿಗೆ ಕೈಮುಗಿತೀನಿ-ಸ್ವಾಮಿ ನಮ್ಮಪ್ಪ ಅಂತ.’

`ಅದೇನೋ ಸ್ವಾಮಿ ನನಿಗ್ತಿಳೀಲಿಲ್ಲ’ ಎಂದ ರಂಗಣ್ಣ.

 (ಮುಂದುವರೆಯುವುದು)

Leave a Reply

Your email address will not be published. Required fields are marked *