ಹಾಯ್ ಬೆಂಗಳೂರ್

ಅವರು ಎಂದೂ ಮರೆಯಲಿಲ್ಲ ಭಾಗ-13

ಅವರು ಎಂದೂ ಮರೆಯಲಿಲ್ಲ: ಭಾಗ-13

`ನನಗೇನಾಗಿದೆ? ಶರೀರದಲ್ಲಿ ಯಾವ ಖಾಹಿಲೆಯೂ ಇಲ್ಲ. ಏನೋ ಸ್ವಲ್ಪ ವಯಸ್ಸಾಗಿದೆ. ಆದ್ದರಿಂದ ಒಂದಿಷ್ಟು ನಿತ್ರಾಣ ಎಂಬಂತೆ ಕಾಣುತ್ತೆ ಅಷ್ಟೆ. ಅದೇನ್ ಮಾಡುತ್ತೆ? ಒಂದು ಸಾರಿ ಹಾಗೆ ಹೊರಟು ಅವರನ್ನೆಲ್ಲಾ ಒಂದು ಸುತ್ತು ನೋಡಿ ಮಾತನಾಡಿಸಿದರೆ ನನಗೆ ಪುನಃ ಯೌವ್ವನ ಬರುತ್ತೆ. ಆಗ ಪಕ್ಷಿಯಂತೆ ಹಾರುತ್ತೇನೆ. ಜಿಂಕೆಯಂತೆ ಜಿಗಿಯುತ್ತೇನೆ. ಅದನ್ನು ಬಿಟ್ಟು ಇದೇನು ಜೈಲುವಾಸ!’ ಎಂದು ಸಿಡಿಮಿಡಿಯಾಗುತ್ತಿದ್ದರು.

ನಾನಿಲ್ಲದ ವೇಳೆಯಲ್ಲಿ ಹೇಳದೆ ಕೇಳದೆ ಹೊರಟುಹೋಗಲೂ ಸಿದ್ಧ. ಆದರೆ, ಬಸ್ಸಿಗೆ ಒಂದು ಮೈಲಿ ನಡೆದು ಹೋಗಬೇಕಾಗಿತ್ತು. ಅದು ಅವರಿಂದ ಆಗುತ್ತಿರಲಿಲ್ಲ. ಆದರೂ ಒಮ್ಮೆ ಊರಿನವರ ಸಹಾಯದಿಂದ ಗಾಡಿಯ ಏರ್ಪಾಡು ಮಾಡಿಕೊಂಡರು. ಹಾಗೆ ಮಾಡಬಾರದೆಂದು ನಾನು ಅವರನ್ನು ಒಪ್ಪಿಸಿಕೊಂಡೆ. ಅಂತೂ ಅವರ ಪ್ರಯಾಣ ಸಾಧ್ಯವಾಗಲಿಲ್ಲ. ಅಸಮಾಧಾನವೇನೋ ತುಂಬಿತ್ತು.

ಅನಿವಾರ್ಯವಾಗಿ ಆ ಹಳ್ಳಿಯಲ್ಲೇ ನಮ್ಮ ತಂದೆ ಉಳಿದುಬಿಟ್ಟರು. ಬೇಸರ ಕಳೆಯಲು ಆಗಾಗ ಕೋಲೂರಿಕೊಂಡು ಶಾಲೆಯ ಮಕ್ಕಳ ಹೆಗಲ ಮೇಲೆ ಕೈ ಇಟ್ಟುಕೊಂಡು ಮೆಲ್ಲನೆ ಆ ಊರಿನ ಕೇರಿಗಳಲ್ಲಿ ಅಡ್ಡಾಡಿ ಜನರನ್ನು ಮಾತನಾಡಿಸಿ, ನಕ್ಕು, ನಗಿಸಿ, ಹಾಡು ಹೇಳಿ, ಹೇಳಿಸಿ, ವಿನೋದ ಮಾಡಿ ಸಂಜೆಯವರೆಗೆ ಅಲ್ಲೇ ಎಲ್ಲೋ ಕಾಲ ಕಳೆದು ರಾತ್ರಿ ಹಳ್ಳಿಯವರಿಂದ ಕೋಲಾಟ ಹಾಕಿಸಿ ಅದು ಮುಗಿದ ನಂತರ ಮನೆಗೆ ಬರುತ್ತಿದ್ದರು. ದೊಡ್ಡವರು, ಚಿಕ್ಕವರು, ಹೆಂಗಸರು, ಮಕ್ಕಳು, ಆ ಜಾತಿ, ಈ ಜಾತಿ ಯಾವುದನ್ನೂ ಎಣಿಸುತ್ತಿರಲಿಲ್ಲ. ಒಮ್ಮೊಮ್ಮೆ ಅಲ್ಲೇ ಎಲ್ಲೋ ಇವರ ಉಪಹಾರಗಳೂ ನಡೆದು ಹೋಗುತ್ತಿದ್ದವು.

ನಾನೂ ಸಹ ಆಗಾಗ ಅವರೊಂದಿಗೆ ಮಾತನಾಡುತ್ತಿದ್ದೆ. ಹಾಗೆ ಮಾತನಾಡುವಾಗ ಏನೇನೋ ವಿಚಾರಗಳು ಬರುತ್ತಿದ್ದವು. ಅವರೊಂದಿಗೆ ಮಾತನಾಡುವುದೆಂದರೆ ಎಲ್ಲರಿಗೂ ಖುಷಿಯೋ ಖುಷಿ. ಅಷ್ಟೇ ಅಲ್ಲ ಅದೊಂದು ವಿಚಾರವಂತಿಕೆಯ ಹೊನಲು, ಬುದ್ಧಿಗೆ ಸಾಣೆ. ಒಮ್ಮೆ ಇವರನ್ನು ಭೇಟಿ ಮಾಡಿದ ಒಬ್ಬ ಹಿರಿಯರು `ಇವರು ನಮ್ಮ ಕಾಲದ ಸಾಕ್ರಟೀಸ್’ ಎಂದರು. ಬರು ಬರುತ್ತಾ ನನಗೂ ಅರ್ಥವಾಯಿತು. ಈ ವ್ಯಕ್ತಿ ಎಲ್ಲರಂತೆ ನನಗೂ ಮೊದಲಿಗೆ ಹಿತ್ತಲಗಿಡವಾಗಿದ್ದದ್ದು ಅನಂತರ ಮಹಾನ್ ಬೋಧಿವೃಕ್ಷವಾಯಿತು. ನಮ್ಮಪ್ಪ ನನ್ನ ಬಳಿ ಇದ್ದಾರೆ ಎಂಬುದು ಹೋಗಿ, ದೊಡ್ಡವರೊಬ್ಬರ ಬಳಿ ನಾನಿದ್ದೇನೆ ಎಂಬ ಭಾವನೆ ಮೂಡಿತು.

ಹೀಗೆ ಕಾಲ ಕಳೆಯುತ್ತಿದ್ದಾಗ ಒಂದು ಸಂಜೆ ಇದ್ದಕ್ಕಿದ್ದಂತೆ ಅತಿಯಾದ ಸಿಟ್ಟಿನಿಂದ ಮನೆಗೆ ಬಂದರು. `ನನಗೆ ಊಟ ಬೇಡ’ ಎಂದರು. ನಾನೂ ಹೆಚ್ಚು ಬಲವಂತ ಮಾಡಲಿಲ್ಲ. ಮರುದಿನವೂ ಆ ಸಿಟ್ಟು ಇಳಿದಿರಲಿಲ್ಲ. ಮುಖದಲ್ಲಿ ಅಶಾಂತಿ ಎದ್ದು ಕಾಣುತ್ತಿತ್ತು. ಒಬ್ಬರೇ ಏನೇನೋ ಗೊಣಗುತ್ತಿದ್ದರು. ಅದರ ಕಾರಣ ಬೇರೆಯವರಿಂದ ತಿಳಿಯಿತು.

ಆ ಊರಿನಲ್ಲೊಬ್ಬ ಎಲ್ಲಾ ಮುಗಿಸಿದ ಖದೀಮ. ದಿನವೆಲ್ಲಾ ಊರ ಮುಂದಿನ ಕಟ್ಟೆಯ ಮೇಲೆ, ಚಾವಡಿಯಲ್ಲಿ, ಅಂಗಡಿಗಳ ಮುಂದೆ ಕುಳಿತು, ಅವರಿವರು ಕೊಟ್ಟ ತುಂಡು ಬೀಡಿ ಸೇದುತ್ತಾ ದೇಶದ ಮೇಲಿನ ಸುದ್ದಿಗಳನ್ನೆಲ್ಲಾ ವಿಮರ್ಶೆ ಮಾಡುವುದು ಅಥವಾ ಯಾವುದೋ ಮೂಲೆಯ ಮನೆಯಲ್ಲಿ ಇಸ್ಪೀಟ್ ಆಡುವವರ ಪಕ್ಕದಲ್ಲಿ ಕುಳಿತು ಸಲಹೆಗಳನ್ನು ಕೊಡುತ್ತಾ ತನ್ನ ಹಳೆಯ ಚಪಲವನ್ನು ತೀರಿಸಿಕೊಳ್ಳುವುದು ಅವನ ನಿತ್ಯದ ಕೆಲಸ. ಅವನ ಹೆಂಡತಿ ಹಗಲೆಲ್ಲಾ ಕೂಲಿ ಮಾಡಿ ಸಂಜೆಗೆ ಎರಡು ಸೇರು ಕಾಳು ತರಬೇಕು. ಅದನ್ನು ಕುಟ್ಟಿ, ಬೀಸಿ ಅಡುಗೆ ಮಾಡಿ ತನ್ನ ಎರಡು ಮೂರು ಮಕ್ಕಳನ್ನು ಸಾಕಬೇಕು. ಆದರೆ ಅದೇ ಕಾಳಿನಲ್ಲಿ ಇವನ ಬೀಡಿ, ಎಲೆ, ಅಡಿಕೆ, ಸೇಂದಿ ಇತ್ಯಾದಿಗಳಿಗಾಗಿ ಪಾಲು ಕೊಡಬೇಕು. ಆ ಪಾಲಿಗಾಗಿ ಅವರಿಬ್ಬರ ನಡುವೆ ನಿತ್ಯವೂ ಜಗಳ. ಆ ದಿನ ಆ ಜಗಳ ಕಾಳಗವಾಗಿ ಪರಿಣಮಿಸಿ ಆಕೆಯನ್ನು ಮೈಮುರಿಯುವಂತೆ ಬಡಿದನಂತೆ. ಎಷ್ಟಾದರೂ ಅವಳ ಗಂಡ ಅಲ್ಲವೇ! ಬಿಡಿಸಲು ಹೋದವರ ಮೇಲೆ `ನನ್ನ ಹೆಂಡತಿಯನ್ನು ನಾನು ಏನು ಬೇಕಾದರೂ ಮಾಡುತ್ತೇನೆ. ನೀವು ಯಾರಯ್ಯಾ ಕೇಳುವುದಕ್ಕೆ’ ಎಂದು ದಾಂಪತ್ಯ ಸಂಹಿತೆಯನ್ನೇ ಕಾರಿದನಂತೆ. ಆ ದೃಶ್ಯ ಇವರ ಕೋಪಕ್ಕೆ ಕಾರಣವಾಯಿತು.

-(ಮುಂದುವರೆಯುವುದು)

Leave a Reply

Your email address will not be published. Required fields are marked *