ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ: ಕೇಳಿಕೊಳ್ಳಿ- ಅಧ್ಯಾಯ-5

  • ಅವಳನ್ನು ಒಲಿಸಿಕೊಳ್ಳುವುದು ಹೇಗೆ?

ಕೇಳಿಕೊಳ್ಳಿ:

ಆದರೆ ಫ್ರೆಂಡ್ಸ್‌,

ಒಬ್ಬ ಹುಡುಗಿಗೆ I love you ಅಂತ ಹೇಳುವ ಮುನ್ನ ಈ ಕೆಳಗಿನ ಪ್ರಶ್ನೆಗಳನ್ನು ನೀವ್ಯಾರಾದರೂ ಕೇಳಿಕೊಂಡಿದ್ದೀರಾ?

೧. ಹಾಗೆ ಹೇಳಲೇಬೇಕಾದ ಪ್ರಸಂಗವಿದೆಯೆ?

೨. ಹೇಳದಿದ್ದರೆ ಏನಾದೀತು?

೩. ಹೇಳುವ ಅರ್ಹತೆ ನನಗಿದೆಯೇ?

೪. ಅದಕ್ಕವಳು ಉತ್ತರಿಸಲೇ ಬೇಕೆ?

೫. ಉತ್ತರಿಸದಿದ್ದರೆ ಏನು ಮಾಡೋದು?

೬. ಅವಳ ಉತ್ತರಕ್ಕೆ, ಪ್ರೀತಿಗೆ, ಮತ್ತೊಂದು ಜೀವದ ಜವಾಬ್ದಾರಿಗೆ ನಾನು ಯೋಗ್ಯನೆ?

I am sure, ನೂರರಲ್ಲಿ ಹತ್ತು ಜನ ಕೂಡ ತಮ್ಮ ಗೆಳತಿಯ ಮುಂದೆ ‘I love you’ ಎಂಬ ಎಂಟಕ್ಷರಗಳ ಮಹಾಮಂತ್ರವನ್ನು ಪಠಿಸುವುದಕ್ಕೆ ಮುಂಚೆ ಈ ಯಾವ ಪ್ರಶ್ನೆಯನ್ನೂ ಕೇಳಿಕೊಂಡಿರುವುದಿಲ್ಲ. ಕಡೇ ಪಕ್ಷ ಇವುಗಳಲ್ಲಿ ಕೆಲವನ್ನಾದರೂ ಗಂಭೀರವಾಗಿ ಕೇಳಿಕೊಂಡಿರುವುದಿಲ್ಲ.

ಏಕೆಂದರೆ, ನಮ್ಮಲ್ಲಿ ಅನೇಕರು-ನಮಗೆ ತಾರುಣ್ಯ ಬಂದಿರುವುದೇ ಅತಿ ದೊಡ್ಡ qualification ಅಂದುಕೊಂಡುಬಿಟ್ಟಿರುತ್ತೇವೆ. ಆ ಖಾತ್ರಿಯ ಮೇಲೆಯೇ ಅವಳನ್ನು ಸಮೀಪಿಸಿ ಪ್ರೇಮದ ಬೀಜಮಂತ್ರ ಪಠಿಸಿಬಿಡುತ್ತೇವೆ.

ಆಗ ರಪ್ಪಂತ ಇದಿರಾಗುತ್ತದೆ ನಿರಾಸೆ!

ಎಂಟಕ್ಷರಗಳ ಅದ್ಭುತ ಬೀಜಮಂತ್ರ ಅವಳ ಮೇಲೆ ಸಾಸಿವೆ ಕಾಳಿನಷ್ಟೂ ಪ್ರಭಾವ ಬೀರುವುದಿಲ್ಲ. ಅವಳು ಅದನ್ನು ಪೂರ್ತಿಯಾಗಿ ಕೇಳಿಸಿಕೊಳ್ಳುವುದೂ ಇಲ್ಲ. ಕೇಳಿಸಿಕೊಂಡರೂ ತಿರುಗಿ ನೋಡುವುದಿಲ್ಲ. ಬರೆದುಕೊಟ್ಟರೆ ಇಸಿದುಕೊಳ್ಳುವುದಿಲ್ಲ. Post ಮಾಡಿದರೆ ಅವಳ ಪ್ರತಿಕ್ರಿಯೆ ಗೊತ್ತಾಗುವುದಿಲ್ಲ. ಎಲ್ಲವನ್ನೂ ನುಂಗಿ ಕದಲದೆ ಕೂತು ಬಿಡುವ ಪ್ರಾಚೀನ ಜ್ವಾಲಾಮುಖಿಯಂತೆ ಮೌನಿಯಾಗಿ ಬಿಡುತ್ತಾಳೆ. ನೀವು `ಅಷ್ಟೊಂದಾಗಿ’ ಪ್ರೀತಿಸುವ ಹುಡುಗಿ ಇದ್ದಕ್ಕಿದ್ದಂತೆ ನಿಮ್ಮ ಪಾಲಿಗೆ ಮುಚ್ಚಿದ ಬಾಗಿಲಾಗಿ ಬಿಡುತ್ತಾಳೆ. ಆಗ, ಮೊಟ್ಟ ಮೊದಲ ಬಾರಿಗೆ ನಿಮ್ಮಲ್ಲಿ ಪ್ರಶ್ನೆ ಉದ್ಭವವಾಗುತ್ತದೆ;

“ಅವಳನ್ನು ಒಲಿಸಿಕೊಳ್ಳುವುದು ಹೇಗೆ?”

ಟ್ರಿಗ್ನಾಮಿಟ್ರಿಯ ಅತಿಕ್ಲಿಷ್ಟ ಪ್ರಶ್ನೆಗಳನ್ನೂ ಬಲಗೈ ತುದಿಯಲ್ಲಿ ಸಲೀಸಾಗಿ ಬಿಡಿಸಿ ಮುಂದಿಡುವ ವಿದ್ಯಾರ್ಥಿ ಕೂಡ ಈ ಮೇಲಿನ ಪ್ರಶ್ನೆಯೆದುರು ಫಂಕ್ ಆಗಿ ಬಿಡುತ್ತಾನೆ. ಏಕೆಂದರೆ, ಎಂಟಕ್ಷರದ ಬೀಜಮಂತ್ರ ಪಠಿಸುವ ಮುನ್ನ ಅವನು ನಾನೀಗಾಗಲೇ ಹೇಳಿದ ಆರು ಪ್ರಶ್ನೆಗಳನ್ನು ತನಗೆ ತಾನು ಹಾಕಿಕೊಂಡೇ ಇರುವುದಿಲ್ಲ.

-ರವಿ ಬೆಳಗೆರೆ

Leave a Reply

Your email address will not be published. Required fields are marked *