ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ನಾಲ್ಕು ಪರಿಚಯಗಳಿರಲಿ

  • ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-13

ನಾಲ್ಕು ಪರಿಚಯಗಳಿರಲಿ

ಅದೇನೋ ಸುಡುಗಾಡು ಆಯ್ಕೆ ಅಂದಿರಲ್ಲ? ಅದನ್ನು ಮಾಡುವುದು ಹೇಗೆ-ಅಂತ ಕೇಳುತ್ತೀರಿ. ಅದನ್ನೂ ಹೇಳ್ತೇನೆ. ಮುಖ್ಯವಾಗಿ `ಪ್ರೇಮ’ದ ಬಗ್ಗೆ ನಿಮಗಿರುವ mythಗಳನ್ನ, ಮೂಢನಂಬಿಕೆಗಳನ್ನ ಮೊದಲು ದೂರಮಾಡಿಕೊಳ್ಳಿ. `ಮದುವೆಗಳು ಸ್ವರ್ಗದಲ್ಲಾಗುತ್ತವೆ’ ಎಂಬ ಮೊದಲ ಅವಿವೇಕವನ್ನು ತಿರಸ್ಕರಿಸಿ. ಅವು ಸ್ವರ್ಗದಲ್ಲೇ ಆಗುವುದಾದರೆ, ಛತ್ರಗಳಿಗ್ಯಾಕಿಷ್ಟು ಡಿಮ್ಯಾಂಡಿರುತ್ತಿತ್ತು? ಮದುವೆಗಳು ದೈವ ನಿರ್ಣಯಗಳಲ್ಲ. ಹೆಚ್ಚಿನ ಸಲ ಅವುಗಳನ್ನು `ಮ್ಯಾರೇಜ್ ಬ್ರೋಕರು’ಗಳು ನಿರ್ಧರಿಸುತ್ತಾರೆ ಎಂಬುದು ನಮ್ಮೆಲ್ಲರ ಕರ್ಮ. ಅಂತೆಯೇ `ಪ್ರೇಮ’ ಕೂಡ ದೈವಿಕವಾದುದಲ್ಲ. ಅದು ಸಂಪೂರ್ಣವಾಗಿ ಮನಸ್ಸಿನ ಕೆಲಸ. ಅಲ್ಲಿ ವಿವೇಕಕ್ಕಿಂತ ಭಾವಾವೇಶವೇ ಜಾಸ್ತಿ ಕೆಲಸ ಮಾಡುತ್ತದೆ. ನೀವು ಎಷ್ಟೇ ಭಾವುಕರಾಗಿ ಆಕೆಯನ್ನು ಪ್ರೀತಿಸಿ-ಪರವಾಗಿಲ್ಲ. ಆದರೆ ಆಯ್ಕೆಯ ವಿಷಯದಲ್ಲಿ ಭಾವುಕರಾಗಬೇಡಿ. ಆಕೆ ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂಬುದೊಂದೇ ನಿಮ್ಮ ಪ್ರೇಮದ ಕ್ರೈಟೀರಿಯಾ ಆಗಿಬಿಡಬಾರದು. ಪ್ರೀತಿಯ ತುಫಾನಿಗೆ ಸಿಲುಕುವ ಮುನ್ನ ಹೆಣ್ಣು ಜೀವಗಳ ಪರಿಚಯ ಮಾಡಿಕೊಳ್ಳಿ. ಆಕೆಯ ಸ್ವಭಾವದ ಅರಿವು ಮೂಡಿಸಿಕೊಳ್ಳಿ. ನಿಮಗೆ ಒಂದಲ್ಲ, ನಾಲ್ಕು ಜನ ಹುಡುಗಿಯರ ಪರಿಚಯವಿದ್ದರೆ-ಅವರ ಸ್ವಭಾವಗಳು ಅರ್ಥವಾಗುತ್ತವೆ. ಒಂದು ಚಿಕ್ಕ ವಿಷಯದಲ್ಲೂ ಕೂಡ ಹೆಂಗಸರು ಗಂಡಸರಿಗಿಂತ ಎಷ್ಟು ಭಿನ್ನವಾಗಿ ಆಲೋಚಿಸುತ್ತಾರೆ ಎಂಬುದು ನಿಮಗೆ ಗೊತ್ತಾಗುತ್ತದೆ. ಆಗ, ನೀವು ಪ್ರೀತಿಸಲು ಹೊರಟ, ಆಯ್ಕೆ ಮಾಡಿಕೊಂಡ ಹುಡುಗಿಯನ್ನು ಉಳಿದ ನಾಲ್ವರೊಂದಿಗೆ ನಿಲ್ಲಿಸಿ compare ಮಾಡಿ. ಮುಖ್ಯವಾಗಿ ಆಕೆ ಬೆಳೆದ ಪರಿಸರ, ಆಕೆಯ ಸ್ವಭಾವ, ಭವಿತವ್ಯದೆಡೆಗಿನ ಕನಸುಗಳು, ಹೊಂದಾಣಿಕೆಯ ಸಾಧ್ಯತೆಗಳು, ಆಕೆಯ ಬೇಕು-ಬೇಡಗಳು ಎಲ್ಲವನ್ನೂ study ಮಾಡಿ. ಹುಡುಗಿಯರು ಕೂಡ ನಿಮ್ಮಷ್ಟೇ ಅನಾಡಿಗಳಿರುತ್ತಾರೆ. Raw ಆಗಿರುತ್ತಾರೆ ಎಂಬುದನ್ನು ಮರೆಯಬೇಡಿ. ಆರಂಭಿಕ ಪ್ರೇಮದ ಅವಸರದಲ್ಲಿ ಅವರ ಅವಗುಣಗಳು ತೀರ ಚಿಕ್ಕದಾಗಿ, ನೆಗ್ಲಿಜಿಬಲ್ ಆಗಿ ಕಾಣುತ್ತವೆ. ಮುಂದೆ ಅದನ್ನೆಲ್ಲ ತಿದ್ದಿಕೊಳ್ಳುತ್ತಾಳೆ ಬಿಡು ಎಂದು ಅಸಡ್ಡೆ ಮಾಡಬೇಡಿ. ನನ್ನ ಹುಡುಗನನ್ನು ನಾನು ತಿದ್ದುತ್ತೇನೆ ಎಂದು ಹುಡುಗಿಯರು ಭಾವಿಸುವುದು ಎಂಥ ಮೂರ್ಖತನವೋ, ಅವಳನ್ನು ನನಗೆ ಬೇಕಾದಹಾಗೆ ಬದಲಾಯಿಸಿ ಇಟ್ಟುಕೊಳ್ತೇನೆ-ಎಂದು ಭಾವಿಸುವುದೂ ಅಷ್ಟೇ ಮೂರ್ಖತನ. ನಿಮಗೆ ಚೆನ್ನಾಗಿ ನೆನಪಿರಲಿ; ಮನುಷ್ಯರ ಅಭ್ಯಾಸಗಳು ಬದಲಾಗಬಹುದು. ಮೂಲಭೂತ ಸ್ವಭಾವ ಬದಲಾಗುವುದಿಲ್ಲ. ಜಗಳಗಂಟಿಯನ್ನೋ, ಅಪ್ರಾಮಾಣಿಕಳನ್ನೋ, ಕಡೆತನಕ ಹುಡುಗರೊಂದಿಗೆ ಫರ್ಟ್ ಮಾಡುವವಳನ್ನೋ, ನಿಮ್ಮ ಹಿರಿಯರನ್ನು ಗೌರವಿಸಲಾಗದ ದುರಹಂಕಾರಿಯನ್ನೋ-ಪ್ರೀತಿಯ ಹೆಸರಿನಲ್ಲಿ ನೇತ್ಹಾಕಿಕೊಂಡು ಪಶ್ಚಾತ್ತಾಪ ಪಡಬೇಡಿ. ಆಯ್ಕೆಯಲ್ಲಿ ಎಚ್ಚರವಿರಲಿ. ಆಯ್ಕೆ ಮಾಡುವ ಬುದ್ಧಿವಂತಿಕೆ ಮತ್ತು ವಯಸ್ಸು ನಿಮ್ಮದಾಗಲಿ.

-ರವಿ ಬೆಳಗೆರೆ

 

Leave a Reply

Your email address will not be published. Required fields are marked *