ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಮೂರೇ ಜನವೆ?

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-8

ಮೂರೇ ಜನವೆ?

ದುರಂತವೆಂದರೆ, ನಮ್ಮ ದೇಶದಲ್ಲಿರುವುದು ಮೂರೇ ಜನ ಹೆಂಗಸರು. ತಾಯಿ, ತಂಗಿ-ಅದು ಬಿಟ್ಟರೆ ನಲ್ಲೆ! ಈ ಮೂರು ಅಲ್ಲದ, ಯಾವ ಪರದೆ-ಪಹರೆಗಳೂ ಬೇಕಾಗದ, ತುಂಬ ಸಿಂಪಲ್ಲಾದ ಒಂದು ಗಂಡು-ಹೆಣ್ಣಿನ ಸಂಬಂಧ ನಮ್ಮಲ್ಲಿ ಏರ್ಪಡುವುದೇ ಅಪರೂಪ. ಇಪ್ಪತ್ತನೇ ವರ್ಷಕ್ಕಾಗಲೇ ಹೆಣ್ಣಿನ ಸಹಚರ್ಯಕ್ಕಾಗಿ ತವಕಿಸತೊಡಗುವ ಯುವಕ, ಕನಿಷ್ಟ ಪಕ್ಷ ಇನ್ನೂ ಐದಾರು ವರ್ಷದಷ್ಟಾದರೂ ತನ್ನ ಈ ತಪನೆಯನ್ನು ಮುಂದೂಡಬಹುದು; ನಲ್ಲೆಗಾಗಿ ತಾನು ಕಾಯಬಹುದು; ಅಲ್ಲಿಯತನಕ ತನ್ನ comfortಗೆ ಒಬ್ಬ ಸಭ್ಯ ಮನಸ್ಸಿನ girl friend ಸಾಕಾಗಬಹುದು-ಎಂದು ಯೋಚಿಸುವುದೇ ಇಲ್ಲ.

ಕಂಡದ್ದನ್ನೆಲ್ಲ love ಅಂದುಕೊಳ್ಳುತ್ತಾನೆ. ಹುಡುಗಿ ಎರಡು ಬಾರಿ ತನ್ನೆಡೆಗೆ ತಿರುಗಿ ನೋಡಿದರೆ ಅದನ್ನು ಪ್ರೇಮವೆಂದು confuse ಮಾಡಿಕೊಳ್ಳುತ್ತಾನೆ. ಅವಳ ನೋಟ್ಸು ಕೈಗೆ ಬಂದ ದಿನವೇ ಅವಳಿಗೊಂದು ಪ್ರೇಮಪತ್ರದ draft ಸಿದ್ಧಪಡಿಸಿ ಅದನ್ನು ಪುಸ್ತಕದ ರಟ್ಟಿಗೆ ಸೇರಿಸಿ, ಮಾರನೆಯ ದಿನ ಅವಳ ಕೈಯಲ್ಲಿಟ್ಟು ಸಂಜೆ ಹೊತ್ತಿಗೆ ಪಾರ್ಕಿನಲ್ಲಿ ಕಾಯತೊಡಗುತ್ತಾನೆ.

ತನ್ನ ಜರೂರತ್ತು ಪ್ರೇಮವಲ್ಲ, ಕೇವಲ ವಯೋಸಹಜ ಸ್ತ್ರೀ ಸಾಮಿಪ್ಯ-ಎಂಬುದನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಆತ ಧಾರಾಕಾರವಾಗಿ ಅವಳನ್ನು ಪ್ರೀತಿಸತೊಡಗಿರುತ್ತಾನೆ! ನಾನು ಹೇಳಿದುದರಲ್ಲಿ ನಿಮಗೆ ನಂಬಿಕೆ ಬಾರದೆ ಇದ್ದರೆ, ಈಗೊಂದು ಎರಡು ವರ್ಷದ ಮುಂಚೆ ಪ್ರೀತಿಸಿ ಮದುವೆಯಾದ ಯಾರನ್ನಾದರೂ ನಿಲ್ಲಿಸಿ ಕೇಳಿಬಿಡಿ;

“ನಿಜ, ಅವಳು ಹೆಂಡತಿಯಾಗುವುದಕ್ಕಿಂತ-ಒಳ್ಳೆಯ girl friend ಆಗಿ ಉಳಿದಿದ್ದರೇನೇ ಚೆನ್ನಾಗಿತ್ತು” ಎಂಬ ಉತ್ತರ ಖಂಡಿತ ಬರುತ್ತದೆ.

ಹಾಗಾದರೆ, ಕೇವಲ girl friendನ ಪಾತ್ರವಹಿಸುತ್ತಿದ್ದ ಹುಡುಗಿಯನ್ನು ಹೆಂಡತಿಯ ಪಾತ್ರ ನಿಭಾಯಿಸುವಂತೆ ಒತ್ತಾಯಿಸಿದ್ದು ಯಾರು?

ನೀವೇ!

-ರವಿ ಬೆಳಗೆರೆ

Leave a Reply

Your email address will not be published. Required fields are marked *