ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-16 ಸುಂದರಾಂಗನಾದರೆ ಸಾಲದು

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-16

ಸುಂದರಾಂಗನಾದರೆ ಸಾಲದು

ಹುಡುಗಿಯರು ನಮ್ಮಂತೆ ಆಲೋಚಿಸುವುದಿಲ್ಲ. ಮೊದಲ ನೋಟದಲ್ಲಿ ನಿಮ್ಮ smartness ಅವರನ್ನು ಆಕರ್ಷಿತರನ್ನಾಗಿ ಮಾಡುತ್ತದೆಂಬುದು ನಿಜವೇ ಆದರೂ, ನಿಮ್ಮೊಂದಿಗೆ ಒಂದು ಶಾಶ್ವತ ಬಂಧ ಏರ್ಪಡಿಸಿಕೊಳ್ಳುವುದಕ್ಕೆ ಆಕೆ ನೂರೆಂಟು ವಿವರಗಳನ್ನು ಹುಡುಕುತ್ತಾಳೆ. ಒಂದು ಉದಾಹರಣೆಯಿದೆ ನೋಡಿ: ನನ್ನಲ್ಲಿಗೆ ತುಂಬ ದುಗುಡಗೊಂಡು ಬರುವ ಹುಡುಗನೊಬ್ಬ ಹೇಳುತ್ತಾನೆ; “ತುಂಬ ಚೆನ್ನಾಗಿ ಮಾತಾಡ್ತಿದ್ಲು ಸಾರ್. ಎರಡು ಸಲ ಪಿಕ್ಚರ್ರಿಗೂ ಬಂದಿದ್ಲು. ನಾಲ್ಕೈದು ಲೆಟರ್ರೂ ಕೊಟ್ಟಿದೀನಿ. ಮೊದ್ಲು ಒಪ್ಕೊಂಡ ಹಾಗೇನೇ ಕಾಣಿಸಿದ್ಲು. ಅದೇನಾಯ್ತೋ ಏನೋ? ಇವಾಗ ಮಾತಾಡಿಸಿದ್ರೆ ಮುಖ ತಿರುಗಿಸಿಕೊಂಡು ಹೋಗ್ತಾಳೆ!”

ಇದು ಆತನ ಕಂಪ್ಲೇಂಟು.

ನೋಡಲು ಚೆನ್ನಾಗಿದ್ದಾನೆ. ಮಾತಿನಲ್ಲೂ ಚಾತುರ್ಯವಿದೆ. ಪರಿಚಯವಾದ ಕೆಲವೇ ದಿನಗಳಲ್ಲಿ ಈತನನ್ನು ಧಿಕ್ಕರಿಸಲು ಆಕೆಗಿರಬಹುದಾದ ಕಾರಣಗಳಾದರೂ ಏನಿರಬಹುದು-ಎಂದು ಯೋಚಿಸಿದೆ. ತಕ್ಷಣ ತೋಚಲಿಲ್ಲ. ಆ ಹುಡುಗನಿಗೆ ಮತ್ತೆ ಬರಲು ಹೇಳಿದೆ. ನಾಲ್ಕೈದು ಸಲ ಬಂದ. ಅನೇಕ ಸಲ ಫೋನು ಮಾಡಿದ. ಒಟ್ಟು ನನಗೂ ಆತನಿಗೂ ಏಳೆಂಟು ಸಲ interaction ಆಗಿರಬಹುದು. ಕಡೆಗೊಂದು ದಿನ ನಾನೇ ಹೇಳಿದೆ;

“ನಿನ್ನನ್ನು ತಿರಸ್ಕರಿಸಿ ಆ ಹುಡುಗಿ ಒಳ್ಳೇ ಕೆಲಸ ಮಾಡಿದ್ದಾಳೆ!”

ಮೇಲು ನೋಟಕ್ಕೆ smart ಆಗಿ ಕಾಣುವ ಈ ಹುಡುಗ ಹತ್ತಿರದಿಂದ ನೋಡಿದಾಗ ಎಂಥಾ ಹುಟ್ಟು ಕೊಳಕನೋ ಅರ್ಥವಾಗುತ್ತದೆ. ಆತನ ವರ್ತನೆಯಲ್ಲೊಂದು ಅಸಹನೆಯಿದೆ. ಬೇಗ ಇಂಪೇಷಂಟ್ ಆಗಿಬಿಡುತ್ತಾನೆ. ವ್ಯಕ್ತಿತ್ವದಲ್ಲೊಂದು ದುಡುಕುತನವಿದೆ. ಅವಕಾಶ ಸಿಕ್ಕಾಗ ದೌರ್ಜನ್ಯ ಮಾಡಿಬಿಡಬಲ್ಲನೆಂಬ ಲಕ್ಷಣಗಳಿವೆ. ಮುಖ್ಯವಾಗಿ ಒಂದು ಮನಸ್ಸನ್ನು ಗೆಲ್ಲಬಲ್ಲ ವಿನಯ ಮತ್ತು ಗೆಲ್ಲಬೇಕಾದವನಿಗಿರಬಹುದಾದ ಸಹನೆಗಳು ಅವನಿಗಿಲ್ಲ. ತುಂಬಿದ ಆಫೀಸಿನಲ್ಲಿ ಸಿಗರೇಟು ಸೇದುತ್ತಾ ಕಾಲಮೇಲೆ ಕಾಲು ಹಾಕಿಕೊಂಡು ಕುಳಿತಿದ್ದ ಅವನನ್ನು ಸಹಿಸುವುದು ನನಗೇ ಕಷ್ಟವೆನಿಸಿತ್ತು. ಆ ಹುಡುಗಿಗೆ ಇನ್ನೇನೇನು ಅನಿಸಿತ್ತೋ?

ನಾನು ನೋಡಲು ಚೆನ್ನಾಗಿದ್ದೇನೆ ಅಥವಾ ನನ್ನೆಡೆಗೆ ಆಕೆ ಆಕರ್ಷಿತಳಾಗಿದ್ದಾಳೆ ಎಂಬ ಒಂದೇ ಒಂದು ಅಂಶ, ನಿಮ್ಮನ್ನು ಪ್ರೀತಿಗೆ ಅರ್ಹರನ್ನಾಗಿ ಮಾಡಿಬಿಡುತ್ತದೆ ಅಂತ ಖಂಡಿತಾ ತಿಳಿದುಕೊಳ್ಳಬಾರದು. ಪ್ರೀತಿಯ ವಿಷಯದಲ್ಲಿ ರೂಪ ಮತ್ತು ಆಕರ್ಷಣೆಗಳು ಪ್ರಾರಂಭಿಕ ಹಂತದಲ್ಲಿ ಮಾತ್ರ ಪ್ರಭಾವಿಯಾಗಿ ಕೆಲಸ ಮಾಡುತ್ತವೆ. ಆದರೆ ಪ್ರೇಮದ ಸೌಧ ಆಕರ್ಷಣೆಯ ಬುನಾದಿಯ ಮೇಲೆ ನಿಲ್ಲುವುದಿಲ್ಲ. ರೂಪದ, ಆಕರ್ಷಣೆಯ ಜಗುಲಿಯ ಮೇಲೆ ವಿಶ್ವಾಸದ ಮಹಲು ಎದ್ದು ನಿಲ್ಲಲಾರದು. ಅಲ್ಲಿ ಬೇಕಾಗಿರುವುದು ವ್ಯಕ್ತಿತ್ವ!

ಯಾವುದಾದರೂ ಮಲಬಾರಿ ಹೊಟೇಲಿಗೋ, ನವಾಯತರು ನಡೆಸುವ ಹೊಟೇಲಿಗೋ ಹೋಗಿ ನೋಡಿ. ಅಲ್ಲಿ ಕೆಲಸ ಮಾಡುವ ಹುಡುಗರು ಯಾವ ಅಮೀರ್‌ಖಾನ್‌ನನ್ನಾದರೂ ನಾಚಿಸಿಬಿಡುವಷ್ಟು ಸ್ಫುರದ್ರೂಪಿಗಳಾಗಿರುತ್ತಾರೆ. ನಿಮ್ಮ ಲೆಕ್ಕಾಚಾರದ ಪ್ರಕಾರ ರೂಪವೇ, ಆಕರ್ಷಣೆಯೇ ಪ್ರೇಮದ ಅರ್ಹತೆಯಾಗಬಹುದಾದರೆ ಆ ಹೊಟೇಲಿನ ಒಬ್ಬೊಬ್ಬ ಹುಡುಗನಿಗೂ ಹತ್ತಾರು ಗೆಳತಿಯರಿರಬಹುದಾಗಿತ್ತು.

ಹಾಗಾಗುವುದಿಲ್ಲ.

-ರವಿ ಬೆಳಗೆರೆ

Leave a Reply

Your email address will not be published. Required fields are marked *