ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ? : ಹಾಗೆ ಹೇಳಲೇಬೇಕಾದ ಪ್ರಸಂಗವಿದೆಯೆ?

  • ಅವಳನ್ನು ಒಲಿಸಿಕೊಳ್ಳುವುದು ಹೇಗೆ?
  • ಅಧ್ಯಾಯ-6

ಹಾಗೆ ಹೇಳಲೇಬೇಕಾದ ಪ್ರಸಂಗವಿದೆಯೆ?

ಮೊದಲನೆಯದಾಗಿ;

“ಹಾಗೆ ಹೇಳಬೇಕಾದ ಪ್ರಸಂಗವಿದೆಯೆ?”

ಎಂಬ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ನಮ್ಮಲ್ಲಿ ಅನೇಕರು, ಅನೇಕ ಸಲ ಎಷ್ಟೋ ಕೆಲಸಗಳನ್ನು ಅನವಶ್ಯಕವಾಗಿ ಮಾಡುತ್ತೇವೆ. ಅವುಗಳ ಪೈಕಿ `ಪ್ರೇಮ’ವೂ ಒಂದು. ಹೀಗಂತೀನಿ ಅಂತ ಬೇಜಾರು ಮಾಡಿಕೊಳ್ಳಬೇಡಿ.

ನಿಜಕ್ಕೂ ನಿಮಗೆ ಪ್ರೇಮದ ಇಮ್ಮೀಡಿಯೇಟ್ ಜರೂರತ್ತು ಇರುವುದಿಲ್ಲ. ಅಪ್ಪ ಅಮ್ಮನ ಆರೈಕೆ, ಒಳ್ಳೆಯ ಕಾಲೇಜು, ಪರೀಕ್ಷೆಗಳಲ್ಲಿ ಗೆಲ್ಲಲೇಬೇಕೆಂಬ ಜಿದ್ದು, ಮೈಕಟ್ಟು ಧೃಡವಾಗಿಸಿಕೊಳ್ಳಬೇಕೆಂಬ ಅಭಿಲಾಷೆ, ನಾಟಕದ ಖಯಾಲಿ, ಕ್ರಿಕೆಟ್‌ನೆಡೆಗಿನ ಆಕರ್ಷಣೆ, ಸಿನಿಮಾಗಳ ಮೋಜು, ಹೊಸದೇನನ್ನೋ ಕಲಿಯಬೇಕೆಂಬ ಜಿಜ್ಞಾಸೆ-ಇಂಥ busy scheduleನ ನಡುವೆ ನಿಮಗೆ ಪ್ರೀತಿಸುವ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಬಿಡುವಿರುವುದೇ ಇಲ್ಲ. ಅದು ಅಷ್ಟು ಮುಖ್ಯವಾದದ್ದಲ್ಲವೇ ಅಲ್ಲ. ಆದರೂ ತಲೆ ಕೆಡಿಸಿಕೊಳ್ಳುತ್ತೀರಿ. ಏಕೆಂದರೆ, ನಿಮ್ಮ ಸ್ನೇಹಿತನೋ, ಬಂಧುವೋ, ಪಕ್ಕದ ಮನೆಯವನೋ, ಮತ್ಯಾರೋ ಅದನ್ನೇ ಮಾಡಿದ್ದಾರೆ. ಅವರು ಮಾಡಿದ್ದಾರೆಂಬ ಕಾರಣಕ್ಕಾಗಿ ನೀವು ಮಾಡುತ್ತೀರಿ! ನೀವು ಸಿಗರೇಟು ಕಲಿತ ಹಾಗೆ, ಮುಷ್ಠಿ ಮೈಥುನ ಕಲಿತ ಹಾಗೆ, ಕಾಲೇಜಿನಲ್ಲಿ ಸಣ್ಣ ಸೈಜಿನ ಗೂಂಡಾಗಿರಿ ಕಲಿತ ಹಾಗೆ, ಷಾರುಕ್‌ಖಾನ್‌ನ ಮಾತಾಡುವ ಶೈಲಿಯನ್ನು ಕಲಿತ ಹಾಗೆ-ಪ್ರೀತಿಸುವುದನ್ನೂ ಕಲಿತು ಬಿಡುತ್ತೀರಿ. ಅನೇಕ ಹುಡುಗರ ಪಾಲಿಗೆ ಪ್ರೀತಿಸುವುದು-ಅವರ ಪುರುಷತ್ವದ ಸಂಕೇತ. ಅವರ macho imageನ ಸಂಕೇತ!

ಛೆ, ನಂಗೀಗಾಗಲೇ ಇಪ್ಪತ್ತು ವರ್ಷಗಳಾದವು. ಇನ್ನು ಮೇಲೂ ನಾನು ಪ್ರೀತಿಸದಿದ್ದರೆ ಹೇಗೆ-ಎಂದು ಚಡಪಡಿಸಿ ಪ್ರೀತಿಗೊಂದು ಷೆಡ್ಯೂಲ್ ಫಿಕ್ಸ್ ಮಾಡಿಕೊಂಡು-`ಅದೊಂದು ಶುಭ ಸೋಮವಾರದಿಂದ’ ಎಂಬಂತೆ ಒಬ್ಬಳ್ಯಾವಳನ್ನೋ ಪ್ರೀತಿಸತೊಡಗುತ್ತೀರಿ. ಅಥವಾ ಹಾಗಂತ ಭ್ರಮಿಸತೊಡಗುತ್ತೀರಿ. ಹಾಗೆ ಅಪ್ರಾಸಂಗಿಕವಾಗಿ, ಯಾವುದೇ ಜರೂರತ್ತುಗಳಿಲ್ಲದೆ ಆರಂಭವಾಗುವ ಪ್ರೀತಿ, ನಿಧಾನವಾಗಿ ನಿಮ್ಮನ್ನು ಆವರಿಸಿಕೊಂಡು, ನಿಮ್ಮ ಜರೂರತ್ತಾಗಿ, ಬಲಹೀನತೆಯಾಗಿ, ನಿಮ್ಮ ಆರಂಭಿಕ ಜೀವನದ ಅತಿದೊಡ್ಡ disturbance ಆಗಿ ಪರಿಣಮಿಸಿದಾಗ-ಮತ್ತದೇ ಪ್ರಶ್ನೆಯನ್ನು ಮುಂದಿಟ್ಟುಕೊಳ್ಳುತ್ತೀರಿ!

“ಅವಳನ್ನು ಒಲಿಸಿಕೊಳ್ಳುವುದು ಹೇಗೆ?”

-ರವಿ ಬೆಳಗೆರೆ

Leave a Reply

Your email address will not be published. Required fields are marked *