ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ? ಅಧ್ಯಾಯ-9 – ಗೊತ್ತಾಗೋದು ಹೇಗೆ?

  • ಅವಳನ್ನು ಒಲಿಸಿಕೊಳ್ಳುವುದು ಹೇಗೆ? ಅಧ್ಯಾಯ-9

ಗೊತ್ತಾಗೋದು ಹೇಗೆ?

ನಿಮಗೆ ತಾಯಿ-ತಂಗಿ-ಹೆಂಡತಿ ಈ ಮೂರೂ ಅಲ್ಲದ ಮತ್ತೊಂದು ಸ್ತ್ರೀ ಸಂಬಂಧ ಇರಬಹುದು ಎಂಬ ಸತ್ಯ ಗೊತ್ತೇ ಇರಲಿಲ್ಲ. “ತಂದೆ-ಗಂಡ-ಮಗ” ಎಂಬ ಸರಳ ಸಂಬಂಧಗಳಿಗಿಂತ ವಿಭಿನ್ನವಾದ ಸಂಬಂಧವೊಂದನ್ನು ಹುಡುಗಿಯರೊಂದಿಗೆ ಬೆಳೆಸಿಕೊಳ್ಳಲು ಸಾಧ್ಯ. ತೆಪರ ಮಹಾಪ್ರಭುಗಳಂತೆ, ಕಂಡ ಹುಡುಗಿಯ ಮುಂದೆ ನಿಂತು I love you ಎಂಬ ಪವಿತ್ರ ಮಂತ್ರವನ್ನು ವ್ಯರ್ಥ ಮಾಡುವ ಬದಲು, ಕ್ಷಣ ಕಾಲ ಒಬ್ಬರೇ ಕುಳಿತು ಆಲೋಚಿಸಿ. ಆ ಹುಡುಗಿ ನಿಮ್ಮ ಪ್ರೇಯಸಿಯಾಗುವುದಕ್ಕಿಂತಲೂ, ಕೇವಲ ಒಬ್ಬ ಒಳ್ಳೆಯ ಗೆಳತಿಯಾಗಲಿಕ್ಕೆ ಜಾಸ್ತಿ ಅರ್ಹಳಿರಬಹುದು. ಅವಸರಕ್ಕೆ ಬಿದ್ದು, ಅಂಥ ಒಳ್ಳೆ ಗೆಳೆತನಕ್ಕೆ ಪ್ರೇಮದ ಹೆಸರಿಟ್ಟು ಹಾಳಾಗಬೇಡಿ.

ಹಾಗಾದರೆ `ಪ್ರೀತಿ’ಯೆಂಬುದು ನಿಜವಾದ ಜರೂರತ್ತಾಗಿದೆಯೆಂಬ ವಿಷಯ ನಮಗೆ ಹ್ಯಾಗೆ ಗೊತ್ತಾಗಬೇಕು ಎಂದು ಕೇಳುತ್ತೀರೇನೋ? ಅದಕ್ಕೂ ನನ್ನಲ್ಲಿ ಉತ್ತರವಿದೆ.

ನೆಮ್ಮದಿಯ ಬಾಲ್ಯ ಕಳೆದು, ಅಂದುಕೊಂಡದ್ದರಲ್ಲಿ ಅರ್ಧದಷ್ಟಾದರೂ ಸಾಧಿಸಿ, ಬದುಕು ಒಂದು ಒಪ್ಪಕ್ಕೆ ಬಂದು, ಜವಾಬ್ದಾರಿಗಳೆಲ್ಲ ಒಂದು ಹಂತಕ್ಕೆ ಬಂದಾಗ-ಮನಸ್ಸು ಹೆಂಗಸಿನ ಪ್ರೀತಿಗೆ, ಸಹಚರ್ಯಕ್ಕೆ, ಕನಸುಗಳ ಸಾಕಾರಕ್ಕೆ, ಸಂಸಾರಕ್ಕೆ, ಮೈಥುನಕ್ಕೆ ಹಾತೊರೆಯುತ್ತದೆ. ಆಗ ನಿಮ್ಮಲ್ಲೊಬ್ಬ ಗಂಡಸು ಜಾಗೃತನಾಗಿರುತ್ತಾನೆ. ಅವನ ವಯೋಮಾನಕ್ಕೆ, ಆತನಕ ಆದ ಅನುಭವಗಳಿಗೆ ತಕ್ಷಣ ತನಗೆ ಬೇಕಾದ, ತನಗೆ suit ಆಗಬಹುದಾದ, ತನ್ನ ಯೋಗ್ಯತೆಗೆ ತಕ್ಕ ಹುಡುಗಿಯನ್ನು ಕಂಡುಕೊಳ್ಳಲು ಸಾಧ್ಯವಿರುತ್ತದೆ. ಅಂಥ ಗಂಡಸು ಯಾವುದಾದರೂ ಪ್ರಶಾಂತ ಸಂಜೆಯಲ್ಲಿ ಹೊಟೇಲಿನ ಮಂದ ಬೆಳಕಿನ ದೀಪದ ಕೆಳಗೆ ಗೆಳತಿಯೆದುರು, ಎದುರು ಬದುರಾಗಿ ಕುಳಿತು I love you ಎಂದು ಬಾಯಿಬಿಟ್ಟು ಕೂಡ ಹೇಳದೆ ಪ್ರೀತಿಯನ್ನು ವ್ಯಕ್ತಪಡಿಸುವಷ್ಟು ಸಮರ್ಥನಾಗಿರುತ್ತಾನೆ. ಅವನಲ್ಲಿರುವ ಪ್ರೀತಿಯ ಜರೂರತ್ತು-ಅದರ ಹಾದಿ ಕಂಡುಕೊಳ್ಳುತ್ತದೆ.

ಅದರರ್ಥ….? ನಾವು ಓದಿದ್ದೆಲ್ಲ ಮುಗಿಸಿ, ನೌಕರಿ ಹಿಡಿದು, ನಮ್ಮ ಅಕ್ಕ ತಂಗೀರ ಮದುವೆ ಮಾಡಿ, ಅದರ ಸಾಲವೆಲ್ಲ ತೀರಿಸಿ-ಆಮೇಲೆ ಪ್ರೀತಿಸಬೇಕು ಅಂತೀರಾ-ಎಂದು ಕೇಳಬೇಕೆನಿಸುತ್ತಿದೆಯೆ? ನನಗೆ ಅದೂ ಗೊತ್ತು. ಆದ್ದರಿಂದಲೇ ಹೇಳಿದ್ದು, ಪಿಯುಸಿ ಫೇಲಾದಾಗಲೋ, ದಸರೆ ರಜೆಗೆ ಆಂಟಿಯ ಊರಿಗೆ ಹೋದಾಗಲೋ, ಅಪ್ಪನಿಗೆ transfer ಆಗಿ ಕೆಲವು ದಿನ ನೀವೊಬ್ಬರೇ ಉಳಿಯಬೇಕಾಗಿ ಬಂದಾಗಲೋ-ಬೇರೇನೂ ಕೆಲಸವಿಲ್ಲವೆಂಬಂತೆ ಹುಡುಗಿಯನ್ನು ಪ್ರೀತಿಸಲು ಶುರುವಿಟ್ಟು ಫಜೀತಿಗೊಳಗಾಗಬೇಡಿ. ಅದು `ಪ್ರೇಮ’ಕ್ಕೆ ಹೇಳಿ ಮಾಡಿಸಿದ ಸಂದರ್ಭವಲ್ಲ. ಆ ಸಂದರ್ಭಕ್ಕಾಗಿ ನೀವು ಕಾಯಬೇಕು. The time for expression ಎಂಬ ಕಾಲಕ್ಕಾಗಿ ಕಾಯಲೇಬೇಕು.

-ರವಿ ಬೆಳಗೆರೆ

Leave a Reply

Your email address will not be published. Required fields are marked *