ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ? ಒಲಿಸಿಕೊಂಡರೂ…?

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-19

ಒಲಿಸಿಕೊಂಡರೂ…?

“ತಪ್ಪಲ್ವಾ ಸಾರ್? ಅವನು ತನ್ನ ತಪ್ಪು ತಿದ್ದಿಕೊಂಡಾಗ ಆ ಹುಡುಗಿ ಒಪ್ಪಿಕೋಬಹುದಾಗಿತ್ತಲ್ವಾ?” ಅಂತ ನೀವು ಕೇಳಬಹುದು.

ಅದೇ ತಪ್ಪು ಆ ಹುಡುಗಿ ಮಾಡಿದ್ದಿದ್ದರೆ ಈ ಸ್ಫುರದ್ರೂಪಿ ಅದನ್ನು ಒಪ್ಪಿಕೊಳ್ಳುತ್ತಿದ್ದನೆ? ಇಷ್ಟಕ್ಕೂ ಈತ ತಿದ್ದಿಕೊಂಡಿದ್ದಾನೆಂಬುದಕ್ಕೆ ಏನಿದೆ ಗ್ಯಾರಂಟಿ? ಹುಡುಗಿಯರು ಕೇವಲ sorry letter ಕೇಳುವುದಿಲ್ಲ. ಅವರು ವಿಶ್ವಾಸದ, ನಂಬುಗೆಯ promissory note ಕೇಳುತ್ತಾರೆ! ಅವರನ್ನು ವಂಚನೆಯಿಂದ ಒಲಿಸಿಕೊಳ್ಳುವುದು ಸಾಧ್ಯವಿಲ್ಲ. ಹಾಗೊಂದು ವೇಳೆ ಒಲಿಸಿಕೊಂಡರೂ, ಉಳಿಸಿಕೊಳ್ಳುವುದು ಇಂಪಾಸಿಬಲ್! ನಿಮಗೆ ಮನವರಿಕೆಯಾಗಲಿ ಅಂತ ಇನ್ನೊಮ್ಮೆ ಹೇಳುತ್ತೇನೆ;

ಯಾವ ಕಾರಣಕ್ಕೂ flirt ಮಾಡಬೇಡಿ. ಪ್ರೇಮವೆಂಬುದು pass time ಪ್ರಪಂಚದ ವಸ್ತುವಲ್ಲ.

ಇಲ್ಲಿ “ಅರ್ಹತೆಗಳೆಂದರೇನು?” ಎಂಬ ಪ್ರಶ್ನೆ ಮತ್ತೆ ಉದ್ಭವವಾಗುತ್ತದೆ. ನಿಮ್ಮ ಪ್ರಕಾರ ನಿಮಗೊಂದಿಷ್ಟು ಅರ್ಹತೆಗಳಿವೆ. ಆದರೆ ನಿಮಗೆ ಒಲಿಯಬೇಕಾದ ಹುಡುಗಿ ತನಗೆ ಬೇಕಾದ ಯಾವುದೋ ಅರ್ಹತೆಗಳನ್ನು ಹುಡುಕುತ್ತಾಳೆ. ನಂಬಿಕೆ, ವಿಶ್ವಾಸ, ಆರೋಗ್ಯ, ಒಳ್ಳೆಯ ವಾತಾವರಣವಿರುವ ಮನೆ, cultured ಅತ್ತೆ-ಮಾವ, ಸುಖ ದಾಂಪತ್ಯ, ಒಳ್ಳೆಯ ನೌಕರಿ, ಸಾಮಾಜಿಕ ಸ್ಥಾನಮಾನ, ಗಂಡನಾದವನಲ್ಲಿರಬೇಕಾದ ಟೇಸ್ಟು, ಸಮಾನ ಅಭಿಪ್ರಾಯಗಳು ಇತ್ಯಾದಿ ಇತ್ಯಾದಿ! ಶಾಸ್ತ್ರೀಯ ಸಂಗೀತ ಗೊತ್ತಿರುವ ಹುಡುಗಿ ಕಡೇಪಕ್ಷ ಸಿನೆಮಾ ಹಾಡನ್ನಾದರೂ ಇಷ್ಟಪಡುವ ಹುಡುಗನನ್ನು ಹೊಂದಬಯಸುತ್ತಾಳೆ; ಸಂಗೀತ ವಿರೋಧಿ ಔರಂಗಜೇಬನನ್ನಲ್ಲ.

ಮೊದಲು ಆಕೆಯ ನಿರೀಕ್ಷೆಗಳೇನಿವೆಯೋ ತಿಳಿದುಕೊಳ್ಳಿ. ಅದಕ್ಕೆ ನಿಮ್ಮ ವ್ಯಕ್ತಿತ್ವ ಹೊಂದುತ್ತದೆಯೋ ಇಲ್ಲವೋ ಖಚಿತಪಡಿಸಿಕೊಳ್ಳಿ. ಆಕೆಯ ನಿರೀಕ್ಷೆಗಳು ಮತ್ತು ನಿಮ್ಮ ಅಸ್ತಿತ್ವ-ಎರಡೂ ಹತ್ತಿರ ಹತ್ತಿರದಲ್ಲೇ ಇವೆ ಎಂದು ಖಚಿತವಾದರೆ ಮಾತ್ರ ಎಂಟಕ್ಷರದ ಬೀಜಮಂತ್ರವನ್ನು propose ಮಾಡಿ-ಹೊಂದಾಣಿಕೆ ಕಷ್ಟವೆನ್ನಿಸಿದರೆ, ಸೆಳೆತಗಳೇನೇ ಇರಲಿ-ಆಕೆಗೊಂದು ಆಹ್ಲಾದಕರ good bye ಹೇಳಿ ಬೇರೊಂದು ಕಡೆಗೆ ನಡೆಯಿರಿ. (ನೆನಪಿರಲಿ: ಇದನ್ನು ನೀವು ಪ್ರೀತಿ ಮೂಡಿಸುವುದಕ್ಕೆ ಮುಂಚೆಯೇ ನಿರ್ಧರಿಸಬೇಕು. Not after that.)

-ರವಿ ಬೆಳಗೆರೆ

Leave a Reply

Your email address will not be published. Required fields are marked *