ಹಾಯ್ ಬೆಂಗಳೂರ್

ಅಪ್ಪನ ಮಾತು ನೆನಪಿಗೆ ಬಂತು

  • ದಿಲ್ ನೆ ಫಿರ್ ಯಾದ್ ಕಿಯಾ:
  • ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ಅಪ್ಪನ ಮಾತು ನೆನಪಿಗೆ ಬಂತು

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ಬಿ.ಎ ಫ್.ಯಲಿಗಾರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕನಾಗಿದ್ದು, ರಜೆಯ ಕಾರಣ ನಾಲ್ಕಾರು ದಿನ ಕಳೆದರಾಯಿತೆಂದು ನನ್ನ ಸ್ವಂತ ಊರಾದ ಚಿಪ್ಪಲಕಟ್ಟೆಗೆ ಹೊರಟೆ. ೨೦೦೯ರ ವರ್ಷದ ಕೊನೆಯ ತಿಂಗಳು, ಕೊನೆಯ ವಾರದ ಕೊನೆಯ ದಿನ ಜೇಬು ಖಾಲಿಯಾಗಿದ್ದರಿಂದ, ಅವ್ವ ಕೊಟ್ಟ ಐನೂರು ರುಪಾಯಿ ನೋಟು ಜೇಬು ತುಂಬಿಸಿತ್ತು. ಬಸ್ ನಿಲ್ದಾಣಕ್ಕೆ ಬಂದಾಗ ರಾಮದುರ್ಗಕ್ಕೆ ಬಸ್ ತಯಾರಾಗಿ ನಿಂತಿತ್ತು. ಬಸ್ಸಿನಲ್ಲಿ  ಸುಮ್ಮನೆ ಕೂಡೋದು ಬೇಜಾರು ಎಂದುಕೊಂಡು `ಹಾಯ್ ಬೆಂಗಳೂರ್!’ ಪತ್ರಿಕೆಯನ್ನು ಕೊಂಡರಾಯಿತೆಂದು ಹತ್ತಿರದಲ್ಲಿದ್ದ ಪುಸ್ತಕದ ಅಂಗಡಿಗೆ ಹೋದೆ. `ಹಾಯ್ ಬೆಂಗಳೂರ್!’, `ಕನ್ನಡ ಪ್ರಭ’ ಪತ್ರಿಕೆಗಳನ್ನು ಖರೀದಿಸಿ ಐನೂರು ರುಪಾಯಿ ನೋಟನ್ನು ಕೊಟ್ಟೆ. `ಚಿಲ್ಲರೆ ಕೊಡ್ರೀ’ ಎಂದು ಐನೂರು ರುಪಾಯಿಯ ನೋಟನ್ನು ಪುಸ್ತಕದ ಮೇಲಿಟ್ಟ ಅಂಗಡಿಯಾತ. `ಬೇಗ ಬರ್ರೀ’ ಎಂಬ ಕಂಡಕ್ಟರ್‌ನ ಕೂಗಿಗೆ ಅವಸರದಿಂದ ಪಾಕೆಟ್‌ನಲ್ಲಿದ್ದ ಇದ್ದ ಬಿದ್ದ ಚಿಲ್ಲರೆ ಕೂಡಿಸಿ ಹದಿನೆಂಟು ರುಪಾಯಿ ಕೊಟ್ಟು ಓಡಿ ಹೋಗಿ ಬಸ್ ಹತ್ತಿದೆ.

ಏನೋ ವಿಶೇಷದ ಹಿಗ್ಗಿನಲ್ಲಿ ಸೀಟಿನಲ್ಲಿ ಕುಳಿತ ತಕ್ಷಣ ಪಕ್ಕದ ಸೀಟಿನಾತ `ಪೇಪರ್ ಕೊಡಿ ಎಂದ’. ಅವನಿಗೆ `ಹಾಯ್ ಬೆಂಗಳೂರ್!’ ಪತ್ರಿಕೆ ಕೊಟ್ಟು ನಾನು ಕನ್ನಡಪ್ರಭ ದಿನಪತ್ರಿಕೆ ನೋಡುತ್ತಾ ಕುಳಿತೆ. ಕಂಡಕ್ಟರ್ ಬಂದು “ಟಿಕೆಟ್ ತಗೊಳ್ರೀ” ಎಂದ. ಸರ್ ರಾಮದುರ್ಗಕ್ಕೆ ಒಂದು ಟಿಕೆಟ್ ಕೊಡಿ ಎಂದು ಜೇಬಿನಲ್ಲಿದ್ದ ಪಾಕೆಟ್ ತೆಗೆದು ನೋಡ್ತೀನಿ ಚಿಲ್ಲರೆ ಐದಾರು ರುಪಾಯಿಗಳನ್ನು ಬಿಟ್ಟರೆ ಬೇರೆ ದುಡ್ಡೇ ಇಲ್ಲ. ಮೈ ತುಂಬ ಬೆವರು, ಅಳುಕಿನ  ಧ್ವನಿ, ಕೈ ಕಾಲು ನಡುಗುತ್ತಿದ್ದವು. ಕರವಸ್ತ್ರದಿಂದ ಬೆವರನ್ನು ಒರೆಸಿಕೊಳ್ಳುತ್ತಾ ಕೈ ಚೀಲ, ಇನ್ನುಳಿದ ಜೇಬು ಎಲ್ಲಾ ಹುಡುಕಿಯಾಯ್ತು. ಎಲ್ಲಿಯೂ ದುಡ್ಡೇ ಇಲ್ಲ. ನನ್ನ ಗಾಬರಿಯನ್ನು ಗಮನಿಸಿದ ಪಕ್ಕದಲ್ಲಿ ಕುಳಿತಿದ್ದ ಪಿಯುಸಿ ವಿದ್ಯಾರ್ಥಿ ಗಂಗಪ್ಪ ಹೊರಕೇರಿ “ಸರ್ ರೊಕ್ಕಾ ಇಲ್ಲೇನ್ರೀ?” “ಕಳಕೊಂಡ್ರೇನ್ರೀ?” ಎಂದು ಕೇಳಿದಾಗ `ಹೌದಪ್ಪಾ’ ಐನೂರು ರುಪಾಯಿ ನೋಟು ಇತ್ತು ಎಂದೆ. ಸೀಟಿನ ಸುತ್ತ ಹುಡುಕಿ, ಪಕ್ಕದಲ್ಲಿ  ಕುಳಿತವರನ್ನೆಲ್ಲಾ ಕೇಳಿದೆ. ಐನೂರು ರುಪಾಯಿ ನೋಟಿನ ಸುಳಿವೇ ಇಲ್ಲ. ಪಕ್ಕದಲ್ಲಿ ಕುಳಿತಿದ್ದ ಗಂಗಪ್ಪ ಹೊರಕೇರಿ ಸರ್ ಈ ಇಪ್ಪತ್ತು ರುಪಾಯಿ ತಗೊಳ್ರಿ ಎಂದಾಗ ಅಳುಕಿನಿಂದಲೇ ಇಸಿದುಕೊಂಡೆ. ಒಟ್ಟು ಇಪ್ಪತ್ತೈದು ರುಪಾಯಿ ಮಾಡಿ ಕಂಡಕ್ಟರ್‌ಗೆ ಕೊಟ್ಟು ರಾಮದುರ್ಗಕ್ಕೆ ಟಿಕೆಟ್ ಇಸಿದುಕೊಂಡೆ. ಇದೆಲ್ಲಾ ಆಗುವುದರೊಳಗೆ ಬಸ್ ಸವದತ್ತಿಯಿಂದ ಐದು ಕಿ.ಮೀ. ದಾಟಿತ್ತು.

ಮುಂದೆ ರಾಮದುರ್ಗದಿಂದ ಚಿಪ್ಪಲಕಟ್ಟೆಗೆ ಹೋಗಲು ಹದಿನಾರು ರುಪಾಯಿ ಬೇಕು. ರಾಮದುರ್ಗಕ್ಕೆ ಹೋಗಿ ಗೆಳೆಯರಿಗೆ ಫೋನ್ ಮಾಡಿದ್ರೆ ಬರ್‍ತಾರೆ ಅಂದ್ಕೊಂಡು ಕರೆ ಮಾಡಿದರೆ ಎಲ್ಲರ ಮೊಬೈಲ್‌ನಿಂದ ಒಂದೇ ಮಾತು “switch off”. ಹೆಚ್ಚಿದ ಆತಂಕದಿಂದ ಇಪ್ಪತ್ತೈದು ರುಪಾಯಿ ಟಿಕೆಟ್ ಬೇರೆಯವರಿಗೆ ಕೊಟ್ಟು, ಅವರ ಹತ್ತಿರ ಇಪ್ಪತ್ತೈದು ರುಪಾಯಿ ಇಸಿದುಕೊಂಡು ಹೂಲಿ ಗ್ರಾಮದಲ್ಲಿ ಇಳಿದು, ಆರು ರುಪಾಯಿ ಕೊಟ್ಟು ಮರಳಿ ಸವದತ್ತಿಗೆ ಬಂದೆ. ಪುಸ್ತಕದ ಅಂಗಡಿಯವನಿಗೆ “ಸರ್, ನಾನು ಒಂದು ತಾಸಿನ ಹಿಂದೆ ನಿಮ್ಮಲ್ಲಿ ದುಡ್ಡು ಬಿಟ್ಟಿದ್ದೆ ನೋಡಿದ್ರಾ?” ಎಂದೆ. ಆತ ನೀವು ಕೊಟ್ಟ ಐನೂರು ರುಪಾಯಿಯನ್ನು ಆಗಲೇ ಮರಳಿ ಕೊಟ್ಟಿದ್ದೆ ಎಂದು ಸಿದ್ಧ ಉತ್ತರ ನೀಡಿದ. ಆಗ ನನಗೆ confirm ಆಯಿತು. ನಾನು ಐನೂರು ರುಪಾಯಿ ನೋಟು ಮರೆತಿದ್ದು ಇಲ್ಲಿಯೇ ಅಂತ. ಎಷ್ಟೊಂದು ಸೌಮ್ಯವಾಗಿ ವಿಚಾರಿಸಿದರೂ ಆತ ದುಡ್ಡು ಕೊಡಲೇ ಇಲ್ಲ. ಮನೆಗೆ ಬಂದು ಅವ್ವನ ಹತ್ತಿರ ನಡೆದ ಘಟನೆಯನ್ನು ವಿವರಿಸಿದೆ. ಆಕೆಯೂ ಮರುಗಿದಳು. ದುಡ್ಡು ಕಳೆದಿದ್ದಕ್ಕೆ ಸ್ವಲ್ಪ ಚಿಂತಿಸಿದರೆ, ಮಗನನ್ನು ಕಂಡಕ್ಟರ್ ಬಾಯಿಗೆ ಬಂದಂತೆ ಬೈದು ಬಸ್ಸಿನಿಂದ ಕೆಳಗೆ ಇಳಿಸಿದ್ದರೆ ಎಂಥ ಅವಮಾನ ಎಂದು ಚಿಂತಿಸಿದಳು. ಅವಸರ ಮಾಡಬಾರದಿತ್ತು, “ಜವಾಬ್ದಾರಿನೇ ಇಲ್ಲ. ಹುಷಾರಾಗಿರಬೇಕು” ಎಂಬ ಅಪ್ಪನ ಎರಡು ಮಾತುಗಳು ನನ್ನನ್ನು ಎಚ್ಚರಗೊಳಿಸಿದವು.

“ಆಪತ್ತಿಗಾದವನೇ ದೇವರು” ಎನ್ನುವಂತೆ ಸವದತ್ತಿಯ ಎಸ್.ಕೆ. ಪಿಯು ಕಾಲೇಜು ವಿದ್ಯಾರ್ಥಿ ಗಂಗಪ್ಪ ಹೊರಕೇರಿ ಮಾನವೀಯತೆಯಿಂದ ಇಪ್ಪತ್ತು ರುಪಾಯಿಗಳನ್ನು ಕೊಟ್ಟಿದ್ದರಿಂದಲೇ ನಾನು ಸವದತ್ತಿಗೆ ಮರಳಿದೆ. ಚಿಕ್ಕವಯಸ್ಸಿನಲ್ಲಿ ಮಾನವೀಯ ಮತ್ತು ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡಿರುವ ಆತ ಇತರೆ ವಿದ್ಯಾರ್ಥಿಗಳಿಗೆ ಮಾದರಿ! ಆತನಿಗೆ ನನ್ನ ಕೃತಜ್ಞತೆಗಳು.

ನೀಲಪ್ಪ ಎಲ್ ಕಳ್ಳಿ., ಸವದತ್ತಿ

Leave a Reply

Your email address will not be published. Required fields are marked *