ಆಂದೋಲನದಿಂದ ನೇರವಾಗಿ ಅಧಿಕಾರದ ಗದ್ದುಗೆಯ ಮೇಲೆ ಧುಮುಕಿದ ಕೇಜ್ರೀವಾಲ್ ದಾರಿ ಕಲ್ಲು ಮುಳ್ಳಿನದಾಗಿತ್ತು. ದಿಲ್ಲಿ ಜನರ ಮುಂದೆ ಅಪಾರ ನಿರೀಕ್ಷೆಗಳ ಬೆಟ್ಟವನ್ನೇ ಎಬ್ಬಿಸಿ ನಿಲ್ಲಿಸಿದ್ದರು. ಭರವಸೆಗಳನ್ನು ಈಡೇರಿಸದೆ ಅವರು ರಾಜಕೀಯ ಪ್ರಪಾತಕ್ಕೆ ಬೀಳುವುದನ್ನೇ ಕಾಯುತ್ತಿದ್ದ ಸಾಂಪ್ರದಾಯಿಕ ರಾಜಕಾರಣಕ್ಕೆ ನಿರಾಸೆಯಾದದ್ದು ನಿಜ.
ದಿಲ್ಲಿ ಅಬ್ ದೂರ್ ನಹಿ :
2013ರ ಡಿಸೆಂಬರ್ ಕಡೆಯ ದಿನಗಳು. ನಡುಗಿಸುವ ಕಡು ಚಳಿಗಾಲ ಕವಿದಿದ್ದ ಹೊತ್ತು.
ಸಂದೇಹ, ಸಂಭ್ರಮ, ಸಿನಿಕತನ ಮತ್ತು ಅಪಾರ ನಿರೀಕ್ಷೆಗಳ ನಡುವೆ ದೇಶದ ರಾಜಕಾರಣದಲ್ಲಿ ಹೊಸ ಪ್ರಯೋಗವೊಂದು ದೆಹಲಿಯಲ್ಲಿ ಸುರುಳಿ ಬಿಚ್ಚಿತು. ಹುಟ್ಟಿದ ಹದಿಮೂರೇ ತಿಂಗಳಲ್ಲಿ ಶೇ.29 ಮತ ಗಳಿಸಿ 28 ಸೀಟುಗಳನ್ನು ಗೆದ್ದ ಆಮ್ ಆದ್ಮೀ ಪಾರ್ಟಿ ಸರ್ಕಾರ ರಚಿಸಿತ್ತು. ಸಾಂಪ್ರದಾಯಿಕ ರಾಜಕಾರಣದಲ್ಲಿ ಸುಲಭಕ್ಕೆ ಕಾಣಸಿಗುವ ವಿದ್ಯಮಾನ ಅಲ್ಲ. ಜನಸಾಮಾನ್ಯರ ಪಕ್ಷ ಎಂಬ ಅರ್ಥದ ಆಮ್ ಆದ್ಮೀ ಪಾರ್ಟಿಗೆ ದಿಲ್ಲಿಯ ಮತದಾರರು ಬಹುಮತ ನೀಡಿರಲಿಲ್ಲ ನಿಜ. ಆದರೆ ಮೂವತ್ತೆರಡು ಸೀಟು ಗೆದ್ದ ಬಿಜೆಪಿಗೂ ಬಹುಮತ ದಕ್ಕಿರಲಿಲ್ಲ. ಸರ್ಕಾರ ರಚನೆಗೆ ಬೇಕಿದ್ದ ಸರಳ ಬಹುಮತದ ಸಂಖ್ಯೆ ಮೂವತ್ತಾರು.
ಬೇಷರತ್ತು ಬೆಂಬಲ ಸಾರಿತ್ತು ಕಾಂಗ್ರೆಸ್ ಪಕ್ಷ. ಅವಾಸ್ತವಿಕ ಭರವಸೆಗಳ ಈಡೇರಿಕೆ ಅಸಾಧ್ಯ ಎಂದು ಕೇಜ್ರೀವಾಲರ ಪಕ್ಷವನ್ನು ಪೇಚಿಗೆ ಸಿಕ್ಕಿಸುವುದು ಕಾಂಗ್ರೆಸ್ಸಿನ ಅಸಲು ಹುನ್ನಾರ ಆಗಿತ್ತು. ತನ್ನ ಬೆಂಬಲವನ್ನು ತಿರಸ್ಕರಿಸಿದರೆ ಸರ್ಕಾರ ರಚನೆಯಂತಹ ಜವಾಬ್ದಾರಿಗೆ ಬೆನ್ನು ತೋರಿಸಿದ ಪಲಾಯನವಾದಿಗಳು ಎಂದು ಪೊರಕೆ ಪಕ್ಷವನ್ನು ಬಿಂಬಿಸುವ ಹಂಚಿಕೆ ಇತ್ತು.
ರಾಜಕೀಯ ವೀಕ್ಷಕರ ಲೆಕ್ಕಾಚಾರಗಳನ್ನು ಪುನಃ ತಲೆಕೆಳಗು ಮಾಡಿದ ಕೇಜ್ರೀವಾಲ್ ಸರ್ಕಾರ ರಚನೆಯ ಸವಾಲನ್ನು ಅಂಗೀಕರಿಸಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ನಿರಾಸೆಯನ್ನೂ ಹೊಟ್ಟೆಯುರಿಯನ್ನೂ ಹುಟ್ಟಿ ಹಾಕಿತ್ತು.
ಆಂದೋಲನದಿಂದ ನೇರವಾಗಿ ಅಧಿಕಾರದ ಗದ್ದುಗೆಯ ಮೇಲೆ ಧುಮುಕಿದ ಕೇಜ್ರೀವಾಲ್ ದಾರಿ ಕಲ್ಲು ಮುಳ್ಳಿನದಾಗಿತ್ತು. ದಿಲ್ಲಿ ಜನರ ಮುಂದೆ ಅಪಾರ ನಿರೀಕ್ಷೆಗಳ ಬೆಟ್ಟವನ್ನೇ ಎಬ್ಬಿಸಿ ನಿಲ್ಲಿಸಿದ್ದರು. ಭರವಸೆಗಳನ್ನು ಈಡೇರಿಸದೆ ಅವರು ರಾಜಕೀಯ ಪ್ರಪಾತಕ್ಕೆ ಬೀಳುವುದನ್ನೇ ಕಾಯುತ್ತಿದ್ದ ಸಾಂಪ್ರದಾಯಿಕ ರಾಜಕಾರಣಕ್ಕೆ ನಿರಾಸೆಯಾದದ್ದು ನಿಜ.
ಮುರಿದು ಕಟ್ಟುವ ಹೊಸ ಪರಿಭಾಷೆಯ, ಚೇತೋಹಾರಿ ಪ್ರತಿಮೆಗಳ ಸಂಪ್ರದಾಯವಿರೋಧೀ ರಾಜಕಾರಣವನ್ನು ಕೇಜ್ರೀವಾಲ್ ಸಂಗಾತಿಗಳು ಮುಂದೆ ಮಾಡಿದ್ದರು. ಆದರೆ ಕುತ್ತಿಗೆ ಕತ್ತರಿಸುವ ಪೈಪೋಟಿಯ ರಾಜಕಾರಣವೆಂದರೆ ಸರಳ ಶೈಲಿಗಳ ಸಂಕೇತ, ಪ್ರತಿಮೆ, ರೂಪಕಗಳಲ್ಲಿ ನಿಂತು ಬಿಡುವಂತಹುದಲ್ಲ. ಅದರಾಚೆಗೆ ಆಡಳಿತ ವೈಖರಿಯೇ ಅಗ್ನಿಪರೀಕ್ಷೆಯ ಅಸಲು ವಿಷಯ. ಐದು ವರ್ಷಗಳ ಆಡಳಿತದಲ್ಲಿ ದೆಹಲಿಯ ಸರ್ಕಾರಿ ಶಾಲೆಗಳನ್ನು ಆಮೂಲಾಗ್ರ ಬದಲಾಯಿಸಿ ಪುಟ್ಟದೊಂದು ಕ್ರಾಂತಿಯನ್ನೇ ಸಾಧಿಸಿತು ಕೇಜ್ರೀವಾಲ್ ಸರ್ಕಾರ. ಹಳ್ಳ ಹಿಡಿದಿದ್ದ ನೀರು ಮತ್ತು ವಿದ್ಯುಚ್ಛಕ್ತಿ ಪೂರೈಕೆಯನ್ನು ಹಳಿಯ ಮೇಲೆ ಇರಿಸಿತು. ಒಂದು ಮಿತಿಯವರೆಗೆ ನೀರು ಬೆಳಕನ್ನು ಉಚಿತವಾಗಿ ನೀಡಿತು. ಮೊಹಲ್ಲಾ ಕ್ಲಿನಿಕ್ಗಳು ಸದ್ದಿಲ್ಲದ ಕ್ರಾಂತಿ ಮಾಡಿದವು. ಹೆಣ್ಣು ಮಕ್ಕಳಿಗೆ ನಗರ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿತು. ನಾನಾ ಬಗೆಯ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸಿತು. ವೃದ್ಧರಿಗೆ ಸರ್ಕಾರಿ ಖರ್ಚಿನಲ್ಲಿ ತೀರ್ಥಯಾತ್ರೆ ಮಾಡಿಸಿತು. ಮೊನ್ನೆ ನಡೆದ ಚುನಾವಣೆಯ ಪರೀಕ್ಷೆಯಲ್ಲಿ ಇಡಿ ದೇಶದ ಕಣ್ಣು ಕೋರೈಸುವಂತೆ ಪುನಃ ತೇರ್ಗಡೆಯಾಯಿತು. ಎಪ್ಪತ್ತರಲ್ಲಿ 62 ಸೀಟು ಗೆದ್ದಿತು.
ಹಿಂದು ಮುಸ್ಲಿಂ ಕೋಮು ಧೃವೀಕರಣದ ದ್ವೇಷಭರಿತ ಉಗ್ರ ರಾಷ್ಟ್ರವಾದವನ್ನು ಹೆಡೆಮುರಿ ಕಟ್ಟಿ ಕೆಡವಿದ ಕೀರ್ತಿ ಕೇಜ್ರೀವಾಲ್ ಅವರದು. ತಮ್ಮ ಸರ್ಕಾರದ ಜನಕಲ್ಯಾಣ ಕೆಲಸ ಕಾರ್ಯಗಳ ಸುತ್ತ ಚುನಾವಣಾ ಪ್ರಚಾರವನ್ನು ಕಟ್ಟಿದ್ದ ಕೇಜ್ರೀವಾಲ್ ಅವರನ್ನು ಉಗ್ರ ರಾಷ್ಟ್ರವಾದದ ಪ್ರಚಾರದ ಕಿಚ್ಚಿಗೆ ಎಳೆಯಲು ಮೋಶಾ ಜೋಡಿ ಆಕಾಶ ಭೂಮಿ ಒಂದು ಮಾಡಿತು. ಈ ಖೆಡ್ಡಾಕ್ಕೆ ಬೀಳಲು ಒಲ್ಲದ ಕೇಜ್ರೀವಾಲ್ ತಮ್ಮ ಅಭಿವೃದ್ಧಿ ಕಥನದ ಮೇಲೆ ನೆಟ್ಟ ನೋಟವನ್ನು ಅರೆಗಳಿಗೆಯೂ ಕದಲಿಸಲಿಲ್ಲ.
ಕೇಜ್ರೀವಾಲ್ ಪಕ್ಷದ ಈ ಘನ ಗೆಲುವನ್ನು ಅವರ ಸೈದ್ಧಾಂತಿಕ ಸೋಲು ಎನ್ನುವವರಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಮೆದು ಹಿಂದುತ್ವ ಅನುಸರಿಸಿದರು ಎಂಬ ಆರೋಪ ಅವರ ಮೇಲಿದೆ. ಕನಾಟ್ ಪ್ಲೇಸ್ನ ಮೂಲೆಯಲ್ಲಿರುವ ರಾಮಬಂಟ ಹನುಮಂತನ ಗುಡಿಗೆ ಮತ್ತೆ ಮತ್ತೆ ಎಡತಾಕಿದ್ದು, ಟೀವಿ ಸ್ಟುಡಿಯೋಗಳಲ್ಲಿ ಕುಳಿತು ಹನುಮಾನ್ ಚಾಲೀಸಾ ಪಠಿಸಿದ್ದು, ಸಿಎಎ-ಎನ್.ಆರ್.ಸಿ.- ಎನ್.ಪಿ.ಆರ್. ವಿರುದ್ಧ ದನಿ ಏರಿಸದೆ ಹೋದದ್ದು, ಶಾಹೀನ್ ಬಾಗ್ಗೆ ಭೇಟಿ ನೀಡದೆ ಉಳಿದದ್ದು, ಅದರ ಪ್ರಸ್ತಾಪವನ್ನೂ ಮಾಡದೆ ಇದ್ದದ್ದು, ಸಾರ್ವಜನಿಕ ಸಭೆಯಲ್ಲಿ ಗದೆಯೊಂದನ್ನು ಹೆಗಲಿಗೇರಿಸಿದ್ದು. ಹೀಗೆ ಮೆದು ಹಿಂದುತ್ವದ ಉದ್ದುದ್ದ ಪಟ್ಟಿಯನ್ನು ಅವರ ವಿರುದ್ಧ ಮುಂದೆ ಮಾಡಲಾಗಿದೆ. ಬಿಜೆಪಿ ಪ್ರತಿಪಾದಿಸಿದ ಬಹುಸಂಖ್ಯಾತವಾದವನ್ನು ಕೇಜ್ರೀವಾಲ್ ಪರೋಕ್ಷವಾಗಿಯಾದರೂ ಎತ್ತಿ ಹಿಡಿಯಲೇಬೇಕಾಯಿತು. ಆ ಮಟ್ಟಿಗೆ ಇದು ಬಿಜೆಪಿಯ ವಿಜಯ. ಎಲ್ಲ ಪಕ್ಷಗಳೂ ಹೀಗೆ ಬಹುಸಂಖ್ಯಾತವಾದದತ್ತ ವಾಲಿ ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡುವ ಬಿಜೆಪಿ ಕಾರ್ಯಸೂಚಿಯನ್ನು ಕೊನೆ ಸಾಗಿಸಿ ಗಳಿಸುವ ಗೆಲುವಿಗೆ ಅರ್ಥವೇ ಇರದು ಎಂಬ ವಾದವಿದೆ. ಇತ್ತೀಚಿನ ದೆಹಲಿ ಕೋಮುಗಲಭೆಗಳು ಈಶಾನ್ಯ ದೆಹಲಿಯ ಜನರ ಅದರಲ್ಲೂ ಹೆಚ್ಚಾಗಿ ಅಲ್ಪಸಂಖ್ಯಾತರ ಬದುಕುಗಳನ್ನು ಭಸ್ಮ ಮಾಡಿದ ಹೊತ್ತಿನಲ್ಲಿ ನಿಷ್ಕ್ರಿಯರಾಗಿದ್ದರೆಂಬ ಕಟು ಟೀಕೆಯನ್ನು ಕೇಜ್ರೀವಾಲ್ ಎದುರಿಸಿದ್ದಾರೆ. ಉದಾರವಾದಿಗಳು ಕೇಜ್ರೀವಾಲ್ ನಡೆ ಕೇಸರಿ ಬಣ್ಣ ಬಳಿದುಕೊಳ್ಳತೊಡಗಿದೆ ಎಂದು ಅಸಮಾಧಾನ ಪ್ರಕಟಿಸಿದ್ದಾರೆ.
ರಾಜಕಾರಣದಲ್ಲಿ ಸೆಕ್ಯೂಲರಿಸಂನ್ನು ಕೇಜ್ರೀವಾಲ್ ಮರು ವ್ಯಾಖ್ಯಾನಿಸಿದ್ದಾರೆ. ರಾಜಕೀಯ ಹಿಂದೂವನ್ನು, ಸಾಂಸ್ಕೃತಿಕ ಹಿಂದೂ ಸೋಲಿಸಿದ್ದಾನೆ. ರಾಷ್ಟ್ರವಾದ ಎಂಬುದು ಉತ್ತಮ ಶಾಲೆಗಳು, ಉತ್ತಮ ಶಿಕ್ಷಣ, ಬರಿಕೈಗಳಿಗೆ ಉದ್ಯೋಗ ನೀಡಿಕೆ, ಉತ್ಕಷ್ಟ ಸಂಸ್ಥೆಗಳ ಕಟ್ಟುವಿಕೆ, ಉತ್ತಮ ಮಾನವ ಸಂಪನ್ಮೂಲದ ನಿರ್ಮಾಣ ಎಂದು ಬಿಜೆಪಿಯ ಉಗ್ರ ರಾಷ್ಟ್ರವಾದಕ್ಕೆ ತಿರುಗೇಟು ನೀಡಿದ್ದಾರೆ. ಮೋಶಾ ಭಕ್ತರು ಮುಸಲ್ಮಾನರಿಗೆ ಸಹಾನುಭೂತಿ ತೋರುವ ನಾಯಕನ ಮೇಲೆ ದಾಳಿ ನಡೆಸುವುದು ಸಲೀಸು, ಆದರೆ ಹನುಮ ಭಕ್ತನ ವಿರುದ್ಧ ಅವರು ನಿರಾಯುಧರು ಅಸಹಾಯಕರು ಎಂದು ಕೇಜ್ರೀವಾಲ್ ‘ತಂತ್ರ’ವನ್ನು ಎತ್ತಿ ಹಿಡಿದಿರುವುದುಂಟು.
ಸಾಧ್ಯತೆ ಮತ್ತು ಸಂಭವಗಳ ಕಲೆ ಎಂದು ಕರೆಯಲಾಗುವ ರಾಜಕಾರಣದಲ್ಲಿ ಏಳು ದಿನ ಕೂಡ ಬಹುದೀರ್ಘ ಎನ್ನುವುದುಂಟು. ಇನ್ನು ವರ್ಷಗಳ ಕತೆಯೇನೆಂದು ಹೇಳೋಣ? ಆಮ್ ಆದ್ಮಿ ಪಾರ್ಟಿಯ ತಲೆಯಾಳು ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಸಕ್ರಿಯ ರಾಜಕಾರಣಕ್ಕೆ ಧುಮುಕಿ ಏಳು ವರ್ಷಗಳೇ ಉರುಳಿವೆ.
ಭಾರತೀಯ ತೆರಿಗೆ ಸೇವೆಯ (ಐ.ಆರ್.ಎಸ್.) ಹುದ್ದೆಯನ್ನು ಬಿಟ್ಟುಕೊಟ್ಟು ಸಾಮಾಜಿಕ ಆಂದೋಲನಕ್ಕೆ ಇಳಿದು ಅಲ್ಲಿಂದ ಬಲು ಸಲೀಸಾಗಿ ರಾಜಕಾರಣಕ್ಕೆ ತೇಲಿದ ವ್ಯಕ್ತಿ ಈತ. ಪುನಃ ನಡೆದ ಚುನಾವಣೆಗಳಲ್ಲಿ ದೆಹಲಿಯ ಜನ ಎಪ್ಪತ್ತು ಸೀಟುಗಳ ಪೈಕಿ 67ರ ಐತಿಹಾಸಿಕ ಗೆಲುವನ್ನು ಅವರ ಉಡಿಗಿಟ್ಟರು. ಮೋದಿ-ಶಾ ಜೋಡಿ ಪ್ರಯೋಗಿಸಿದ್ದ ಬ್ರಹ್ಮಾಸ್ತ್ರವನ್ನು ಮುರಿದು ಎಸೆದಿತ್ತು ಆಮ್ ಗುಬ್ಬಚ್ಚಿ. ಹೊಸ ನುಡಿಗಟ್ಟಿನ ರಾಜಕಾರಣದ ರೋಮಾಂಚನ ಹುಟ್ಟಿಸಿತ್ತು.
2014ರಲ್ಲಿ ಮೊದಲ ಸಲ ಮುಖ್ಯಮಂತ್ರಿಯಾಗಿ ಕೇಂದ್ರದಿಂದ ನ್ಯಾಯ ಬೇಡಿ ಸಂಸತ್ ಸನಿಹ ಧರಣಿ ಕುಳಿತು ವಿಚ್ಛಿದ್ರಕಾರಿ ಮುಖ್ಯಮಂತ್ರಿ ಎಂಬ ಟೀಕೆಗೆ ಗುರಿಯಾದರು. 49 ದಿನಗಳ್ಲೇ ರಾಜೀನಾಮೆ ನೀಡಿದ್ದರು.
ನರೇಂದ್ರ ಮೋದಿಯವರ ವಿರುದ್ಧ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಅಷ್ಟರಲ್ಲಾಗಲೇ ಮೋದಿ- ಶಾ ಅವರನ್ನು ತೊಣಚೆಯಂತೆ ಕಾಡಿ ಈ ಜೋಡಿಯ ಆಕ್ರೋಶಕ್ಕೆ ಗುರಿಯಾಗಿದ್ದರು. ತಮ್ಮ ಸರ್ಕಾರಕ್ಕೆ ಬಗೆ ಬಗೆಯ ಕಿರುಕುಳಗಳನ್ನು ನೀಡಿದ ಮೋದಿಯವರನ್ನು ಮತ್ತು ಅವರ ನಡೆ ನುಡಿಗಳನ್ನು ಕಟು ಮಾತುಗಳಲ್ಲಿ ಟೀಕಿಸಿದರು. ಗಲಿವರನ ಮುಂದೆ ಲಿಲಿಪುಟನಂತೆ ಪುಟಿ ಪುಟಿದು ಕೆರಳಿ ಕಾದಾಡಿದರು. ದೆಹಲಿ ಅರೆ ರಾಜ್ಯ. ಇಲ್ಲಿನ ಪೊಲೀಸ್ ವ್ಯವಸ್ಥೆ ಮತ್ತು ಜಮೀನು ಹಾಗೂ ಐ.ಎ.ಎಸ್. ಅಧಿಕಾರಿಗಳ ನಿಯುಕ್ತಿ- ವರ್ಗಾವಣೆ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟದ್ದು. ಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಕದನಕ್ಕೆ ನಿಂತರು.
ಈ ನಡುವೆ ಅವರೊಳಗೆ ಅಡಗಿ ಕುಳಿತಿರುವ ಸರ್ವಾಧಿಕಾರಿಯೊಬ್ಬ ತಲೆಯೆತ್ತಿ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್ ಮುಂತಾದ ಸಂಗಾತಿಗಳನ್ನು ಪಕ್ಷದಿಂದ ಹೊರಗೆ ಹಾಕಿದ್ದ. ವರುಷಗಳು ಉರುಳಿದಂತೆ ಆ ಸರ್ವಾಧಿಕಾರಿ ಸೌಮ್ಯರೂಪ ತಳೆದಿರಬಹುದು. ಆದರೆ ಅವನು ಈಗಲೂ ಅಲ್ಲಿ ಕಾಯಂ ಎಂಬುದು ಕಹಿ ಸತ್ಯ.
ಈ ಏಳು ವರ್ಷಗಳಲ್ಲಿ ಅವರು ಸಾಗಿ ಬಂದಿರುವ ದಾರಿ ಕ್ರಮಿಸಿರುವ ದೂರ ಪಡೆದಿರುವ ಅನುಭವ ಸಾಧಾರಣದ್ದಲ್ಲ. ಅವರ ವ್ಯಕ್ತಿತ್ವ ಕೂಡ ರೂಪಾಂತರಗಳ ಕಂಡಿದೆ. ನಾಸ್ತಿಕತೆ ತೊರೆದು ಆಸ್ತಿಕತೆ ಅಪ್ಪಿಕೊಂಡಿದ್ದಾರೆ. ಅವರಲ್ಲಿದ್ದ ಆಂದೋಲನಕಾರಿಯ ಹಸಿ ಹಸಿ ಗೆರಿಲ್ಲಾ ಕದನ ತಂತ್ರ, ಮುಖ ಗಂಟಿಕ್ಕಿಕೊಂಡ ವಿಚ್ಛಿದ್ರಕಾರಿ ಜಗಳಗಂಟ ಕಾಣೆಯಾಗಿದ್ದಾನೆ. ಮೋಶಾ ವಿರುದ್ಧದ ಮೊನಚು ಮಾತುಗಳು ಮಾಯವಾಗಿವೆ. ಮೋದಿ ವಿರುದ್ಧ ಫೆಡರಲ್ ಫ್ರಂಟ್ ಕಟ್ಟುವ ಇರಾದೆ ಕೈಬಿಟ್ಟಂತೆ ಕಾಣತೊಡಗಿದೆ. ಮೊನ್ನೆ ಪ್ರಮಾಣವಚನಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದ ಮಮತಾ ದೀದಿಯನ್ನು ಕೇಜ್ರೀವಾಲ್ ಕರೆಯಲೇ ಇಲ್ಲ.
ಬಿಜೆಪಿಯ ಮತದಾರರು ಕೇಜ್ರೀವಾಲ್ ಅವರನ್ನು ವಿಧಾನಸಭಾ ಚುನಾವಣೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿರುವುದು ಹೌದು. ಇಲ್ಲವಾದರೆ ಕೇಜ್ರೀವಾಲ್ ಅವರ ಚುನಾವಣಾ ಗೆಲುವುಗಳು ಐತಿಹಾಸಿಕ ಎನಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಈ ಸತ್ಯವನ್ನು ಕೇಜ್ರೀವಾಲ್ ಕೂಡ ಬಲ್ಲರು. ‘ದೆಹಲಿಯಲ್ಲಿ ಆಪ್ ಮತ್ತು ಕೇಂದ್ರದಲ್ಲಿ ಬಾಪ್’ ಎಂಬ ಪ್ರಚಾರಕ್ಕೆ ಕೇಜ್ರೀವಾಲ್ ಪಕ್ಷ ಈ ಹಿಂದೆಯೂ ಒಳಗೊಳಗೇ ಗಾಳಿ ಹೊಡೆದದ್ದು ಸುಳ್ಳಲ್ಲ. ದೆಹಲಿಯ ಗೆಲುವಿನ ಹಿನ್ನೆಲೆಯಲ್ಲಿ ದೆಹಲಿಯಾಚೆಗೆ ಕೈ ಕಾಲು ಚಾಚುವ ಹೆಬ್ಬಯಕೆಯನ್ನು ಪೊರಕೆ ಪಕ್ಷ ಅಡಗಿಸಿಟ್ಟಿಲ್ಲ. ಸದ್ಯದ ಬಹುಸಂಖ್ಯಾತವಾದಿ ಮತ್ತು ಕೋಮು ಧೃವೀಕರಣದ ರಾಜಕಾರಣದಲ್ಲಿ ಬಿಜೆಪಿ ಬೆಂಬಲಿಗರನ್ನೂ ಜೊತೆಗಿಟ್ಟುಕೊಳ್ಳುವುದೇ ವಿವೇಕ ಎಂದು ಅವರು ಭಾವಿಸಿದಂತಿದೆ.
ಪೊರಕೆ ಪಕ್ಷ ತುಳಿದಿರುವ ಈ ಹೊಸ ಹಾದಿ ಮುಂಬರುವ ವರ್ಷಗಳಲ್ಲಿ ಯಾವ ರಂಗು ರೂಪು ಪಡೆಯಲಿದೆ ಎಂದು ಕಾದು ನೋಡಬೇಕಿದೆ.
ಡಿ.ಉಮಾಪತಿ