ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ ನಾಗರಕಟ್ಟೆ: ಭಾಗ-೨

in ನೂರು ಮುಖ ಸಾವಿರ ದನಿ
  • ನೂರು ಮುಖ ಸಾವಿರ ದನಿ:

ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ ನಾಗರಕಟ್ಟೆ: ಭಾಗ-೨

ಕಾದಂಬರಿ ಆಧಾರಿತ ಚಿತ್ರಗಳಾದ `ಬಯಲು ದಾರಿ’, ` ಮುದುಡಿದ ತಾವರೆ ಅರಳಿತು’, `ಚಂದನದ ಗೊಂಬೆ’, `ಬೆಂಕಿಯ ಬಲೆ’ ಮುಂತಾದ ಚಿತ್ರಗಳಲ್ಲಿ ಅವರದು ಸಂವೇದನಾಶೀಲ ಮನೋಜ್ಞ ಅಭಿನಯ. `ನಾರದ ವಿಜಯ’ದಲ್ಲಿ ಅವರದು ಹಾಸ್ಯಮಯ ಲವಲವಿಕೆಯ ಪಾತ್ರ.

ಅನಂತನಾಗ್ ಅವರ ಕುಟುಂಬ ದಕ್ಷಿಣ ಕನ್ನಡ-ಉತ್ತರ ಕನ್ನಡ ಹಾಗೂ ಮುಂಬಯಿಗಳ ನಡುವೆ ಅಲ್ಲೊಂದಷ್ಟು ಅವಧಿ, ಇಲ್ಲೊಂದಷ್ಟು ಅವಧಿ ಎಂಬಂತೆ ಹೋಗುತ್ತಾ ಬರುತ್ತಲೇ ಇದ್ದಿತು. ಅನಂತ್ ತಾಯಿಯ ಗರ್ಭದಲ್ಲಿದ್ದಾಗ ಹೀಗೊಮ್ಮೆ ಅವರ  ಕುಟುಂಬ ಮುಂಬಯಿಗೆ ಹೋಗಿ ಕೆಲ ಕಾಲ ಇದ್ದ ಅವಧಿಯಲ್ಲೇ ಅನಂತ್ ಮುಂಬಯಿಯಲ್ಲಿ ಹುಟ್ಟಲು ಕಾರಣವಾಯಿತು. ಈ ಮುಂಬಯಿ-ಕರ್ನಾಟಕಗಳ ನಡುವಿನ ಕಣ್ಣಾಮುಚ್ಚಾಲೆಯ ವಸತಿಯ ಅವಧಿಯಲ್ಲೇ ಈ ಕುಟುಂಬ ಉಡುಪಿಯಲ್ಲಿದ್ದಾಗ ಶಂಕರ್‌ನಾಗ್ ಹುಟ್ಟಿದ್ದು. ದಿನಾಂಕ:೯-೧೧-೧೯೫೪ರಲ್ಲಿ ಹುಟ್ಟಿದ ಶಂಕರ್‌ನಾಗ್ ಅನಂತ್‌ನಾಗ್‌ಗಿಂತ ಆರು ವರ್ಷ ಚಿಕ್ಕವ. ಆದರೆ ಗ್ರಹಿಕೆ, ಕಲಿಕೆ, ಸಾಧನೆಗಳಲ್ಲಿ ಆತನದು ಮಿಂಚಿನ ಓಟ.

ಮುಂಬಯಿಯಲ್ಲಿ ಅನಂತ್‌ಗೆ ರಂಗಭೂಮಿಯಲ್ಲಿ ಅವಕಾಶಗಳು ದೊರೆಯಲಾರಂಭಿಸಿದಾಗ ಶಂಕರ ಸಹ ಆತನ ಜೊತೆಗೆ ರಂಗ ತಾಲೀಮಿಗೆ ಪ್ರತಿನಿತ್ಯ ಹೋಗುತ್ತಿದ್ದ. ರಂಗ ಪ್ರದರ್ಶನದಲ್ಲಿ ಸೈಡ್‌ವಿಂಗ್‌ನಲ್ಲಿ ತಪ್ಪದೇ ಹಾಜರ್. ತನಗಿಂತ ಆರು ವರ್ಷ ಹಿರಿಯನಾಗಿದ್ದ ಅನಂತ್ ಮಾಡುವ ಎಲ್ಲ ಪಾತ್ರಗಳ ಎಲ್ಲ ಸಂಭಾಷಣೆಗಳೂ ಶಂಕರ್‌ನಾಗ್‌ನ ಬಾಯಲ್ಲೇ ಇರುತ್ತಿತ್ತು. ನಾಟಕ ಪ್ರದರ್ಶನದ ವೇಳೆ ಎಷ್ಟೋ ಸಲ ಆತ ಅಣ್ಣನಿಗೆ ಡೈಲಾಗ್ಸ್‌ಗಳ ಪ್ರಾಂಪ್ಟ್ ಮಾಡಿದ್ದೂ ಉಂಟು. ಪಾತ್ರ ನಿರ್ವಹಣೆಗಳಲ್ಲಿ ಅಣ್ಣನಿಗೆ ಅನೇಕ ಅಮೂಲ್ಯ ಸಲಹೆಗಳನ್ನು ಸಹ ನೀಡುತ್ತಿದ್ದ ಶಂಕರನಾಗ್. ನಾಟಕಗಳು, ಪಾತ್ರಗಳು, ಅಭಿನಯ ಇತ್ಯಾದಿಗಳನ್ನು ತನಗಿಂತ ಚೆನ್ನಾಗಿ ಗ್ರಹಿಸಿ, ತನಗೇ ಒಬ್ಬ ಗುರುವಿನಂತೆ ಶಂಕರ ಹೇಳಿಕೊಡುತ್ತಿದ್ದದ್ದನ್ನು ಅನಂತ್ ಅವರೇ ಸ್ಮರಿಸಿಕೊಂಡಿದ್ದಾರೆ. ತಮ್ಮ ಶಂಕರನ ಬಗ್ಗೆ ಅವರೇ ಬರೆದಿರುವ `ನನ್ನ ತಮ್ಮ ಶಂಕರ’ ಪುಸ್ತಕದಲ್ಲಿ ಇದನ್ನು ಅವರು ಹೇಳಿಕೊಂಡಿದ್ದಾರೆ.

ಗಿರೀಶ್ ಕಾರ್ನಾಡ್, ಸತ್ಯದೇವ್ ದುಬೆ, ಅಮೋಲ್ ಪಾಲೇಕರ್ ಅಂಥವರ ಸಹಕಾರ ಮಾರ್ಗದರ್ಶನಗಳ ಜೊತೆಗೆ ತಮ್ಮ ಶಂಕರನ ಸಲಹೆ, ಸೂಚನೆ, ಮಾರ್ಗದರ್ಶನ, ಮೆಚ್ಚುಗೆ ಇತ್ಯಾದಿಗಳು ತಾನು ರಂಗಭೂಮಿಯಲ್ಲಿ ಮಾಡಿದ ಸಾಧನೆಗಳಿಗೆ ಸಹಕಾರಿ ಅಂತ ಅನಂತ್ ಯಾವುದೇ ಈರ್ಷ್ಯೆ ಇಲ್ಲದೆ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಅನಂತ್ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರವಹಿಸಿದ್ದರು. `ಓದು’ ಅಂದರೆ ಅನಂತ್‌ಗೆ ಅದೇನೋ ಅಲರ್ಜಿ. ರಂಗಭೂಮಿಯ ಬಗ್ಗೆ ಅವರಿಗಿದ್ದ ಒಲವು, ಆಸ್ಥೆ, ಆಸಕ್ತಿಗಳು ಓದಿನ ಕಡೆಗಿರಲಿಲ್ಲ. ಕಾರಣ  ಓದು ಒಕ್ಕಾಲು ರಂಗ-ಚಿತ್ರರಂಗ ಮುಖ್ಯಾಲು ಎಂಬಂತಾಯಿತು. ಅನಂತ ಅವರ ಜೀವನ-ಸಾಧನೆ. ಈ ಅವಧಿಯಲ್ಲೇ ಅನಂತ್ ಕನ್ನಡ, ಹಿಂದಿ, ಕೊಂಕಣಿ ಮತ್ತು ಮರಾಠಿ ನಾಟಕಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದ್ದು.

ಈ ನಡುವೆ ಖಾಲಿ ಇದ್ದ ತಂದೆಗೆ ಬೆಂಗಳೂರಿನಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಸಿಕ್ಕ ಕಾರಣ ತಂದೆ-ತಾಯಿ ೧೯೬೯ರ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬಂದು ನೆಲೆ ನಿಂತರು. ಪಾರ್ಟ್ ಟೈಂ ಬ್ಯಾಂಕ್ ಕೆಲಸದ ಜೊತೆಗೆ ರಂಗಭೂಮಿ ಪ್ರವೇಶಿಸಿದ ತಮ್ಮ ಶಂಕರನಾಗ್ , ಜೊತೆಗೆ ವಿದ್ಯಾಭ್ಯಾಸ ಸಹ ಮುಂದುವರೆಸಿ ಬಿ.ಕಾಂ ಪದವಿ ಗಳಿಸಿದ. ಅಣ್ಣ-ತಮ್ಮ ಇಬ್ಬರೂ ರಂಗ ಸಾಧನೆಯಲ್ಲಿ ತೊಡಗಿದರು. ನಂತರ ಕನ್ನಡ ಚಿತ್ರರಂಗದಲ್ಲಿ ಅವಕಾಶ ದೊರೆತಾಗ ಅನಂತ್ ಬೆಂಗಳೂರಿಗೆ ಬಂದರು. ಮುಂಬೈಯಲ್ಲಿ ಒಬ್ಬನೇ ಇದ್ದ ಶಂಕರನಾಗ್ ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿ ಹಾಗೂ ಅದರ ಜೊತೆಗೆ ಫಿಲಂ ಇನ್ಸ್‌ಟಿಟ್ಯೂಟಿನಲ್ಲಿ ತರಬೇತಿ ಸಹ ಪಡೆದ. ಅಲ್ಲಿನ ನಾಟಕವೊಂದರಲ್ಲಿ ಅಭಿನಯಿಸುವಾಗ ರಂಗಕರ್ಮಿ, ರಂಗ ಸಾಹಿತಿ ಹಾಗೂ ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ಕಣ್ಣಿಗೆ ಬಿದ್ದ ಶಂಕರ್‌ನಾಗ್. ಆಗ ತಮ್ಮ `ಒಂದಾನೊಂದು ಕಾಲದಲ್ಲಿ’ ಚಿತ್ರದ ಮುಖ್ಯಪಾತ್ರಕ್ಕೆ ಶಂಕರನನ್ನೇ ಆರಿಸಿಕೊಂಡರು ಗಿರೀಶ್ ಕಾರ್ನಾಡ್‌ರು. ಅಭಿನಯದ ಕಡೆ ಇಷ್ಟವಿಲ್ಲದಿದ್ದ ಆದರೆ ನಿರ್ದೇಶನದಲ್ಲಿ ಆಸಕ್ತಿ ಇದ್ದ ಶಂಕರ ಅಣ್ಣನ ಒತ್ತಡಕ್ಕೆ ಕಟ್ಟುಬಿದ್ದು ಆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡ. ಅದಕ್ಕಾಗಿ ಶಂಕರ ಸಹ ಬೆಂಗಳೂರಿಗೆ ಬರಬೇಕಾಯಿತು ಬಂದ. ನಂತರ ಅಣ್ಣ-ತಮ್ಮ ಇಬ್ಬರೂ ಸಹ ಕೆಲವಾರು ನಾಟಕಗಳು ಹಾಗೂ ಸಿನಿಮಾಗಳಲ್ಲಿ ನಟಿಸಿದರು.

ಅಷ್ಟೇ ಅಲ್ಲ ಇಬ್ಬರೂ ಸೇರಿ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡರು. ತಮ್ಮ ಚಿತ್ರಗಳಲ್ಲಿ ತಾವೂ ಅಭಿನಯಿಸಿದರು. ತಮ್ಮ ನಿರ್ಮಾಣದ ಎಲ್ಲ ಚಿತ್ರಗಳ ನಿರ್ದೇಶನದ ಜವಾಬ್ದಾರಿಯನ್ನು ಶಂಕರನೇ ವಹಿಸಿಕೊಂಡ. ಹೀಗೆ ತಮ್ಮ ಶಂಕರನಾಗ್ ಜೊತೆಗೂಡಿ ಅನಂತ್ ನಿರ್ಮಿಸಿದ ಚಿತ್ರಗಳು `ಮಿಂಚಿನ ಓಟ’ (೧೯೮೦), `ಜನ್ಮ ಜನ್ಮದ ಅನುಬಂಧ’ (೧೯೮೧), `ನೋಡಿ ಸ್ವಾಮಿ ನಾವಿರೋದೇ ಹೀಗೆ’ (೧೯೮೩) ಮತ್ತು `ಆಕ್ಸಿಡೆಂಟ್’ (೧೯೮೪), ತಮ್ಮ  ಶಂಕರನ ಅಭೀಷ್ಟ್ಯದಂತೆ ಅವನ ಜೊತೆಗೂಡಿ ಬೆಂಗಳೂರಿನಲ್ಲಿ `ಸಂಕೇತ್ ಎಲೆಕ್ಟ್ರಾನಿಕ್’ ಸ್ಟುಡಿಯೋವನ್ನು ೧೯೮೫ರಲ್ಲಿ  ಇಬ್ಬರೂ ಸೇರಿ ಸ್ಥಾಪನೆ ಮಾಡಿದರು. ನಂತರ ಶಂಕರನ ಕನಸಿನ ಕೂಸು ಕಂಟ್ರಿ ಕ್ಲಬ್‌ ಅನ್ನು ಸಹ ಇಬ್ಬರೂ ಆರಂಭಿಸಿದರು. ಈ ನಡುವೆ ಎಂ.ಎಸ್.ಸತ್ಯು ಅವರ `ಬರ’ ಚಿತ್ರದಲ್ಲಿ ಅನಂತ್ ಅಭಿನಯಿಸಿದ್ದರು. ಅದರ ಬಿಡುಗಡೆಗೆ ಯಾರೂ ಮುಂದೆ ಬರದ ಕಾರಣ ಅಣ್ಣ-ತಮ್ಮ ಇವರೇ ಅದರ ಬಿಡುಗಡೆಯ ಜವಾಬ್ದಾರಿ ಹೊತ್ತು ಬಿಡುಗಡೆ ಸಹ ಮಾಡಿಸಿದರು.

ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಲು ಎರಡು ಮೂರು ಜಿಲ್ಲೆಗಳಲ್ಲಿ ಸಿಂಹಸ್ವಪ್ನದಂತಿದ್ದ ಕನ್ನಯ್ಯರಾಮನ ಬಗ್ಗೆ ಎಂ.ಎಸ್.ಸತ್ಯು ಚಿತ್ರ ಮಾಡಿದರು. ಮುಖ್ಯ ಪಾತ್ರವಾದ ಕನ್ನೇಶ್ವರ ರಾಮ ಪಾತ್ರವು ಅನಂತ್ ಪಾಲಿಗೇ ಬಂದೀತು. ಅನಂತ್ ಆ ಪಾತ್ರವನ್ನು ಸಹ ತುಂಬಾ ಚೆನ್ನಾಗಿಯೇ ನಿರ್ವಹಿಸಿದರು. ಜಿ.ವಿ.ಅಯ್ಯರ್ ಅವರ `ಹಂಸಗೀತೆ’ ಚಿತ್ರದಲ್ಲಿ ಮಹಾನ್ ಸಂಗೀತಗಾರ ಭೈರವಿ ವೆಂಕಟಸುಬ್ಬಯ್ಯನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು ಅನಂತ್. ಕಾದಂಬರಿ ಆಧಾರಿತ ಚಿತ್ರಗಳಾದ `ಬಯಲು ದಾರಿ’, ` ಮುದುಡಿದ ತಾವರೆ ಅರಳಿತು’, `ಚಂದನದ ಗೊಂಬೆ’, `ಬೆಂಕಿಯ ಬಲೆ’ ಮುಂತಾದ ಚಿತ್ರಗಳಲ್ಲಿ ಅವರದು ಸಂವೇದನಾಶೀಲ ಮನೋಜ್ಞ ಅಭಿನಯ. `ನಾರದ ವಿಜಯ’ದಲ್ಲಿ ಅವರದು ಹಾಸ್ಯಮಯ ಲವಲವಿಕೆಯ ಪಾತ್ರ.

ಶ್ರೀಕೃಷ್ಣದೇವರಾಯನ ಆಸ್ಥಾನ ವಿರೂಪಾಕ್ಷನ  ಪ್ರಸಿದ್ದ  ತೆನಾಲಿರಾಮ ಕೃಷ್ಣ ಪಾತ್ರದಲ್ಲಿ ಅನಂತ್ ಅವರದು ಅದ್ಭುತ ಅಭಿನಯ. ಚಿತ್ರದ ಹೆಸರು `ಹಾಸ್ಯರತ್ನ ತೆನಾಲಿರಾಮಕೃಷ್ಣ’. `ಕಾಮನ ಬಿಲ್ಲು’ ಚಿತ್ರದಲ್ಲಿ ಅನಂತ್ ಅವರು ಡಾ|| ರಾಜ್ ಅವರ ಜೊತೆ ಅಭನಯಿಸಿದ್ದಾರೆ. `ಕುದುರೆ ಮುಖ’ ಚಿತ್ರದಲ್ಲಿ ಇವರದು ಆಕ್ಷನ್ ಹೀರೋ ಪಾತ್ರ. `ಗಣೇಶನ ಮದುವೆ’, `ಗೋಲ್ ಮಾಲ್ ರಾಧಾಕೃಷ್ಣ ಭಾಗ-೧ ಮತ್ತು ಭಾಗ-೨,’ `ಗೌರಿ ಗಣೇಶ`’, `ಗಣೇಶ ಮತ್ತೆ ಬಂದ’ ಮುಂತಾದ ಚಿತ್ರಗಳಲ್ಲಿನ ಇವರ ಜೀವಂತ ಹಾಸ್ಯ ಪಾತ್ರಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವುದಷ್ಟೇ ಅಲ್ಲ, ಯಾರೂ ಎಂದೂ ಸಹ ಮರೆಯಲಾಗದ ಚಿತ್ರಗಳು.

ಇತ್ತೀಚಿನ ಕೆ.ಜಿ.ಎಫ್ ಚಾಪ್ಟರ್-೧ ಚಿತ್ರದಲ್ಲಿ `ಯಶ್` ಅವರದು ಯಶಸ್ವೀ ವಿಭಿನ್ನ ಪ್ರಧಾನ ಪಾತ್ರವಾದರೂ ಸಹ ಆತನ ಕತೆ ಹೇಳುವ ಸೂತ್ರಧಾರನ ಪಾತ್ರದಲ್ಲಿ ಆನಂತ್ ಅವರದು ಉತ್ಕೃಷ್ಟ ವಿಭಿನ್ನ ಅಭಿನಯ. ಕಾಸರಗೋಡು ಕನ್ನಡ ಪ್ರಾಥಮಿಕ ಪಾಠ ಶಾಲೆ’ ಚಿತ್ರದಲ್ಲಂತೂ ಅವರ ಅಭಿನಯ ಅತ್ಯದ್ಭುತ. ಆ ಪಾತ್ರವನ್ನು ಅವರಲ್ಲದೇ ಬೇರ್‍ಯಾರೂ ಸಹ ಮಾಡಲು ಸಾಧ್ಯವೇ ಇಲ್ಲ ಅನ್ನುವ ಹಾಗಿದೆ ಆ ಪಾತ್ರ ಮತ್ತು ಅವರ ಪಾತ್ರ ನಿರ್ವಹಣೆ. `ಪ್ರೀತಿ, ಪ್ರೇಮ, ಪ್ರಣಯ’ ಮತ್ತು ` ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಗಳಲ್ಲಿನ ಅವರ ಪ್ರಬುದ್ಧ ಅಭಿನಯ ಅದ್ಭುತ ಹಾಗೂ ಅನುಕರಣೀಯ. ಯೋಗ್‌ರಾಜ್ ಭಟ್ ಅವರ ಯಶಸ್ವೀ ವಿಭಿನ್ನ ಚಿತ್ರ `ಮುಂಗಾರು ಮಳೆ’ ಚಿತ್ರದಲ್ಲಿನ ಅನಂತ್ ಅವರ ಪಾತ್ರ ನಿರ್ವಹಣೆ ಮೆಚ್ಚದಿರಲು ಸಾಧ್ಯವೇ ಇಲ್ಲ. ಸುನೀಲ್‌ಕುಮಾರ್ ದೇಸಾಯಿ ಅವರ `ಬೆಳದಿಂಗಳ ಬಾಲೆ’ ಚಿತ್ರದಲ್ಲಿನ ಅವರ ವಿಭಿನ್ನ ಪ್ರಬುದ್ಧ ಅಭಿನಯದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ ಅಲ್ಲವೇ! ಪಾತ್ರ ಯಾವುದೇ ಇರಲಿ ಹಿಂದೆ ಮುಂದೆ ನೋಡದೇ ಒಪ್ಪಿಕೊಳ್ಳುವ ಅವರು (ಚಿತ್ರ ಗೆಲ್ಲಲಿ, ಸೋಲಿ) ಅದನ್ನು ಸಮರ್ಥವಾಗಿ ನಿರ್ವಹಿಸುವ ಅಪರೂಪದ ನಟ ಅನಂತ್‌ನಾಗ್. ಒಂದು ಆಂಗಲ್‌ನಿಂದ ಆಂಗ್ಲ ನಟ ಆಲ್ ಪಾಸಿನೋನಂತೆ ಕಾಣುವ ಹಾಗೂ ಅನೇಕ ಪಾತ್ರಗಳಲ್ಲಿ ಸೂಪರ್‌ ಸ್ಟಾರ್ ಅಮಿತಾಬ್‌ರನ್ನು ಸರಿಗಟ್ಟುವ ಅನಂತ್ ಅವರ ವೈವಿಧ್ಯಮಯ ಪಾತ್ರ ನಿರ್ವಹಣೆ ಅಚ್ಚರಿ ಹಾಗು ಅದ್ಭುತಗಳ ಸಂಗಮ. ಅಗೆದಷ್ಟು ಖಜಾನೆ, ಮೊಗೆದಷ್ಟು ಜಲ ಎಂಬಂತೆ ಅವರಿಗೆ ವಯಸ್ಸಾಗುತ್ತಾ ಇದ್ದರೂ ಸಹ ಅವರೊಳಗಿನ ಕಲಾವಿದ ಇನ್ನೂ ಯುವಕನಾಗಿ ಲವಲವಿಕೆಯಿಂದಲೇ ಇದ್ದಾನೆ. ಇಂದಿಗೂ ಅನಂತ್ ಬೇಡಿಕೆಯ ನಟ. ಕೆಲ ಪಾತ್ರಗಳಿಗೆ ಅವರೇ ಸರಿ ಅವರಿಂದಲೇ ಮಾಡಿಸಬೇಕು ಅಂತ ನಿರ್ಣಯಿಸುವಂತ ಸೂಕ್ತ ಪ್ರತಿಭೆಯ ಖನಿ ಅವರು. ಇಂತಹ ಅಪ್ಪಟ ಕಲಾವಿದರು ವಿರಳ ಆದರೂ ಆತ ಸರಳ. ಇನ್ನು ಹೆಚ್ಚು ಹೆಚ್ಚು ಪ್ರಶಸ್ತಿಗಳು, ಪುರಸ್ಕಾರಗಳಿಗೆ ಹಾಗೂ ಇನ್ನು ಅತ್ಯುತ್ತಮ ಪಾತ್ರವಕಾಶಗಳಿಗೆ ಆತ ಅರ್ಹ. ಅಂತಹ ಪ್ರಶಸ್ತಿಗಳು ರಾಜ್ಯ, ರಾಷ್ಟ್ರ  ಅಂತರ ರಾಷ್ಟ್ರಗಳು ಹಾಗೂ ಪ್ರತಿಷ್ಠಿತ ಸಂಘ, ಸಂಸ್ಥೆಗಳಿಂದ ಸಿಗಲಿ ಎಂಬುದು ನಮ್ಮ ನಿಮ್ಮೆಲ್ಲರ ಆಶಯ. ಎಂದಿಗೂ ಬತ್ತದ ಅವರ ಮಾಗಿದ ಪ್ರತಿಭೆ ಹಾಗೂ ಉತ್ಸಾಹಗಳ ಅಭಿನಯವನ್ನು ಸೂಕ್ತವಾಗಿ ಬಳಸಿಕೊಳ್ಳುವುದು ನಿರ್ಮಾಪಕರು ಮತ್ತು ನಿರ್ದೇಶಕರುಗಳ ಹೊಣೆ.

Leave a Reply

Your email address will not be published.

*