ಹಾಯ್ ಬೆಂಗಳೂರ್

`ಅಚ್ಛೀ ಬಾತ್ ಹೈ’ ಗಾಂಧೀಜಿಯಿಂದ ಹೊರಟ ಉದ್ಗಾರವದು.

  • ಬೆಳಗೆರೆ ಕೃಷ್ಣ ಶಾಸ್ತ್ರಿ: ಅವರು ಎಂದೂ ಮರೆಯಲಿಲ್ಲ- ಭಾಗ-19

`ಅಚ್ಛೀ ಬಾತ್ ಹೈ’ ಗಾಂಧೀಜಿಯಿಂದ ಹೊರಟ ಉದ್ಗಾರವದು.

`ಗ್ರಾಮ ಕೈಗಾರಿಕೆಗಳಿಗೆ ಒತ್ತು ಕೊಟ್ಟ ಲಿಂಗಣ್ಣನವರ ಬಗೆಗೆ ಗಾಂಧೀಜಿ ವಿಶೇಷ ಮೆಚ್ಚುಗೆ ಸೂಚಿಸಿದರು. ವಿವರವಾಗಿ ಕಲ್ಲೂರ ಸುಬ್ಬರಾಯರ ಜೊತೆಗೆ ಮಾತನಾಡುತ್ತಾ `ದೆನ್ ಹಿ ಈಸ್ ಎ ಬಿಗ್ ಶಾಟ್’ (ಈತ ಭಾರೀ ಕುಳ) ಎಂದರು ನಗುತ್ತಾ.

`ಎಸ್, ಹಿ ಈಸ್’ (ಹೌದು) ಎಂದರು ಸುಬ್ಬರಾವ್.

ಮತ್ತೆ ಗಾಂಧೀಜಿ ಕೇಳಿದರು: `ಹಮ್ ಕೊ ಕ್ಯಾ ದೇತೇ ಹೈ?’ (ಇವರು ನಮಗೇನು ಕೊಡುತ್ತಾರೆ?) ಎಂದು. ಈ ಎಲ್ಲ ಮಾತುಕತೆಗಳನ್ನು ಸುಬ್ಬರಾಯರು ಲಿಂಗಣ್ಣನವರಿಗೆ ಭಾಷಾಂತರಿಸಿ ಹೇಳುತ್ತಿದ್ದರು. ಗಾಂಧೀಜಿಯವರು `ನಮಗೇನು ಕೊಡುತ್ತಾರೆ?’ ಎಂದು ಕೇಳುತ್ತಿದ್ದಾರೆಂಬ ವಿಷಯ ತಿಳಿದ ಲಿಂಗಣ್ಣನವರ ಮುಖದಲ್ಲಿ ಮಂದಹಾಸ ಮೂಡಿತು. ಒಂದು ಕ್ಷಣಕ್ಕೂ ಯೋಚಿಸದೆ, ಗಡಬಡಿಸದೆ ಸಮಾಧಾನಚಿತ್ತದಲ್ಲಿಯೇ ಹೇಳಿದರು ಲಿಂಗಣ್ಣ:

`ಎಲ್ಲವೂ ಅವರದೇ, ನಾನು ಕೊಡುವುದೇನಿದೆ?’ ಈ ಮಾತನ್ನು ಗಾಂಧೀಜಿಯವರಿಗೆ ಹೇಳಿದರು ಸುಬ್ಬರಾಯರು. ನಕ್ಕರು ಗಾಂಧೀಜಿ.

`ಅಚ್ಛೀ ಬಾತ್ ಹೈ’ ಗಾಂಧೀಜಿಯಿಂದ ಹೊರಟ ಉದ್ಗಾರವದು.

ಗಾಂಧೀಜಿಯವರು ಪಕ್ಕದಲ್ಲಿದ್ದ `ಯಂಗ್ ಇಂಡಿಯಾ’ ಪತ್ರಿಕೆಯ ಅಂಚಿನಲ್ಲಿ ಈ ವಿಷಯವನ್ನು ಬರೆದು ಆ ಚೀಟಿಯನ್ನು ಲಿಂಗಣ್ಣನವರ ಕೈಗಿತ್ತರು. ಲಿಂಗಣ್ಣನವರು ಆ ಚೀಟಿಯನ್ನು ಜೋಪಾನವಾಗಿ ತಮ್ಮ ಪಾಕೆಟ್ ಕ್ಯಾಲೆಂಡರಿನಲ್ಲಿರಿಸಿಕೊಂಡರು. ಅಷ್ಟು ಹೊತ್ತಿಗೆ ಗಾಂಧೀಜಿ ಲಿಂಗಣ್ಣನವರಿಗೆ ಕೊಟ್ಟಿದ್ದ ಸಮಯ ಮುಗಿಯಿತೆನಿಸುತ್ತದೆ. ಗಾಂಧೀಜಿಯವರು ವಾಚ್ ನೋಡಿದರು. ಅವರು ಟೈಮಿನ ಬಗೆಗೆ ಎಷ್ಟು ಖಚಿತವಾಗಿರುತ್ತಿದ್ದರೆಂದರೆ ಒಬ್ಬರಿಗೆ ಐದು ನಿಮಿಷ ಕೊಟ್ಟಿದ್ದರೆ ಐದು ನಿಮಿಷಕ್ಕೆ ಮಾತು ಮುಗಿಸುತ್ತಿದ್ದರು. ಆರನೆಯ ನಿಮಿಷ ಅಲ್ಲಿ ಯಾರಾದರೂ ಕುಳಿತ್ತಿದ್ದರೆ ಅವರೊಡನೆ ಒಂದು ಮಾತನ್ನೂ ಆಡುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ರಾಟೆ ತೆಗೆದುಕೊಂಡು ನೂಲು ತೆಗೆಯುತ್ತಾ ಕುಳಿತುಬಿಡುತ್ತಿದ್ದರು. ತಮ್ಮ ಸಮಯ ಮುಗಿಯುತ್ತಿದ್ದಂತೆ ಲಿಂಗಣ್ಣನವರು, ಸುಬ್ಬರಾಯರು ನಮಸ್ಕಾರ ಹೇಳಿ ಹೊರಬಂದರು.

***

ಗಾಂಧೀಜಿಯವರು ಕುಮಾರಕೃಪಾದಲ್ಲಿ ಉಳಿದುಕೊಂಡಿದ್ದಾಗ ಒಂದು ದಿನ ಕಲ್ಲೂರು ಸುಬ್ಬರಾಯರು, ಲಿಂಗಣ್ಣನವರು ಮತ್ತೆ ಬಂದರು. ನಂದಿಬೆಟ್ಟದಲ್ಲಿ ನೋಡಿದ್ದ ಅವರಿಬ್ಬರನ್ನೂ ನಾನು ಗುರುತಿಸಿದೆ. ಲಿಂಗಣ್ಣನವರು ಗಾಂಧೀಜಿಯವರಿಗೆ ನಮಸ್ಕರಿಸಿ ತಮ್ಮ ಕೈಲಿದ್ದ ಒಂದಷ್ಟು ಕಾಗದ ಪತ್ರಗಳನ್ನು ಅವರ ಕೈಗಿತ್ತರು. ಸುಬ್ಬರಾಯರು ಅದರ ಎಲ್ಲಾ ವಿವರಗಳನ್ನೂ ವಿವರಿಸಿ ಹೇಳುತ್ತಿದ್ದರು. ಅದರ ವಿವರ ಹೀಗಿತ್ತು:

ಲಿಂಗಣ್ಣನವರು ತಮ್ಮ ಹೆಂಡತಿ ಚೌಡಮ್ಮನವರಿಗೆ ಜೀವನಾಂಶಕ್ಕೆ ಹತ್ತು ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಿ ಉಳಿದ ಹಣ, ಕಾರ್ಖಾನೆ, ಜಮೀನು, ಮನೆ ಎಲ್ಲವನ್ನೂ ಗಾಂಧೀಜಿಯವರ ಹೆಸರಿಗೆ ಬರೆದಿದ್ದರು. ಗಾಂಧೀಜಿಯವರು ಈ ವಿಷಯ ತಿಳಿದದ್ದೇ ಆಶ್ಚರ್ಯಪಟ್ಟರು. ಅಷ್ಟೇ ಸಮಾಧಾನವಾಗಿ ಪರಿಶೀಲಿಸಿ, ಎಲ್ಲವನ್ನೂ ಲಿಂಗಣ್ಣನವರ ಕೈಗೆ ಹಿಂದಿರುಗಿಸಿದರು. `ಇದನ್ನು ಒಂದು ಸೇವಾಶ್ರಮ ಸ್ಥಾಪಿಸಲು ಬಳಸಿಕೊಳ್ಳಿ. ನೀವೂ ಇದರಲ್ಲಿ ತೊಡಗಿಸಿಕೊಳ್ಳಿ’ ಎಂದರು ಗಾಂಧೀಜಿ.

ಗಾಂಧೀಜಿಯವರ ಸೂಚನೆಯ ಮೇರೆಗೆ ಲಿಂಗಣ್ಣನವರು ಪೆನ್ನಾರ್ ನದಿಯ ದಂಡೆಯಲ್ಲಿ ಸೇವಾಶ್ರಮವೊಂದನ್ನು ಸ್ಥಾಪಿಸಿದರು. ಕಾರ್ಖಾನೆಯ ಆದಾಯವೆಲ್ಲಾ ಸೇವಾಶ್ರಮಕ್ಕೆ ಸಂದಾಯವಾಗುವಂತೆ ವ್ಯವಸ್ಥೆ ಮಾಡಿದರು.

ಸೇವಾಶ್ರಮದ ಆಶ್ರಯದಲ್ಲಿ ಶಾಲೆಯೊಂದನ್ನು, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ನ್ನು ಆರಂಭಿಸಿದರು. ಎಲ್ಲವನ್ನೂ ಸೇವಾಶ್ರಮಕ್ಕೆ ಅರ್ಪಿಸಿದ ಲಿಂಗಣ್ಣನವರು, ಅಲ್ಲಿಯೇ ತಿಂಗಳಿಗೆ ಮುವ್ವತ್ತು ರೂಪಾಯಿಗಳ ಸಂಬಳಕ್ಕಾಗಿ ಸೇರಿದರು. ಬದುಕಿರುವಷ್ಟು ಕಾಲವೂ ತಮಗೆ ನಿಗದಿಯಾದ ಸಂಬಳಕ್ಕಿಂತ ಒಂದು ಬಿಡಿ ಕಾಸನ್ನೂ ಹೆಚ್ಚಿಗೆ ತೆಗೆದುಕೊಳ್ಳಲಿಲ್ಲ.

(ಮುಂದುವರೆಯುವುದು)

Leave a Reply

Your email address will not be published. Required fields are marked *