ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ : ಆ ಐದು ರುಪಾಯಿ ಬದುಕನ್ನೇ ಬದಲಿಸಿತು

  • ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ಆ ಐದು ರುಪಾಯಿ ಬದುಕನ್ನೇ ಬದಲಿಸಿತು

ಇವು ಮೂವತ್ತೈದು ವರ್ಷಗಳ ಹಿಂದಿನ ಮಾತು. ನಾನಾಗ ಈಜು ಕಲೀತಿದ್ದ ದಿನಗಳು. ಒಂದು ದಿನ ಈಜು ಮುಗಿಸಿ ಬಂದಾಗ ಮನೆ ತುಂಬಾ ನೆಂಟರಿಷ್ಟರು. ಅಂದು ನನ್ನ ಎಸೆಸೆಲ್ಸಿ ಫಲಿತಾಂಶ ಬಂದಿತ್ತು.  ಉತ್ತಮ ಅಂಕಗಳನ್ನು ಪಡೆದು ನಾನು ಪಾಸಾಗಿದ್ದೆ. ಹಾಗಾಗಿ ಅವರೆಲ್ಲಾ ನನ್ನನ್ನು ಅಭಿನಂದಿಸಲು ಬಂದಿದ್ದರು. ಅವರು ಅಮ್ಮನಿಗೆ `ಹುಡುಗ ಬುದ್ಧಿವಂತ ಮುಂದೆ ಚೆನ್ನಾಗಿ ಓದಿಸಿ’ ಅಂತ ಹೇಳ್ತಾ ಇದ್ರು.

ನನಗೆ ಉತ್ತಮ ಅಂಕಗಳು ಬಂದಿದ್ದರಿಂದ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶ ಸಿಕ್ತು. ಸೀಟೇನೋ ಸಿಕ್ತು. ಆದ್ರೆ ದಿನಾ ಊರಿಂದ ಕಾಲೇಜಿಗೆ ಬಂದು ಹೋಗೋದಿಕ್ಕೆ ಬಡತನ ಅಡ್ಡಿಯಾಯ್ತು. ಅಭಿನಂದಿಸಿದವರಿಂದ ಯಾವ ಸಹಾಯವೂ ಸಿಗಲಿಲ್ಲ. ಬಸ್ಸಿಗೆ ದುಡ್ಡಿಲ್ಲಾಂತ ಬೆಂಗಳೂರಿಗೆ ಬರುತ್ತಿದ್ದ ಮರಳು ಲಾರಿಗಳಲ್ಲಿ ಕಾಲೇಜಿಗೆ ಬಂದು ಹೋಗೋದಕ್ಕೆ ಶುರು ಮಾಡಿದೆ. ನನ್ನ ಕಾಲೇಜಿನ ಹಾಜರಿ ಲಾರಿಯ ಮಾಲೀಕ ಮತ್ತು ಚಾಲಕನ ಮರ್ಜಿಗೆ ಒಳಪಟ್ಟಿತ್ತು. ನನ್ನನ್ನು ಕರೆದೊಯ್ಯಲು ಮಾಲೀಕ ತೋರುತ್ತಿದ್ದ ಹಿಂಜರಿಕೆ ಮತ್ತು ಚಾಲಕನ ಜರಿಕೆ (ಬಯ್ಗಳ)ಯಿಂದ ನಾನು ಅದೆಷ್ಟೋ ದಿನ ಕಾಲೇಜಿಗೆ ಹೋಗಲಾಗುತ್ತಿರಲಿಲ್ಲ. ಹಾಗಾಗಿ ನನಗೆ ಓದಿನ ಬಗ್ಗೆ ವಿರಕ್ತಿಯುಂಟಾಯ್ತು. ಆಗ ನನಗೆ ಯಾವ ಸರ್ಕಾರಿ ಸವಲತ್ತುಗಳೂ ಸಿಗಲಿಲ್ಲ.

ಅದೊಂದು ದಿನ ನಡೆದ ಘಟನೆ ನನ್ನ ವಿರಕ್ತಿಯೆಂಬ ಬೆಂಕಿಗೆ ತುಪ್ಪವನ್ನು ಸುರಿದಿತ್ತು. ಅಂದು ಲಾರಿಯ ಮಾಲೀಕ ಮುಂದೆ ನೋಟೀಸ್ ಚೆಕಿಂಗ್ ಇದೆ ಅಂತಲೋ, ಮರಳಿಗೆ ಅಲ್ಲೇ ಗಿರಾಕಿ ಸಿಕ್ತು ಅಂತಲೋ ನೆಪ ಹೇಳಿ ನನ್ನನ್ನು ಅರ್ಧ ದಾರಿಯಲ್ಲೇ ಇಳಿಸಿಬಿಟ್ಟ. ಮನೆಗೆ ವಾಪಸು ಬರಲು ಎಂಟ್ಹತ್ತು ಕಿಲೋಮೀಟರ್ ನಡೆಯ ಬೇಕಾಗಿತ್ತು. ಹಾಗೆ ನಡೆದು ಬಂದು ಹೊರಗಿನಿಂದಲೇ ಕೈಲಿದ್ದ ಪುಸ್ತಕಗಳನ್ನು ಮನೆ ಒಳಗೆ ಬಿಸಾಕಿ ಊರ ಹೊರಗಿನ ತೋಟಗಳ ಕಡೆ ಓಡಿದೆ. ಏಕಾಂತದಲ್ಲಿ ಕೂತು ಸುಸೂತ್ರವಾಗಿ ಓದು ಮುಂದುವರೆಸಲಾಗದ ನನ್ನ ದುರದೃಷ್ಟಕ್ಕಾಗಿ ಮನಸಾರೆ ಅತ್ತೆ. ಕತ್ತಲಾಗುವ ಮೊದಲು ಓದಿಗೆ ವಿದಾಯ ಹೇಳುವ ನಿರ್ಧಾರ ಕೈಗೊಂಡು ಮನೆ ತಲುಪಿದೆ.

ಅಲ್ಲಿಯವರಿಗೆ ಜ್ಞಾನರ್ಜನೆಗಾಗಿ ಪೇಪರ್ ನೋಡುತ್ತಿದ್ದ ನಾನು, ನಂತರ  wanted Colum ನೋಡೋಕೆ ಶುರು ಮಾಡಿದೆ. ಮುಂದೆ ಕೆಲಸ ಹುಡುಕುವುದೇ ನನ್ನ ಕೆಲಸವಾಯ್ತು. ನನ್ನ ಪರಿಸ್ಥಿತಿಯ ಅರಿವಿದ್ದ ನನ್ನ  ಸ್ನೇಹಿತನೊಬ್ಬ ಅದೊಂದು ದಿನ ಕೆಲಸಕ್ಕೆ apply ಮಾಡಲು ಅರ್ಜಿಯನ್ನು ತಂದುಕೊಟ್ಟು ಭರ್ತಿ ಮಾಡಲು ಸಹಕರಿಸಿದ. ಆದರೆ ಮರುದಿನವೇ ಅರ್ಜಿಯನ್ನು ಬೆಂಗಳೂರಿನಲ್ಲಿರುವ ಇಲಾಖೆಗೆ ತಲುಪಿಸಲು ಕಡೆಯ ದಿನವಾಗಿತ್ತು.

ಮರುದಿನ ಹಣ ಹೊಂದಾಣಿಕೆಯಾಗದೆ ನನ್ನ ದುರದೃಷ್ಟವನ್ನ ಹಳಿಯುತ್ತಾ ಕುಳಿತಿದ್ದ ನನಗೆ, ಆ  ಸ್ನೇಹಿತ ಐದು ರುಪಾಯಿ ಹೊಂದಿಸಿಕೊಟ್ಟು ಬೇಗ ಹೋಗಿ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸಿದ. ಅರ್ಜಿ ಸಲ್ಲಿಸಿದೆ. ಆ ಐದು ರುಪಾಯಿ ನನ್ನ ಜೀವನದ ದಿಕ್ಕನ್ನೇ ಬದಲಿಸಿತು.

ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ನನಗೆ ಇಂಟರ್‌ವ್ಯೂಗೆ ಕರೆ ಬಂತು. ಇಂಟರ್‌ವ್ಯೂ ಲಿಸ್ಟ್‌ನಲ್ಲಿ ನಾನು ಮುಂಚೂಣಿಯಲ್ಲಿದ್ದೆ. ಆದ್ದರಿಂದ ನನಗೆ ಕೆಲಸ ಸಿಕ್ಕು ಸ್ವಾಭಿಮಾನದ ಬದುಕು ಸಾಗಿಸುವಂತಾಯ್ತು. ನನ್ನ  ಸ್ನೇಹಿತ ಸರ್ಕಾರಿ ಸವಲತ್ತುಗಳು ಸಿಕ್ಕಿದ್ದರಿಂದ ಓದು ಮುಂದುವರೆಸಿದ. ಮುಂದೆ ನಾನೂ ಆತನಿಗೆ ಸಹಾಯ ಮಾಡಿದೆನಾದರೂ ನನ್ನ ಬದುಕನ್ನೇ ಬದಲಿಸಿದ ಅವನ  ಸಹಾಯ ಇನ್ನೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

-ಬಿ.ನಾಗರಾಜು, ಬೆಂಗಳೂರು

Leave a Reply

Your email address will not be published. Required fields are marked *