Daily archive

June 26, 2020

ಇನ್ನೂ ಎಷ್ಟು ದಿನ ಈ ನರಕ?

in Uncategorized/ಇದು ಪ್ರತಿವಾರದ ಅಚ್ಚರಿ/ಲೀಡ್ ನ್ಯೂಸ್

ನೂರು ವರ್ಷಗಳ ಹಿಂದಿನ ವೈರಸ್ ಎದ್ದು ಕುಳಿತಿದೆಯಾ?

ಇನ್ನೂ ಎಷ್ಟು ದಿನ ಈ ನರಕ?

 ನೂರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಅನುಭವಿಸಿದ ಸಾವು..ನೋವು..ಹತಾಷೆ.. ಭಯ ಈಗ ನಮ್ಮ ಕಣ್ಣಲ್ಲಿ ಕಾಣ್ತಿದೆ. ‘ಗಂಗೆ ಮೃತದೇಹಗಳಿಂದ ತುಂಬಿಹೋಗಿದ್ದಳು’ ಅಂತ ಆಗ ಕವಿ ಬರಿತಾನೆ. ಈಗ?

ರವಿ ಅಜ್ಜೀಪುರ

ಅದು ಇಂಥದ್ದೇ ಒಂದು ಸಾವಿನ ಸುನಾಮಿ.

ಜಗತ್ತಿನ ಬರೋಬ್ಬರಿ ಐವತ್ತು ಕೋಟಿಗೂ ಹೆಚ್ಚು ಜನರನ್ನ ನೋವಿಗೆ ತಳ್ಳಿತ್ತು. ಐದು ಕೋಟಿ ಜನರನ್ನ ನುಂಗಿ ನೊಣೆದಿತ್ತು. ಮಾನವ ಇತಿಹಾಸದಲ್ಲೇ ಅದೊಂದು deadliest pandemic  ಎಂದು ಮೆಡಿಕಲ್ ಎಕ್ಸ್ ಪರ್ಟ್ಸ್ ಶರಾ ಬರೆದರು.

ಆ ಸಾವಿನ ಸುನಾಮಿಯ ಹೆಸರು ಸ್ಪ್ಯಾನಿಷ್ ಫ್ಲೂ.

1918 ಏಪ್ರಿಲ್ ನಲ್ಲಿ ಶುರುವಾದ H1N1 influenza  1920ರವರೆಗೂ ಜಗತ್ತಿನ ಜನರನ್ನ ಇನ್ನಿಲ್ಲದೆ ನರಳಿಸಿತ್ತು. ಜನ ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದರು. ಹಾದಿಬೀದಿಗಳೆಲ್ಲಾ ನಿರ್ಜನವಾಗಿದ್ದವು. ಮಾಸ್ಕ್ ಧರಿಸದೇ ಓಡಾಡುವ ಹಾಗಿರಲಿಲ್ಲ. ಶಾಲೆಕಾಲೇಜು ಬಂದ್ ಆಗಿದ್ದವು. ಸಾರಿಗೆ ಸಂಪರ್ಕ ಸ್ತಬ್ಧವಾಗಿತ್ತು. ಥಿಯೇಟರ್ ಗಳು ಮುಚ್ಚಿದ್ದವು. ಅಂಗಡಿ ಮುಂಗಟ್ಟುಗಳನ್ನು ತೆಗೆಯುವ ಹಾಗೇ ಇರಲಿಲ್ಲ. ಜನ ಹೋಮ್ ಕ್ವಾರಂಟೈನ್ ಗೆ ಒಳಗಾಗಿ ಬಸವಳಿದು ಹೋಗಿದ್ದರು. ಈಗ ಹೇಗೆ ಸರ್ಕಾರ ಸೋಷಿಯಲ್ ಡಿಸ್ಟೆನ್ಸಿಂಗ್, ಮಾಸ್ಕ್, ಕ್ಲೀನ್ಲಿನೆಸ್  ಅನ್ನೋ  ರೂಲ್ಸ್ ಮಾಡಿದೆಯೋ  ಆಗ ಕೂಡ ಅಂತಹದ್ದೇ ರೂಲ್ಸ್ ಇತ್ತು. ಅಲ್ಲಲ್ಲಿ ಎಚ್ಚರಿಕೆಯ, ಸಾರ್ವಜನಿಕರು ಪಾಲಿಸಬೇಕಾದ ಸೂಚನಾ ಫಲಕಗಳಿದ್ದವು. ನೀವು ನಂಬಲ್ಲ ಸ್ಪ್ಯಾನಿಷ್ ಫ್ಲೂ ಹಬ್ಬಿದ ಆರಂಭದ ದಿನಗಳಲ್ಲೇ ಶೇ. 70ರಷ್ಟು ಜನರನ್ನ ಬಡಿದು ಬಾಯಿಗೆ ಹಾಕಿಕೊಂಡಿತ್ತು. ಅಮೆರಿಕ ಒಂದರಲ್ಲೇ ಆರು ಮುಕ್ಕಾಲು ಲಕ್ಷ ಜನ ಸ್ಪ್ಯಾನಿಷ್ ಫ್ಲೂಗೆ ಬಲಿಯಾಗಿದ್ರು ಅಂದ್ರೆ ಅದರ ರುದ್ರನರ್ತನ ಹೇಗಿತ್ತು ಗೆಸ್ ಮಾಡಿ.

ನೂರು ವರ್ಷಗಳ ಹಿಂದೆ ಮನುಕುಲವನ್ನ ಸಾವಿನ ಕೂಪಕ್ಕೆ ತಳ್ಳಿದ ಸ್ಪ್ಯಾನಿಷ್ ಫ್ಲೂಗೆ ಔಷಧಿಯೇ ಇರಲಿಲ್ಲ. ಈಗಿನಂತೆ ಆಗಲೂ ಅದೊಂದು ಅನ್ ಎಕ್ಸ್ ಪೆಕ್ಟೆಡ್ ಡಿಸೀಸ್. ಇಷ್ಟು ಅಡ್ವಾನ್ಸಡ್ ಮೆಡಿಕಲ್ ಸೈನ್ಸ್ ಇದ್ದರೂ ನಮಗಿನ್ನೂ ಕೊರೋನಾ ವೈರಸ್ ಗೆ ಒಂದು ವ್ಯಾಕ್ಸಿನ್ ಕಂಡುಹಿಡಿಯಲು ಆಗಿಲ್ಲ. ಜನ ಸಾಯ್ತಾನೆ ಇದಾರೆ. ಈಗಲೇ ಹೀಗೆ ಅಂದಮೇಲೆ ಶತಮಾನದ ಹಿಂದೆ ಹೇಗಿತ್ತು ಪರಿಸ್ಥಿತಿ? ಜನ ಹೇಗೆ ಹುಳಹುಪ್ಪಡಿಗಳಂತೆ ಸಾಯುತ್ತಿದ್ದರು? ಜಸ್ಟ್ ಊಹೆ ಮಾಡಿಕೊಳ್ಳಿ. ಹೇಳಬೇಕೆಂದ್ರೆ ಜಗತ್ತೇ ಆಗ ಒಂದು ನರಕಕೂಪವಾಗಿತ್ತು. ಸಾಯದೇ ಬೇರೆ ದಾರಿಯೇ ಇರಲಿಲ್ಲವೇನೋ!

ಅದು ಮೊದಲ ಜಾಗತಿಕ ಯುದ್ಧದ ಅಂತಿಮ ಘಟ್ಟ. ಯುದ್ಧದ ಬಿಸಿ, ಜೊತೆಗೆ ವೈರಸ್ ಹಾವಳಿ. ನಿತ್ರಾಣವಾಗಿತ್ತು ಜಗತ್ತು.  ನೀವು ನಂಬಲ್ಲ ಅಮೆರಿಕದ ಆಗಿನ ಪ್ರೆಸಿಡೆಂಟ್ ಆಗಿದ್ದ ವುಡ್ರೋ ವಿಲ್ಸನ್ ಗೆ ಕೂಡ ಸ್ಪ್ಯಾನಿಷ್ ಫ್ಲೂ ತಗಲಿತ್ತು. ಆತನ ಮಗಳು ಮಾರ್ಗರೆಟ್ ಅಲ್ಲದೆ ಪ್ರೆಸಿಡೆಂಟ್ ಆಫೀಸಿನ ಸಿಬ್ಬಂದಿಗೂ ಸೋಂಕು ತಗಲಿತ್ತು. ಆ ಕಾಲಕ್ಕೆ ಫೇಮ

ಸ್ ವ್ಯಕ್ತಿಗಳಾಗಿದ್ದ  ರೋಸ್ ಕ್ಲೆವ್ ಲ್ಯಾಂಡ್, ಬೇಸ್ ಬಾಲ್ ಪ್ಲೇಯರ್ ಲ್ಯಾರಿ ಚಾಪೆಲ್, ಫಿಲ್ಮ್ ಸ್ಟಾರ್ ಮಿರ್ಟಲ್ ಗೊಂಜಾಲೆಜ್ ರನ್ನ ವೈರಸ್ ಬಲಿತೆಗೆದುಕೊಂಡಿತ್ತು.

ಸ್ಪ್ಯಾನಿಷ್ ಫ್ಲೂನ ಲಕ್ಷಣಗಳೇನಿದ್ದವು ಮತ್ತು ಜನ ಹೇಗೆ ಸಾಯುತ್ತಿದ್ದರು ಅಂತ ಓದಿದ್ರೆ ಗಾಬರಿ ಆಗುತ್ತದೆ. ಯಾಕೆಂದ್ರೆ ಸ್ಪ್ಯಾನಿಷ್ ಫ್ಲೂ ಕೊರೋನಾ ವೈರಸ್ ಗಿಂತಲೂ ಡೆಡ್ಲಿ ವೈರಸ್ ಆಗಿತ್ತು. ಸೋಂಕು ತಗಲಿದವರಿಗೆ ವಿಪರೀತ ಜ್ವರ ಕಾಣಿಸಿ ಕೊಳ್ಳುತ್ತಿತ್ತು. ಜೊತೆಯಲ್ಲೇ ತಲೆನೋವು. ಕೆಮ್ಮು. ಹಿಡಿ ಉಸಿರಿಗೂ ಒದ್ದಾಡುತ್ತಿದ್ದ ಸೋಂಕಿತ ವ್ಯಕ್ತಿಯ ಬಾಯಲ್ಲಿ, ಮೂಗಲ್ಲಿ ಕೆಲವು ಸಲ ಕಿವಿಯಲ್ಲೂ ರಕ್ತ ಸೋರುತ್ತಿತ್ತು. ದೇಹ ನೀಲಿಬಣ್ಣಕ್ಕೆ ತಿರುಗಿತು ಅಂದ್ರೆ ಸೋಂಕಿತ ವ್ಯಕ್ತಿ ಸತ್ತ ಅಂತಾನೆ ಅರ್ಥ. ಕೊರೊನಾ ವೈರಸ್ ಥರಾನೆ ಯಾರೋ ಸೀನಿದಾಗ ಕೆಮ್ಮಿದಾಗ ಮಾತಾಡಿದಾಗ ಹೊರಬಂದ ಉಗುಳಿನ ಕಣಗಳಲ್ಲಿ ವೈರಸ್  ಇದ್ರೆ ಅದು ಬಹಳ ಬೇಗ ಸ್ಪ್ರೆಡ್ ಆಗುತ್ತಿತ್ತು.  ಮಕ್ಕಳು, ಹಿರಿಯರು ಮತ್ತು ಇಪ್ಪತ್ತರಿಂದ ಮೂವತ್ತು ವರ್ಷದ ಒಳಗಿನವರಿಗೆ ಸ್ಪ್ಯಾನಿಷ್ ಫ್ಲೂ ಬಹಳ ಬೇಗ ಹಬ್ಬುತ್ತಿತ್ತು.

ಕೊರೋನಾ ವೈರಸ್ ಚೀನಾದ ವುಹಾನ್ ಸಿಟಿಯಿಂದ ಹಬ್ಬಿತು ಅನ್ನೋದಾದ್ರೂ ಈಗ ನಮಗೆ ಗೊತ್ತಿದೆ. ಆದ್ರೆ ಆಗ ಸ್ಪ್ಯಾನಿಷ್ ಫ್ಲೂ ಎಲ್ಲಿಂದ ಹಬ್ಬಿತು ಅನ್ನೋದು ಗೊತ್ತಿರಲಿಲ್ಲ. ಸ್ಪ್ಯಾನಿಷ್ ಫ್ಲೂ ಅಂದ ತಕ್ಷಣ ಇದು ಸ್ಪೇನ್ ನಿಂದ ಹಬ್ಬಿತು ಅಂತ ತಿಳಿದುಕೊಳ್ಳಬೇಕಾಗಿಲ್ಲ. ಸ್ಪ್ಯಾನಿಷ್ ಫ್ಲೂ ಹಬ್ಬಿದ ರೀತಿಯೇ ವಿಚಿತ್ರ.

ನಿಮಗೆ ಗೊತ್ತಿದೆ, ಸ್ಪೇನ್ ಮೊದಲ ಜಾಗತಿಕ ಯುದ್ಧದಲ್ಲಿ ಭಾಗಿಯಾಗದೆ ತಟಸ್ಥವಾಗಿ ಉಳಿದಿತ್ತು. ಯುದ್ಧ ಮುಗಿಯುತ್ತಾ ಬಂದಿದ್ದರೂ ಯುದ್ಧದಲ್ಲಿ ಭಾಗಿಯಾಗಿದ್ದ ದೇಶಗಳ ಸೈನಿಕರು ನಿತ್ರಾಣರಾಗಿದ್ದರು. ತಮ್ಮ ತಮ್ಮ ದೇಶಗಳಿಗೆ ,ನೆಲೆಗಳಿಗೆ ವಾಪಸ್ ಆಗುತ್ತಿದ್ದರು. ನೋವು,ಹಸಿವು, ಹತಾಷೆ, ಕೊಳಕು  ಮತ್ತು ರೋಗ ಅವರ ಮೈಗಂಟಿಕೊಂಡಿದ್ದವು.  ಆಗ ಅವರಿಗೆ ತಗಲಿಕೊಂಡಿದ್ದೇ ಈ ಸ್ಪ್ಯಾನಿಷ್ ಫ್ಲೂ. ಅಂದ್ರೆ ಯುದ್ಧರಂಗದಲ್ಲಿ ಹುಟ್ಟಿದ ಪಿಡುಗು ಸ್ಪ್ಯಾನಿಷ್ ಫ್ಲೂ ಆಗಿತ್ತು. ಆದ್ರೆ ಯುದ್ಧದಲ್ಲಿದ್ದ ಎಲ್ಲಾ ದೇಶಗಳು ತಮ್ಮ ಸೈನಿಕರಿಗೆ ಅಂಟಿದ ಜಾಢ್ಯವನ್ನ ಮುಚ್ಚಿಟ್ಟಿದ್ದವು. ಎಲ್ಲಿ ಶತ್ರು ದೇಶಗಳಿಗೆ ಗೊತ್ತಾಗಿಬಿಡುತ್ತೋ ಅನ್ನೋ ಭಯ ಅವರನ್ನ ಕಾಡಿತ್ತು.

ಇದೇ ಸಮಯದಲ್ಲಿ ಸ್ಪೇನ್ ನ ರಾಜ ಹದಿಮೂರನೇ ಅಲ್ಫಾನ್ಸೋ ಕಾಯಿಲೆ ಬೀಳುತ್ತಾನೆ. ಅದನ್ನ ಸ್ಪೇನ್ ಪತ್ರಿಕೆಗಳು ವರದಿ ಮಾಡುತ್ತವೆ.  ಬಹುಶಃ ರಾಜನ ಕಾಯಿಲೆಗೆ ವೈರಸ್ಸೇ ಕಾರಣವಾಯ್ತು ಅಂತ ಭಾವಿಸಲಾಯ್ತೋ ಏನೋ ಸ್ಪ್ಯಾನಿಷ್ ಹೆಸರು 1918ರ ಫ್ಲೂಗೆ ತಗಲಿಕೊಳ್ತು. ಸ್ಪ್ಯಾನಿಷ್ ಫ್ಲೂ ಆಯ್ತು.

ಕೆಲವರು ಕೊರೋನಾದಂತೆ ಸ್ಪ್ಯಾನಿಷ್ ಫ್ಲೂ ಕೂಡ ಚೀನಾದಿಂದಲೇ ಹಬ್ಬಿತು ಅಂತಾರೆ. ಇನ್ನೂ ಕೆಲವರು ಅಮೆರಿಕಾ, ಫ್ರಾನ್ಸ್, ಬ್ರಿಟನ್ ಅಂತಾರೆ. ಇವತ್ತಿಗೂ ಸ್ಪ್ಯಾನಿಷ್ ಫ್ಲೂ ಹುಟ್ಟಿನ ಬಗ್ಗೆ ಜಗತ್ತಿಗೆ ಸರಿಯಾಗಿ ಗೊತ್ತೇ ಇಲ್ಲ. ಆದ್ರೆ ಅಫಿಷಿಯಲಿ ರಿಪೋರ್ಟ್ ಆಗಿದ್ದು ಮಾತ್ರ ಅಮೆರಿಕದ ‘ಕಾನ್ಸಾಸ್’ ನ ಮಿಲಿಟರಿ ಕ್ಯಾಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಆಲ್ಬರ್ಟ್ ಗಿಟ್ಶೇಲ್ ಅನ್ನೋ ಅಡುಗೆಯವನಿಗೆ ಕಾಣಿಸಿಕೊಂಡಾಗಲೆ! ನೀವು ನಂಬಲ್ಲ ಅಡುಗೆಯವನಿಗೆ ಕಾಣಿಸಿಕೊಂಡ ಒಂದೇ ದಿನದಲ್ಲಿ ಕ್ಯಾಂಪ್ ನ 522 ಮಂದಿಗೆ ಸ್ಪ್ಯಾನಿಷ್ ಫ್ಲೂ ತಗಲಿತ್ತು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ್ದರಿಂದ ಕೇವಲ ಏಳು ದಿನಗಳಲ್ಲೇ ನ್ಯೂಯಾರ್ಕ್ ನ ‘ಕ್ವೀನ್ಸ್’ ಸಿಟಿಗೆ ಹಬ್ಬಿತ್ತು. ಅಮೆರಿಕದ ಮಿಲಿಟರಿ ಟ್ರೈನಿಂಗ್ ಕ್ಯಾಂಪ್ ಗೂ ಹಬ್ಬಿತು. ಒಂದು ತಿಂಗಳೊಳಗೆ ಫ್ರಾನ್ಸ್, ಗ್ರೇಟ್ ಬ್ರಿಟನ್, ಇಟಲಿ, ಸ್ಪೇನ್, ಪೋಲ್ಯಾಂಡ್, ಉಕ್ರೇನ್ ಗೂ ಹಬ್ಬಿತು. ಒಪ್ಪಂದದ ಪ್ರಕಾರ ಜರ್ಮನಿ, ರಷಿಯನ್ ಖೈದಿಗಳನ್ನ ಬಿಡುಗಡೆ ಮಾಡಿ ಅವರ ದೇಶಕ್ಕೆ ಕಳುಹಿಸಿತು. ಹಾಗಾಗಿ ರಷ್ಯಾಗೂ ಸ್ಪ್ಯಾನಿಷ್ ಫ್ಲೂ ಜಾಢ್ಯ ಹಬ್ಬಿತು. ಆಮೇಲೆ ಆಫ್ರಿಕಾ, ಜಪಾನ್, ಚೀನಾ, ಆಸ್ಟ್ರೇಲಿಯಾ, ಭಾರತಕ್ಕೂ ಕಾಲಿಟ್ಟಿತು.

ಭಾರತದಲ್ಲಿ ಸ್ಪ್ಯಾನಿಷ್ ಫ್ಲೂನ ‘ಬಾಂಬೇ ಜ್ವರ’ ಅಂತ ಕರಿತಿದ್ರು. ಯಾಕೆಂದ್ರೆ ಮೊದಲು ಭಾರತದಲ್ಲಿ ಕಾಣಿಸಿ ಕೊಂಡಿದ್ದು ಬಾಂಬೆಯಲ್ಲೆ. ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರು ಹಡಗುಗಳ ಮೂಲಕ ಬಾಂಬೆಗೆ ಬಂದಿಳಿದಾಗ ವೈರಸ್ಸನ್ನೂ ಜೊತೆಗೆ ಹೊತ್ತುತಂದಿದ್ದರು. ಆಮೇಲೆ ದೇಶದ ನಾಲ್ಕೂ ದಿಕ್ಕುಗಳಿಗೆ ವೈರಸ್ ಶರವೇಗದಲ್ಲಿ ಹಬ್ಬಿತ್ತು. 1918, ಆಗಸ್ಟ್ ಹೊತ್ತಿಗೆ ಇಡೀ ದೇಶದಲ್ಲಿ ಸ್ಪ್ಯಾನಿಷ್ ಫ್ಲೂ ತಾಂಡವವಾಡುತ್ತಿತ್ತು. ಮೂರು ಹಂತಗಳಲ್ಲಿ ಮರಣ ಮೃದಂಗ ಭಾರಿಸಿದ ವೈರಸ್ ಭಾರತದಲ್ಲಿ ಸುಮಾರು ಒಂದು ಕೋಟಿ ಎಪ್ಪತ್ತು ಲಕ್ಷ ಜನರನ್ನ ಬಲಿತೆಗೆದುಕೊಂಡಿತ್ತು ಅನ್ನೋದು ಒಂದು ಅಂದಾಜು. ಹಿಂದಿ ಕವಿ ಸೂರ್ಯಕಾಂತ್ ತ್ರಿಪಾಠಿ ಆ ದಾರುಣತೆಯನ್ನ ತಮ್ಮ ಕವಿತೆಯಲ್ಲಿ ಹಿಡಿದಿಟ್ಟಿದ್ದಾರೆ.ಅವರು  ‘ಗಂಗೆ ಮೃತದೇಹಗಳಿಂದ ಊದಿಕೊಂಡಿದ್ದಾಳೆ’ ಅಂತ ಬರೆಯುತ್ತಾರೆ.

ಈಗ ಭಾರತಕ್ಕಿರುವುದೂ ಅಂಥದ್ದೇ ದಾರುಣತೆಯ ಭಯ. ಕೊರೋನಾ ವೈರಸ್ನ ಮೊದಲ ಹಂತದ ಅಲೆ ಮುಗಿದು ಎರಡನೇ ಹಂತದ ಅಲೆ ಶುರುವಾದರೆ ಗತಿ ಏನು? ಯಾಕೆಂದ್ರೆ 1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಫ್ಲೂ ಜಗತ್ತಿನಾದ್ಯಂತ ಒಟ್ಟು ನಾಲ್ಕು ಹಂತಗಳಲ್ಲಿ ಜನರನ್ನ ಕೊಂದಿತ್ತು. ಶಮನವಾಗುವ ಹೊತ್ತಿಗೆ ಮೊದಲ ಮಹಾಯುದ್ಧದಲ್ಲಿ ಮಡಿದವರಿಗಿಂತ ಹೆಚ್ಚು ಜನರನ್ನ ಬಲಿತೆಗೆದುಕೊಂಡಿತ್ತು. ಅದೇ ವೈರಸ್ ಮತ್ತೆ ಮೈ ಮುರಿದು ಕೊರೋನಾ ರೂಪದಲ್ಲಿ ಎದ್ದುಕೂತಿದೆಯಾ ಅನ್ನೋ ಡೌಟ್ ಕೂಡ ನನಗೆ ಕಾಡಲು ಶುರುವಾಗಿದೆ.

ದುರಂತ ಅಂದರೆ ಸ್ಪ್ಯಾನಿಷ್ ಫ್ಲೂ ಥರಾನೆ ಚೀನಾದಿಂದಲೇ ಕೋವಿಡ್-19 ಕೂಡ ಬಂದಿದೆ. ಆಗ ಬಿಡಿ ಸೈನ್ಸ್ ಏನೇನೂ ಡೆವಲಪ್ ಆಗಿರಲಿಲ್ಲ. ಟೆಕ್ನಾಲಜಿ ಇರಲಿಲ್ಲ. ಈಗ ಎಲ್ಲಾ ಇದೆ. ಆದರೂ ಮಾನವ ವೈರಸ್ ನ ಎದುರು ಮಂಡಿಯೂರಿದ್ದಾನೆ. ನಾವೆಷ್ಟೇ ಗ್ರೇಟ್ ಅಂತ ಅಂದುಕೊಂಡರೂ ಪರಿಸ್ಥಿತಿ ಆಗಿನದ್ದಕ್ಕಿಂತ ಈಗ ಭಿನ್ನವಾಗೇನೂ ಇಲ್ಲ.

ಆಗ ನಮ್ಮ ಪೂರ್ವಿಕರಿದ್ದರು.

ಈಗ ನಾವಿದ್ದೇವೆ ಅಷ್ಟೆ.

ಪ್ರಶ್ನೆ ಏನಂದ್ರೆ, ಇನ್ನೂ ಎಷ್ಟು ದಿನ ಈ ನರಕ?

Go to Top